ADVERTISEMENT

ಶತಮಾನದ ಸಂಭ್ರಮ: ನೂರರ ಬೆಳಕಲ್ಲಿ ‘ರೇಂಜರ್ಸ್‌’ ಹೊಳಪು

ಗಾಣಧಾಳು ಶ್ರೀಕಂಠ
Published 22 ಡಿಸೆಂಬರ್ 2020, 19:30 IST
Last Updated 22 ಡಿಸೆಂಬರ್ 2020, 19:30 IST
ಜಲ ಸಾಹಸ ಕ್ರೀಡಾ ತರಬೇತಿಯಲ್ಲಿ ರೇಂಜರ್ಸ್‌ಗಳು
ಜಲ ಸಾಹಸ ಕ್ರೀಡಾ ತರಬೇತಿಯಲ್ಲಿ ರೇಂಜರ್ಸ್‌ಗಳು   
""
""
""
""

ತರಬೇತಿ, ಶಿಬಿರಗಳ ಮೂಲಕ ಸಾವಿರಾರು ಹೆಣ್ಣು ಮಕ್ಕಳು ಸಾಮಾಜಿಕ ಕಳಕಳಿ ಮತ್ತು ಆತ್ಮವಿಶ್ವಾಸವುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳಲು ನೆರವಾಗುತ್ತಿರುವ ರೇಂಜರಿಂಗ್ ಕಾರ್ಯಕ್ರಮಕ್ಕೆ ಈಗ ಶತಮಾನದ ಸಂಭ್ರಮ. ನೂರರ ನೆಪದಲ್ಲಿ ರೇಂಜರಿಂಗ್‌ ಚಟುವಟಿಕೆಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.

***

‘ನಾವು ಧೈರ್ಯಶಾಲಿಗಳು. ಕಾಡು ಸುತ್ತುತ್ತೇವೆ, ಬೆಟ್ಟ ಏರುತ್ತೇವೆ, ಸಂಕಟದಲ್ಲಿ ನೆರವಾಗುತ್ತೇವೆ. ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಿ ರೂಪುಗೊಂಡಿದ್ದೇವೆ...’ –ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಘಟಕದ ಮಹಿಳಾ ವಿಭಾಗವಾದ ರೇಂಜರಿಂಗ್ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಿರುವ ಹಲವಾರು ಹೆಣ್ಣುಮಕ್ಕಳು ಗಟ್ಟಿಧ್ವನಿಯಲ್ಲಿ ಹೇಳುವ ಮಾತಿದು.

ADVERTISEMENT

ಸಾಹಸ, ಸೇವೆ, ಸಾಮಾಜಿಕ ಕಳಕಳಿಯಂತಹ ಗುಣಗಳನ್ನು ಬೆಳೆಸುತ್ತಾ ಸಾವಿರಾರು ಹೆಣ್ಣು ಮಕ್ಕಳನ್ನು ಪ್ರತಿಭಾವಂತರನ್ನಾಗಿ ರೂಪಿಸುತ್ತಿರುವ ‘ರೇಂಜರಿಂಗ್‌’ ಆರಂಭವಾಗಿ ನೂರು ವರ್ಷಗಳಾಗಿವೆ. ದೇಶದಾದ್ಯಂತ ಈ ವರ್ಷ ‘ರೇಂಜರಿಂಗ್‌ ಶತಮಾನೋತ್ಸವ’ ಆಚರಿಸಲಾಗುತ್ತಿದೆ.

