ADVERTISEMENT

ಬಜೆಟ್ 2020 | ಹೊಸ ತೆರಿಗೆ ನೀತಿ, ರೈತರಿಗಾಗಿ ಕಿಸಾನ್ ಎಕ್ಸ್‌ಪ್ರೆಸ್‌: ಇಲ್ಲಿದೆ ಬಜೆಟ್ ಸಮಗ್ರ ಮಾಹಿತಿ

ರಾಷ್ಟ್ರ ಲಾಂಛನವಿರುವ ಕೆಂಪು ವಸ್ತ್ರದಲ್ಲಿ ಸುತ್ತಿದ ಬಜೆಟ್ ದಾಖಲೆಯನ್ನು ಕೈಲಿ ಹಿಡಿದ ನಿರ್ಮಲಾ ಸೀತಾರಾಮನ್‌ರ ಮುಗುಳ್ನಗೆ ಆತ್ಮವಿಶ್ವಾಸ ತುಳುಕಿಸುತ್ತಿದೆ. ವಿಶ್ವದಲ್ಲಿ ಕಂಡು ಬರುತ್ತಿರುವ ಆರ್ಥಿಕ ಹಿಂಜರಿತ ಮತ್ತು ದೇಶದಲ್ಲಿ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಜೆಟ್‌ ಬಗ್ಗೆ ಜನರಲ್ಲಿ ಕುತೂಹಲ ಮನೆಮಾಡಿದೆ. ನಿನ್ನೆ (ಜ.31) ಸಂಸತ್ತಿನಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ‘ವಿಶ್ವದ ಆರ್ಥಿಕ ಸ್ಥಿತಿಯನ್ನು ನಮ್ಮ ದೇಶಕ್ಕೆ ಪೂರಕವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಯೋಚಿಸಿ’ ಎಂದು ಸಲಹೆ ಮಾಡಿದ್ದರು. ಆರ್ಥಿಕ ಸಮೀಕ್ಷೆಯಲ್ಲಿದ್ದ ಅಂಕಿಅಂಶಗಳು ಸಹ ಬಜೆಟ್‌ ಬಗ್ಗೆ ಆಶಾವಾದವನ್ನೂ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವ ಮುನ್ಸೂಚನೆಯನ್ನೂ ನೀಡಿತ್ತು. 2025ರ ವೇಳೆಗೆ 5 ಶತಕೋಟಿ ಡಾಲರ್ ಆರ್ಥಿಕ ಶಕ್ತಿಯಾಗುವ ಕನಸು ಬಿತ್ತಿದ್ದ ಮೋದಿ ಸರ್ಕಾರದ 2ನೇ ಅವಧಿಯ 2ನೇ ಬಜೆಟ್‌ನ ಮುಖ್ಯಾಂಶಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 14:24 IST
Last Updated 1 ಫೆಬ್ರುವರಿ 2020, 14:24 IST

ಬಜೆಟ್‌ ವಿಶ್ಲೇಷಣೆ

ಬಜೆಟ್‌ ಭಾಷಣ ಮುಕ್ತಾಯ

ಬಜೆಟ್ ಭಾಷಣ ಓದಲು ನಿರ್ಮಲಾ ಸೀತಾರಾಮನ್ ತಡವರಿಸಿದರು. ಕುಳಿತು ಓದಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದರು. ನಿರಂತರ ಎರಡು ಗಂಟೆ 30 ನಿಮಿಷ ಬಜೆಟ್‌ ಓದಿ, ಕೆಲ ಪುಟಗಳು ಬಾಕಿ ಇರುವಂತೆ ಭಾಷಣ ಮುಕ್ತಾಯ ಗೊಳಿಸಿದರು. 

ಇದನ್ನೂ ಓದಿ: ಬಜೆಟ್‌ ಇತಿಹಾಸ: ದೀರ್ಘಾವಧಿ ಬಜೆಟ್‌ ಭಾಷಣ ಮಾಡಿದವರು ಯಾರು?

ವೈದ್ಯಕೀಯ ಉಪಕರಣಗಳ ಆಮದಿಗೆ ಸೆಸ್‌

ADVERTISEMENT

ವೈದ್ಯಕೀಯ ಉಪಕರಣಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದ್ದೇವೆ. ಕೆಲ ತಿಂಗಳ ಹಿಂದಿನ ವರೆಗೆ ನಾವು ಆಮದು ಮಾಡಿಕೊಳ್ಳುತ್ತಿದ್ದೆವು. ವೈದ್ಯಕೀಯ ಉಪಕರಣಗಳ ಆಮದು ಮೇಲೆ ಸೆಸ್ ವಿಧಿಸುತ್ತೇನೆ. ಇದು ಭಾರತದಲ್ಲಿ ತಯಾರಾಗುವ ಉಪಕರಣಗಳ ಬಳಕೆ ಹೆಚ್ಚಾಗಲು ಅನುಕೂಲ ಮಾಡಿಕೊಡುತ್ತದೆ ಎಂದರು. 

ಆಧಾರ್ ಆಧರಿತ ತೆರಿಗೆ ಪರಿಷ್ಕರಣೆ 

‘ವಿವಾದದಿಂದ ವಿಶ್ವಾಸ‘ (ವಿವಾದ್‌ ಸೆ ವಿಶ್ವಾಸ್‌) ಯೋಜನೆ ಘೋಷಣೆ. ಆದಾಯ ತೆರಿಗೆ ಕಾಯ್ದೆಯಲ್ಲಿ ಅಗತ್ಯ ಬದಲಾವಣೆ ಮಾಡುವ ಮೂಲಕ ತೆರಿಗೆದಾರರಿಗೆ ಅನುಕೂಲ. ಪಾರದರ್ಶಕತೆ ತರಲು ಬದ್ಧ ಎಂದ ನಿರ್ಮಲಾ.

ಈ ವರ್ಷ 4.83 ಲಕ್ಷ ತೆರಿಗೆ ಪ್ರಕರಣಗಳು ವಿವಿಧೆಡೆ ಬಾಕಿ ಉಳಿದಿವೆ. ನೇರ ತೆರಿಗೆಯಲ್ಲಿಯೂ ತಕರಾರು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ.

ಮಾರ್ಚ್ 2020ರ ಒಳಗೆ ತೆರಿಗೆ ಪಾವತಿಸುವವರಿಗೆ ಯಾವುದೇ ದಂಡ ವಿಧಿಸುವುದಿಲ್ಲ. ಜೂನ್ 2020ರ ಒಳ ತೆರಿಗೆ ಪಾವತಿಸುವವರಿಗೆ ಕೊಂಚ ದಂಡ ಇರುತ್ತದೆ. ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ.

ಆಧಾರ್ ಮೂಲಕ ಪಾನ್ ಕಾರ್ಡ್‌ ಹೊಂದಲು ಅವಕಾಶ. ವೈಯಕ್ತಿಕ ಆದಾಯ ತೆರಿಗೆಯನ್ನು ಇತಿಹಾಸದಲ್ಲಿಯೇ ಅತಿಕಡಿಮೆ ಮಾಡಿದ್ದೇವೆ. ಡಿಡಿಟಿಯನ್ನು ಕಂಪನಿಗಳ ಹೊಣೆಗಾರಿಕೆಯಿಂದ ಮುಕ್ತಗೊಳಿಸಿದ್ದೇವೆ.

ಜಿಎಸ್‌ಟಿ ಸುಧಾರಣೆ ಯತ್ನಗಳು ಮುಂದುವರಿದಿವೆ. ಎಸ್‌ಎಂಎಸ್‌ ಆಧಾರದ ಜಿಎಸ್‌ಟಿ ರಿಟರ್ನ್‌ಗೆ ಯೋಚಿಸಿದ್ದೇವೆ. ಆಧಾರ್ ಆಧರಿತ ತೆರಿಗೆ ಪರಿಷ್ಕರಣೆ ವ್ಯವಸ್ಥೆ ಜಾರಿ ಮಾಡುತ್ತೇವೆ. ಅಸ್ತಿತ್ವದಲ್ಲಿಲ್ಲದ ಘಟಕಗಳನ್ನು ತೋರಿಸಿ ತೆರಿಗೆ ವಿನಾಯ್ತಿ ಪಡೆಯುವುದಕ್ಕೆ ಇದು ತಡೆಯೊಡ್ಡಲಿದೆ.

ಸೂಕ್ಷ್ಮ, ಆಕ್ಷೇಪಾರ್ಹ ವಸ್ತುಗಳ ಆಮದಿಗೆ ಕಡಿವಾಣ ಹಾಕಲು ಕ್ರಮ ಜರುಗಿಸುತ್ತೇವೆ. ದೇಶೀಯ ಕೈಗಾರಿಕೆಗಳ ಹಿತ ಕಾಪಾಡಲು ಆಮದು ಶುಲ್ಕ ವಿಧಿಸುವುದು ಅನಿವಾರ್ಯವಾಗುತ್ತೆ. ಅದು ರೂಪುರೇಷೆಗಳನ್ನು ನಿರ್ಧರಿಸುತ್ತೇವೆ. ಇಂಥ ನಿಯಮಗಳು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಯೇ ಇರುತ್ತವೆ.

