ADVERTISEMENT

ರೈತ ಸಮಾವೇಶದಲ್ಲಿ ನರೇಂದ್ರ ಮೋದಿ: ಸರ್ಕಾರದ ಸಂಕಲ್ಪಗಳನ್ನು ಈಡೇರಿಸುವ ವಿಶ್ವಾಸ ನನ್ನಲ್ಲಿದೆ

ಪ್ರಧಾನಿ ಮೋದಿ ಗುರುವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯ ಗದ್ಧುಗೆ ದರ್ಶನ ಪಡೆದರು. ನಂತರ ಮಠದ ಮಕ್ಕಳ ಜತೆ ಸಂವಾದ ನಡೆಸಿ ಸಿದ್ಧಲಿಂಗ ಶ್ರೀಗಳಿಂದ ಆಶೀರ್ವಾದ ಪಡೆದರು. ಡಾ.ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ಮತ್ತು ಮಠದ ಆವರಣದಲ್ಲಿ ಬಿಲ್ವಪತ್ರೆ ಗಿಡ ನೆಟ್ಟ ಅವರು ನೇರವಾಗಿ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕೃಷಿ ಕರ್ಮಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡರು. ಈ ಎರಡೂ ಕಾರ್ಯಕ್ರಮಗಳಲ್ಲಿ ಮೋದಿ ಏನು ಮಾತನಾಡಿದರು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 13:01 IST
Last Updated 2 ಜನವರಿ 2020, 13:01 IST

ಸಂಕಲ್ಪಗಳನ್ನು ಈಡೇರಿಸುತ್ತೇವೆ.

ನಾವು ನೀಡಿರುವ ಎಲ್ಲ ಸಂಕಲ್ಪಗಳನ್ನೂ ಈಡೇರಿಸುವ ವಿಶ್ವಾಸ ನನ್ನಲ್ಲಿದೆ. ‘ಕೃಷಿ ಕರ್ಮಣ ಪ್ರಶಸ್ತಿ’ ಪಡೆದ ಎಲ್ಲ ರೈತರಿಗೂ ಧನ್ಯವಾದಗಳು. ಕರ್ನಾಟಕದ ರೈತರಿಗೆಲ್ಲ ಸಂಕ್ರಾಂತಿಯ ಶುಭಾಶಯಗಳು. 

ಜನ ಸಂಕಷ್ಟ ಪರಿಹರಿಸಲು ಒತ್ತು

ಕರ್ನಾಟಕದಲ್ಲಿ ಜಲ ಸಂಕಷ್ಟ ಎದುರಾಗಿದೆ. ಬೇರೆ ರಾಜ್ಯಗಳಲ್ಲೂ ಇದರ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಅಟಲ್‌ ಭೂ ಜಲ ಮಿಷನ್‌ ಅನ್ನು ಪರಿಚಯಿಸಲಾಗಿದೆ. ಏಳು ರಾಜ್ಯಗಳಲ್ಲಿ ಅಂತರ್ಜಲ ಮಟ್ಟವನ್ನು ಮೇಲೆತ್ತುವ ಕಾರ್ಯ ಈ ಯೋಜನೆ ಅಡಿಯಲ್ಲಿ ಆಗಲಿದೆ. 

ಮೀನುಗಾರಿಕೆಗೆ ಹೆಚ್ಚಿನ ಆದ್ಯತೆ

ಮೀನುಗಾರಿಕೆ ಹೆಚ್ಚಿಸಲು ಅವಕಾಶಗಳಿವೆ. ಅದಕ್ಕಾಗಿಯೇ ಮೂರು ಸ್ತರದ ಕ್ರಮಗಳಿಗೆ ಸರ್ಕಾರ ಮುಂದಾಗಿದೆ. ಗ್ರಾಮಗಳಲ್ಲಿ ಹೆಚ್ಚಿನ ಆದ್ಯತೆ ನೀಡುವುದು, ಆರ್ಥಿಕ ನೆರವು ನೀಡುವುದು, ನೀಲಿ ಕ್ರಾಂತಿ ಮೂಲಕ ಮೂಲ ಸೌಕರ್ಯ ಒದಗಿಸುವುದು ನಮ್ಮ ಗುರಿಯಾಗಿದೆ. ಮೂಲಸೌಕರ್ಯ ಕಲ್ಪಿಸಲು 7 ಸಾವಿರ ಕೋಟಿ ಒದಗಿಸಲಾಗುತ್ತಿದೆ. 

ADVERTISEMENT

ಮೀನುಗಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಅನ್ನೂ ವಿತರಣೆ ಮಾಡಲಾಗುತ್ತಿದೆ. 

ಸಾಗರಾಳದ ಮೀನುಗಾರಿಕೆಗೆ ನೆರವಾಗಲು ತಂತ್ರಜ್ಙಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇಸ್ರೋ ಇದಕ್ಕೆ ನೆರವು ನೀಡುತ್ತಿದೆ. ದೋಣಿಗಳ ಮೇಲ್ದರ್ಜೆಗೆ 2 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. 

ಕಾಫಿ ಬೆಳೆ ಕರ್ನಾಟಕದ ಹೆಗ್ಗುರುತು

ಕಾಫಿ ಬೆಳೆ ಕರ್ನಾಟಕದ ಹೆಗ್ಗುರುತು. ಕಾಫಿ ಬೆಳೆಯ ಪ್ಯಾಕಿಂಗ್‌ನಿಂದ ಹಿಡಿದು ಮಾರುಕಟ್ಟೆ ವರೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಾ ಬಂದಿದೆ. 

