ADVERTISEMENT

Explainer | ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯಗಳಿಗೆ ಏನಿದೆ ಬೆಲೆ?

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 19:54 IST
Last Updated 6 ಫೆಬ್ರುವರಿ 2020, 19:54 IST
   

‘ಕನ್ನಡ ಸಾಹಿತ್ಯ ಶರಬತ್ತು ಮಾಡಿದ ಗೊತ್ತುವಳಿಗಳು’ –1945ರಲ್ಲಿ ಮದ್ರಾಸ್‌ನಲ್ಲಿ (ಈಗಿನ ಚೆನ್ನೈ) ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೊತ್ತುವಳಿ ಸ್ವೀಕರಿಸಲು ಹೇಳಿದಾಗ ಸಮ್ಮೇಳನದ ಅಧ್ಯಕ್ಷ ಟಿ.ಪಿ. ಕೈಲಾಸಂ ಮಾಡಿದ್ದ ಗೇಲಿ ಇದು. ಪರಿಷತ್ತನ್ನು ಶರಬತ್ತಿಗೆ ಹೋಲಿಸಿ, ಅದು ಕೈಗೊಳ್ಳುವ ನಿರ್ಣಯಗಳು ಏನೇನೂ ಆಗುವುದಿಲ್ಲ ಎಂಬುದನ್ನು ಅವರು ಅಷ್ಟೊಂದು ತೀಕ್ಷ್ಣವಾಗಿ ಹೇಳಿದ್ದರು. ನಿರ್ಣಯಗಳನ್ನು ಕೈಗೊಳ್ಳುವ ಈ ಪರಿಪಾಟ ಯಾವಾಗ ಶುರುವಾಯಿತು ಎಂಬುದನ್ನು ಹುಡುಕುತ್ತಾ ಹೋದರೆ ಮೊದಲ ಮೂರು ಸಮ್ಮೇಳನಗಳಲ್ಲಿ ಯಾವ ನಿರ್ಣಯಗಳನ್ನೂ ಮಾಡದಿರುವುದು ಗೊತ್ತಾಗುತ್ತದೆ. 1918ರಲ್ಲಿ ಧಾರವಾಡದಲ್ಲಿ ನಡೆದ ಸಮ್ಮೇಳನದಿಂದ ಈ ಗೊತ್ತುವಳಿ ಪರಿಪಾಟ ಶುರುವಾಗುತ್ತದೆ. ಅದಕ್ಕೆ ಕಾರಣವಾಗಿದ್ದು ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ಮೈಸೂರು ಸಂಸ್ಥಾನದ ಆಗಿನ ದಿವಾನ ಕಾಂತರಾಜ ಅರಸು. ಅಲ್ಲಿಂದ ನಂತರದ ಸಮ್ಮೇಳನಗಳಲ್ಲಿ ನಿರ್ಣಯಗಳೇನೋ ಪಾಸಾಗುತ್ತ ಹೊರಟವು. ಆದರೆ, ಅನುಷ್ಠಾನದ ಹಂತದಲ್ಲಿ ನಪಾಸಾದವು! ಮಣಿಪಾಲದಲ್ಲಿ ನಡೆದ ಸಮ್ಮೇಳನದಲ್ಲಿ (1960) ಸಮ್ಮೇಳನಾಧ್ಯಕ್ಷ ಅನಕೃ ಅವರು, ನಿರ್ಣಯಗಳನ್ನು ಅನುಷ್ಠಾನಕ್ಕೆ ತಾರದಿರುವುದಕ್ಕೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ನಿರ್ಣಯಗಳನ್ನು ಅಂಗೀಕರಿಸಿ, ಸರ್ಕಾರಕ್ಕೆ ಕಳುಹಿಸಿದರೆ ಪರಿಷತ್ತಿನ ಕೆಲಸ ಮುಗಿಯಿತು. ಮುಂದೆ ಅದರ ಗತಿ ಏನಾಯಿತು ಎಂಬುದನ್ನು ನೋಡುವುದಕ್ಕೆ ಯಾವುದೇ ವ್ಯವಸ್ಥೆ ಅಲ್ಲಿಲ್ಲ.ಹೀಗಾಗಿ ಸಮ್ಮೇಳನಗಳ ನಿರ್ಣಯಗಳಿಗೆ ಮುಂದೆಯೂ ಯಾವುದೇ ಬೆಲೆ ಬರಲಿಲ್ಲ.