‘ರೇಂಜರಿಂಗ್‌’ ಇತಿಹಾಸ
ನಿವೃತ್ತ ಯೋಧ ಲಾರ್ಡ್‌ ಬೇಡನ್‌ ಪೋವೆಲ್‌ ಅವರು ಗಂಡು ಮಕ್ಕಳಿಗೆ ‘ಜೀವನದ ಶಿಕ್ಷಣ’ ನೀಡುವ ಸಲುವಾಗಿ 1907ರಲ್ಲಿ ಇಂಗ್ಲೆಂಡ್‌ನ ಬ್ರೌನ್ಸಿ ದ್ವೀಪದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಘಟಕವನ್ನು ಪ್ರಾಯೋಗಿಕವಾಗಿ ಆರಂಭಿಸಿದರು. ಇದರಿಂದ ಉತ್ತೇಜನಗೊಂಡ ಹಲವು ಯುವತಿಯರು 1909ರಲ್ಲಿ ‘ಗರ್ಲ್ಸ್‌ ಗೈಡ್‌’ ಚಳವಳಿಯೊಂದಿಗೆ ಸ್ಕೌಟ್ಸ್‌ ಮತ್ತು ಗೈಡ್ಸ್ ಘಟಕ ಸೇರಲು ತೀವ್ರ ಆಸಕ್ತಿ ತೋರಿದರು. ಇದು ಪೋವೆಲ್‌ರನ್ನು ಸ್ಕೌಟ್ಸ್‌ನಲ್ಲಿ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ವಿಭಾಗ ಆರಂಭಿಸಲು ಪ್ರೇರೇಪಿಸಿತು. ರೇಂಜರಿಂಗ್ ವಿಭಾಗವನ್ನು1919ರಲ್ಲಿ ಪೋವೆಲ್ ಆರಂಭಿಸಿದರು. 15ರಿಂದ 25 ವರ್ಷದೊಳಗಿನ ಹೆಣ್ಣು ಮಕ್ಕಳಿಗಾಗಿ ರೂಪಿಸಲಾದ ಈ ರೇಂಜರಿಂಗ್‌ ವಿಭಾಗ ದೇಶದ ಬಹುತೇಕ ಪ್ರೌಢಶಾಲೆ, ಕಾಲೇಜುಗಳಲ್ಲಿದೆ. ಇದರಲ್ಲಿ ಭಾಗವಹಿಸುವ ಯುವತಿಯರನ್ನು ‘ರೇಂಜರ್ಸ್’ ಎನ್ನುತ್ತಾರೆ.

ಜಲ ಸಾಹಸ ಕ್ರೀಡೆಯಲ್ಲಿ

ರೇಂಜರಿಂಗ್‌ ವಿಭಾಗದಲ್ಲಿ ಸುಮಾರು 83,000 ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಕರ್ನಾಟಕದ ಹೆಣ್ಣುಮಕ್ಕಳ ಸಂಖ್ಯೆ 25 ಸಾವಿರಕ್ಕೂ ಹೆಚ್ಚು. ‘ದೇಶದಲ್ಲೇ ಅತಿ ಹೆಚ್ಚು ಸಂಖ್ಯೆಯ ರೇಂಜರ್ಸ್‌ಗಳನ್ನು ಹೊಂದಿರುವ ಹೆಮ್ಮೆ ನಮ್ಮ ರಾಜ್ಯದ್ದು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಆಯುಕ್ತೆ (ಗೈಡ್ಸ್‌) ಮತ್ತು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್ ಉಪಾಧ್ಯಕ್ಷೆ ಗೀತಾ ನಟರಾಜ್‌.

ಸರ್ವಾಂಗೀಣ ಅಭಿವೃದ್ಧಿ
ರಾಜ್ಯದ ಬಹುತೇಕ ಶಾಲಾ ಕಾಲೇಜುಗಳಲ್ಲಿ ರೇಂಜರಿಂಗ್‌ ವಿಭಾಗವಿದೆ. ಹೈಕಿಂಗ್, ಟ್ರೆಕ್ಕಿಂಗ್‌, ಪರಿಸರ ಅಧ್ಯಯನ ಶಿಬಿರಗಳು, ಸಮುದಾಯ ಸೇವೆ, ವಿಪತ್ತು ನಿರ್ವಹಣೆಗೆ ಸಿದ್ಧತೆ, ಪ್ರಥಮ ಚಿಕಿತ್ಸೆಯಂತಹ ಸೇವೆಗಳು, ಟೈಲರಿಂಗ್, ಕಸೂತಿ, ಕರಕುಶಲ ವಸ್ತು ತಯಾರಿಕೆ ಮತ್ತು ಫ್ಯಾಷನ್‌ ಡಿಸೈನಿಂಗ್‌, ಬ್ಯೂಟೀಷಿಯನ್ ಸೇರಿದಂತೆ ಜೀವನ ಕೌಶಲ ತರಬೇತಿಗಳ ಮೂಲಕ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯು ‘ರೇಂಜರಿಂಗ್‌’ನ ಗುರಿ.