ರಬ್ಬರ್‌ ಬೆಳೆಗೆ ಪ್ರೋತ್ಸಾಹ

ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿಯಲ್ಲಿ ರಬ್ಬರ್‌ ಬೆಳೆಗಾರರಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ. ರಬ್ಬರ್‌ ಬೆಳೆ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರವೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. 

ಅರಿಶಿಣದ ಬೆಳೆ ಮೇಲೆ ಸಂಶೋಧನೆ

ಅರಿಶಿಣದ ಉತ್ಪಾದನೆ ಐದು ವರ್ಷಗಳಲ್ಲಿ ಹೆಚ್ಚಾಗಿದೆ. ಈ ಬೆಳೆಯ ಮೇಲೆ ಸಂಶೋಧನೆಯನ್ನೂ ಆರಂಭಿಸಿದ್ದೇವೆ. ತೆಲಂಗಾಣ ಅರಿಶಿನದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕವೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಉತ್ಪಾದನೆ ಮಾಡಿದೆ. 

19 ಸಾವಿರ ಕೋಟಿ ರೂಪಾಯಿಗಳ ಮಸಾಲೆ ಪದಾರ್ಥಗಳ ರಫ್ತು

ಸಾಂಬಾರ ಪದಾರ್ಥಗಳ ರಫ್ತಿನಲ್ಲಿ ಭಾರತ ಸಾಧನೆ ಮಾಡಿದೆ. 19 ಸಾವಿರ ಕೋಟಿ ರೂಪಾಯಿಗಳಷ್ಟು ಮಸಾಲೆ ಪದಾರ್ಥಗಳನ್ನು ಭಾರತ ಇಂದು ರಫ್ತು ಮಾಡಿದೆ. 

ತೆಂಗು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗಬೇಕು.

ದಕ್ಷಿಣ ಭಾರತದಲ್ಲಿ ತೆಂಗು, ಕಾಫಿ, ಗೋಡಂಬಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ತೆಂಗು ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಗೋಡಂಬಿ ಹೆಚ್ಚು ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. 

ಬೆಳೆಗಳಿಗೆ ಕ್ಲಸ್ಟರ್‌ ನಿರ್ಮಾಣ

ಬೆಳಗಾವಿ ದಾಳಿಂಬೆ, ಚಿಕ್ಕಬಳ್ಳಾಪುರ ಬೆಂಗಳೂರಿನ ಗುಲಾಬಿ, ಚಿಕ್ಕಮಗಳೂರಿನ ಕಾಫಿ ಬೆಳೆಯ ಕ್ಲಸ್ಟರ್‌ ನಿರ್ಮಾಣ ಮಾಡುವ ಉದ್ದೇಶವಿದೆ. 

ದಕ್ಷಿಣದ ಶಕ್ತಿಯಿಂದ ಹೊಸ ಭಾರತ ನಿರ್ಮಾಣ

ಆಹಾರ ಪದಾರ್ಥಗಳ ರಫ್ತಿನಲ್ಲಿ ದಕ್ಷಿಣ ಭಾರತ ಹಿಂದಿನಿಂದಲೂ ಶಕ್ತಿ ಹೊಂದಿದೆ. ಇದರ ಆಧಾರದ ಮೇಲೆ ಹೊಸ ದೇಶ (New India) ನಿರ್ಮಾಣ ಮಾಡುತ್ತೇವೆ. – ಮೋದಿ 

ದಶಕಗಳಿಂದ ನೆನಗುದಿಗೆ ಬಿದ್ದಿದ್ದ ನೀರಾವರಿ, ಮಣ್ಣು ಪರೀಕ್ಷೆ, ಬೆಂಬಲ ಬೆಲೆಗಳಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.

ಹೊಸ ವರ್ಷದ ಸಂದರ್ಭದಲ್ಲಿ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಎಲ್ಲ ರಾಜ್ಯಗಳಲ್ಲೂ ಅನುಷ್ಠಾನಗೊಳಿಸಲಾಗುತ್ತದೆ.

ಪ್ರಧಾನ ಮಂತ್ರಿ ಸಮ್ಮಾನ್‌ ನಿಧಿ ಅಡಿಯಲ್ಲಿ 8 ಕೋಟಿ ರೈತರ ಖಾತೆಗೆ ದುಡ್ಡು ಜಮಾ ಆಗಿದೆ.

ತಮಿಳುನಾಡು ಮತ್ತು ಕರ್ನಾಟಕದ ಮೀನುಗಾರರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.

ಹೊಸ ವರ್ಷ, ಸಂಕ್ರಾಂತಿ ಶುಭಾಶಯ ಕೋರಿದ ಮೋದಿ

ಹೊಸ ವರ್ಷ ಮತ್ತು ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬಕ್ಕೆ ರೈತ ಸಮಾವೇಶದಲ್ಲಿ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ 

ಕರ್ನಾಟಕದ ಮೂವರು ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸಿದ ಮೋದಿ

ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ  ಮಾಲತಿ, ಸುಪ್ರಿಯಾ ಸೇರಿ ಮೂವರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಅನ್ನು ವಿತರಿಸಿದ ಪ್ರಧಾನಿ ಮೋದಿ 

ಪ್ರಶಸ್ತಿ ಪ್ರದಾನ

ಕೃಷಿಯ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ ವಿವಿಧ ರಾಜ್ಯಗಳ ರೈತರಿಗೆ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. 