ಒಂದು ದಶಕದ ಅವಲೋಕನ...

2009: ಪ್ರೊ. ಎಲ್. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಚಿತ್ರದುರ್ಗದಲ್ಲಿ 75ನೇ ಸಮ್ಮೇಳನ ನಡೆಯಿತು. ಅಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು:

ADVERTISEMENT

1. ಕನ್ನಡ ನಾಡು, ನುಡಿ, ಗಡಿ ಮೊದಲಾದವುಗಳ ರಕ್ಷಣೆಗಾಗಿ ಅಹಿಂಸಾತ್ಮಕ ಚಳವಳಿ ಮಾಡಿದ ಕನ್ನಡಪರ ಹೋರಾಟಗಾರರ ಮೇಲೆ ಸರ್ಕಾರ ಹೂಡಿರುವ ಎಲ್ಲ ನಿರ್ಣಯಗಳನ್ನು ಬೇಷರತ್ತಾಗಿ ಹಿಂದಕ್ಕೆ ಪಡೆಯಬೇಕು

2. ಸರೋಜಿನಿ ಮಹಿಷಿ ವರದಿ, ಮಹಾಜನ್ ವರದಿ ಹಾಗೂ ಡಿ.ಎಂ. ನಂಜುಂಡಪ್ಪ ವರದಿಗಳನ್ನು ಸರ್ಕಾರ ಕೂಡಲೇ ಅನುಷ್ಠಾನಕ್ಕೆ ತರಬೇಕು (ಹಿಂದಿನ ಸಮ್ಮೇಳನಗಳಲ್ಲಿ ಕೈಗೊಂಡಿದ್ದ ನಿರ್ಣಯದ ಪುನರುಚ್ಚಾರ)

3. ಎಲ್ಲಾ ಹಂತದ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು

2010: ಗದಗದಲ್ಲಿ 2010ರಲ್ಲಿ ನಡೆದ 76ನೇ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ. ಗೀತಾ ನಾಗಭೂಷಣ ವಹಿಸಿದ್ದರು. ಈ ಸಮ್ಮೇಳನದಲ್ಲಿ ಯಾವುದೇ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳಲಿಲ್ಲ. ಸಮ್ಮೇಳನ ಕೈಗೊಂಡ ಒಂದೇ ಸಾಲಿನ ನಿರ್ಣಯ ಹೀಗಿತ್ತು:

1. ಈ ಹಿಂದಿನ ಎಲ್ಲ ಸಮ್ಮೇಳನಗಳಲ್ಲಿ ಕೈಗೊಂಡಿದ್ದ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕು

2011: ‘ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವಂತೆ ಒತ್ತಡ ಹೇರಬೇಕು’ ಎಂಬ ನಿರ್ಣಯವನ್ನು 2011ರಲ್ಲಿ ಗಂಗಾವತಿಯಲ್ಲಿ ನಡೆದ 78ನೇ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಯಿತು. ಇತರ ನಿರ್ಣಯಗಳು ಹೀಗಿದ್ದವು:

