ADVERTISEMENT

Explainer | ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 2 ಮೇ 2020, 1:02 IST
Last Updated 2 ಮೇ 2020, 1:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಕೊಲ್ಲಿ ರಾಷ್ಟ್ರಗಳಲ್ಲಿರುವ ಸುಮಾರು 1.25 ಲಕ್ಷ ಕನ್ನಡಿಗರು ತಾವು ಎಂದೂ ಊಹಿಸದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರು ಈಗಾಗಲೇ ವಸತಿ ಹಾಗೂ ಆಹಾರ ಸಮಸ್ಯೆಯನ್ನು ಎದುರಿಸುತ್ತಿದ್ದು, ನೆರವಿಗೆ ಬರುವಂತೆ ತಾಯ್ನೆಲದ ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ...

‘ನಾವೆಲ್ಲ ಕೆಲಸ ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದೇವೆ. ಸೋಂಕು ಎಲ್ಲೆಲ್ಲಿ ಹರಡಿದೆಯೋ ಗೊತ್ತಾಗದೆ ಭೀತಿಯಲ್ಲಿ ಕಾಲ ಕಳೆಯುತ್ತಿದ್ದೇವೆ. ಸೋಂಕು ಪರೀಕ್ಷೆಗೆ ದುಬಾರಿ ದರ ತೆರಬೇಕು. ಆಸ್ಪತ್ರೆಗಳೆಲ್ಲ ಕಿಕ್ಕಿರಿದು ತುಂಬಿದ್ದು ಚಿಕಿತ್ಸೆ ಪಡೆಯುವುದೇ ಕಷ್ಟ. ನಮಗೀಗ ಇಲ್ಲಿನ ಜೀವನ ನಿರ್ವಹಣೆ ಹೊರೆಯಾಗಿ ತವರಿಗೆ ಮರಳುವುದನ್ನೇ ಎದುರು ನೋಡುತ್ತಿದ್ದೇವೆ...’

ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಅರಸಿ ಹೋದವರನ್ನು ಸಂಪರ್ಕಿಸಿದರೆ, ಬಹುತೇಕರಿಂದ ಸಾಮಾನ್ಯವಾಗಿ ಸಿಗುವ ತಕ್ಷಣದ ಪ್ರತಿಕ್ರಿಯೆ ಇದು. ರಾಜ್ಯದ ಕರಾವಳಿ ಪ್ರದೇಶದ ಜನರ ಪಾಲಿಗೆ ಉದ್ಯೋಗದ ‘ಉಚ್ಛ ನೆಲೆ’ ಎನಿಸಿದ್ದ ಕೊಲ್ಲಿ ರಾಷ್ಟ್ರಗಳಲ್ಲಿ ಈಗ ಕನ್ನಡಿಗರ ಕಣ್ಣೀರಿನ ಕಥೆಗಳೇ ಮಡುವುಗಟ್ಟಿವೆ.

ADVERTISEMENT

ಪ್ರತೀ ತಿಂಗಳು ಸಂಬಳದ ಒಂದು ಭಾಗವನ್ನು ಊರಿಗೆ ಕಳುಹಿಸುತ್ತಿದ್ದವರು, ಈಗ ತವರಿನ ಸಹಾಯಕ್ಕಾಗಿ ಅಂಗಲಾಚುತ್ತಿರುವುದು ಮಾಮೂಲಿ. ಅಲ್ಲದೆ, ಒಂದೊಮ್ಮೆ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ದುಬೈ, ಅಬುಧಾಬಿ ಮೊದಲಾದ ನಗರಗಳ ತಳಕಿನ ಲೋಕ ಇದೀಗ ಅಪಥ್ಯವಾಗಿ ಪರಿಣಮಿಸಿದೆ.