ನೆರೆಗೆ ಹೆಚ್ಚಿನ ಪರಿಹಾರ ಬಂದಿಲ್ಲ: ಬಿಎಸ್‌ವೈ

ಪ್ರಕೃತಿ ವಿಕೋಪದಿಂದಾಗಿ ರಾಜ್ಯದಲ್ಲಿ 30 ಸಾವಿರ ಕೋಟಿ ನಷ್ಟವಾಗಿದೆ. ಇದಕ್ಕೆ ಕೇಂದ್ರದಿಂದ ಪರಿಹಾರ ಕೋರಿ ಮನವಿ ಮಾಡಲಾಗಿತ್ತು. ಆದರೆ, ಹೆಚ್ಚಿನ ನೆರವು ಬಂದಿಲ್ಲ. ಈ ಬಗ್ಗೆ ಪ್ರಧಾನಿ ಗಮನ ಹರಿಸಬೇಕು. – ಬಿಎಸ್‌ವೈ 

ರೈತರಿಗೆ ಪ್ರೋತ್ಸಾಹ ಧನ, ನೀರಾವರಿಗೆ ಆದ್ಯತೆ ನೀಡಲು ಮೋದಿಗೆ ಮನವಿ ಮಾಡಿದ ಬಿಎಸ್‌ವೈ

ಆಹಾರ ಉತ್ಪಾದನೆ ದ್ವಿಗುಣಗೊಳಿಸಲು ಮೋದಿ ಸಂಕಲ್ಪ ಮಾಡಿದ್ದಾರೆ. ರೈತರಿಗೆ ಪ್ರೋತ್ಸಾಹ ಧನ, ನೀರಾವರಿಗೆ ಮೋದಿ ಅವರು ಆದ್ಯತೆ ನೀಡಬೇಕು ಎಂದು ವೇದಿಕೆಯಲ್ಲಿ ಮನವಿ ಮಾಡಿದ ಬಿಎಸ್‌ವೈ.
 

ನೀರಾವರಿಗೆ 50 ಸಾವಿರ ಕೋಟಿ ಅನುದಾನ ನೀಡಲು ಕೋರಿದ ಬಿಎಸ್‌ವೈ  

ರೈತರಿಗೆ ಮೋದಿ ಪ್ರಶಸ್ತಿ ಪ್ರದಾನ

ಉತ್ತರ ಪ್ರದೇಶದ ಮಹೇಶ್‌ ಮಿಶ್ರಾಗೆ ಮೊದಲ ಪ್ರಶಸ್ತಿ, ಕರ್ನಾಟಕದ ಮಧುಗಿರಿ ತಾಲೂಕಿನ ರೈತ ಜಿ. ರಂಗಪ್ಪ ಅವರಿಗೆ ಎರಡನೇ, ತಮಿಳುನಾಡಿನ ಪೆರಿಯ ಸ್ವಾಮಿ ಪಿಚ್ಚೈ ಮೂರನೇ ಬಹುಮಾನ ನೀಡಲಾಯಿತು. ಹಿಮಾಚಲ ಪ್ರದೇಶದ ಆಶ್ವಿನಿ, ಮಹಾರಾಷ್ಟ್ರದ ನರೇಂದ್ರ ಗೋವಿಂದ, ಬಿಹಾರದ ಗೋಪಾಲ್‌ ಪ್ರಸಾದ್‌ಗೆ ಅವರಿಗೂ ನಂತರದ ಬಹುಮಾನಗಳನ್ನು ನೀಡಲಾಯಿತು. 

ಸಸಿಗೆ ನೀರೆರೆಯುವ ಮೂಲಕ ಕೃಷಿ ಸಮ್ಮಾನ್‌ ಕಾರ್ಯಕ್ರಮಕ್ಕೆ ಮೋದಿ ಚಾಲನೆ

ತುಮಕೂರಿನಲ್ಲಿ ಆಯೋಜಿಸಿರುವ ರೈತ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಇದ್ದರು. 

ಕೊಳಕು ರಾಜಕೀಯದ ಭಾಷಣ ಮಾಡಿದ್ದಾರೆ ಮೋದಿ: ಸಿದ್ದರಾಮಯ್ಯ ಟ್ವೀಟ್‌

ರೈತ ಸಮಾವೇಶಕ್ಕೆ ಮೋದಿ ಪಯಣ

ವೇದಿಕೆ ಮೇಲಿದ್ದ ಮಠಾಧೀಶರಿಗೆ ನಮಿಸಿ ರೈತ ಸಮಾವೇಶಕ್ಕೆ ಹೊರಟ ನರೇಂದ್ರ ಮೋದಿ.

ಪವಿತ್ರ ಭೂಮಿಗೆ ನಮನ

ಸಂತರನ್ನು ನಮ್ಮ ದೇಶ ಮಾರ್ಗದರ್ಶಕರು ಎಂದು ಗೌರವಿಸುತ್ತದೆ. ನಿಮ್ಮ ಆಶೀರ್ವಾದದಿಂದ ನಾವು ನಮ್ಮ ಸಂಕಲ್ಪವನ್ನು ಈಡೇರಿಸಿಕೊಳ್ಳಬೇಕಿದೆ. ಇದೇ ಆಶಯದಿಂದ ನಿಮಗೆ 2020ರ ಶುಭಾಶಯ ಕೋರುತ್ತೇನೆ. ಈ ಪವಿತ್ರ ಭೂಮಿಗೆ ನಮಿಸುತ್ತೇನೆ. ನಿಮಗೆಲ್ಲರಿಗೂ ಹೃದಯಪೂರ್ವಕ ನಮನಗಳು. –ನರೇಂದ್ರ ಮೋದಿ

ಮೂರು ಸಂಕಲ್ಪ ಬೇಡಿದ ಮೋದಿ

2014ರಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕಾಗಿ ನಾನು ನಿಮ್ಮೆದುರು ಕೈಜೋಡಿಸಿ ವಿನಂತಿಸಿದ್ದೆ. ನೀವೆಲ್ಲರೂ ನನ್ನ ಜೊತೆಗೆ ನಿಂತಿರಿ. ಅದೇ ರೀತಿ ಇವತ್ತು ಗಾಂಧಿ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಬಯಲುಶೌಚ ಮುಕ್ತ ಭಾರತದ ದಿಸೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದೇವೆ.