1. ಶಿಕ್ಷಣದ ಮಾಧ್ಯಮವನ್ನಾಗಿಕನ್ನಡವನ್ನು ಕಡ್ಡಾಯಗೊಳಿಸಿ

2. ಜಿಲ್ಲೆ, ತಾಲ್ಲಕು ಕೇಂದ್ರಗಳಲ್ಲಿ ಕಸಾಪಗೆ ನಿವೇಶನ ನೀಡಿ

3. ಡಬ್ಬಿಂಗ್‌ ಸಂಸ್ಕೃತಿಗೆ ಅವಕಾಶ ಬೇಡ

4. ಅಣ್ಣಿಗೇರಿಯಲ್ಲೇ ಪಂಪ ಪ್ರಶಸ್ತಿ ನೀಡಿ

5. ಎಂ.ಚಿದಾನಂದಮೂರ್ತಿ ಅವರಿಗೆ ಅಗೌರವ ತೋರಿದ್ದು ಖಂಡನೀಯ (ಆಗಿನ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ಗೌರವ ಡಾಕ್ಟರೇಟ್‌ ಪ್ರದಾನ ಮಾಡಲು ನಿರಾಕರಿಸಿದ್ದರಿಂದ ಉಂಟಾದ ವಿವಾದ)

6. ಹೈ–ಕ ಪ್ರದೇಶದ ಅಭಿವೃದ್ಧಿಗಾಗಿ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿಯಾಗಲಿ

7. ಅನ್ಯಭಾಷಿಕರು ಕಡ್ಡಾಯವಾಗಿ ಕನ್ನಡ ಕಲಿಯಬೇಕು

2013:2013ರಲ್ಲಿ ನಡೆದ 79ನೇ ಸಮ್ಮೇಳನದಲ್ಲಿ ‘ಬಿಜಾಪುರ’ವನ್ನು ‘ವಿಜಯಪುರ’ ಎಂದು ಮರುನಾಮಕರಣ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು. ಉಳಿದ ನಿರ್ಣಯಗಳು ಹೀಗಿದ್ದವು:

1. ರಾಷ್ಟ್ರೀಯ ಭಾಷಾ ನೀತಿ ಜಾರಿಗೊಳಿಸಿ

2. ಹೈದರಾಬಾದ್–ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಮರ್ಪಕ ಯೋಜನೆಗಳ ಅನುಷ್ಠಾನಗೊಳಿಸಿ

3. ಡಬ್ಬಿಂಗ್ ಸಂಸ್ಕೃತಿಗೆ ನಿಷೇಧ ಹೇರಿ

4. ರಾಜ್ಯದ ಎಲ್ಲ ಮಹಿಳಾ ಕಾಲೇಜುಗಳನ್ನು ಬಿಜಾಪುರ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ತನ್ನಿ

2014: ‘ಡಾ. ಕಸ್ತೂರಿ ರಂಗನ್ ವರದಿಯ ಯಾವುದೇ ಶಿಫಾರಸು ಕೊಡಗಿನ ಜನರ ಬದುಕಿಗೆ ಪೂರಕವಾಗಿಲ್ಲದ ಕಾರಣ ಆ ವರದಿಯನ್ನು ತಿರಸ್ಕರಿಸಬೇಕು’ ಎಂಬ ನಿರ್ಣಯವನ್ನು ಮಡಿಕೇರಿಯಲ್ಲಿ ನಡೆದ 80ನೇ ಸಮ್ಮೇಳನವು ತೆಗೆದುಕೊಂಡಿತು. ಉಳಿದ ನಿರ್ಣಯಗಳು:

1. ‘ನಾವು ನಾಲ್ಕು ಜನ ಇದ್ದಿದ್ದರೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು’ ಎಂದು ಹೇಳಿಕೆ ನೀಡಿದ್ದ ಎಂಇಎಸ್ ಮುಖಂಡರಾದ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲ ವಿರುದ್ಧ ಕೂಡಲೇ ಕ್ರಮ ಜರುಗಿಸಿ

2. ಅಖಂಡ ಕರ್ನಾಟಕ ವಿಭಜಿಸುವ ಬಗ್ಗೆ ಬಿಜೆಪಿಯಶಾಸಕ ಉಮೇಶ ಕತ್ತಿ ಆಡಿರುವ ಮಾತು ಖಂಡನೀಯ. ಅವರ ವಿರುದ್ಧ ಕ್ರಮ ಕೈಗೊಳ್ಳಿ