‘ರೇಂಜರಿಂಗ್‌ನಿಂದಾಗಿ ಕೆಲವರಿಗೆ ಉದ್ಯೋಗ ದೊರೆತಿದೆ. ಕೆಲವರು ಫ್ಯಾಷನ್ ಡಿಸೈನ್, ಬ್ಯೂಟೀಷಿಯನ್ ತರಬೇತಿ ಪಡೆದು ಉದ್ಯೋಗ ಪಡೆದಿದ್ದಾರೆ’ ಎನ್ನುತ್ತಾರೆ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಸಂಚಾಲಕಿ ಜ್ಯೋತಿ ರಂಗನಾಥ್.ಹಲವು ವರ್ಷಗಳಿಂದ ರೇಂಜರಿಂಗ್‌ನ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ, ರಾಜ್ಯ ಪುರಸ್ಕಾರ ಪಡೆದ ನಿವೇದಿತಾಗೆ ಇತ್ತೀಚೆಗೆ ಸ್ಕೌಟ್ಸ್ ಕೋಟಾದಡಿ ರೈಲ್ವೆ ಇಲಾಖೆಯಲ್ಲಿ ನೌಕರಿ ಸಿಕ್ಕಿದೆ.

ಅಂತಿಮ ಪದವಿ ಓದುತ್ತಿರುವ ಕುಂದಾಪುರದ ನಿರಕ್ಷತಾ ಶೆಟ್ಟಿ ಮೂರು ವರ್ಷಗಳಿಂದ ರೇಂಜರಿಂಗ್‌ನಲ್ಲಿದ್ದಾರೆ. ‘ಕಾರ್ಯಕ್ರಮಗಳ ನಿರೂಪಕಿ ಆಗಬೇಕೆಂಬ ನನ್ನ ಕನಸಿಗೆಇಲ್ಲಿ ನಡೆಯುವ ಶಿಬಿರಗಳು ನೀರೆರೆದವು’ ಎಂದು ಅವರು ಹೇಳುತ್ತಾರೆ. ಬಿಬಿಎ ಪದವಿ ಮುಗಿಸಿ ಉದ್ಯೋಗದಲ್ಲಿರುವ ಮೈಸೂರಿನ ರೋಶನಿ ಪ್ರಸಾದ್ 12 ವರ್ಷಗಳಿಂದ ರೇಂಜರಿಂಗ್‌ನಲ್ಲಿದ್ದಾರೆ. ‘ನಮ್ಮದು ಸ್ಕೌಟ್ಸ್ ಕುಟುಂಬ. ಈ ರೇಂಜರಿಂಗ್‌, ಸಮಾಜದಲ್ಲಿ ಸಂಕಷ್ಟದಲ್ಲಿದ್ದವರಿಗೆ, ದುರ್ಬಲ ವರ್ಗದವರಿಗೆ ನೆರವಾಗುವುದನ್ನು ಹೇಳಿಕೊಟ್ಟಿದೆ. ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಅವಧಿಯಲ್ಲಿ ಸಲ್ಲಿಸಿದ ಸೇವೆ ನೆನಪಿನಲ್ಲಿ ಉಳಿಯುವಂಥದ್ದು’ ಎನ್ನುತ್ತಾರೆ ರೋಶನಿ.

ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಂಟಿ ಕಾರ್ಯದರ್ಶಿ ರಮಾಲತಾ, ಆಯುಕ್ತೆ ಗೀತಾ ನಟರಾಜ್, ಸಂಯೋಜಕಿ ರಾಧಾ ವೆಂಕಟೇಶ್ ಮತ್ತು ಸಂಚಾಲಕಿ ಜ್ಯೋತಿ ರಂಗನಾಥ್.