ನಾನು ನಿಮ್ಮೆಲ್ಲರಿಗೂ ಮೂರು ಸಂಕಲ್ಪಕ್ಕೆ ಸಕ್ರಿಯರಾಗಬೇಕು ಎಂದು ವಿನಂತಿಸುತ್ತೇನೆ. 
1) ನಿಮ್ಮ ಪ್ರಾಚೀನ ಸಂಸ್ಕೃತಿಯನ್ನು ಗೌರವಿಸಿ. ಸಮಾಜದಲ್ಲಿ ಈ ಬಗ್ಗೆ ನಿರಂತರ ಜಾಗೃತಿ ಮೂಡಿಸಿ.
2) ಪ್ರಕೃತಿ ಮತ್ತು ವಾತಾವರಣ ರಕ್ಷಣೆಗೆ ಮುಂದಾಗಿ. ನಾನು ಏಕಬಳಕೆ ಪ್ಲಾಸ್ಟಿಕ್ ಬಳಸಬೇಡಿ.
3) ನೀರಿನ ಸಂರಕ್ಷಣೆಗೆ ಗಮನಕೊಡಿ.

ನನಗಾಗಿ ಈ ಮೂರು ಸಂಕಲ್ಪ ಮಾಡಿ, ತೀರ್ಮಾನ ತೆಗೆದುಕೊಳ್ಳಿ. ಇದು ನನ್ನ ವಿನಂತಿ. –ನರೇಂದ್ರ ಮೋದಿ

ಎಲ್ಲ ಮನೆಗಳಿಗೆ ನೀರು, ಎಲ್ಲ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್

ನಮ್ಮ ಸರ್ಕಾರವು ದೇಶ ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಹಗಲಿರುಳು ಶ್ರಮಿಸುತ್ತಿದೆ. ಎಲ್ಲ ಮನೆಗಳಿಗೆ ನೀರು, ಎಲ್ಲ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್‌ಗಾಗಿ ನಾವು ಶ್ರಮಿಸುತ್ತಿದ್ದೇವೆ –ನರೇಂದ್ರ ಮೋದಿ

ವಿಶ್ವ ವೇದಿಕೆಯಲ್ಲಿ ಪಾಕಿಸ್ಥಾನವನ್ನು ಮಣಿಸಿ

ಪೌರತ್ವ ಕಾಯ್ದೆ ವಿರೋಧಿಸುತ್ತಿರುವವರೇ, ನಿಮಗೆ ವಿರೋಧಿಸಬೇಕು, ಹೋರಾಡಲೇಬೇಕು ಎಂದಿದ್ದರೆ ಪಾಕಿಸ್ತಾನದಲ್ಲಿ ಈವರೆಗೆ ಏನೆಲ್ಲಾ ಆಗಿದೆ ಅದರ ಬಗ್ಗೆ ಮಾತನಾಡಿ, ಹೋರಾಡಿ. ವಿಶ್ವ ವೇದಿಕೆಗಳಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಲು ಯತ್ನಿಸಿ. ಅದು ಬಿಟ್ಟು ಪಾಕಿಸ್ತಾನದ ಪರವಾಗಿ ಏಕೆ ಮಾತಾಡ್ತೀರಿ. ದೇಶದಲ್ಲಿ ದ್ವೇಷದ ವಾತಾವರಣ ನಿರ್ಮಿಸುತ್ತಿದ್ದೀರಿ ಎನ್ನುವುದನ್ನು ಜನರು ಗಮನಿಸುತ್ತಿದ್ದಾರೆ. ಪಾಕಿಸ್ತಾನದಿಂದ ಬಂದ ದಲಿತರು, ಶೋಷಿತರ ಬಗ್ಗೆ ಇವರಿಗೆ ಕಾಳಜಿಯಿಲ್ಲ. –ನರೇಂದ್ರ ಮೋದಿ

ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಪಾಕಿಸ್ತಾನದ ಜನ್ಮವೇ ಧರ್ಮದ ಆಧಾರದ ಮೇಲೆಯೇ ಆಯಿತು. ಧರ್ಮದ ಆಧಾರದ ಮೇಲೆಯೇ ಬೆಳೆಯಿತು. ಅಲ್ಲಿ ಬೇರೆ ಧರ್ಮದವರ ಮೇಲೆ ದೌರ್ಜನ್ಯ ಎಸಗಿದರು. ಹಿಂದೂ, ಕ್ರಿಶ್ಚಿಯನ್, ಬೌದ್ಧರ ಮೇಲೆ ನಿರಂತರ ಹಿಂಸಾಚಾರ–ಅತ್ಯಾಚಾರಗಳು ನಡೆದವು. ಅಲ್ಲಿಂದ ಅಸಂಖ್ಯ ಜನರು ಭಾರತಕ್ಕೆ ಬಂದು ಆಶ್ರಯ ಕೋರಿದರು. ಪಾಕಿಸ್ತಾನದವರು ಅಲ್ಪಸಂಖ್ಯಾತರ ಮೇಲೆ ವ್ಯಾಪಕ ಹಿಂಸಾಚಾರ ನಡೆಸಿದರೂ ಕಾಂಗ್ರೆಸ್‌ ಮತ್ತು ಅವರ ಸಹಚರರು ಅದರ ಬಗ್ಗೆ ಮಾತನಾಡುತ್ತಿಲ್ಲ. ತಮ್ಮ ಜೀವ, ಹೆಣ್ಣುಮಕ್ಕಳ ಮಾನ ಉಳಿಸಿಕೊಳ್ಳಲು ಭಾರತಕ್ಕೆ ಬಂದವರನ್ನು ಕಾಪಾಡಲು ಮುಂದಾದರೆ ಕಾಂಗ್ರೆಸ್‌ ಮತ್ತು ಅವರ ಸಹಚರರು ವಿರೋಧಿಸುತ್ತಿದ್ದಾರೆ. ಇವರಿಗೆ ಇತರ ದೇಶಗಳಿಂದ ಬಂದ ಅಲ್ಪಸಂಖ್ಯಾತರ ಬದುಕು ಅರಿಯಲು, ಸುಧಾರಿಸಲು ಸಮಯವೇ ಇಲ್ಲ. –ನರೇಂದ್ರ ಮೋದಿ

