ADVERTISEMENT

ಮೂಳೆ, ಕೀಲು ಸಮಸ್ಯೆ: ಮುಂಜಾಗ್ರತೆ, ಚಿಕಿತ್ಸೆಯೇ ಮದ್ದು: ಡಾ.ಅಲೋಕ್‌

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 21:15 IST
Last Updated 12 ಅಕ್ಟೋಬರ್ 2022, 21:15 IST
ಡಾ.ಅಲೋಕ್‌ ಸಿ.ಪಾಟೀಲ ರೇವೂರ
ಡಾ.ಅಲೋಕ್‌ ಸಿ.ಪಾಟೀಲ ರೇವೂರ   

ಕಲಬುರಗಿ: ಸಂಧಿವಾತ, ಮಂಡಿನೋವು, ಹಿಮ್ಮಡಿ ನೋವು, ಕೀಲು ಸಂಬಂಧಿ ಯಾವುದೇ ಸಮಸ್ಯೆಗಳು ಕಂಡುಬಂದ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಮೂಳೆ ಸಮಸ್ಯೆ, ಕೀಲು ನೋವಿನಿಂದ ಬಳಲುತ್ತಿರುವವರಿಗೆ ಸುಧಾರಿತ ವೈದ್ಯಕೀಯ ಕ್ಷೇತ್ರದಲ್ಲಿ ಪರಿಹಾರವಿದೆ ಎಂದು ನಗರದ ಆದರ್ಶ ಆಸ್ಪತ್ರೆಯ ಎಲುಬು ಮತ್ತು ಮೂಳೆ ತಜ್ಞ ಡಾ.ಅಲೋಕ್‌ ಸಿ.ಪಾಟೀಲ ರೇವೂರ ಸಲಹೆ ನೀಡಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ‘ಫೋನ್‌ ಇನ್ ಕಾರ್ಯಕ್ರಮ’ದಲ್ಲಿ ಅವರು ಚಿಕಿತ್ಸೆಯ ಮಾಹಿತಿ, ವಿಧಾನ ತಿಳಿಸಿದರು. ಮಾರ್ಗದರ್ಶನವನ್ನೂ ನೀಡಿದರು.

‘ಜಂಕ್‌ ಆಹಾರ ಸೇವನೆ, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ, ಏರುತ್ತಿರುವ ಬೊಜ್ಜು, ಒತ್ತಡದ ಬದುಕು, ಗಂಟೆಗಟ್ಟಲೇ ಕೂತು ಕೆಲಸ ಮಾಡುವುದರಿಂದ ಮೂಳೆ ಮತ್ತು ಕೀಲು ಸಂಬಂಧಿತ ಕಾಯಿಲೆಗಳು ಬಾಧಿಸುತ್ತವೆ. ಆರಂಭದಲ್ಲೇ ವೈದ್ಯರನ್ನು ಭೇಟಿಯಾಗಿ, ನಿಯಮಿತ ಆರೋಗ್ಯ ತಪಾಸಣೆ, ಅಗತ್ಯ ಚಿಕಿತ್ಸೆ ಪಡೆಯುವುದರಿಂದ ಮೂಳೆ ಸಂಬಂಧಿತ ಕಾಯಿಲೆಗಳನ್ನು ದೂರವಿಡಬಹುದು’ ಎಂದರು.

ADVERTISEMENT

ಭೀಮರೆಡ್ಡಿ, ಸೇಡಂ: ಸರಿಯಾಗಿ ನಡೆಯಲು ಮತ್ತು ನಿಲ್ಲಲು ಆಗುತ್ತಿಲ್ಲ. ಸ್ವಲ್ಪ ಕೆಲಸ ಮಾಡಿದರೇ ಸುಸ್ತಾಗುತ್ತದೆ. ಪರಿಹಾರ ತಿಳಿಸಿ

ಉತ್ತರ: ಒತ್ತಡದ ಜೀವನ, ವಿಟಮಿನ್–ಡಿ 12 ಕೊರತೆ, ಅಸಮರ್ಪಕ ಆಹಾರ ಸೇವನೆಯಿಂದ ಇಂತಹ ಸಮಸ್ಯೆ ಕಂಡು ಬರುತ್ತವೆ. ದೇಹಕ್ಕೆ ಬೇಕಾದಷ್ಟು ಪೋಷಕಾಂಶದ ಆಹಾರ ಸಿಗುತ್ತಿಲ್ಲ. ವಿಟಮಿನ್‌ ಹೆಚ್ಚಿರುವ ಆಹಾರ ಪದಾರ್ಥಗಳನ್ನು ತಿನ್ನಿ. ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಿದರೆ, ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ಕೊಡಲಾಗುವುದು. ನಿಯಮಿತ ವ್ಯಾಯಾಮ, ಫಿಸಿಯೋಥೆರಪಿ ಬಗ್ಗೆ ತಿಳಿಸಲಾಗುವುದು. 2 ತಿಂಗಳಲ್ಲಿ ಪರಿಹಾರ ಕಾಣಬಹುದು.