ಶೇ 25ರಿಂದ 30ರಷ್ಟು ಕನ್ನಡಿಗರು ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಇಂತಹ ಕೆಲವರ ಕುಟುಂಬಗಳಲ್ಲಿ ಗರ್ಭಿಣಿಯರೂ ಇದ್ದಾರೆ. ಇಲ್ಲಿನ ವೈದ್ಯಕೀಯ ವೆಚ್ಚಗಳು ಬಲು ದುಬಾರಿ. ಹೀಗಾಗಿ ಭಾರತೀಯ ಮಹಿಳೆಯರು ಹೆರಿಗೆಗಾಗಿ ಸ್ವದೇಶಕ್ಕೆ ಮರಳುವುದು ಸಾಮಾನ್ಯ. ಏಳು ತಿಂಗಳು ತುಂಬಿದ ಬಳಿಕ ವಿಮಾನದಲ್ಲಿ ಪ್ರಯಾಣಿಸಲು ಗರ್ಭಿಣಿಯರಿಗೆ ಅವಕಾಶ ನೀಡುವುದಿಲ್ಲ. ಲಾಕ್‌ಡೌನ್‌ ಮುಗಿಯುವುದರೊಳಗೆ ಕೆಲವು ಗರ್ಭಿಣಿಯರಿಗೆ ಏಳು ತಿಂಗಳು ತುಂಬಲಿದ್ದು, ಅಂಥವರು ದುಬಾರಿ ವೈದ್ಯಕೀಯ ವೆಚ್ಚವನ್ನು ಭರಿಸುವುದು ಅನಿವಾರ್ಯ. ಈಗಾಗಲೇ ಕೆಲಸ ಕಳೆದುಕೊಂಡವರಿಗೆ ದುಬಾರಿ ವೆಚ್ಚ ನಿಭಾಯಿಸುವುದು ಹೇಗೆ ಎಂಬ ಚಿಂತೆ.

‘ವಿಸಿಟಿಂಗ್‌ ವೀಸಾದಲ್ಲಿ ಬಂದು, ಇಲ್ಲಿ ಉದ್ಯೋಗ ಹುಡುಕಿಕೊಂಡಿದ್ದ ಸುಮಾರು 500 ಮಂದಿ ಕನ್ನಡಿಗರು ಸಹ ಕೆಲಸ ಕಳೆದುಕೊಂಡಿದ್ದಾರೆ. ತವರಿಗೆ ಮರಳಲು ಆಗದೆ, ಇಲ್ಲಿಯೇ ಉಳಿದುಕೊಳ್ಳಲೂ ಆಗದೆ ಪರದಾಡುತ್ತಿದ್ದಾರೆ’ ಎಂದು ‘ಕರ್ನಾಟಕ ಎನ್‌ಆರ್‌ಐ ಫೋರಂ’ನ ಅಧ್ಯಕ್ಷ, ಉದ್ಯಮಿ ಪ್ರವೀಣ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಲ್ಲಿ ರಾಷ್ಟ್ರಗಳಲ್ಲೀಗ ಶೇ 30ರಷ್ಟು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹೋಗಲು ಅವಕಾಶ. ಸೋಂಕು ತಗಲುವ ಅಪಾಯ ಇದ್ದರೂ ಉದ್ಯೋಗ ಉಳಿಸಿಕೊಳ್ಳುವ ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಪಾರಾಗುವ ಉದ್ದೇಶದಿಂದ ಸಾವಿರಾರು ಕನ್ನಡಿಗರ ಪಾಲಿಗೆ ಕಚೇರಿಗೆ ಹೋಗದೆ ಬೇರೆಯ ದಾರಿಯೇ ಇಲ್ಲವಾಗಿದೆ.