ಕಸ್ಟಮ್ಸ್‌ ಲಾ (ಸೀಮಾ ಸುಂಕ) ಸುಧಾರಣೆಗೆ ಸಂಬಂಧಿಸಿದಂತೆ ಜನರು ಮುಕ್ತವಾಗಿ ಸಲಹೆಗಳನ್ನು ಕೊಡಬಹುದು.
ಮೇಕ್‌ ಇನ್ ಇಂಡಿಯಾ ಯೋಜನೆಯ ಲಾಭ ಈಗ ಸಿಗುತ್ತಿದೆ. ಭಾರತ ಈಗ ವಿಶ್ವದರ್ಜೆಯ ವಸ್ತುಗಳನ್ನು ಉತ್ಪಾದಿಸಿ, ರಫ್ತು ಮಾಡುತ್ತಿದೆ.

ಬಜೆಟ್‌ ಮಂಡನೆ; ಕುಸಿದ ಷೇರುಪೇಟೆ

ಬಜೆಟ್‌ಗೆ ಷೇರುಪೇಟೆಯಲ್ಲಿ ನೀರಸ ಪ್ರತಿಕ್ರಿಯೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 473 ಅಂಶಗಳ ಕುಸಿತ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 187 ಅಂಶ ಕುಸಿದಿದೆ.

ನವೋದ್ಯಮದಲ್ಲಿ ಉದ್ಯೋಗಿಗಳಿಗೆ ಕೊಡುವ ಷೇರುಗಳಿಗೆ ತೆರಿಗೆ ಪಾವತಿಗೆ ಐದು ವರ್ಷಗಳ ಅಥವಾ ಷೇರು ಮಾರಾಟದವರೆಗಿನ ವಿನಾಯಿತಿ. ಸಹಕಾರ ಸಂಘಗಳಿಗೆ ಬಲ ತುಂಬಲು ಕ್ರಮ. ಈಗ ಸಹಕಾರ ಚಟುವಟಿಕೆಗಳಿಗೆ ಶೇ 30ರ ತೆರಿಗೆ ಇದೆ. ಕಂಪನಿಗಳಿಗೆ ನೀಡುವಂತೆ ಸಹಕಾರ ಸಂಘಗಳಿಗೂ ತೆರಿಗೆ ವಿನಾಯಿತಿ ಮತ್ತು ರಿಯಾಯಿತಿ ಪಡೆಯಲು ಅವಕಾಶ. 

ಕೈಗೆಟುಕುವ ದರದ ವಸತಿ ಯೋಜನೆಗಳಿಗೆ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ವಿನಾಯಿತಿ ಲಾಭವನ್ನು ಹೆಚ್ಚಿನ ಜನ ಪಡೆದುಕೊಂಡಿದ್ದರು. ಈ ಯೋಜನೆಯನ್ನು ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಿಸಿದ್ದೇನೆ. ವಸತಿ ಯೋಜನೆಗಳನ್ನು ನಿರ್ವಹಿಸುವ ಕಂಪನಿಗಳಿಗೆ ತಡವಾಗಿ ತೆರಿಗೆ ಪಾವತಿಸಲು ಅವಕಾಶ ಕೊಡುತ್ತೇವೆ.
 

ಆದಾಯ ತೆರಿಗೆ ಕಡಿತ ಘೋಷಣೆ

ತೆರಿಗೆ ಸುಧಾರಣೆ ಮಂತ್ರ ಪಠಿಸಿದ ನಿರ್ಮಲಾ ಸೀತಾರಾಮ್‌ ಆದಾಯ ತೆರಿಗೆ ಕಡಿತ ಘೋಷಿಸಿದರು. ತೆರಿಗೆ ಪಾವತಿ ವಿಧಾನ ಸರಳಗೊಳಿಸುತ್ತೇವೆ. ತೆರಿಗೆ ಕಾಯ್ದೆಯನ್ನೂ ಸರಳ ಮಾಡುತ್ತೇವೆ. ಹೊಸ ವ್ಯವಸ್ಥೆ ಜಾರಿ ಮಾಡುತ್ತೇವೆ. ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಕೆಲ ವಿನಾಯಿತಿಗಳು ಕೊಡುತ್ತೇವೆ.

ತೆರಿಗೆ ಕಡಿತ: 

* ₹ 5–7.5 ಲಕ್ಷದವರೆಗೆ ಶೇ 10 ತೆರಿಗೆ. ಪ್ರಸ್ತುತ ₹ 5–7.5 ಲಕ್ಷಕ್ಕೆ ಈಗ * ಶೇ 20 ತೆರಿಗೆ ಇದೆ. ಅದನ್ನು ಶೇ 10ಕ್ಕೆ ಕಡಿಮೆ ಮಾಡಿದ್ದೇವೆ. 
* ₹ 7.5 – 10 ಲಕ್ಷ ಆದಾಯ ಇರುವವರಿಗೆ ಇನ್ನು ಮುಂದೆ ಶೇ 15 ತೆರಿಗೆ ವಿಧಿಸಲಾಗುತ್ತದೆ. ಈಗ ಶೇ 20ರಷ್ಟು ತೆರಿಗೆ ಇದೆ.
* ₹ 10– 12.5 ಲಕ್ಷ ಆದಾಯಕ್ಕೆ ಶೇ 20 ತೆರಿಗೆ
* 12.5– 15 ಲಕ್ಷ ಆದಾಯಕ್ಕೆ ಮುಂದೆ ಶೇ 25 ತೆರಿಗೆ
* ₹ 15 ಲಕ್ಷಕ್ಕೂ ಹೆಚ್ಚು ಆದಾಯ ಇರುವವರಿಗೆ ಯಾವುದೇ ವಿನಾಯ್ತಿ ಇಲ್ಲ (ಶೇ 30 ತೆರಿಗೆ)
* ₹ 2.5 ಲಕ್ಷದ ವರೆಗೂ ತೆರಿಗೆ ಇಲ್ಲ. ₹ 2.5– ₹ 5 ಲಕ್ಷದ ವರೆಗೂ ಶೇ 5 ತೆರಿಗೆ ವಿಧಿಸಲಾಗುತ್ತಿತ್ತು; ಇದರಲ್ಲಿ ಬದಲಾವಣೆ ಆಗಿಲ್ಲ.

ಷೇರು ಲಾಭಾಂಶ ವಿತರಣೆ ತೆರಿಗೆ ಇಲ್ಲ

ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ (ಡಿವಿಡೆಂಡ್‌) ಲಾಭಾಂಶದ ಮೇಲೆ ಶೇ 15ರಷ್ಟು ತೆರಿಗೆ ಮತ್ತು ಸರ್‌ಚಾರ್ಜ್‌ ಇತ್ತು. ಇದನ್ನು ತಗ್ಗಿಸಬೇಕು ಅಥವಾ ತೆರಿಗೆದಾರರಿಗೆ ಅವರ ಆದಾಯ ಜೊತೆಗೆ ಲೆಕ್ಕ ಹಾಕಿ ತೆರಿಗೆ ಪಾವತಿಸಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಇತ್ತು.

ಡೆವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್ (ಡಿಡಿಟಿ) ರದ್ದುಪಡಿಸುತ್ತಿದ್ದೇನೆ. ಇದರಿಂದ ದೇಶವನ್ನು ಹೂಡಿಕೆದಾರರ ನೆಚ್ಚಿನ ತಾಣ ಮಾಡಲು ಅನುಕೂಲವಾಗುತ್ತೆ.

ಮೂಲ ಸೌಕರ್ಯಗಳಲ್ಲಿ ಮಾರ್ಚ್ 2020ರ ಒಳಗೆ ಮೂರು ವರ್ಷದ ಲಾಕಿನ್ ಅವಧಿಯಲ್ಲಿ ಮಾಡಿದ ವಿದೇಶಿ ಹೂಡಿಕೆಗೆ ತೆರಿಗೆ ವಿನಾಯ್ತಿ ಘೋಷಣೆ.

2020–21ರ ಜಿಡಿಪಿ ಅಂದಾಜು ಶೇ 10

ವಿತ್ತೀಯ ಕೊರತೆಯ ಅಂದಾಜಿನ ಬಗ್ಗೆ ಹಲವು ಆಕ್ಷೇಪಗಳು ಈ ಹಿಂದೆ ವ್ಯಕ್ತವಾಗಿದ್ದವು. ನಮ್ಮ ಅಂದಾಜು ವಿಧಾನ ಸರಿಯಾಗಿದೆ ಮತ್ತು ವಿತ್ತೀಯ ಕೊರತೆ ಕಾಯ್ದೆಗೆ ಅನುಗುಣವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ವಿತ್ತೀಯ ಕೊರತೆ ನಿಯಮಗಳನ್ನು ಅನಿವಾರ್ಯವಾಗಿ ಶಾಸನಬದ್ಧವಾಗಿಯೇ ಮೀರುತ್ತಿದ್ದೇನೆ.

ಬಟೆಟ್‌ನ ಒಟ್ಟು ಗಾತ್ರ ₹ 26.99 ಲಕ್ಷ ಕೋಟಿ. 2020–21ನೇ ಸಾಲಿನ ಜಿಡಿಪಿ ಅಂದಾಜು ಶೇ 10 ರಷ್ಟಿದೆ.

ವಿತ್ತೀಯ ಕೊರತೆ
2020–21– ಶೇ 3.8
2021–22ರಲ್ಲಿ ಶೇ 3.5

ಆದಾಯ ಗುರಿ– ₹ 22.66 ಲಕ್ಷ ಕೋಟಿ
ವ್ಯಯ ಗುರಿ–₹ 30.42 ಲಕ್ಷ ಕೋಟಿ

 

'ಎಲ್‌ಐಸಿ' ಸರ್ಕಾರ ಪಾಲು ಮಾರಾಟ!