ರಾಘವೇಂದ್ರ, ಸುರಪುರ, ಯಾದಗಿರಿ ಜಿಲ್ಲೆ: ಪ್ರಸ್ತುತ ದಿನಗಳಲ್ಲಿ ಮೊಣಕಾಲು ನೋವು ಸಾಮಾನ್ಯವಾಗಿದೆ. ಇದಕ್ಕೆ ಚಿಕಿತ್ಸೆ ಹೇಗೆ?

ಉತ್ತರ: ಬದಲಾದ ಜೀವನಶೈಲಿಯಿಂದ 45 ವರ್ಷ ದಾಟಿದ ಪ್ರತಿ ಇಬ್ಬರ ಪೈಕಿ ಒಬ್ಬರಲ್ಲಿ ಸಂಧಿವಾತ (ಅರ್ಥರೈಟಿಸ್) ಕಂಡುಬರುತ್ತಿದೆ. ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು. ಕೈ–ಕಾಲು ಮತ್ತು ಮಂಡಿ ಕೀಲುಗಳಲ್ಲಿ ಬಾವು ಕಂಡು ಬಂದರೆ ತಕ್ಷಣವೇ ಮೂಳೆ ತಜ್ಞರನ್ನು ಭೇಟಿಯಾಗಿ, ಚಿಕಿತ್ಸೆ ಪಡೆಯಬೇಕು.  ಮೊಣಕಾಲ ನೋವಿಗೂ ಚಿಕಿತ್ಸೆಗಿಂತ ಅದು ಬಾರದಂತೆ ತಡೆಗಟ್ಟುವಿಕೆ ಹೆಚ್ಚು ಸೂಕ್ತ.

ಸಾಧಾರಣ, ಮಧ್ಯಮ ಮತ್ತು ತೀವ್ರ ಸ್ವರೂಪದ ಸಂಧಿವಾತ ಹಂತಗಳಿವೆ. ನಡೆಯಲು, ನಿಲ್ಲಲು ಸಾಧ್ಯವಾಗದ ವ್ಯಕ್ತಿಯ ಮೊಣಕಾಲು ಚಿಪ್ಪು ಬದಲಾಯಿಸಲಾಗುವುದು. ಆರಂಭದಲ್ಲೇ ನಮ್ಮ ಸಂಪರ್ಕಕ್ಕೆ ಬಂದರೇ ಶಸ್ತ್ರಚಿಕತ್ಸೆ ಇಲ್ಲದೆಯೇ ಅರ್ಥರೈಟಿಸ್ ಸಮಸ್ಯೆಗೆ ಪರಿಹಾರ ಕೊಡಲಾಗುವುದು. 

ಖಾಜಯ್ಯ, ಬಳಿಚಕ್ರ ಗ್ರಾಮ, ಯಾದಗಿರಿ ಜಿಲ್ಲೆ: ನನ್ನ ಮಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಆಗಾಗ ಬೆನ್ನು ಮೂಳೆಯಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಕಾರಣ ಏನು?

ಉತ್ತರ: ಬಹಳ ಸಮಯ ತರಗತಿಯಲ್ಲಿ ಕೂತು ಪಾಠ ಆಲಿಸುವುದರಿಂದ ನೋವು ಕಾಣಿಸಿಕೊಳ್ಳುತ್ತದೆ. ಬೆನ್ನಿನ ನರಗಳು ದುರ್ಬಲವಾಗಿದ್ದರೇ ಬೆನ್ನುಮೂಳೆಯ ನರಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಭಾರದ ಬ್ಯಾಗ್ ಹಾಕುವುದರಿಂದಲು ನರಗಳ ಅಂಗವಿನ್ಯಾಸದಲ್ಲಿ ವ್ಯತ್ಯಾಸ ಆಗುತ್ತದೆ. ಇದು 16 ವರ್ಷದವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಬೆನ್ನಿಗೆ ಬೆಂಬಲ ಇರುವ ಕುರ್ಚಿಯಲ್ಲಿ ಕೂರಬೇಕು. ಬೆನ್ನು ಮತ್ತು ಸೊಂಟದ ಮಾಂಸದ ನರಗಳು ಸದೃಢತೆಗೆ ‘ಲುಂಬೊ-ಪೆಲ್ವಿಕ್ ಸ್ಟೆಬಲಿಟಿ’ ಮಾಡಬೇಕು. ಆಸ್ಪತ್ರೆಗೆ ಭೇಟಿ ನೀಡಿ, ಈ ಹಿಂದಿನ ವೈದ್ಯಕೀಯ ದಾಖಲೆ ತೋರಿಸಿ.