ಅಲ್ಪಸಂಖ್ಯಾತರದಲ್ಲಿ ಆತ್ಮಗೌರವ

ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಬದಲಾವಣೆ ಕಾಣಿಸುತ್ತಿದೆ. ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಾಂತಿಯುತ ಪ್ರಯತ್ನಗಳು ಆಗುತ್ತಿವೆ. ಅಲ್ಪಸಂಖ್ಯಾತರು ಆತ್ಮಗೌರವದಿಂದ ಬಾಳಲು ಅಗತ್ಯವಿರುವ ವಾತಾವರಣ ನಿರ್ಮಿಸುತ್ತಿದ್ದೇವೆ. –ನರೇಂದ್ರ ಮೋದಿ

ದೇಶದಲ್ಲಿ ಅಭೂತಪೂರ್ವ ಕೆಲಸಗಳಾಗುತ್ತಿವೆ: ನರೇಂದ್ರ ಮೋದಿ

ಸಮಾಜದಿಂದ ಹೊರಡುವ ಇಂಥ ಸಂದೇಶಗಳು ನಮ್ಮ ಸರ್ಕಾರಕ್ಕೂ ಪ್ರೇರಣೆ ಕೊಡುತ್ತೆ. ಹೊಸ ಉತ್ಸಾಹ ತುಂಬುತ್ತೆ. ಈ ಆಕಾಂಕ್ಷೆಗೆ ದೇಶದ ಜನರು ಆದ್ಯತೆ ಕೊಟ್ಟಿದ್ದಾರೆ. ಈ ಕಾರಣಕ್ಕೇ 2014ರ ನಂತರ ಸಾಮಾನ್ಯ ಭಾರತೀಯರ ಬದುಕಿನಲ್ಲಿ ಅಭೂತಪೂರ್ವ ಬದಲಾವಣೆ ಮಾಡುವ ಕೆಲಸ ಮಾಡುತ್ತಿದ್ದೇವೆ. ದೇಶದ ಬಡ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ, ಗ್ರಾಮಗಳನ್ನು ಬಯಲುಶೌಚ ಮುಕ್ತಗೊಳಿಸುವ, ಕೃಷಿಕರು, ಕೃಷಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳನ್ನು ಬ್ಯಾಂಕ್‌ ವ್ಯವಸ್ಥೆಯೊಂದಿಗೆ ಜೋಡಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. –ನರೇಂದ್ರ ಮೋದಿ

ಸಮೃದ್ಧ ಭಾರತ ಎಲ್ಲರ ಆಕಾಂಕ್ಷೆ: ಮೋದಿ

21ನೇ ಶತಮಾನದ 3ನೇ ದಶಕದಲ್ಲಿ ನಾವು ಪ್ರವೇಶಿಸುತ್ತಿದ್ದೇವೆ. 21ನೇ ಶತಮಾನದ ಮೊದಲ ದಶಕ ಹೇಗಿತ್ತು ಅಂತ ನಿಮಗೆ ಗೊತ್ತಿರಬಹುದು. ಆದರೆ ಇವತ್ತು ಅಂದ್ರೆ 3ನೇ ದಶಕದಲ್ಲಿ ಅಂಥ ಪರಿಸ್ಥಿತಿಯಿಲ್ಲ. ಬಲವಾದ ಅಡಿಪಾಯದೊಂದಿಗೆ 3ನೇ ದಶಕ ಆರಂಭವಾಗುತ್ತಿದೆ. ನಮ್ಮಲ್ಲಿ ಹೊಸ ಆಕಾಂಕ್ಷೆ ಮೂಡಿದೆ. ಏನದು? ಭಾರತವನ್ನು ಸಮೃದ್ಧ, ಸಕ್ಷಮ ಸರ್ವ ಹಿತಕಾರಿ ವಿಶ್ವ ಶಕ್ತಿಯಾಗಿಸಬೇಕು ಎನ್ನುವ ಆಕಾಂಕ್ಷೆ ಅದು. ದೇಶದ ಮಹಿಳೆಯರು, ಮಕ್ಕಳು, ದಲಿತರು ಸೇರಿದಂತೆ ಎಲ್ಲರ ಆಕಾಂಕ್ಷೆಯೂ ಅದಾಗಿದೆ. –ನರೇಂದ್ರ ಮೋದಿ