ಎಲ್ಐಸಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ. ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಸರ್ಕಾರದ ಸ್ವಲ್ಪ ಪಾಲು ಮಾರಾಟಕ್ಕೆ ನಿರ್ಧಾರ.

ವಿಶ್ವಮಟ್ಟದ ಚಿನ್ನದ ಮಾರುಕಟ್ಟೆ ಭಾರತದಲ್ಲಿ ಸ್ಥಾಪಿಸುತ್ತೇವೆ. ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸುತ್ತೇವೆ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಬ್ಯಾಂಕ್‌ಗಳ ಮೂಲಕ ಅಗತ್ಯ ಬಂಡವಾಳ ಒದಗಿಸಲು ಕ್ರಮ. ಸಾಲ ಮರುಹೊಂದಾಣಿಕೆಯಿಂದ 5 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಅನುಕೂಲವಾಗಿದೆ. ಈ ಯೋಜನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲು ಸರ್ಕಾರ ಆರ್‌ಬಿಐಗೆ ಮನವಿ ಮಾಡಿದೆ.

ಹಲವು ಮಧ್ಯಮ ಗಾತ್ರದ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿವೆ. ಇಂಥ ಫಾರ್ಮಾ, ಆಟೊ ಕ್ಷೇತ್ರದ ಉದ್ದಿಮೆಗಳು ವಿದೇಶಗಳಿಗೆ ವ್ಯವಹಾರ ವಿಸ್ತರಿಸಲು ಆಸಕ್ತಿ ತೋರಿದರೆ ಸರ್ಕಾರ ಅಗತ್ಯ ನೆರವು ನೀಡಲಿದೆ.

ಬಾಂಡ್‌ (ಸಾಲಪತ್ರ) ವ್ಯವಹಾರ ವಿಸ್ತರಣೆಗೆ ಕ್ರಮ ತೆಗೆದುಕೊಂಡಿದ್ದೇವೆ. ಸರ್ಕಾರದ ಹಲವು ರೀತಿಯ ಸಾಲಪತ್ರಗಳಲ್ಲಿ ವಿದೇಶಿ ಹೂಡಿಕೆದಾರರಿಗೂ ಹೂಡಿಕೆಗೆ ಅವಕಾಶ ಕೊಡುತ್ತೇವೆ. ಸರ್ಕಾರದ ಸಾಲಪತ್ರಗಳಿಗಾಗಿ, ಬಂಡವಾಳ ಸಂಚಯಕ್ಕಾಗಿ ರೂಪಿಸಿದ ‘ಭಾರತ್ ಬಾಂಡ್’ ಎಟಿಎಫ್ ಉಲ್ಲೇಖ.
1.3 ಲಕ್ಷ ಕೋಟಿ ಮೊತ್ತದ ರಾಷ್ಟ್ರೀಯ ಮೂಲ ಸೌಕರ್ಯ ಯೋಜನೆಗಳು ಬಾಕಿಯಿವೆ ಎಂದು ಈಗಾಗಲೇ ಘೋಷಿಸಿದ್ದೇವೆ. ಈ ಪೈಕಿ 23 ಸಾವಿರ ಕೋಟಿ ಅಂದಾಜಿನ ಯೋಜನೆಯ ಪೂರ್ಣಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ.

ಮೂಲ ಸೌಕರ್ಯ ಯೋಜನೆಗೆ ಅಗತ್ಯವಿರುವ ಬಂಡವಾಳವನ್ನು ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿ ಬಂಡವಾಳದ ಮೂಲಕ ಸಂಚಯಿಸಲು ಕ್ರಮ ತೆಗೆದುಕೊಳ್ಳುತ್ತೇವೆ.

ಬ್ಯಾಂಕ್‌ ಠೇವಣಿ ವಿಮೆ ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಳ

ಬ್ಯಾಂಕ್‌ಗಳನ್ನು ದೃಢಪಡಿಸುತ್ತೇವೆ. ಠೇವಣಿದಾರರ ಹಣ ಸುರಕ್ಷಿತವಾಗಿದೆ. ₹ 3.50 ಲಕ್ಷ ಕೋಟಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪುನರ್ಧನ ಯೋಜನೆಯಡಿ ಬಂಡವಾಳ ಒದಗಿಸಿದ್ದೇವೆ.

ಬ್ಯಾಂಕ್‌ಗಳಲ್ಲಿ ಇರುವ ಠೇವಣಿ ವಿಮೆಯನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸುತ್ತಿದ್ದೇವೆ. ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಐಡಿಬಿಐ ಬ್ಯಾಂಕ್‌ಗೆ ಇನ್ನಷ್ಟು ಖಾಸಗಿ ಬಂಡವಾಳ ಹರಿದುಬರುವಂತೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ.
ಸಾರ್ವಜನಿಕ ನಿವೃತ್ತಿ ವೇತನ ವ್ಯವಸ್ಥೆ ಜಾರಿ ಮಾಡುತ್ತೇವೆ. ಉದ್ಯೋಗಿಗಳು ತನ್ನಿಂತಾನೆ ಈ ಯೋಜನೆಗೆ ಸೇರ್ಪಡೆಯಾಗುತ್ತಾರೆ. ಜನರು ವೃದ್ಧಾಪ್ಯ ನಿಧಿಗೆ ಪ್ಲಾನ್ ಮಾಡಿಕೊಳ್ಳಲು ನೆರವಾಗುತ್ತೇವೆ.

ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗಾಗಿ ₹ 37,000 ಕೋಟಿ

ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗಾಗಿ ₹ 37,000 ಕೋಟಿ, ಲಡಾಖ್ ಅಭಿವೃದ್ಧಿಗಾಗಿ ₹ 5,000 ಕೋಟಿ ಘೋಷಣೆ. 2022ರಲ್ಲಿ ಜಿ–20 ಶೃಂಗಸಭೆ ಸಮಾವೇಶ ಭಾರತದಲ್ಲಿ ನಡೆಯಲಿದೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಲು ₹ 100 ಕೋಟಿ ಘೋಷಣೆ

ಉತ್ತಮ ರಾಷ್ಟ್ರಕ್ಕೆ ಐದು ಆಭರಣಗಳು 

ಒಂದು ಒಳ್ಳೇ ದೇಶಕ್ಕೆ ಐದು ಆಭರಣಗಳು:

1) ರೋಗವಿಲ್ಲದ ದೇಶ 2) ಸಂಪತ್ಭರಿತ ದೇಶ 3) ಉತ್ತಮ ಇಳುವರಿಯ ಬೆಳೆ 4) ಖುಷಿಯ ಬದುಕು 5) ರಕ್ಷಣೆ. ದೇಶಕ್ಕೆ ಅಗತ್ಯ ಎಂದು ತಿರುವಳ್ಳುವರ್ ಹೇಳಿದ್ದರು. ತಿರುವಳ್ಳುವರ್ ಕಾವ್ಯ ಉಲ್ಲೇಖಿಸಲಾಯಿತು.

ರಕ್ಷಣೆ ವಿಚಾರ ಪ್ರಸ್ತಾಪವಾದ ತಕ್ಷಣ ಪ್ರತಿಪಕ್ಷಗಳಿಂದ ಕೂಗಾಟ. ದೇಶದಲ್ಲಿ ಸಂಪತ್ತು ಸೃಷ್ಟಿಸುವವರನ್ನು ಗೌರವಿಸಲಾಗುವುದು. ರೈತರು ಮತ್ತು ರೈತರಿಗೆ ನೆರವಾಗುವವರನ್ನು ನಾವು ಬೆಂಬಲಿಸುತ್ತೇವೆ. ರಾಷ್ಟ್ರೀಯ ಭದ್ರತೆಯು ನಮ್ಮ ಸರ್ಕಾರದ ಮೊದಲ ಆದ್ಯತೆ. ಜನರಲ್ಲಿ ಬದುಕುವ ಭರವಸೆ ಹುಟ್ಟಿಸುವುದೇ ಉತ್ತಮ ಆಡಳಿತ. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದು ಸಾಧ್ಯವಾಗಲು ಸ್ವಚ್ಛ, ಭ್ರಷ್ಟ್ರಾಚಾರ ರಹಿತ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸರ್ಕಾರ ಬೇಕು.

ನಮ್ಮ ಸರ್ಕಾರ ಜನರಿಗಾಗಿ ಇದೆ. ದೇಶದ ಜನರನ್ನು ನಾವು ಅನುಮಾನಿಸುವುದಿಲ್ಲ.
 

ವಾಯುಮಾಲಿನ್ಯ ಕಡಿತಕ್ಕೆ ₹ 4,400 ಕೋಟಿ ಮೀಸಲು

ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತೇವೆ. ಮಾಲಿನ್ಯಕಾರಿ ಹಳೆಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳನ್ನು ಮುಚ್ಚಲು ಸೂಚಿಸುತ್ತೇವೆ.
10 ಲಕ್ಷಕ್ಕೂ ಹೆಚ್ಚು ಜನರಿರುವ ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆ ಮಾಡಲು ರಾಜ್ಯ ಸರ್ಕಾರಗಳು ಪ್ರಸ್ತಾವ ಕೊಟ್ಟರೆ ಅನುದಾನ ಕೊಡುತ್ತೇವೆ. ಇದಕ್ಕಾಗಿ ₹ 4,400 ಕೋಟಿ ಮೀಸಲು.
 