3. ಹೈಕೋರ್ಟ್‌ನ ಎಲ್ಲ ಕಲಾಪಗಳು ಕನ್ನಡದಲ್ಲಿ ನಡೆಯುವಂತೆ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಿ

2015: ‘ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯ, ಪ್ರಾದೇಶಿಕ ಭಾಷೆಗಳ ಸಾರ್ವಭೌಮತೆ ಎತ್ತಿಹಿಡಿಯಲು ಪೂರಕವಾಗಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು’ ಎಂಬ ಏಕೈಕ ನಿರ್ಣಯವನ್ನು ಶ್ರವಣಬೆಳಗೊಳದಲ್ಲಿ ನಡೆದ 81ನೇ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗಿತ್ತು. ಮುಂದಿನ ಸಮ್ಮೇಳನದ ಹೊತ್ತಿಗೆ ಕನ್ನಡ ಕಡ್ಡಾಯವಾಗಿ ಜಾರಿಯಾಗದಿದ್ದಲ್ಲಿ ಪರಿಷತ್ತಿನಿಂದ ತೀವ್ರ ಸ್ವರೂಪದ ಜನಾಂದೋಲನ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಅಂದಿನ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ನೀಡಿದ್ದರು.

2016:ರಾಯಚೂರಿನಲ್ಲಿ 2016ರಲ್ಲಿ ನಡೆದ 82ನೇ ಸಮ್ಮೇಳನವು ಹೊರನಾಡ ಕನ್ನಡಿಗರ ಪರವಾಗಿ ದನಿ ಎತ್ತಿತು. ರಾಜ್ಯದೊಳಗೆ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಶೈಕ್ಷಣಿಕ ಮತ್ತು ಉದ್ಯೋಗ ಸಂಬಂಧಿ ಸೌಲಭ್ಯಗಳು ಗಡಿನಾಡಿನ ಕನ್ನಡಿಗರಿಗೂ ಸಿಗಬೇಕು ಎಂದು ಒತ್ತಾಯಿಸಲಾಯಿತು. ಇತರ ನಿರ್ಣಯಗಳು ಹೀಗಿದ್ದವು:

1. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ

2. ಸಮಾನ ಶಿಕ್ಷಣಕ್ಕೆ ನೀಲನಕ್ಷೆ ಸಿದ್ಧಗೊಳಿಸಿ

3. ರಾಷ್ಟ್ರಕವಿ ಪುರಸ್ಕಾರ ನೀಡುವ ಪದ್ಧತಿ ಮುಂದುವರಿಸಿ

2017: ಮೈಸೂರಿನಲ್ಲಿ ನಡೆದ83ನೇ ಸಮ್ಮೇಳನದಲ್ಲಿ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ವರದಿಗಳನ್ನು ಅನುಷ್ಠಾನಕ್ಕೆ ತರಬೇಕು’ ಎಂಬ ನಿರ್ಣಯ ಕೈಗೊಳ್ಳಲಾಯಿತು. ಉಳಿದ ನಿರ್ಣಯಗಳು ಹೀಗಿದ್ದವು:

1. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ

2. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸಿ

3. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿಯಿಂದ ಮಾನ್ಯತೆ ಕೊಡಿಸಿ

2019: ಸಾವಿರಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ತೆರೆಯುವ ಸರ್ಕಾರದ ನಿರ್ಧಾರದ ವಿರುದ್ಧ ನಿರ್ಣಯ ಕೈಗೊಂಡಿದ್ದು 2019ರಲ್ಲಿ ಧಾರವಾಡದಲ್ಲಿ ನಡೆದ 84ನೇ ಸಮ್ಮೇಳನ. ಇತರ ನಿರ್ಣಯಗಳು ಹೀಗಿದ್ದವು:

1. ಪೂರ್ವ ಪ್ರಾಥಮಿಕ ಹಂತದಿಂದ ಏಳನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ

2. ಕೇಂದ್ರ ಸರ್ಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡಿ

3. ನಾಡಗೀತೆ ಅವಧಿಯನ್ನು ಗರಿಷ್ಠ 2 ನಿಮಿಷ, 20 ಸೆಕೆಂಡ್‌ಗೆ ನಿಗದಿಗೊಳಿಸಿ.