ರವೀಂದ್ರ ಚಿಂಚೋಳಿ, ಬಾಬುರಾವ, ಕಲಬುರಗಿ: ಹರ್ನಿಯಾ ಶಸ್ತ್ರಚಿಕಿತ್ಸೆ ವೇಳೆ ಅನಸ್ತೇಷಿಯಾ ಕೊಟ್ಟಿದ್ದರು. ಆಗಾಗ ಬೆನ್ನು ನೋಯುತ್ತದೆ.

ಉತ್ತರ: ಅನಸ್ತೇಷಿಯಾ ಚುಚ್ಚುಮದ್ದು ಮತ್ತು ನೋವಿಗೆ ಸಂಬಂಧ ಇಲ್ಲ. ಬೆನ್ನಿನ ನರ ಮತ್ತು ಮಾಂಸ ಖಂಡಗಳು ದುರ್ಬಲವಾಗಿವೆ. ಅವು ಒತ್ತಡ ತಡೆಯುತ್ತಿಲ್ಲ. ಪರಿಣಿತರ ಸಲಹೆ ಮೇರೆಗೆ ಸತತ ವ್ಯಾಯಾಮ ಮಾಡಿದರೆ 2 ತಿಂಗಳಲ್ಲಿ ಸುಧಾರಣೆ ಆಗಬಹುದು.

ರವಿ, ಗುರುಬಸಪ್ಪ ಸಜ್ಜನ್‌ ಶೆಟ್ಟಿ, ಹೊನ್ನಕಿರಣಗಿ (ಕಲಬುರಗಿ), ವೀರಶೆಟ್ಟಿ, ಚಿಂಚೋಳಿ: ಬೆನ್ನು, ಮೊಣಕಾಲು, ಬೆರಳಗಳಲ್ಲಿ ನೋವಿದೆ. ಇಸಿಜಿ ಮಾಡಿಸಿದರೂ ಸಮಸ್ಯೆ ಏನೆಂದು ತಿಳಿಯುತ್ತಿಲ್ಲ.

ಉತ್ತರ: ಲಂಬರ್ ಸ್ಪಾಂಡಿಲೈಟಿಸ್‌ನಿಂದ ಕೈ ಬೆರಳುಗಳಲ್ಲಿ ಜೋಮು, ಸೊಂಟದ ನೋವು ಕಾಣಿಸಿಕೊಳ್ಳುತ್ತದೆ. ಸರ್ವೈಕಲ್ ಸ್ಪಾಂಡಿಲೋಸಿಸ್‌ನಿಂದ ಬೆನ್ನು ಮೂಳೆಯು ಹಂತಹಂತವಾಗಿ ಹಾನಿಗೊಳಗಾಗುತ್ತದೆ. ಕೈ– ಕಾಲಿನ ನರಗಳಲ್ಲಿ ಬಾವು ಬರುತ್ತವೆ. ಇದಕ್ಕೆ ಎಡಭಾಗದ ಪಿಸಿಯೋಥೆರಪಿ ಹಾಗೂ ಸೂಕ್ತವಾದ ಮಾತ್ರೆ ಕೊಡಲಾಗುತ್ತದೆ. ಸಾಪ್ಟ್ ಸರ್ವಿಕಲ್ ಕಾಲರ್ ನೀಡಲಾಗುತ್ತದೆ. ತಿಂಗಳಲ್ಲಿ ಪರಿಣಾಮ ಕಾಣದೆ ಇದ್ದಲ್ಲಿ ಎಂಆರ್‌ಐ ಮಾಡಿ, ಶೀಘ್ರವೇ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. 