ಪ್ರವಾಸೋದ್ಯಮಕ್ಕಾಗಿ ₹ 2,500 ಕೋಟಿ 

ಪ್ರವಾಸೋದ್ಯಮದ ಮೂಲಕ ಆರ್ಥಿಕ ಸುಧಾರಣೆಗೆ ಕ್ರಮ. ಈ ವಿಚಾರದಲ್ಲಿ ರಾಜ್ಯ ಸರ್ಕಾರಗಳ ನೆರವು ಬೇಕಿದೆ. ರಾಜ್ಯ ಸರ್ಕಾರಗಳು ನಮಗೆ ಪ್ರಸ್ತಾವ ಕಳಿಸಿದರೆ ನಾವು ಅನುದಾನ ನೀಡುತ್ತೇವೆ. ಪ್ರವಾಸೋದ್ಯಮಕ್ಕಾಗಿ ₹ 2,500 ಕೋಟಿ ಮೀಸಲು.
 

ಅಹಮದಾಬಾದ್‌ನಲ್ಲಿ ನೌಕಾ ವಸ್ತು ಸಂಗ್ರಹಾಲಯ 

ಪುರಾತತ್ವ ಇಲಾಖೆಯ ಮೂಲಕ ಹೊಸ ವಸ್ತು ಸಂಗ್ರಹಾಯಲಯಗಳ ಆರಂಭ. ಐದು ಪುರಾತತ್ವ ಸ್ಥಳಗಳನ್ನು ಐಕಾನಿಕ್ ಆಗಿ ಬೆಳೆಸಲಾಗುವುದು. ಅಲ್ಲಿ ತೆರೆದ ವಸ್ತು ಸಂಗ್ರಹಾಲಯಗಳಿರುತ್ತವೆ. ರಾಖಿಗಡಿ (ಹರಿಯಾಣ), ಹಸ್ತಿನಾಪುರ (ಉತ್ತರ ಪ್ರದೇಶ), ಆದಿತ್ಯ ನಲ್ಲೂರು (ತಮಿಳುನಾಡು), ಶಿವಸಾಗರ್ (ಅಸ್ಸಾಂ) ಸೇರಿದೆ.
ದೇಶದ ವಿವಿಧೆಡೆ 4 ವಸ್ತುಸಂಗ್ರಹಾಯಗಳ ಸುಧಾರಣೆಗೆ ಕ್ರಮ. ಜಾರ್ಖಂಡ್‌ನ ರಾಂಚಿಯಲ್ಲಿ ಬುಡಕಟ್ಟು ಸಂಸ್ಕೃತಿ ಬಿಂಬಿಸುವ ವಸ್ತುಸಂಗ್ರಹಾಲಯ. ಅಹಮದಾಬಾದ್‌ನಲ್ಲಿ ನೌಕಾ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗುತ್ತದೆ. 
 

ಪರಿಶಿಷ್ಟ ಜಾತಿಯ ಜನರ ಅಭಿವೃದ್ಧಿಗಾಗಿ ₹ 85 ಸಾವಿರ ಕೋಟಿ ಘೋಷಣೆ. ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ₹ 53,700 ಕೋಟಿ ಘೋಷಣೆ. 

ಬೇಟಿ ಬಚಾವೋ ಬೇಟಿ ಪಡಾವೋ ಗದ್ದಲ

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ ಎಂದ ನಿರ್ಮಲಾ. ಪ್ರತಿಪಕ್ಷಗಳಿಂದ ಗದ್ದಲ. ಬೇಟಿ ಪಡಾವೋ ಆಂದೋಲನದ ನಂತರ ದೇಶದಲ್ಲಿ ಒಟ್ಟಾರೆ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಬಾಲಕಿಯರ ಸಂಖ್ಯೆ ಹೆಚ್ಚಾಗಿದೆ. ಪ್ರೌಢಶಿಕ್ಷಣದಲ್ಲಿಯೂ ಪರಿಸ್ಥಿತಿ ಸುಧಾರಿಸುತ್ತಿದೆ.

ಬಾಲಕಿಯರು ಬಾಲಕರಿಗಿಂತ ಚೆನ್ನಾಗಿ ಓದುತ್ತಿದ್ದಾರೆ. ಸಭೆಯಲಲ್ಲಿ ಗದ್ದಲ. ಭಾಷಣಕ್ಕೆ ಅಡ್ಡಿಪಡಿಸಿದ ಪ್ರತಿಪಕ್ಷಗಳು.

6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ಒದಗಿಸುವ ಮೂಲಕ ಮಹಿಳೆಯರು, ಮಕ್ಕಳ ಸ್ಥಿತಿಗತಿ ಅರಿತು ಸ್ಪಂದಿಸಲು ಸಾಧ್ಯವಾಯಿತು. 

ಸಣ್ಣವಯಸ್ಸಿನಲ್ಲಿಯೇ ತಾಯಂದಿರಾಗುವುದು ಅಪಾಯ. ಮಹಿಳೆಯರು ಮತ್ತು ಮಕ್ಕಳ ಸ್ಥಿತಿಗತಿ ಅರಿಯಲು 6 ತಿಂಗಳಲ್ಲಿ ವರದಿ ನೀಡುವಂತೆ ಕಾರ್ಯಪಡೆ ರಚನೆ. ಪೌಷ್ಟಿಕಾಂಶ ಕೊರತೆ ನೀಗಿಸಲು ₹ 35,600 ಕೋಟಿ ರೂಪಾಯಿ ಘೋಷಣೆ. ಗರ್ಭಿಣಿಯರ ಸಾವು ತಡೆಯುವುದು ನಮ್ಮ ಆದ್ಯತೆ. ಅದನ್ನೂ ಕಾರ್ಯಪಡೆ ಪರಿಶೀಲಿಸಲಿದೆ.

1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಭಾರತ್ ನೆಟ್ 

ಹೊಸ ಆರ್ಥಿಕ ವ್ಯವಸ್ಥೆ ಬರುತ್ತಿರುವುದರಿಂದ ಸಾಂಪ್ರದಾಯಿಕ ವ್ಯವಸ್ಥೆ ಅಲುಗಾಡುತ್ತಿದೆ. ದತ್ತಾಂಶ ವಿಶ್ಲೇಷಣೆ ಮತ್ತು ಇಂಟರ್ನೆಟ್‌ ಬಳಕೆ ನಮ್ಮ ಬದುಕುಗಳನ್ನು ಬದಲಿಸುತ್ತಿದೆ. ಖಾಸಗಿ ಕ್ಷೇತ್ರಗಳು ದೇಶದಾದ್ಯಂತ ಡೇಟಾ ಸೆಂಟರ್‌ ಪಾರ್ಕ್ ರೂಪಿಸಲು ನೀತಿಯೊಂದನ್ನು ರೂಪಿಸುತ್ತೇವೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂಚೆ ಕಚೇರಿಯಿಂದ ಪೊಲೀಸ್‌ ವ್ಯವಸ್ಥೆಯವರೆಗೆ ಎಲ್ಲ ಸೇವೆಗಳು ಡಿಜಿಟಲೀಕರಣಗೊಳ್ಳಲಿದೆ. ದೇಶದ 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಭಾರತ್ ನೆಟ್ ಕಾರ್ಯಕ್ರಮದ ಮೂಲಕ ಒಎಫ್‌ಸಿ ಸಂಪರ್ಕ ಒದಗಿಸಲಾಗುವುದು. ಕ್ವಾಂಟಮ್‌ ತಂತ್ರಜ್ಞಾನ ಅಭಿವೃದ್ಧಿಗಾಗಿ ₹ 8,000 ಕೋಟಿ ಘೋಷಣೆ. ಅಂಗನವಾಡಿಗಳಿಗೆ ಇಂಟರ್ನೆಟ್‌ ಸಂಪರ್ಕ.
 

₹ 1,480 ಕೋಟಿ ವೆಚ್ಚದಲ್ಲಿ ಜವಳಿ ಮಿಷನ್

ಭಾಷಣದಲ್ಲಿ ಹರಪ್ಪ ಮತ್ತು ಮೆಹೆಂಜೊದಾರೋ ನಾಗರಿಕತೆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವ್ಯಾಪಾವ ವಹಿವಾಟಿನ ಉಲ್ಲೇಖ. ಪ್ರತಿಪಕ್ಷಗಳಿಂದ ಆಕ್ಷೇಪ.
ಎಲೆಕ್ಟ್ರಾನಿಕ್ ಉದ್ಯಮದಿಂದ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಭಾರತದಲ್ಲಿ ಮೊಬೈಲ್ ಫೋನ್, ಸೆಮಿಕಂಡರಕ್ಟರ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಗೆ ಉತ್ತೇಜನ ನೀಡುವ ಹೊಸ ಯೋಜನೆಯನ್ನು ಶೀಘ್ರ ಘೋಷಿಸುತ್ತೇನೆ. 