ಪ್ರಯಾಣ ನಿರ್ಬಂಧ ಜಾರಿಗೂ ಮುನ್ನ ತಮ್ಮ ಪೋಷಕರು, ಸಂಬಂಧಿಕರನ್ನು ಕರೆಸಿಕೊಂಡವರು ಹಲವರಿದ್ದಾರೆ. ಅಂಥವರ ವೀಸಾ ಅವಧಿ ಮುಗಿಯುತ್ತಿದೆ (ಅದನ್ನು ಡಿಸೆಂಬರ್‌ವರೆಗೆ ವಿಸ್ತರಿಸುವುದಾಗಿ ಸರ್ಕಾರ ಹೇಳಿದೆ). ‘ಯಾಕಾದರೂ ಇಲ್ಲಿಗೆ ಬಂದೆವೋ’ ಎಂಬ ಪರಿತಾಪ ಅವರದಾಗಿದೆ.

ದುಬೈನಲ್ಲಿರುವ ಕನ್ನಡಿಗರಲ್ಲಿ ಒಬ್ಬೊಬ್ಬರದು ಒಂದೊಂದು ವಿಧದ ಅನುಭವ. ಇಲ್ಲಿ ಯಾವುದೂ ಉಚಿತವಿಲ್ಲ. ಸೋಂಕು ಪರೀಕ್ಷೆಗೆ 445 ದಿರಹಮ್ಸ್ ವ್ಯಯಿಸಬೇಕು. ಪರೀಕ್ಷೆ ಫಲಿತಾಂಶ ಬೇಗನೆ ಸಿಗಬೇಕೆಂದರೆ ಸಾವಿರ ದಿರಹಮ್ಸ್ ಕೊಡಬೇಕು. ಮೊದಲು ಉಚಿತ ಚಿಕಿತ್ಸೆ ಇತ್ತು. ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋದಂತೆ ಹಣ ವಸೂಲಿಯೂ ಶುರುವಾಯಿತು ಎನ್ನುವುದು ಬಹುತೇಕರ ಅನುಭವದ ಮಾತು.

‘ಊರಿಗೆ ಹೋಗಬೇಕು ಎಂದೆನಿಸುತ್ತದೆ, ನಿಜ. ಒಂದುವೇಳೆ ಊರಿಗೆ ಹೋದರೆ ಕ್ವಾರಂಟೈನ್‌ನಲ್ಲಿ ಇರಬೇಕು. ರಜೆ ಇರುವುದೇ 28 ದಿನ. ಅದನ್ನೂ ಕ್ವಾರಂಟೈನ್‌ನಲ್ಲಿ ಕಳೆಯುವುದಾದರೆ ಅಲ್ಲಿಗೆ ಹೋಗುವುದಾದರೂ ಯಾಕೆ’ ಎಂದು ಪ್ರಶ್ನಿಸಿದರು ಕಾಸರಗೋಡಿನ ಸಾಫ್ಟ್‌ವೇರ್ ಎಂಜಿನಿಯರ್ ಮೋಹನ್.

ಎಲ್ಲ ಆಸ್ಪತ್ರೆಗಳು ಭರ್ತಿ ಆಗಿವೆ. ಈಗ ಶೆಡ್‌ಗಳನ್ನು ನಿರ್ಮಿಸುತ್ತಿದ್ದಾರೆ. ಒಬ್ಬ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರೆ, ಆತ ಗುಣಮುಖನಾಗಿ ಬರುವಾಗ ಆಸ್ಪತ್ರೆಯ ಬಿಲ್ 25,000 ದಿಂದ 30,000 ದಿರಹಮ್ಸ್ ಆಗುತ್ತದೆ. ಇನ್ಶೂರೆನ್ಸ್ ಇದ್ದರೆ ಪರವಾಗಿಲ್ಲ. ಇಲ್ಲದೆ ಇದ್ದವರು ಏನು ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಪ್ರಶ್ನೆ.