ಚಂದನ ಕೇರ, ಗುಂಡಪ್ಪ ಮಾಳಗಿ, ಚಿಂಚೋಳಿ: ಮೆಟ್ಟಿಲು ಹತ್ತಿ ಇಳಿಯುವಾಗ, ನಡೆಯುವಾಗ ಆಗಾಗ ಮೊಣಕಾಲು ನೋವಾಗುತ್ತದೆ, ಪರಿಹಾರ ಏನಿದೆ?

ಉತ್ತರ: ಏಳುವಾಗ ಮತ್ತು ನಡೆಯುವಾಗ ಮೊಣಕಾಲು ಚಿಪ್ಪಿನ ಮಧ್ಯದ ಮೃದು ಎಲುಬಿನಲ್ಲಿ ಘರ್ಷಣೆ ಆದಾಗ ನೋವು ಕಾಣಿಸಿಕೊಳ್ಳುತ್ತದೆ. ಮೊಣಕಾಲಿನ ವಿಶೇಷ ಎಕ್ಸ್‌ರೇ ತೆಗೆದು ಅದರ ನೈಜ ಸ್ಥಿತಿ ತಿಳಿದು ಫಿಸಿಯೋಥೆರಪಿಯ ವ್ಯಾಯಾಮವನ್ನು ಮನೆಯಲ್ಲೇ ಮಾಡಬಹುದು.

ಹಂಪಮ್ಮ, ಗಂಗಾವತಿ (ಕೊಪ್ಪಳ ಜಿಲ್ಲೆ), ಜಗದೀಶ ದೇಶಪಾಂಡೆ, ಕರುಣೇಶ್ವರ ನಗರ (ಕಲಬುರಗಿ), ವಿಜಯಕುಮಾರ, ಚಿಂಚೋಳಿ: ಮೊಣಕಾಲು ಮತ್ತು ಪಾದದಲ್ಲಿ ನೋವಾಗುತ್ತಿದೆ ಎದ್ದು ನಿಲುವುದಕ್ಕೂ ಆಗುತ್ತಿಲ್ಲ.

ಉತ್ತರ: ಅರ್ಥರೈಟಿಸ್ ಸಿಆರ್‌ಟಿ 0–6 ಇರಬೇಕು. ಇದು ಹೆಚ್ಚಾದರೆ ಇಂಪ್ಲಮೆಂಟರಿ ಅರ್ಥರೈಟಿಸ್ ಆಗುತ್ತದೆ. ಏಕ ಮತ್ತು ಬಹುಔಷಧಿ ತೆಗೆದುಕೊಳ್ಳುವ ಮೂಲಕ ನಿಯಂತ್ರಣದಲ್ಲಿ ಇಡಬಹುದು. ಯಾವುದೇ ಕಾರಣಕ್ಕೂ ಮಾತ್ರೆಗಳನ್ನು ತೆಗೆದುಕೊಳ್ಳುವುದು ನಿಲ್ಲಿಸಬಾರದು. ತಾಪಮಾನ ಬದಲಾದರೆ, ಒತ್ತಡ ಹೆಚ್ಚಾದಾಗ ತೀವ್ರ ರೀತಿಯ ನೋವು ಕಾಣಿಸಿಕೊಳ್ಳುತ್ತದೆ. ಪ್ರತಿ 2 ತಿಂಗಳು ತಪಾಸಣೆ ಕಡ್ಡಾಯ.

ಇಬ್ರಾಹಿಂ, ಆಳಂದ, ಕಲಬುರಗಿ ಜಿಲ್ಲೆ: ಕಾಲಿನ ನರಗಳು ಸೆಳೆಯುತ್ತವೆ, ಮೊಣಕಾಲು ಬಾವು ಬರುತ್ತದೆ.

ಉತ್ತರ: ಹೆಚ್ಚು ಸಮಯ ನಿಲ್ಲುವುದನ್ನು ಸಾಧ್ಯವಾದಷ್ಟ ಕಡಿಮೆ ಮಾಡಿ. ಎರಡೂ ಕಾಲುಗಳನ್ನು ಕೆಲ ಸಮಯ ಗೋಡೆಗೆ ಚಾಚಿಕೊಂಡು ಮಲಗಬೇಕು.

ಪ್ರದೀಪ, ಚಿಟಗುಪ್ಪ, ಬೀದರ್‌ ಜಿಲ್ಲೆ: ರಾತ್ರಿ ವೇಳೆ ಕಾಲುಗಳಲ್ಲಿ ಜೋಮು ಉಂಟಾಗುತ್ತದೆ. ಮೊಣಕಾಲಿನ ಕೆಳಗೆ ನೋವು ಬರುತ್ತದೆ.