ಹೈದರಾಬಾದ್‌ನಲ್ಲಿ 1941ರಲ್ಲಿ ನಡೆದ ಸಮ್ಮೇಳನದ ನಿರ್ಣಯವನ್ನು ನೋಡಿ:

1. ಹೈದರಾಬಾದು ಸಂಸ್ಥಾನದ ನಿಜಾಂ ಪ್ರಭುಗಳಲ್ಲಿ ಕೃತಜ್ಞತಾ ಸಮರ್ಪಣೆ ಮತ್ತು ಪ್ರಾರ್ಥನೆ: ಅತ್ಯಂತ ಘನವನ್ನೈದಿದ ಹಜರತ್‌ ಅಸಫಜಾ ನಿಜಾಮುಲ್‌ ಮುಲ್ಕ್‌ ನವಾಬ್‌ ಮೀರ್‌ ಉಸ್ಮಾನ್‌ ಅಲೀಖಾನ್‌ ಬಹದ್ದೂರ್‌ ಜಿಸಿಎಸ್‌ಐ ಮಹಾಪ್ರಭುಗಳವರ ಸಂಸ್ಥಾನದ ಹೈದರಾಬಾದು ಪಟ್ಟಣದಲ್ಲಿ ಸೇರಿರುವ ಈ ಕನ್ನಡ ಸಾಹಿತ್ಯ ಸಮ್ಮೇಳನ ನಿಜಾಂ ಮಹಾಸ್ವಾಮಿಯವರ ದಿವ್ಯಸನ್ನಿಧಿಯಲ್ಲಿ ಮನಃಪೂರ್ವಕವಾದ ಭಕ್ತಿ ವಿಶ್ವಾಸಗಳನ್ನು ಅತ್ಯಂತ ವಿನಯಪೂರ್ವಕವಾಗಿ ಸಮರ್ಪಿಸುತ್ತದೆಯಲ್ಲದೆ ಪ್ರಭುಗಳವರು ತಮ್ಮ ಸಂಸ್ಥಾನದಲ್ಲಿ ಕನ್ನಡ ಭಾಷೆ ಸಾಹಿತ್ಯಗಳ ಪುರೋಭಿವೃದ್ಧಿಗೆ ಸಹಾಯವನ್ನೂ ಪ್ರೋತ್ಸಾಹವನ್ನೂ ಕೊಟ್ಟು ಕೊಟ್ಟು ಕಾಪಾಡಬೇಕೆಂದು ಬೇಡುತ್ತದೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಭುಗಳವರು ಉದಾರ ಸಹಾಯವನ್ನು ಅನುಗ್ರಹಿಸಿ ಕನ್ನಡದ ವಿಷಯದಲ್ಲಿ ತಮ್ಮ ಅಭಿಮಾನವನ್ನು ಪ್ರಕಾಶಗೊಳಿಸಬೇಕೆಂದು ಬೇಡುತ್ತದೆ.