ನಾಲ್ಕು ವರ್ಷಗಳ ಅವಧಿಯಲ್ಲಿ ಜಾರಿ ಮಾಡಲು ₹ 1,480 ಕೋಟಿ ವೆಚ್ಚದಲ್ಲಿ ಜವಳಿ ಮಿಷನ್ ಜಾರಿ ಘೋಷಣೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಒತ್ತು

ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಒತ್ತು ನೀಡಲಾಗಿದೆ. ಮೆಟ್ರೊ ಮಾದರಿಯಲ್ಲಿ ₹18,600 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು ಕ್ರಮ. ಶೇ 20ರಷ್ಟು ಮೊತ್ತ ಕೇಂದ್ರದ ಸಹಾಯಧನ. ಶೇ 50ರಷ್ಟು ಹೊರಗಿನ ನೆರವು ಒದಗಿಸಲು ಭರವಸೆ.

ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಆರಂಭ. ದೆಹಲಿ–ಮುಂಬೈ ಎಕ್ಸ್‌ಪ್ರೆಸ್ ವೇ 2023ಕ್ಕೆ ಮುಕ್ತಾಯವಾಗಲಿದೆ.

ರೈಲು ಹಳಿಗಳ ಬದಿಯಲ್ಲಿ ದೊಡ್ಡ ಮಟ್ಟದ ಸೋಲಾರ್ ಪವರ್‌ ಘಟಕಗಳ ಸ್ಥಾಪನೆಗೆ ಕ್ರಮ. 150ಕ್ಕೂ ಹೆಚ್ಚು ಖಾಸಗಿ ಸಹಭಾಗಿತ್ವದ ರೈಲುಗಳ ಆರಂಭ. ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ₹ 23 ಸಾವಿರ ಕೋಟಿ ಘೋಷಣೆ. 

ಮುಂಬೈ–ಅಹಮದಾಬಾದ್ ನಡುವೆ ಸ್ಪೀಡ್ ರೈಲು ಯೋಜನೆ ಮುಂದುವರಿಕೆ. 
 

ಆನ್‌ಲೈನ್‌ನಲ್ಲಿ ಪದವಿ; ಶಿಕ್ಷಣಕ್ಕೆ ₹ 99,300 ಕೋಟಿ  

ಶಿಕ್ಷಣ ಮತ್ತು ಕೌಶಲ: 2030ರ ಹೊತ್ತಿಗೆ ಜಗತ್ತಿನ ಅತಿಹೆಚ್ಚು ಉದ್ಯೋಗಕ್ಕೆ ಸಿದ್ಧರಿರುವ ಜನರು ನಮ್ಮ ದೇಶದಲ್ಲಿ ಇರುತ್ತಾರೆ. ಹೊಸ ಶಿಕ್ಷಣ ನೀತಿಗೆ 2 ಲಕ್ಷಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಶೀಘ್ರ ಹೊಸ ಶಿಕ್ಷಣ ನೀತಿ ಘೋಷಿಸುತ್ತೇವೆ. 

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಂಜಿನಿಯರ್‌ಗಳಿಗೆ ಇಂಟರ್ನ್‌ಶಿಪ್ ಅವಕಾಶ. ಆನ್‌ಲೈನ್‌ನಲ್ಲಿ ಪದವಿ ಶಿಕ್ಷಣಕ್ಕೆ ಅವಕಾಶ ನೀಡಲಾಗುತ್ತದೆ. 
ನ್ಯಾಷನಲ್ ಪೊಲೀಸ್‌ ವಿಶ್ವವಿದ್ಯಾಲಯ ಮತ್ತು ಫೊರೆನ್ಸಿಕ್ ವಿಶ್ವವಿದ್ಯಾಲಯಗಳ ಪ್ರಸ್ತಾವ ಮಂಡನೆ.

ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಮೂಲಕ ಡಿಪ್ಲೊಮಾ ಮತ್ತು ಫೆಲೊ ಆಫ್ ನ್ಯಾಷನಲ್ ಬೋರ್ಡ್‌ ವಿದ್ಯಾಭ್ಯಾಸಕ್ಕೆ ಅವಕಾಶ. ನರ್ಸ್‌ಗಳ ಕೌಶಲ ವೃದ್ಧಿಗಾಗಿ ವಿಶೇಷ ಯೋಜನೆ. ಭಾರತ ಸಂಜಾತ ನರ್ಸ್‌ಗಳಿಗೆ ವಿದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಯೋಜನೆ.

ಶಿಕ್ಷಣಕ್ಕೆ ₹ 99,300 ಕೋಟಿ. ಕೌಶಲಾಭಿವೃದರ್ಧಿಗೆ ₹ 3,000 ಕೋಟಿ ಅನುದಾನ.
 

ಜಲಜೀವನ ಯೋಜನೆಗೆ ₹ 3.60 ಲಕ್ಷ ಕೋಟಿ

ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಘೋಷಣೆ. ಇದಕ್ಕಾಗಿ ₹ 3.60 ಲಕ್ಷ ಕೋಟಿ ಘೋಷಣೆ
ಸ್ಥಳೀಯ ಕುಡಿಯುವ ನೀರು ಶುದ್ಧೀಕರಣ ಬಳಕೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ನಗರಗಳಿಗೆ ಈ ಯೋಜನೆಯನ್ನು ಇದೇ ವರ್ಷ ಅನುಷ್ಠಾನಕ್ಕೆ ತರಲು ಸೂಚಿಸುತ್ತೇವೆ. 

ಆರೋಗ್ಯ ಕ್ಷೇತ್ರ 

ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಇಂದ್ರಧನುಷ್ ಯೋಜನೆಯ ವಿಸ್ತರಣೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ತಾಲ್ಲೂಕು ಮತ್ತು ಹೋಬಳಿ ಹಂತದ ಅಸ್ಪತ್ರೆಗಳಿಗೂ ಸೌಲಭ್ಯ ಒದಗಿಸಲು ಚಿಂತನೆ. ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ.

ವೈದ್ಯಕೀಯ ಸಲಕರಣೆಗಳಿಂದ ಸಂಗ್ರಹಿಸುವ ತೆರಿಗೆಯನ್ನು ಗುರುತಿಸಲಾದ 112 ಜಿಲ್ಲೆಗಳಲ್ಲಿ ಆರೋಗ್ಯ ಸುಧಾರಿಸಲು ಬಳಸಲಾಗುವುದು.

ಕ್ಷಯ ರೋಗ ನಿರ್ಮೂಲನೆಗೆ ಕ್ರಮ. ಕ್ಷಯರೋಗ ಹೋದರೆ ದೇಶ ಬಲಿಷ್ಠವಾಗುತ್ತೆ. 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೆ ಪಣ. 2024ರ ಹೊತ್ತಿಗೆ ದೇಶದ ಎಲ್ಲ ಜಿಲ್ಲೆಗಳಿಗೆ ಜನ ಆರೋಗ್ಯ ಯೋಜನೆ ವಿಸ್ತರಣೆ.
 

ಕೃಷಿಗೆ ₹ 1.6 ಲಕ್ಷ ಕೋಟಿ 

ಕೃಷಿ ಮತ್ತು ಸಂಬಂಧಿತ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಗೆ ₹ 2.83 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಘೋಷಣೆ. ಕೃಷಿಗೆ ₹ 1.6 ಲಕ್ಷ ಕೋಟಿ ಮೀಸಲು. ಗ್ರಾಮೀಣಾಭಿವೃದ್ಧಿಗೆ ₹ 1.23 ಲಕ್ಷ ಕೋಟಿ ಘೋಷಣೆ
 

ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ

200 ಲಕ್ಷ ಟನ್‌ ಮೀನು ಉತ್ಪಾದನೆ ಗುರಿ. ಮೀನು ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನ ಬಳಕೆಗೆ ಒತ್ತು. ಸಾಗರ್ ಮಿತ್ರ ಯೋಜನೆ ಮತ್ತು ಮೀನು ಉತ್ಪಾದಕ ಸಂಸ್ಥೆಗಳ ಮೂಲಕ ಗ್ರಾಮೀಣ ನಿರುದ್ಯೋಗಿ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಗಳಿಕೆ.‌

ದೀನ್ ದಯಾಳ್ ಅಂತ್ಯೋದಯ ಯೋಜನೆಯ ಮೂಲಕ 58 ಲಕ್ಷ ಸ್ವಸಹಾಯ ಗುಂಪುಗಳ ಆರಂಭ. ಈ ಗುಂಪುಗಳ ಬಲವರ್ಧನೆಗೆ ಕ್ರಮ.

ಉದ್ಯೋಗ ಖಾತ್ರಿ ಯೋಜನೆಗೆ ಬಲತುಂಬುವ ಭರವಸೆ

108 ಟನ್‌ ಹಾಲು ಉತ್ಪಾದನೆ ಗುರಿ 

ಪಶುಸಂಗೋಪನೆ: ರಾಸುಗಳಲ್ಲಿ ಕಾಲುಬಾಯಿ ರೋಗ, ಕುರಿ ಮತ್ತು ಮೇಕೆಗಳಲ್ಲಿ ಪಿಪಿಪಿ ಕಾಯಿಲೆ ಮುಕ್ತ ಭಾರತದ ಘೋಷಣೆ. ಹಾಲು ಉತ್ಪಾದನೆಯನ್ನು 53.5 ಟನ್‌ನಿಂದ 108 ಟನ್‌ಗೆ ಹೆಚ್ಚಿಸುವ ಗುರಿ.
 