ಕಾರ್ಮಿಕರ ಸ್ಥಿತಿ ಶೋಚನೀಯ

ಕಾರ್ಮಿಕರ ಶಿಬಿರದ ಸ್ಥಿತಿ ಶೋಚನಿಯವಾಗಿದೆ. ದುಬೈನಲ್ಲಿ ರೂಮ್‌ಗಳಲ್ಲೇ ಕಾರ್ಮಿಕರನ್ನು ಕೂಡಿಹಾಕಲಾಗಿದೆ ಎಂಬ ಮಾಹಿತಿ ಇದೆ. ಸೋಂಕು ಪರೀಕ್ಷೆಯ ಫಲಿತಾಂಶ ತಿಳಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ. ಫಲಿತಾಂಶ ಪಾಸಿಟಿವ್ ಇದ್ದರೂ ಬೇಗ ಹೇಳುವುದಿಲ್ಲ. ರೋಗ ತನ್ನಿಂದತಾನೇ ಗುಣವಾಗುವುದೇ ಎಂದು ಕಾಯಲಾಗುತ್ತದೆ.

ದುಬೈ, ಅಬುಧಾಬಿ ಮೊದಲಾದ ಕಡೆಗಳಲ್ಲಿ ದುಡಿಯಲು ಬಂದ ಬಡ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರ ಕೈಯಲ್ಲಿ ದುಡ್ಡಿಲ್ಲ. ಇಲ್ಲಿರುವ ಇತರ ಉದ್ಯೋಗಿಗಳು ಅವರಿಗೆ ಸಾಧ್ಯವಾದ ಸಹಾಯ ಮಾಡುತ್ತಿದ್ದಾರೆ. ಪ್ರಧಾನ ಜಂಕ್ಷನ್‌ಗಳಲ್ಲಿ ಉಚಿತವಾಗಿ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲಿ ಸರದಿ ಸಾಲಿನಲ್ಲಿ ಕಾಯುವವರ ಸಂಖ್ಯೆ ಜಾಸ್ತಿ ಇದೆ. ಊರಿಗೆ ನಮ್ಮನ್ನು ವಾಪಸ್ ಕರೆಸಿಕೊಳ್ಳುವರೇ ಅಂತ ಆತಂಕ ಅವರನ್ನು ಕಾಡುತ್ತಿದೆ.

'ಕನ್ನಡಿಗರ ನೋವಿಗೆ ಸ್ಪಂದಿಸದ ಸರ್ಕಾರ'

ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರ ಬರುತ್ತಿಲ್ಲ ಎಂಬುದು ಕೊಲ್ಲಿ ರಾಷ್ಟ್ರಗಳ ಬಹುತೇಕ ಕನ್ನಡ ಸಂಘಟನೆಗಳ ಅಳಲು. ಕೆಲಸ ಕಳೆದುಕೊಂಡಿರುವ ಕೇರಳದ ಜನರಿಗೆ ಅಲ್ಲಿನ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ. ವಿಮಾನ ಹಾರಾಟ ಆರಂಭವಾದ ಕೂಡಲೇ ಉಚಿತವಾಗಿ ತಾಯ್ನಾಡಿಗೆ ಕರೆಯಿಸಿಕೊಳ್ಳುವುದಾಗಿ ಭರವಸೆ ನೀಡಿದೆ.
ಆಂಧ್ರಪ್ರದೇಶ ಮತ್ತು ಗೋವಾ ಸರ್ಕಾರಗಳೂ ಅವರವರ ರಾಜ್ಯದವರಿಗೆ ನೆರವಿನ ಭರವಸೆ ನೀಡಿವೆ. ಆದರೆ, ಕರ್ನಾಟಕ ಸರ್ಕಾರ ನಮ್ಮ ಮೊರೆಯನ್ನು ಕೇಳುತ್ತಿಲ್ಲ ಎಂದು ಸಂಘಟನೆಗಳ ಮುಖಂಡರು ಅಳಲು ತೋಡಿಕೊಂಡರು. ‘ಕರ್ನಾಟಕದ ಸಚಿವರಲ್ಲಿ ಹಲವರು ಸ್ನೇಹಿತರಿದ್ದಾರೆ. ಸರ್ಕಾರಕ್ಕೆ ಸುಮಾರು 25 ಪತ್ರಗಳನ್ನು ಬರೆದಿದ್ದೇನೆ. ಯಾವುದಕ್ಕೂ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರ ಸರ್ಕಾರಕ್ಕೂ ಒಂದು ಪತ್ರ ಬರೆದಿದ್ದೆ, ಅದಕ್ಕೆ ಪ್ರಧಾನಿಯವರ ಕಚೇರಿಯಿಂದಲೇ ಉತ್ತರ ಬಂದಿದೆ. ಆದರೆ, ತಾಯ್ನೆಲದ ಸರ್ಕಾರದ ನಿರ್ಲಕ್ಷ್ಯವು ಬೇಸರ ಮೂಡಿಸಿದೆ’ ಎಂದು ಪ್ರವೀಣ್‌ ಶೆಟ್ಟಿ ಹೇಳಿದರು.