2. ಮೈಸೂರು ಸಂಸ್ಥಾನದ ಶ್ರೀಮನ್ಮಹಾರಾಜರವರಲ್ಲಿಕೃತಜ್ಞತಾ ಸಮರ್ಪಣೆ ಮತ್ತು ಪ್ರಾರ್ಥನೆ: ಹೈದರಾಬಾದು ನಗರದಲ್ಲಿ ಸೇರಿರುವ ಕನ್ನಡ ಸಾಹಿತ್ಯ ಸಮ್ಮೇಳನ ಪರಿಷತ್ತಿನ ಮಹಾಪೋಷಕರಾದ ಮೈಸೂರು ಸಂಸ್ಥಾನದ ಶ್ರೀಮನ್‌ ಮಹಾರಾಜರವರಾದ ಶ್ರೀ ಜಯಚಾಮರಾಜ ಒಡೆಯರ್‌ ಬಹದ್ದೂರ್‌ ಅವರ ದಿವ್ಯಸನ್ನಿಧಿಯಲ್ಲಿ, ಮಹಾಸ್ವಾಮಿಯವರು ಕನ್ನಡ ಮತ್ತು ಕನ್ನಡಿಗರ ವಿಷಯದಲ್ಲಿ ತೋರುತ್ತಿರುವ ದಯೆಮಮತೆಗಳಿಗಾಗಿ ತನ್ನ ಮನಃಪೂರ್ವಕವಾದ ಕೃತಜ್ಞತೆಯನ್ನೂ ಭಕ್ತಿವಿಶ್ವಾಸಗಳನ್ನೂ ಸಮರ್ಪಿಸಲು ಅಪ್ಪಣೆ ಬೇಡುತ್ತದೆ. ಮತ್ತು ಮಹಾಸ್ವಾಮಿಯವರು ಕನ್ನಡ ಸಾಹಿತ್ಯ ಪರಿಷತ್ತನ್ನು ಇನ್ನು ಮುಂದಕ್ಕೂ ಅಭಿಮಾನದಿಂದಲೂ ಔದಾರ್ಯದಿಂದಲೂ ಪರಿಪೋಷಿಸಿ ಬೆಳೆಸಬೇಕೆಂದು ಅತ್ಯಂತ ವಿನಯದಿಂದ ಪ್ರಾರ್ಥಿಸುತ್ತದೆ.

3. ನಿಜಾಂ ಪ್ರಭುಗಳ ಪೂಜ್ಯಮಾತೆ ಮತ್ತು ಭಾರತೀಯ ಸುಪ್ರಸಿದ್ಧ ಕವಿ ರವೀಂದ್ರನಾಥ ಠಾಕೂರರ ನಿಧನಕ್ಕೆ ಸಮ್ಮೇಳನ ತನ್ನ ಸಂತಾಪ ಸೂಚಿಸುತ್ತದೆ.

ವಿಜಾಪುರ, ವಿಜಯಪುರ ಆಗಿದೆ

2013ರಲ್ಲಿ ನಡೆದ ಸಮ್ಮೇಳನದಲ್ಲಿ ‘ವಿಜಾಪುರ’ವನ್ನು ‘ವಿಜಯಪುರ’ ಎಂದು ಮರುನಾಮಕರಣ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಬೇರೆ ನಗರಗಳ ಹೆಸರು ಬದಲಿಸುವಾಗ ಈ ನಿರ್ಣಯ ಅನುಷ್ಠಾನಗೊಂಡಿದೆ. ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎನ್ನುವುದು ಮತ್ತೊಂದು ನಿರ್ಣಯವಾಗಿತ್ತು. ‘ಈ ಬೇಡಿಕೆ ಈಡೇರಿದ್ದರೂ ಅದರಲ್ಲಿ ನಿರ್ಣಯದ ಪಾತ್ರ ಏನೂ ಇಲ್ಲ. ಅದು ದಶಕಗಳ ಹೋರಾಟದ ಫಲ’ ಎಂದು ಆ ಭಾಗದ ಸಾಹಿತಿಗಳೇ ಹೇಳುತ್ತಾರೆ.

ಪದೇ ಪದೇ ಕೈಗೊಂಡ ನಿರ್ಣಯಗಳು

ಶಿಕ್ಷಣದ ಮಾಧ್ಯಮವನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ

ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ

ರಾಷ್ಟ್ರೀಯ ಭಾಷಾ ನೀತಿ ಜಾರಿಗೊಳಿಸಿ

ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ

ಸರೋಜಿನಿ ಮಹಿಷಿ ವರದಿ, ಮಹಾಜನ್ ವರದಿ ಹಾಗೂ ಡಿ.ಎಂ. ನಂಜುಂಡಪ್ಪ ವರದಿಗಳನ್ನು ಅನುಷ್ಠಾನಗೊಳಿಸಿ

ಡಬ್ಬಿಂಗ್ ಸಂಸ್ಕೃತಿಗೆ ನಿಷೇಧ ಹೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.