ಸಾವಯವ ಉತ್ಪನ್ನಗಳ ಆನ್‌ಲೈನ್ ಮರಾಟ

ಶೂನ್ಯ ಕೃಷಿ ಬಂಡವಾಳಕ್ಕೆ ಒತ್ತು. ರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಉತ್ಪನ್ನಗಳ ಆನ್‌ಲೈನ್ ಮರಾಟಕ್ಕೆ ವ್ಯವಸ್ಥೆ.

ಕೃಷಿಗೆ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಅವಕಾಶ. 2020–21ರ ಸಾಲಿಗೆ ₹ 15 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಎಲ್ಲ ರೈತರ ಸೇರ್ಪಡೆ.
 

ಶೀಥಲ ಕೇಂದ್ರ ರೈಲು 

ರೈತರಿಗೆ ನೆರವಾಗಲೆಂದು ವಿಶೇಷ ರೆಫ್ರಿಜರೇಟೆಡ್ ರೈಲುಗಳ ಘೋಷಣೆ. ಕೃಷಿ ಉಡಾನ್ ಮೂಲಕ ಕೃಷಿ ಉತ್ಪನ್ನಗಳ ರಫ್ತಿಗೆ ವಿಶೇಷ ಸರಕು ಸಾಗಣೆ ವಿಮಾನಗಳನ್ನು ಘೋಷಿಸಿದರು. 

ಈ ಯೋಜನೆಗಳ ಮೂಲಕ ಈಶಾನ್ಯ ಭಾರತಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು. 
 

‘ಭೂಮಿ ತಿರುತ್ತಿ ಉನ್’ 

ರಸಗೊಬ್ಬರ ಬಳಕೆಗೆ ಕಡಿವಾಣ ಹಾಕಬೇಕಿದೆ. ಇದು ಈ ಹೊತ್ತಿನ ಅಗತ್ಯವೂ ಹೌದು. 

ತಮಿಳು ಸಂತಕವಿ ಅವ್ವಯ್ಯಾರ್ ಅವರ ಕಾವ್ಯ ಉಲ್ಲೇಖಿಸಿ ಕೃಷಿಯ ಪ್ರಾಮುಖ್ಯತೆ ವಿವರಿಸಿದರು. ಕೃಷಿ ಭೂಮಿಯಲ್ಲಿ ಅಗತ್ಯ ಪ್ರಮಾಣದ ರಸಗೊಬ್ಬರ ಹಾಕಬೇಕು. ಅನಗತ್ಯವಾಗಿ ಗೊಬ್ಬರ ನೀಡುವುದರಿಂದ ಅಪಾಯವಾಗುತ್ತೆ. ‘ಭೂಮಿ ತಿರುತ್ತಿ ಉನ್’ (ಭೂಮಿಯ ಕಾಳಜಿ ಮಾಡಿ) ಎಂಬ ತಮಿಳು ಕಾವ್ಯದ ಉಲ್ಲೇಖ ಮಾಡಿದರು. 

ಬೀಜ ಸಂರಕ್ಷಣೆಗೆ ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಧನಸಹಾಯ. ಮಹಿಳೆಯರನ್ನು ‘ಧಾನ್ಯ ಲಕ್ಷ್ಮಿ’ ಎಂದು ಬಣ್ಣಿಸಿದರು. ಬೀಜ ಸಂರಕ್ಷಣೆಗೆ ಮುಂದೆ ಬರುವ ಯುವ ಮಹಿಳಾ ಉದ್ಯಮಿಗಳಿಗೆ ಮುದ್ರಾ ಯೋಜನೆಯಡಿ ನೆರವು ನೀಡುವ ಭರವಸೆ ನೀಡಿದರು. 
 

ಬರಡು ಭೂಮಿಯಲ್ಲಿ ಸೋಲಾರ್‌ ಯೋಜನೆ

ರೈತರು ಅನ್ನದಾತರಷ್ಟೇ ಅಲ್ಲ ವಿದ್ಯುತ್ ದಾತರೂ ಆಗುತ್ತಾರೆ. ಪಂಪ್‌ಸೆಟ್‌ಗಳಿಗೆ ಸೋಲಾರ್ ಶಕ್ತಿ ಒದಗಿಸುವ ಯೋಜನೆ ಘೋಷಣೆ.

ರೈತರು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌  ಅನ್ನು ಗ್ರಿಡ್ ಮೂಲಕ ಸರ್ಕಾರವೇ ಖರೀದಿಸಲಿದೆ. ಈ ಮೂಲಕ ಬರಡು ಭೂಮಿಯಲ್ಲಿಯೂ ರೈತರು ಹಣ ಗಳಿಸಬಹುದು. 
 

ಮೊದಲಿಗೆ ಗ್ರಾಮೀಣ ಆಭಿವೃದ್ಧಿ ಮತ್ತು ಕೃಷಿ ಕ್ಷೇತ್ರ

ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದೊಂದಿಗೆ ಸರ್ಕಾರ ಕೆಲಸ ಮಾಡಿತು. ಮಧ್ಯವರ್ತಿಗಳ ಹಿಡಿತದಿಂದ ರೈತರನ್ನು ಬಿಡುಗಡೆ ಮಾಡಿ, ಮಾರುಕಟ್ಟೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದೆವು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನಾ ಸೇರಿದಂತೆ ಹಲವು ಯೋಜನೆಗಳ ಮೂಲಕ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಪ್ರಯತ್ನಿಸಿದೆವು.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮಾದರಿ ಕಾನೂನುಗಳನ್ನು ಜಾರಿ ಮಾಡುವ ರಾಜ್ಯ ಸರ್ಕಾರಗಳನ್ನು ನಾವು ಬೆಂಬಲಿಸುತ್ತೇವೆ. ಕೃಷಿ ಮತ್ತು ಗ್ರಾಮೀಣ ಜೀವನ ಅಭಿವೃದ್ಧಿಗೆ 16 ಅಂಶಗಳ ಸೂತ್ರ ಮಂಡಿಸುತ್ತಿರುವ ನಿರ್ಮಲಾ. 

ಭಾರತದ ಆಕಾಂಕ್ಷೆ 

ಕಳೆದ 5 ವರ್ಷಗಳಿಂದ ನಾವು ತೋರಿರುವ ಬದ್ಧತೆ, ಉತ್ಸಾಹದ ಕಾರಣದಿಂದಾಗಿ ಭಾರತದ ಯುವಜನರು ಇಂದು ಜಗತ್ತಿನ ಗಮನ ಸೆಳೆಯುವ ಸಾಧನೆ ಮಾಡುತ್ತಿದ್ದಾರೆ.

ಈ ಬಾರಿಯ ಬಜೆಟ್‌ಗೆ ಮೂರು ಮೂಲಸೂತ್ರಗಳಿವೆ ಎಂದು ನಿರ್ಮಲಾ ಹೇಳಿದರು.
1) ಭಾರತದ ಆಕಾಂಕ್ಷೆ 2) ಆರ್ಥಿಕ ಪ್ರಗತಿ 3) ಸಾಮಾಜಿಕ ಕಾಳಜಿ

ಕಾಶ್ಮೀರಿ ಕಾವ್ಯದಿಂದ ಸಾಲುಗಳನ್ನು ಉಲ್ಲೇಖಿಸಲು ಮುಂದಾದ ನಿರ್ಮಲಾ. ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಯೋಜನೆಗಳ ಪಟ್ಟಿ ಮುಂದಿಟ್ಟ ನಿರ್ಮಲಾ ಸೀತಾರಾಮನ್‌ 

ಮೂಲಸೌಕರ್ಯ ಮತ್ತು ಸಾರಿಗೆ ವಿಚಾರದಲ್ಲಿ ಜಿಎಸ್‌ಟಿಯಿಂದ ಸಾಕಷ್ಟು ಒಳ್ಳೇ ಫಲಿತಾಂಶಗಳು ಕಂಡುಬಂದಿವೆ. ಇನ್‌ಸ್ಪೆಕ್ಟರ್‌ ರಾಜ್‌ಗೆ ಅಂತ್ಯಹಾಡಿದೆ. ತೆರಿಗೆ ವಸೂಲಾತಿಯೂ ಪರಿಣಾಮಕಾರಿಯಾಗಿದೆ. ಕೆಲ ಕ್ಷೇತ್ರಗಳಲ್ಲಿ ತೆರಿಗೆ ಕಡಿತವಾಗಿದ್ದು, ಅದರ ಲಾಭ ಗ್ರಾಹಕರಿಗೆ ಸಿಕ್ಕಿದೆ.
ಜಿಎಸ್‌ಟಿ ಕಾರಣದಿಂದಾಗಿ ಪ್ರತಿ ಕುಟುಂಬ ತಮ್ಮ ಖರ್ಚಿನಲ್ಲಿ ಶೇ 4ರಷ್ಟು ಹಣವನ್ನು ಉಳಿಸುತ್ತಿದೆ. 60 ಲಕ್ಷ ಹೊಸ ತೆರಿಗೆ ಪಾವತಿದಾರರನ್ನು ನಾವು ಹುಡುಕಿದ್ದೇವೆ. ಸರಳ ತೆರಿಗೆ ಪಾವತಿ ವಿಧಾನವನ್ನು ರೂಪಿಸಿದ್ದೇವೆ. ತೆರಿಗೆ ಪಾವತಿ ಪ್ರಮಾಣವೂ ಹೆಚ್ಚಾಗಿದೆ.