‘ಯಾವಾಗ ಬರುವರು ನಮ್ಮ ಯಜಮಾನರು’

- ಪ್ರದೀಶ್‌ ಎಚ್‌.

ಮಂಗಳೂರು: ‘ಇಸ್ರೇಲಿನಲ್ಲಿ ಉದ್ಯೋಗದಲ್ಲಿರುವ ಪತಿ ವರ್ಷದ ಹಿಂದೆ ಊರಿಗೆ ಬಂದು ಹೋಗಿದ್ದರು. ಇದೇ ಏಪ್ರಿಲ್‌ನಲ್ಲಿ ಊರಿಗೆ ಬರಲು ಟಿಕೆಟ್‌ ಸೇರಿದಂತೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಈ ಹಾಳಾದ ಕೊರೊನಾ ಸೋಂಕು ಬಂದು ಅವರು ಅಲ್ಲೇ ಉಳಿಯುವಂತಾಗಿದೆ’

ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮರೋಡಿಯ ಸುಫಲಾ ಪೂಜಾರಿ ಅವರ ನೋವಿನ ಮಾತು. ಇದು ಕೇವಲ ಇವರೊಬ್ಬರ ನೋವಲ್ಲ, ಕರಾವಳಿಯ ಬಹುತೇಕ ಕುಟುಂಬಗಳಲ್ಲಿ ಇದೇ ನೋವು, ಆತಂಕ ಮನೆ ಮಾಡಿದೆ. ಹೊಟ್ಟೆಪಾಡಿಗಾಗಿ ವಿದೇಶಕ್ಕೆ ಹೋಗಿದ್ದ ಕರಾವಳಿಯ ಸಾವಿರಾರು ಮಂದಿ, ಇದೀಗ ಉದ್ಯೋಗವೂ ಇಲ್ಲದೆ, ತವರಿಗೂ ಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ವಿದೇಶದಲ್ಲಿ ಉದ್ಯೋಗವಿಲ್ಲದೆ, ನಾಲ್ಕು ಗೋಡೆಗಳ ಮಧ್ಯೆ ಬದುಕುವುದು ತುಂಬಾ ಕಷ್ಟ. ಇಸ್ರೇಲ್‌ನಲ್ಲಿಯೂ ಲಾಕ್‌ಡೌನ್‌ ಇದ್ದ ಕಾರಣ ಮೂರು ತಿಂಗಳು ಸಮಸ್ಯೆಯಾಗಿತ್ತು. ಯಾವಾಗ ನಮ್ಮವರು ಊರಿಗೆ ಬರುತ್ತಾರೋ, ಯಾವಾಗ ನೋಡುತ್ತೇನೋ ಎಂದು ಕಾಯುತ್ತಿದ್ದೇನೆ’ ಎನ್ನುತ್ತಾರೆ ಸುಫಲಾ.