ಉತ್ತರ: ನಿಮಗೆ ಸಂಧಿವಾತದ ಗ್ರೇಡ್‌–2 ಲಕ್ಷಣಗಳಿವೆ. ರಕ್ಷ ಪರೀಕ್ಷೆ ಹಾಗೂ ಮಂಡಿಯ ಎಕ್ಸ್‌ರೇ ತೆಗೆದು ಕಾಯಿಲೆಯ ತೀವ್ರತೆಯನ್ನು ನೋಡಿ, ಚಿಕಿತ್ಸೆ ನೀಡಬೇಕಾಗುತ್ತದೆ. ನಿತ್ಯ ವ್ಯಾಯಾಮ ಮಾಡಬೇಕು. 

ತಪಾಸಣೆಯಿಂದ ಪತ್ತೆ

‘ಸಂಧಿವಾತದಲ್ಲಿ ಹಲವು ಪ್ರಕಾರಗಳಿವೆ. ರುಮಟಾಯ್ಡ್‌, ಗೌಟ್‌ ರುಮಟಾಯ್ಡ್, ಅಸ್ಥಿ ಸಂಧಿವಾತ, ಸೋರಿಯಾಸಿಸ್ ಜತೆ ಕೀಲು ನೋವು, ಬೆನ್ನು ನೋವು ಹೀಗೆ ಹಲವು ವಿಧಗಳಿವೆ. ರುಮಟಾಯ್ಡ್‌ ಸಂಧಿವಾತವು ಸಾಮಾನ್ಯವಾಗಿ ಕೀಲುಗಳಲ್ಲಿ, ಕೈ, ಕಾಲು, ಮಣಿಕಟ್ಟು, ಮೊಣಕೈ, ಮೊಣಕಾಲು ಮತ್ತು ಪಾದಗಳಲ್ಲಿ ಕಾಣಿಸಿಕೊಳ್ಳುತ್ತದೆ’ ಎನ್ನುತ್ತಾರೆ ಡಾ.ಅಲೋಕ್‌ ಸಿ.ಪಾಟೀಲ ಅವರು.

‘ಮೂಳೆಗಳ ಸವೆತದಿಂದ ಕೆಲವರಲ್ಲಿ ಮೊಣಕಾಲಿನ ಚಿಪ್ಪಿನಲ್ಲಿ ನೋವು ಕಾಣಿಸಿಕೊಂಡರೆ, ಇನ್ನೂ ಕೆಲವರ ಕೀಲುಗಳಲ್ಲಿ ಊರಿಯೂತ, ಕೂರಲು ಆಗದಂತಹ ಅಸಹಜ ಸ್ಥಿತಿ ಎದುರಾಗುತ್ತದೆ’ ಎಂದರು.

‘ಸಂಧಿವಾತದ ಸಮಸ್ಯೆ ಇರುವವರು ದೇಹದ ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಸಂಧಿವಾತದ ಲಕ್ಷಣಗಳು ಕಾಣಿಸಿಕೊಳ್ಳುತ್ತಲೇ ಗುರುತಿಸಿದಲ್ಲಿ ಇದನ್ನು ಆರಂಭದಲ್ಲೇ ಗುಣಪಡಿಸಬಹುದು. ಮಂಡಿ ನೋವಿಗೆ ಆರಂಭದಲ್ಲೇ ಚಿಕಿತ್ಸೆ ಪಡೆಯಬೇಕು. ಅದು ತೀವ್ರ ಸ್ವರೂಪಕ್ಕೆ ತಿರುಗಿದರೆ ಮಂಡಿ ಚಿಪ್ಪು ಬದಲಿಸಬೇಕಾಗುತ್ತದೆ. ಇದು ರೋಗಿಯ ವಯಸ್ಸು ಹಾಗೂ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು, ತುಂಬಾ ಅಗತ್ಯವಿದ್ದಲ್ಲಿ ಮಾತ್ರ ನಾವು ಶಸ್ತ್ರಚಿಕಿತ್ಸೆ ಮಾಡುತ್ತೇವೆ’ ಎನ್ನುತ್ತಾರೆ ಅವರು.

ಉಚಿತ ತಪಾಸಣೆ ಶಿಬಿರ

ನಗರದ ಸೂಪರ್‌ ಮಾರ್ಕೆಟ್‌ ಸಮೀಪದ ಆದರ್ಶ ಆಸ್ಪತ್ರೆಯಲ್ಲಿ ಅಕ್ಟೋಬರ್ 20ರವರೆಗೆ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಉಚಿತ ತಪಾಸಣೆ ಶಿಬಿರ ನಡೆಯಲಿದೆ.