ಎಲ್ಲರ ಜೊತೆಗೆ, ಎಲ್ಲರ ವಿಕಾಸ ಎನ್ನುವ ಮಂತ್ರದೊಂದಿಗೆ ನಮ್ಮ ಪ್ರಧಾನಿ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದಾರೆ. ಈ ಹಿಂದೆ ಪ್ರಧಾನಿಯೊಬ್ಬರು ಹೇಳಿದ್ದಂತೆ ಇದ್ದ ಸೋರಿಕೆಯನ್ನು ತಡೆಗಟ್ಟಿದ್ದೇವೆ. ನೇರ ನಗದು ವರ್ಗಾವಣೆಯಿಂದ ಜನರಿಗೆ ಲಾಭವಾಗಿದೆ. 

ಕೇಂದ್ರ ಸರ್ಕಾರ ಜಾರಿ ಮಾಡಿದ ಆರೋಗ್ಯ ವಿಮೆ, ಅಪಘಾತ ವಿಮೆ, ಯುಪಿಐ, ಪೇಮೆಂಟ್ ಗೇಟ್‌ ವೇ, ವಸತಿ ಯೋಜನೆ ಸೇರಿದಂತೆ ಹಲವು ಸಮಾಜ ಕಲ್ಯಾಣ ಯೋಜನೆಗಳನ್ನು ನಿರ್ಮಲಾ ಸೀತಾರಾಮನ್ ಪಟ್ಟಿ ಮಾಡಿದರು. 

ಬಜೆಟ್‌ ಸಂಬಂಧಿತ ಸುದ್ದಿಗಳಿಗೆ: https://www.prajavani.net/budget-2020

ಬಜೆಟ್‌ ನೇರ ಪ್ರಸಾರ

ಜೇಟ್ಲಿ ನೆನಪು

ಜಿಎಸ್‌ಟಿ ಜಾರಿ ಐತಿಹಾಸಿಕ ಕ್ರಮ. ಅದನ್ನು ರೂಪಿಸಿದ ಅರುಣ್‌ ಜೇಟ್ಲೆ ಅವರಿಗೆ ನನ್ನ ನಮನ ಸಲ್ಲಿಸುತ್ತೇನೆ. ಜಿಎಸ್‌ಟಿ ಜಾರಿ ಮಾಡುವಾಗ ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶಾಭಿವೃದ್ಧಿಯ ಸಮಾನ ಗುರಿಗಾಗಿ ಕೆಲಸ ಮಾಡಿದಾಗ ಭಾರತವು ಭಾರತವಾಗಿ ಉಳಿಯಲು ಸಾಧ್ಯವಾಗುತ್ತೆ. ಜಿಎಸ್‌ಟಿ ಮೂಲಕ ಯಾವುದೇ ರಾಜ್ಯವು ಸ್ವಾತಂತ್ರ್ಯ ಕಳೆದುಕೊಳ್ಳುವುದಿಲ್ಲ’ ಎಂದು ಜೇಟ್ಲಿ ಹೇಳಿದ್ದರು.

<p style="text-align: center;">ಜನರ ಖರೀದಿ ಸಾಮರ್ಥ್ಯ ವೃದ್ಧಿಸುವ ಬಜೆಟ್ ಇದು. ತಂತ್ರಜ್ಞಾನದ ನೆರವಿನಿಂದ ಜನರ ಬದುಕು ಸುಧಾರಿಸಲು ನಾವು ಬದ್ಧರಾಗಿದ್ದೇವೆ. ಸಮಾಜದ ಎಲ್ಲ ವರ್ಗಗಳ ಆಶೋತ್ತರಗಳನ್ನು ಬಿಂಬಿಸುವ ಬಜೆಟ್ ಇದು. 2014–19ರ ಅವಧಿಯಲ್ಲಿ ನಮ್ಮ ಸರ್ಕಾರವು ಅಡಳಿತದಲ್ಲಿ ಬದಲಾವಣೆ ತಂದಿತ್ತು. ಮೂಲಭೂತ ವ್ಯವಸ್ಥೆಯ ಬದಲಾವಣೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ನಾವು ಗಮನ ಕೊಟ್ಟೆವು. ಹಣದುಬ್ಬರ ನಿಯಂತ್ರಣದಲ್ಲಿಡುವ ಜೊತೆಗೆ ಬ್ಯಾಂಕ್‌ಗಳ ಕೆಟ್ಟ ಸಾಲದ ಬಗ್ಗೆ ಗಮನ ನೀಡಲಾಯಿತು.&nbsp;</p>

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣ

ಮೇ 2019ರಲ್ಲಿ ಪ್ರಧಾನಿ ಮೋದಿ ಭಾರಿ ಜನಮತದೊಂದಿಗೆ ಸರ್ಕಾರ ರಚಿಸಿದರು. ಮಾನವೀಯತೆ ಮತ್ತು ಬದ್ಧತೆಯ ಸರ್ಕಾರ ನಮ್ಮದು. ಜನರು ಕೇವಲ ರಾಜಕೀಯ ಸ್ಥಿರತೆಗಾಗಿ ಜನಾದೇಶ ಕೊಡಲಿಲ್ಲ. ಅವರು ತಮ್ಮ ಆಶೋತ್ತರ ಬಿಂಬಿಸಬೇಕು ಎಂದು ಸೂಚಿಸಿದರು. 

ಬಜೆಟ್ ಮಂಡನೆ ಆರಂಭ

ಹೊಸ ದಶಕದ ಮೊದಲ ಬಜೆಟ್‌ ಮಂಡನೆಗೆ ಆಹ್ವಾನ ನೀಡಿದ ಸ್ಪೀಕರ್‌ ಓಂ ಪ್ರಕಾಶ್ ಬಿರ್ಲಾ

ಅಧಿವೇಶನ ಆರಂಭ: ಸದನಕ್ಕೆ ಬಂದ ಸ್ಪೀಕರ್

ಆಡಳಿತ ಪಕ್ಷದ ಸದಸ್ಯರಿಂದ ಹರ್ಷೋದ್ಗಾರ. ವಿಪಕ್ಷದ ಕುತೂಹಲ. ಕುತೂಹಲದ ನೋಟ ಬೀರುತ್ತಿರುವ ಪ್ರಧಾನಿ ನರೇಂದ್ರ ಮೋದಿ.

ಬಹಿ ಖಾತಾ ಹಿಡಿದ ನಿರ್ಮಲಾ

ಕೇಂದ್ರ ಹಣಕಾಸು ಸಚಿವೆಯಾಗಿ ಎರಡನೇ ಬಾರಿಗೆ ಬಜೆಟ್‌ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್‌, ಈ ಬಾರಿಯೂ ‘ಬಹಿ ಖಾತಾ’ ಹಿಡಿದು ಸಂಸತ್ ಭವನದತ್ತ ಹೊರಟಿದ್ದಾರೆ.

ಕೇಂದ್ರ ಬಜೆಟ್‌ ಮಂಡನೆಯ ನೇರ ಪ್ರಸಾರ

ಕೇಂದ್ರ ಬಜೆಟ್‌ ಮಂಡನೆಯ ನೇರ ಪ್ರಸಾರವನ್ನು ಇಲ್ಲಿ ನೋಡಬಹುದು.

ಬಜೆಟ್ ಭಾಷಣ ಶೀಘ್ರ ಆರಂಭ

ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ 11 ಗಂಟೆಗೆ ಬಜೆಟ್ ಭಾಷಣ ಆರಂಭಿಸಲಿದ್ದಾರೆ.

ಸದನಕ್ಕೆ ನಿರ್ಮಲಾ ಸೀತಾರಾಮನ್ ಮಗಳು

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮಗಳು ಪರಕಾಲ ವಂಗಮ್ಮಾಯಿ ಬಜೆಟ್ ಭಾಷಣ ಆರಂಭವಾಗುವುದಕ್ಕೂ ಮೊದಲೇ ಸಂಸತ್ತಿಗೆ ಬಂದರು. 11 ಗಂಟೆಗೆ ಬಜೆಟ್‌ ಮಂಡನೆ ಶುರುವಾಗಲಿದೆ.

ವಿತ್ತೀಯ ಕೊರತೆಯ ಆತಂಕ

ಈ ಬಾರಿ ಕೇಂದ್ರ ಸರ್ಕಾರ ಅದೆಂಥ ಬಜೆಟ್ ಮಂಡಿಸಿದರೂ ಆರ್ಥಿಕ ವ್ಯವಸ್ಥೆಯ ಗಾಲಿಗಳು ಸರಾಗವಾಗಿ ಚಲಿಸುವಂತೆ ಆಗದಿದ್ದರೆ ವ್ಯವಸ್ಥೆ ಸುಧಾರಿಸುವುದಿಲ್ಲ. ವಿತ್ತೀಯ ಕೊರತೆ ಇಷ್ಟು ಅಪಾಯಕಾರಿ ಮಟ್ಟದಲ್ಲಿ ಹಿಂದೆಂದೂ ಇರಲಿಲ್ಲ ಎಂದು ಹೀರಾನಂದನಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಎನ್.ಹೀರಾನಂದನಿ ಆತಂಕ ವ್ಯಕ್ತಪಡಿಸಿದ್ದಾರೆ.

ಸಂಸತ್ ಪ್ರವೇಶಿಸಿ ಮೋದಿ, ಅಮಿತ್ ಶಾ

ಸಂಸತ್ ಭವನ ಪ್ರವೇಶಿಸದ ಅಮಿತ್ ಶಾ. ಸಚಿವ ಸಂಪುಟ ಸಭೆಗೆ ಕ್ಷಣಗಣನೆ.