‘ನಾಲ್ಕು ತಿಂಗಳ ಹಿಂದೆ ನಮ್ಮ ಮದುವೆಯಾಗಿದ್ದು, ಕೆಲವೇ ದಿನಗಳಲ್ಲಿ ಪತಿ ಕುವೈತ್‌ಗೆ ತೆರಳಿದರು. ಅವರ ಬೆನ್ನಲ್ಲೇ ನಾನು ಕೂಡ ಅಲ್ಲಿಗೆ ತೆರಳಲು ಎಲ್ಲ ದಾಖಲೆಗಳನ್ನು ಸಿದ್ಧತೆ ಮಾಡಿಕೊಂಡು, ವೀಸಾಗಾಗಿ ಕಾಯುತ್ತಿದ್ದೆ. ಇನ್ನು ಅಲ್ಲಿಗೆ ಹೋದರೂ ಉದ್ಯೋಗ ಸಿಗುವುದು ಕಷ್ಟ. ಈಗಾಗಲೇ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ’ ಎನ್ನುತ್ತಾರೆ ಬೆಳ್ತಂಗಡಿಯ ಕಾಶಿಪಟ್ಣದ ಸುಹಾಸಿನಿ ಸಂತೋಷ್‌.

‘ಹಾಂಗ್‌ಕಾಂಗ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸರಕು ಸಾಗಣೆಯ ಹಡಗಿನಲ್ಲಿ ಪತಿ ಉದ್ಯೋಗದಲ್ಲಿದ್ದಾರೆ. ನವೆಂಬರ್‌ನಲ್ಲಿ ತೆರಳಿದ್ದ ಅವರು ಸಹೋದರನ ಮದುವೆಯ ನಿಮಿತ್ತ ಮೇ ತಿಂಗಳಿನಲ್ಲಿ ಬರುವವರಿದ್ದರು. ಈಗ ಯಾವಾಗ ಊರಿಗೆ ಬರುತ್ತಾರೋ ಎಂದು ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ಉಡುಪಿ ಜಿಲ್ಲೆಯ ಕಾರ್ಕಳದ ಸುಪ್ರಿಯಾ ಹರೀಶ್‌.

ಹೆಲ್ಪ್‌ಲೈನ್‌ ಆರಂಭಿಸಿದ ಫೋರಂ

‘ಕರ್ನಾಟಕ ಎನ್‌ಆರ್‌ಐ ಫೋರಂ’ ಸಂಕಷ್ಟದಲ್ಲಿರುವ ಎಲ್ಲಾ ಕನ್ನಡಿಗರಿಗೆ ನೆರವಾಗುತ್ತಿದೆ. ಅಲ್ಲದೆ, ಹೆಲ್ಪ್‌ಲೈನ್‌ ಆರಂಭಿಸಿದೆ. ಸಂಕಷ್ಟದಲ್ಲಿ ಇರುವವರು ಕರೆಮಾಡಿ ತಮ್ಮ ವಿಳಾಸ, ಕುಟುಂಬದವರ ವಿವರಗಳನ್ನು ನೀಡಿದರೆ, ಅವರ ಮನೆಗೆ ಆಹಾರದ ಕಿಟ್‌ ತಲುಪಿಸಲಾಗುತ್ತಿದೆ.‘ಈ ಸೇವೆಗೆ ದಾನಿಗಳು ನೆರವಾಗುತ್ತಿದ್ದಾರೆ. ಸದ್ಯಕ್ಕೆ ತೊಂದರೆ ಇಲ್ಲ. ಸಂಕಷ್ಟಕ್ಕೆ ಸಿಲುಕುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ, ಇದನ್ನು ಎಷ್ಟು ದಿನಗಳ ಕಾಲ ಮುಂದುವರಿಸಲು ಸಾಧ್ಯ’ ಎಂಬುದು ಫೋರಂನ ಜಂಟಿ ಕಾರ್ಯದರ್ಶಿ ಶಶಿಧರ ನಾಗರಾಜಪ್ಪ ಅವರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.