ಎಲುಬು, ಕೀಲು, ಸಂಧಿವಾತ, ಅಸ್ತಿರಂದ್ರತೆ ಮತ್ತು ನರರೋಗದಿಂದ ಬಳಲುತ್ತಿರುವವರಿಗೆ ಹಾಗೂ ಫ್ರೀ ಭೋನ್‌ ಮಿನಿರಲ್‌ ಡಿನ್‌ಸಿಟಿ (ಡಿಎಂಡಿ) ಇವುಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ಇರುತ್ತದೆ. ಅಲ್ಲದೇ ಶೇ 50ರ ರಿಯಾಯಿತಿ ದರದಲ್ಲಿ ಎಕ್ಸ್‌ರೇ, ರಕ್ಷಪರೀಕ್ಷೆ ಹಾಗೂ ಇತರೆ ವೈದ್ಯಕೀಯ ತಪಾಸಣೆ ಮಾಡಲಾಗುವುದು. ಅಕ್ಟೋಬರ್ 18ರಂದು ಬೆಳಿಗ್ಗೆ 11ರಿಂದ ಸಂಜೆ 4 ರವೆರೆಗೆ ನಗರದ ಕೆಕೆಆರ್‌ಟಿಸಿ ಬಸ್‌ ಡಿಪೋದಲ್ಲಿ ಬಸ್‌ ಚಾಲಕರಿಗೆ ಹಾಗೂ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಯಲಿದೆ.

ಕುಡಿಯವ ನೀರಿನ ಬಗ್ಗೆ ಎಚ್ಚರವಿರಲಿ

ಕೆಲ ಪ್ರದೇಶಗಳಲ್ಲಿನ ಕೊಳವೆ ಬಾವಿಯ ನೀರಿನಲ್ಲಿ ಫ್ಲೋರೈಡ್ ಅಂಶ ಇದೆ. ಇಂತಹ ಫ್ಲೋರೈಡ್ ಮಿಶ್ರಿತ ನೀರನ್ನು ಕುಡಿಯುವುದರಿಂದ ಹಲ್ಲು ಮತ್ತು ಮೂಳೆಯು ಫ್ಲೋರೋಸಿಸ್‌ ಕಾಯಿಲೆಗೆ ತುತ್ತಾಗುತ್ತದೆ. ಇದರಿಂದ ಕೈಕಾಲುಗಳು ಊನವಾಗುವ ಸಾಧ್ಯತೆ ಇರುತ್ತದೆ. ವಯಸ್ಸಾದಂತೆ ಬೆನ್ನು ಬಾಗುವಿಕೆ, ಮೊಣಕಾಲು ನೋವು, ಮೂಳೆ ಸವೆತ ಉಂಟಾಗುತ್ತದೆ. ಹೀಗಾಗಿ ಕುಡಿಯುವ ನೀರಿನ ಬಗ್ಗೆ ಎಚ್ಚರವಿರಬೇಕು. ಸಾಧ್ಯವಾದಷ್ಟು ಶುದ್ಧ ನೀರು ಕುಡಿಯಬೇಕು.

ಸಂಧಿವಾತ, ಮೊಣಕಾಲು ಕೀಲುನೋವು ತಡೆಗೆ ಸರಳ ಸೂತ್ರ

l ನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡಬೇಕು

l ಈಜು ಹವ್ಯಾಸ ರೂಢಿಸಿಕೊಳ್ಳಬೇಕು

l ಸಮತೋಲಿತ ಆಹಾರ ಪದ್ಧತಿ ಮತ್ತು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು

l ತಂಬಾಕು ಉತ್ಪನ್ನಗಳ ಸೇವನೆ, ಮದ್ಯಪಾನದಿಂದ ದೂರವಿರಬೇಕು

l ಒಂದೇ ಕಡೆ ಹೆಚ್ಚು ಹೊತ್ತು ಕೂರದೇ ಆಗಾಗ್ಗೆ ಓಡಾಡಬೇಕು

l ಕ್ಯಾಲ್ಶಿಯಂ, ವಿಟಮಿನ್ ಇರುವ ಸಮತೋಲಿತ ಆಹಾರ ಸೇವನೆ

l ನೋವಿನ ಭಾಗಕ್ಕೆ ಆಗಾಗ ತುಸು ಬೆಚ್ಚಗಿನ ನೀರು ಹಾಕಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.