ಪೇಜಾವರ ಶ್ರೀಗಳ ನೆನೆದ ಮೋದಿ

ಶಿವಕುಮಾರ ಸ್ವಾಮೀಜಿ ಜೊತೆಗೆ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರನ್ನು ದೇಶ ಕಳೆದುಕೊಂಡಿದೆ. ನನಗಂತೂ ಬಹಳ ದುಃಖವಾಗಿದೆ. ಅವರು ಮಹಾನ್ ಸಂತರಾಗಿದ್ದರು. ಅವರು ಭೌತಿಕವಾಗಿ ನಮ್ಮಿಂದ ದೂರವಾಗಿರುವುದು ನಮ್ಮನ್ನು ಕಾಡುತ್ತಿದೆ. ಅಧ್ಯಾತ್ಮಿಕ ಜೀವನದಲ್ಲಿ ಇಂಥ ಅನೇಕ ಘಟನೆಗಳು ನಡೆಯುತ್ತವೆ. ತಡೆಯಲು ನಮ್ಮಿಂದ ಆಗುವುದಿಲ್ಲ. ಆದರೆ ಅವರು ತೋರಿದ ದಿಕ್ಕಿನಲ್ಲಿ ಸಾಗುವ ಮೂಲಕ ತಾಯಿ ಭಾರತಿಗೆ ಸೇವೆ ಸಲ್ಲಿಸಬೇಕು. –ನರೇಂದ್ರ ಮೋದಿ

ಇಲ್ಲಿಗೆ ಬಂದಿದ್ದು ನನ್ನ ಸೌಭಾಗ್ಯ

ಸ್ವಾಮೀಜಿ ಅವರ ಜೀವನ ಕಾಲದಲ್ಲಿ ಲಕ್ಷಾಂತರ ಜನರ ಮೇಲೆ ಅವರು ತಮ್ಮ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. ಅಂಥ ಮಹಾನುಭಾವರ ವಸ್ತುಸಂಗ್ರಹಾಲಯಕ್ಕೆ ನಾನು ಶಿಲಾನ್ಯಾಸ ಮಾಡುವಂತಾಗಿದ್ದು ನನ್ನ ಸುಭಾಗ್ಯ. ಇದರಿಂದ ಜನರಿಗೆ ಮಾರ್ಗದರ್ಶನ ಸಿಗುತ್ತದೆ. ಸ್ವಾಮೀಜಿ ಚರಣಕ್ಕೆ ನನ್ನ ನಮಸ್ಕಾರ. –ನರೇಂದ್ರ ಮೋದಿ

ಒಳಿತಿನ ಧಾರೆ ಹರಿಸಿದ ಸ್ವಾಮೀಜಿ

ಶಿವಕುಮಾರ ಸ್ವಾಮೀಜಿ ದರ್ಶನದಿಂದ ಬದುಕಿಗೆ ಖುಷಿಯಾಗುತ್ತಿತ್ತು. ಹಲವು ವರ್ಷಗಳಿಂದ ಅವರ ಮಾರ್ಗದರ್ಶನದಿಂದ ಸಮಾಜಕ್ಕೆ ಒಳಿತಾಗಿದೆ. ಬಹಳ ವರ್ಷಗಳ ನಂತರ ಇಲ್ಲಿಗೆ ಬಂದಿದ್ದೇನೆ. ನನಗೆ ಇಲ್ಲಿಗೆ ಬಂದಾಗ ಒಂದು ಶೂನ್ಯ ಆವರಿಸಿದಂತೆ ಆಯಿತು. ಸ್ವಾಮೀಜಿ ಇಂದು ನಮ್ಮೊಡನೆ ಭೌತಿಕವಾಗಿ ಇಲ್ಲ. ಅವರ ಪ್ರೇರಣಾದಾಯಕ ವ್ಯಕ್ತಿತ್ವದಿಂದ ಇಲ್ಲಿ ಒಳಿತಿನ ಪ್ರಭಾವವೇ ಹರಿಯುತ್ತಿದೆ. –ನರೇಂದ್ರ ಮೋದಿ

ತುಮಕೂರಿಗೆ ಬಂದಿದ್ದು ಖುಷಿಯಾಗಿದೆ

2020ರ ಹೊಸ ವರ್ಷದ ಮೊದಲ ಕೆಲಸವನ್ನು ತುಮಕೂರಿಗೆ ಬಂದ ನಂತರವೇ ಕೆಲಸ ಆರಂಭಿಸುತ್ತಿದ್ದೇನೆ. ಇದು ನನ್ನ ಸೌಭಾಗ್ಯ ಎಂದೇ ಭಾವಿಸುತ್ತೇನೆ. –ನರೇಂದ್ರ ಮೋದಿ

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ನರೇಂದ್ರ ಮೋದಿ. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ನಾಡಾದ ತುಮಕೂರಿಗೆ ಆಗಮಿಸಲು ಸಂತೋಷವಾಗುತ್ತಿದೆ. ಮೊದಲಿಗೆ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. –ನರೇಂದ್ರ ಮೋದಿ

ಮೋದಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಗತ್ತು ತೋರುವವರಲ್ಲ. ತೀರಾ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ಸಾಮಾನ್ಯರಂತೆ ಬದುಕಿದವರು. ಆದರೆ ಶಕ್ತಶಾಲಿ ನಾಯಕರಾಗಿ ಹೆಸರು ಮಾಡಿದವರು. ವಿಶ್ವವ್ಯಾಪಿ ಅವರ ಪ್ರಭಾವವಿದೆ. ನನ್ನ ಗುರುಗಳು ಮತ್ತು ದೇವರಲ್ಲಿ ಮೋದಿ ಅವರನ್ನು ಆಶೀರ್ವದಿಸುವಂತೆ ಕೋರುತ್ತೇನೆ ಎಂದು ಸಿದ್ಧಲಿಂಗ ಸ್ವಾಮೀಜಿ ನುಡಿದರು.