ಯಾರು ಜಾಸ್ತಿ ಗೊತ್ತಾ?

ಬಜೆಟ್ ಮಾಹಿತಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಬಜೆಟ್ ಮಂಡನೆಯ ದಾಖಲೆ ಇರುವುದು ಮೊರಾರ್ಜಿ ದೇಸಾಯಿ (10) ಹೆಸರಲ್ಲಿ. ನಂತರದ ಸ್ಥಾನ ಪಿ.ಚಿದಂಬರಂ (8) ಅವರದು. ನಿರ್ಮಲಾ ಸೀತಾರಾಮನ್ ಅವರಿಗೆ ಇದು ಎರಡನೇ ಬಜೆಟ್.

ಸಂಸತ್ ಭವನ ಪ್ರವೇಶಿಸಿದ ನರೇಂದ್ರ ಮೋದಿ

ಸಂಸತ್‌ ಭವನ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ. ಶೀಘ್ರ ಸಚಿವ ಸಂಪುಟ ಸಭೆ ಆರಂಭ. ಸಂಪುಟ ಅನುಮೋದನೆ ಬಳಿಕ ಬಜೆಟ್ ಮಂಡನೆ.

ಸಂಸತ್ ಭವನದಲ್ಲಿ ಬಜೆಟ್ ಪ್ರತಿಗಳನ್ನು ಪರಿಶೀಲಿಸುತ್ತಿರುವ ಶ್ವಾನದಳ

ಸಂಸತ್‌ ಭವನಕ್ಕೆ ಬಂದರು ನಿರ್ಮಲಾ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್‌ ಭವನ ಪ್ರವೇಶಿಸಿದರು.

ಬಜೆಟ್ ನಿರೀಕ್ಷೆ ತಿಳಿಸಿದ ಕಾಂಗ್ರೆಸ್

ಈ ಬಾರಿಯ ಬಜೆಟ್‌ ವೇತನದಾರರಿಗೆ ತೆರಿಗೆ ವಿನಾಯ್ತಿ ಕೊಡಿ. ಗ್ರಾಮೀಣ ಪ್ರದೇಶದಲ್ಲಿ ಹೂಡಿಕೆ ಹೆಚ್ಚು ಮಾಡಲಿ ಎಂದು ಕಾಂಗ್ರೆಸ್‌ ವಕ್ತರಾ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಬಜೆಟ್‌ ಮಂಡನೆಗೂ ಮೊದಲು ಪೂಜೆ

ಬಜೆಟ್ ಮಂಡನೆಗಾಗಿ ಸಂಸತ್‌ ಭವನಕ್ಕೆ ತೆರಳುವ ಮೊದಲು ಹಣಕಾಸು ಸಚಿವ ಅನುರಾಗ್ ಠಾಕೂರ್‌ ದೇವರನ್ನು ಪ್ರಾರ್ಥಿಸಿದರು.

ರಾಷ್ಟ್ರಪತಿ ಭೇಟಿ

ಶಿಷ್ಟಾಚಾರದಂತೆ ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದರು.

ಈ ವರ್ಷವೂ ‘ಬಹಿ ಖಾತಾ‘

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿಗೆ ‘ಬಹಿ ಖಾತಾ’ (ಕೆಂಪು ವಸ್ತ್ರದಲ್ಲಿ ಸುತ್ತಿದ ದಾಖಲೆ) ಹಿಡಿದು ಹಣಕಾಸು ಸಚಿವಾಲಯದಿಂದ ಸಂಸತ್ ಭವನದತ್ತ ಹೊರಟರು.

ಜೇಟ್ಲಿ ಕಂದು, ಗೋಯಲ್ ಕೆಂಪು

ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ  ಅರುಣ್‌ ಜೆಟ್ಲಿ ಕಂದು ಬಣ್ಣದ ಸೂಟ್‌ಕೇಸ್‌ ಹಿಡಿದು ಸಂಸತ್ತಿಗೆ ಬರುತ್ತಿದ್ದರು. 2019ರ ಚುನಾವಣೆಗೂ ಮುನ್ನ ಮಧ್ಯಂತರ ಬಜೆಟ್‌ ಮಂಡಿಸಿದ್ದ ಪಿಯೂಷ್ ಗೋಯಲ್‌ ಕೆಂಪು ಸೂಟ್‌ಕೇಸ್‌ ತಂದಿದ್ದರು. 2019ರಲ್ಲಿ ಬಿಜೆಪಿ ಸರ್ಕಾರ ಹೊಸ ಜನಮತ ಪಡೆದು ಅಧಿಕಾರಕ್ಕೆ ಬಂದ ನಂತರ ನಿರ್ಮಲಾ ಸೀತಾರಾಮನ್ ರಾಷ್ಟ್ರೀಯ ಲಾಂಛನವಿರುವ ಕೆಂಪು ವಸ್ತ್ರದಲ್ಲಿ ಬಜೆಟ್ ದಾಖಲೆಗಳನ್ನು ಸಂಸತ್ತಿಗೆ ತಂದಿದ್ದರು.

‘ಬಹಿ ಖಾತಾ’ ಮೂಲಕ ಹೊಸ ಸಂಸ್ಕೃತಿಗೆ ನಾಂದಿ ಹಾಡಿದ್ದ ನಿರ್ಮಲಾ

ದೇಶದ ಮೊದಲ ಮಹಿಳಾ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಕಳೆದ ವರ್ಷವೂ ಕೆಂಪು ವಸ್ತ್ರದಲ್ಲಿ ಸುತ್ತಿದ್ದ ಬಜೆಟ್ ದಾಖಲೆ ಪುಸ್ತಕವನ್ನು (ಬಹಿ ಖಾತಾ) ಹೊತ್ತು ಸಂಸತ್ತಿಗೆ ಬಂದಿದ್ದರು. ಈ ಮೂಲಕ 2019ರಲ್ಲಿ ಹೊಸ ಸಂಸ್ಕೃತಿಗೆ ನಾಂದಿ ಹಾಡಿದ್ದರು.

ಬಜೆಟ್ ದಾಖಲೆಯನ್ನು ಹೀಗೆ ತರುತ್ತಿದ್ದರು ವಿತ್ತ ಸಚಿವರು

ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್‌ ಮಂಡನೆಯಾಗಿದ್ದು, 1947ರ ನವೆಂಬರ್‌ 26ರಂದು. ಆಗ ಹಣಕಾಸು ಸಚಿವರಾಗಿದ್ದ ಆರ್‌.ಕೆ. ಷಣ್ಮುಖಂ ಚೆಟ್ಟಿ ಅವರು ಚರ್ಮದ ಬ್ಯಾಗ್‌ನಲ್ಲಿ ಬಜೆಟ್‌ ಪುಸ್ತಕವನ್ನು ತಂದಿದ್ದರು. ‌1958ರಲ್ಲಿ ಬಜೆಟ್‌ ಮಂಡನೆ ಮಾಡಿದ್ದ ಜವಹರ್‌ಲಾಲ್‌ ನೆಹರು ಕಪ್ಪು ಸೂಟ್‌ಕೇಸ್‌ನಲ್ಲಿ ಬಜೆಟ್‌ ಪುಸ್ತಕವನ್ನು ತಂದಿದ್ದರು. ಮತ್ತೆ ಮನಮೋಹನ್‌ ಸಿಂಗ್‌ ಅವರು ವಿತ್ತ ಸಚಿವರಾದಾಗ ಸೂಟ್‌ಕೇಸ್‌ ಬದಲಿಗೆ ಬಜೆಟ್‌ ಪುಸ್ತಕವಿರುವ ಕಪ್ಪು ಬ್ಯಾಗ್‌ ಹಿಡಿದು ಸಂಸತ್ತಿಗೆ ಬರುತ್ತಿದ್ದುದು ವಾಡಿಕೆಯಾಗಿತ್ತು.

ಪ್ರಜಾವಾಣಿಯಲ್ಲಿ ತಾಜಾ ಅಪ್‌ಡೇಟ್ಸ್‌

11 ಗಂಟೆಗೆ ಬಜೆಟ್ ಭಾಷಣ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ.

ಏಪ್ರಿಲ್ 3ರವರೆಗೆ ಬಜೆಟ್ ಅಧಿವೇಶನ

ಈ ಬಾರಿ ಬಜೆಟ್ ಅಧಿವೇಶನ ಎರಡು ಭಾಗಗಳಲ್ಲಿ ನಡೆಯಲಿದೆ. ಜ.31ಕ್ಕೆ ಆರಂಭವಾಗುವ ಅಧಿವೇಶನ ರಿಂದ ಫೆ.11ಕ್ಕೆ ಮುಕ್ತಾಯವಾಗಲಿದೆ. ಮಾರ್ಚ್ 2ರಿಂದ ಮತ್ತೆ ಅಧಿವೇಶನ ಆರಂಭವಾಗಲಿದ್ದು, ಏಪ್ರಿಲ್ 3ಕ್ಕೆ ಮುಕ್ತಾಯವಾಗಲಿದೆ.

ಕೃಷಿ ಕ್ಷೇತ್ರದಲ್ಲಿ ಸವಾಲುಗಳು ಸಾಲುಸಾಲು

ಆಶಾವಾದ ಬಿತ್ತಿದ ಆರ್ಥಿಕ ಸಮೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.