‘ರೇಂಜರಿಂಗ್‌ನಲ್ಲಿ ತರಬೇತಿ, ಶಿಬಿರಗಳು ನಿರಂತರವಾಗಿರುತ್ತವೆ. ಆರು ವರ್ಷಗಳಿಂದ ನಡೆಯುತ್ತಿರುವ ‘ಪ್ರೇರಣಾ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಹಿಳಾ ತಜ್ಞ ವೈದ್ಯರಿಂದ ಸೂಕ್ತ ಸಲಹೆಗಳನ್ನು ಕೊಡಿಸಲಾಗುತ್ತದೆ’ ಎನ್ನುತ್ತಾರೆ ರಾಜ್ಯ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಸಂಯೋಜಕಿ ರಾಧಾ ವೆಂಕಟೇಶ್.

ಸಾಮಾಜಿಕ ಸೇವೆಯಲ್ಲಿ...
ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಮಹೋತ್ಸವದ ವೇಳೆ ಹಿರಿಯರು, ಅಂಗವಿಕಲರು, ಮಕ್ಕಳಿಗೆ ಬೆಟ್ಟ ಹತ್ತಲು ರೇಂಜರ್ಸ್‌ಗಳು ನೆರವಾಗಿದ್ದರು. ಅಲ್ಲೇ ಕ್ಯಾಂಪ್ ಮಾಡಿ, ಪ್ರತಿ ನಿತ್ಯ ಪ್ರವಾಸಿಗರಿಗೆ ನೀರು ಪೂರೈಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಚಿತ್ರದುರ್ಗ, ತುಮಕೂರು ಮತ್ತು ಹಾಸನ ಭಾಗದ ರೋವರ್ಸ್‌–ರೇಂಜರ್‌ಗಳು 80ಕ್ಕೂ ಹೆಚ್ಚು ಕಲ್ಯಾಣಿಗಳ ಪುನಶ್ಚೇತನಕ್ಕೆ ಕೈಜೋಡಿಸಿದ್ದಾರೆ. ದಕ್ಷಿಣ ಕನ್ನಡ – ಉಡುಪಿ ಭಾಗದಲ್ಲಿ ಬೀಚ್‌ ಮತ್ತು ರೈಲು ನಿಲ್ದಾಣ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಕಳೆದ ವರ್ಷ 30 ಲಕ್ಷ ಬೀಜದ ಉಂಡೆಗಳನ್ನು ತಯಾರಿಸಿ ಕರ್ನಾಟಕ ಅರಣ್ಯ ಇಲಾಖೆಗೆ ನೀಡಿದ್ದಾರೆ.

ಕೊರೊನಾ ನಡುವೆ ನಡೆದ ಎಸ್‌ಎಸ್‌ಎಲ್‌ಎಲ್‌ಸಿ ಪರೀಕ್ಷೆ ವೇಳೆ 10 ಸಾವಿರಕ್ಕೂ ಹೆಚ್ಚು ರೇಂಜರ್ಸ್‌ಗಳು ಪರೀಕ್ಷಾ ಕೇಂದ್ರಗಳಲ್ಲಿ ಸ್ವಯಂ ಸೇವಕರಾಗಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್‌, ಮಾಸ್ಕ್‌ ಪೂರೈಕೆಯಂತಹ ಕೆಲಸ ಮಾಡಿದ್ದಾರೆ. 10 ಲಕ್ಷ ವಿವಿಧ ಬಗೆಯ ಮಾಸ್ಕ್‌ಗಳನ್ನು ಹೊಲಿದು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ನೀಡಿದ್ದಾರೆ. ‘ಕೊರೊನಾ ಅವಧಿಯ ಸೇವೆಗೆ, ಇಲಾಖೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ’ ಎಂದು ಆಯುಕ್ತೆ ಗೀತಾ, ರೇಂಜರ್ಸ್‌ಗಳ ಸಾಮಾಜಿಕ ಕಳಕಳಿಯನ್ನು ನೆನಪಿಸಿಕೊಳ್ಳುತ್ತಾರೆ.

ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಬೆಟ್ಟ ಹತ್ತಲು ಹಿರಿಯರಿಗೆ, ಮಕ್ಕಳಿಗೆ ನೆರವಾದ ರೇಂಜರ್ಸ್‌ಗಳು

ಭವಿಷ್ಯದ ಯೋಜನೆ
‘ಶತಮಾನೋತ್ಸವ ವರ್ಷಾಚರಣೆ ವೇಳೆ ಉತ್ತಮವಾದ ಕಾರ್ಯಕ್ರಮಗಳು ನಡೆದಿವೆ. ಮಹಿಳೆಯರಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಮತ್ತು ಮುಟ್ಟಿನ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು, ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ರೂಪಿಸುವ ಕುರಿತು ಯೋಚಿಸುತ್ತಿದ್ದೇವೆ’ ಎಂದು ಭವಿಷ್ಯದ ಯೋಜನೆ ಕುರಿತು ಮಾಹಿತಿ ಹಂಚಿಕೊಂಡರು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ.

ಭಾರತ, ಕರ್ನಾಟಕದಲ್ಲಿ...
*ಭಾರತದಲ್ಲಿ ಮೊದಲ ಬಾರಿಗೆ ಸ್ಕೌಟ್ ಚಟುವಟಿಕೆ ಆರಂಭವಾದದ್ದು 1909ರಲ್ಲಿ. ನಿವೃತ್ತ ಕ್ಯಾಪ್ಟನ್ ಟಿ. ಎಚ್. ಬೇಕರ್ ಎಂಬವರು ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯಲ್ಲಿ ಬಾಯ್ ಸ್ಕೌಟ್ ರೂಪದಲ್ಲಿ ಆರಂಭಿಸಿದರು.
*ಕರ್ನಾಟಕದಲ್ಲಿ 1918–19ರಲ್ಲಿ ಅಧಿಕೃತವಾಗಿ ಆರಂಭವಾಯಿತು. ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್‌ ಅವರು ‘ಮೈಸೂರ್ ಬಾಯ್ಸ್‌ ಸ್ಕೌಟ್’ ಎಂಬ ಹೆಸರಿನಿಂದ ಸ್ಕೌಟಿಂಗ್ ಆರಂಭಿಸಿದರು. ಎರಡು ವರ್ಷಗಳ ಹಿಂದೆ ‘ರೋವರ್ಸ್‌’ ಶತಮಾನೋತ್ಸವ ನಡೆಯಿತು.

ಕೋವಿಡ್‌ 19 ಸಾಂಕ್ರಾಮಿಕದ ನಡುವೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ‘ಕೊರೊನಾ ವಾರಿಯರ್‌‌’ಗಳಾಗಿ ಸೇವೆ ಸಲ್ಲಿಸಿದ ರೇಂಜರ್ಸ್‌

ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿಭಾಗಗಳು
3ರಿಂದ 5 ವರ್ಷದೊಳಗಿನ ಮಕ್ಕಳನ್ನು ‘ಬನ್ನೀಸ್‌’, 5 ರಿಂದ 10 ವರ್ಷದ ಒಳಗಿನ ಬಾಲಕರನ್ನು ‘ಕಪ್ಸ್‌’ ಮತ್ತು ಬಾಲಕಿಯರನ್ನು ‘ಬುಲ್ ಬುಲ್ಸ್’ ಎನ್ನುತ್ತಾರೆ. 10ರಿಂದ 16 ವರ್ಷದ ಒಳಗಿನ ಬಾಲಕರನ್ನು ಸ್ಕೌಟ್ಸ್‌ ಮತ್ತು ಬಾಲಕಿಯರನ್ನು ‘ಗೈಡ್ಸ್‌’ ಎನ್ನುತ್ತಾರೆ. 15ರಿಂದ 25 ವರ್ಷದೊಳಗಿರುವ ಗಂಡು ಮಕ್ಕಳನ್ನು ರೋವರ್ಸ್ ಮತ್ತು ಹೆಣ್ಣು ಮಕ್ಕಳನ್ನು ರೇಂಜರ್ಸ್‌ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.