ಮಕ್ಕಳೇ ದೇವರು ಎಂದಿದ್ದ ಶಿವಕುಮಾರ ಸ್ವಾಮೀಜಿ

ಮಕ್ಕಳೇ ದೇವರು, ಅವರ ಸೇವೆಯೇ ದೇವರ ಪೂಜೆ ಎಂದು ನಂಬಿ ಕೆಲಸ ಮಾಡಿದವರು ಶಿವಕುಮಾರ ಸ್ವಾಮೀಜಿ. ಪರಮಪೂಜ್ಯರನ್ನು ಕಳೆದುಕೊಂಡು ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಮಠಕ್ಕೆ ಬಂದಿರುವುದು ನನಗೆ ಖುಷಿಯಾಗುತ್ತಿದೆ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಸಿದ್ಧಲಿಂಗ ಸ್ವಾಮೀಜಿ ಭಾಷಣ

ವಿದ್ಯೆ ಜೊತೆಗೆ ಸಂಸ್ಕಾರ ಕೊಡುವ ಮಹತ್ತರ ಸೇವೆಯನ್ನು ಶಿವಕುಮಾರ ಸ್ವಾಮೀಜಿ ಮಾಡಿದರು. 80 ವರ್ಷಕ್ಕೂ ಹೆಚ್ಚು ಕಾಲ ಶಿವಕುಮಾರ ಸ್ವಾಮೀಜಿ ಪೀಠಾಧ್ಯಕ್ಷರಾಗಿ ಸಮಾಜಸೇವೆ ಮಾಡಿದರು. ಹಸಿವು, ಬಡತನ ಮತ್ತು ಅನಕ್ಷರತೆ ವಿರುದ್ಧದ ಹೋರಾಟಕ್ಕೆ ನಮ್ಮ ಸಿದ್ಧಗಂಗಾ ಮಠ ಅವಿರತ ಶ್ರಮಿಸುತ್ತಿದೆ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಮೋದಿ ಆಗಮನ: ಮಕ್ಕಳಿಂದ ಕರತಾಡನ

ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಭೇಟಿ ನೀಡಿ ಹಣೆಗೆ ವಿಭೂತಿ ಹಚ್ಚಿಕೊಂಡು ವೇದಿಕೆಗೆ ಬಂದ ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ ಅಂಗಡಿ, ಮುಖ್ಯಮಂತ್ರಿ ಯಡಿಯೂರಪ್ಪ, ತುಮಕೂರು ಜಿಲ್ಲಾ ಉಸ್ತುವಾರಿ ಮಾಧುಸ್ವಾಮಿ ವೇದಿಕೆಯಲ್ಲಿದ್ದಾರೆ. ಮಠಕ್ಕೆ ಇದು ಎರಡನೇ ಬಾರಿ ಭೇಟಿ. ಮಕ್ಕಳಿಂದ ಜೋರು ಕರತಾಡನ.

ಶಿವಕುಮಾರ ಸ್ವಾಮೀಜಿ ಬೆಳ್ಳಿ ಪ್ರತಿಮೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ನರೇಂದ್ರ ಮೋದಿ ಅವರಿಗೆ ಶಿವಕುಮಾರ ಸ್ವಾಮೀಜಿ ಅವರ ಬೆಳ್ಳಿ ಪ್ರತಿಮೆ ನೀಡಿದ ಗೌರವಿಸಿದರು.

ಮಠದಲ್ಲಿ ಹಬ್ಬದ ವಾತಾವರಣ

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಶಿವಕುಮಾರ ಶ್ರೀಗಳ ಗದ್ದುಗೆಗೆ ನಮನ

ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ನಮಿಸಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು.

ತುಮಕೂರಿನಲ್ಲಿ ಮೋದಿಗೆ ಸ್ವಾಗತ

ತುಮಕೂರು ಹೆಲಿಪ್ಯಾಡ್ ನಲ್ಲಿ ಪ್ರಧಾನಿ ಸ್ವಾಗತಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ. ಯಡಿಯೂರಪ್ಪ ಸಹ ಇದ್ದರು.

ಸಿದ್ಧಲಿಂಗ ಸ್ವಾಮೀಜಿ ಸ್ವಾಗತ

ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನಕ್ಕೆಂದು ಸಿದ್ಧಗಂಗಾ ಮಠಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಸ್ವಾಗತಿಸಿದರು.

ಮೋದಿ ವಾಹನ ಕಂಡು ಕೈಬೀಸಿದ ಅಭಿಮಾನಿಗಳು

ಮೋದಿ ವಾಹನ ಕಂಡು ಕೈಬೀಸಿದ ಅಭಿಮಾನಿಗಳು

ಸಿದ್ಧಗಂಗಾ ಮಠದತ್ತ ಪ್ರಧಾನಿ ಪ್ರಯಾಣ

ತುಮಕೂರು ವಿವಿ ಹೆಲಿಪ್ಯಾಡ್‌ನಿಂದ ಸಿದ್ಧಗಂಗಾ ಮಠದ ಕಡೆ ಪ್ರಯಾಣ ಆರಂಭಿಸಿದ ಪ್ರಧಾನಿ.

ಬಿ.ಎಚ್.ರಸ್ತೆಯುದ್ದಕ್ಕೂ ಬಟ್ಟೆ ಬ್ಯಾನರ್‌

ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಕೋರುವ ಬ್ಯಾನರ್, ಬಂಟಿಂಗ್ಸ್‌ಗಳನ್ನು ಬಿಜೆಪಿ ಜಿಲ್ಲಾ ಘಟಕ ಬಿ.ಎಚ್.ರಸ್ತೆಯ ಉದ್ದಕ್ಕೂ ಅಳವಡಿಸಿದೆ. ಇವು ಪ್ಲಾಸ್ಟಿಕ್ ಬದಲಾಗಿ ಬಟ್ಟೆಯಿಂದ ತಯಾರಿಸಲಾಗಿದೆ ಎಂಬುದು ವಿಶೇಷ.

ತುಮಕೂರಿಗೆ ಆಗಮಿಸಿದ ಮೋದಿ

ತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿ ನಿರ್ಮಿಸಿರುವ ವಿಶೇಷ ಹೆಲಿಪ್ಯಾಡ್‌ನಲ್ಲಿ ಮೋದಿ ಇದ್ದ ಹೆಲಿಕಾಪ್ಟರ್ ಲ್ಯಾಂಡ್ ಆಯಿತು.

ತುಮಕೂರಿನಲ್ಲಿ ಮೋದಿಗಾಗಿ ಕಾಯುತ್ತಿರುವ ಜನರು

ತುಮಕೂರಿನ ಸಿದ್ದಗಂಗಾ ಮಠ ಮತ್ತು ಸರ್ಕಾರಿ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ಜನರು ಕಾದು ಕುಳಿತಿದ್ದಾರೆ. ಹೆಜ್ಜೆಗೊಬ್ಬರು ಪೊಲೀಸ್ ಸಿಬ್ಬಂದಿ ಕಾಣಿಸುತ್ತಿದ್ದಾರೆ. ನಗರದಾದ್ಯಂತ ಬಿಗಿ ಭದ್ರತೆ ಇದೆ.

ಸೇನಾ ಹೆಲಿಕಾಪ್ಟರ್‌ನಲ್ಲಿ ತುಮಕೂರಿನತ್ತ ಮೋದಿ

ಯಲಹಂಕ ವಾಯುನೆಲೆಯಿಂದ ತುಮಕೂರಿನತ್ತ ಪ್ರಧಾನಿ ನರೇಂದ್ರ ಮೋದಿ ಸೇನಾ ಹೆಲಿಕಾಪ್ಟರ್‌ನಲ್ಲಿ ತೆರಳಿದರು. ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶಾಲು ಹೊದೆಸಿ, ಮೈಸೂರು ಪೇಟಾ ತೊಡಿಸಿ ಸ್ವಾಗತಿಸಿದರು. ಪ್ರಧಾನಿ ಜೊತೆಗೆ ಯಡಿಯೂರಪ್ಪ ಸಹ ಹೆಲಿಕಾಪ್ಟರ್‌ನಲ್ಲಿ ತುಮಕೂರಿಗೆ ಹೊರಟರು.

ಮೋದಿಗೆ ಸ್ವಾಗತ ಕೋರಿದ ಯಡಿಯೂರಪ್ಪ

ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾಗತಿಸಿದರು. ಸೇನಾ ಹೆಲಿಕಾಪ್ಟರ್‌ನಲ್ಲಿ ಮೋದಿ ತುಮಕೂರಿಗೆ ತೆರಳಲಿದ್ದಾರೆ.

ಮೋದಿ ಅಭಿಮಾನಿಗಳಿಗೆ ಊಟದ ವ್ಯವಸ್ಥೆ

ಮೋದಿ‌ ಕಾರ್ಯಕ್ರಮಕ್ಕೆ ತೆರಳುತ್ತಿರುವ ಅಭಿಮಾನಿಗಳಿಗಾಗಿ ತುಮಕೂರು ತಾಲ್ಲೂಕು ಅರಕೆರೆ ಗ್ರಾಮದಲ್ಲಿ ಚಿತ್ರಾನ್ನ, ಕೇಸರಿಬಾತ್, ಬೋಂಡ, ಬಾಳೆಹಣ್ಣಿನ ವ್ಯವಸ್ಥೆ ಮಾಡಲಾಗಿದೆ.

‘ಬಾಲ್ಯ ವಿವಾಹ ನಿಲ್ಸಿ ಅಂತೀನಿ’

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಂವಾದಕ್ಕೆ ಮಠದ ಆವರಣದಲ್ಲಿರುವ ಮಕ್ಕಳು ಸಿದ್ಧರಾಗಿದ್ದಾರೆ. ‘‌ಪ್ರಜಾವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬರು, ‘ಮೋದಿ ಸರ್ ಜೊತೆಗೆ ಮಾತನಾಡಲು ಅವಕಾಶ ಸಿಕ್ಕರೆ, ಬಾಲ್ಯ ವಿವಾಹ ದೇಶದಲ್ಲಿ ಎಲ್ಲಿಯೂ ಆಗಲೇಬಾರದು ಹಾಗೆ ಮಾಡಿ ಸರ್ ಎನ್ನುತ್ತೇನೆ’ ಎಂದು ನುಡಿದರು.

ಮೋದಿ ನೋಡುವ ಖುಷಿಯಲ್ಲಿ ಮಠದ ಮಕ್ಕಳು

ಮೋದಿ ಭೇಟಿ ಹಿನ್ನೆಲೆಯಲ್ಲಿ ಖುಷಿ ವ್ಯಕ್ತಪಡಿಸುತ್ತಿರಯವ ಮಠದ ಮಕ್ಕಳು.

ಗದ್ದುಗೆಗೆ ವಿಶೇಷ ಅಲಂಕಾರ

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ತುಮಕೂರು ಸಿದ್ದಗಂಗಾ ಮಠದಲ್ಲಿರುವ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿದೆ.

ಮೋದಿ ವಿರುದ್ಧ ಧಿಕ್ಕಾರ: ರೈತರ ಬಂಧನ

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತುಮಕೂರು ಜಿಲ್ಲಾ ಮುಖಂಡರನ್ನು ಪೊಲೀಸರು ಬಂಧಿಸಿದರು.

ಸಮಾವೇಶದಲ್ಲಿ ಪ್ರತಿಭಟಿಸಲು ಹೊರಟಿದ್ದ ರೈತ ಮುಖಂಡರ ಬಂಧನ

ಮೋದಿ ಕಾರ್ಯಕ್ರಮಗಳೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.