ADVERTISEMENT

ಒಳನೋಟ: ಗಡಿಯಲ್ಲಿ ಯಾರಿಗೂ ಸಲ್ಲದ ಶಾಲೆಗಳು.. ಬದುಕಷ್ಟೇ ಅಲ್ಲ, ಶಿಕ್ಷಣವೂ ಕಷ್ಟ!

ರಾಜ್ಯ ಗಡಿಭಾಗದ ಒಂದೊಂದು ಊರಿಗೆ ಭೇಟಿ ನೀಡಿದರೆ, ಅಲ್ಲಿನ ಸರ್ಕಾರಿ ಶಾಲೆಗಳ ಅವಸ್ಥೆ ಕಣ್ಣಿಗೆ ರಾಚುತ್ತದೆ.

ಇಮಾಮ್‌ಹುಸೇನ್‌ ಗೂಡುನವರ
Published 9 ಮಾರ್ಚ್ 2025, 0:31 IST
Last Updated 9 ಮಾರ್ಚ್ 2025, 0:31 IST
<div class="paragraphs"><p>ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸಂಖದ ಜಿಲ್ಲಾ ಪಂಚಾಯಿತಿ ಕನ್ನಡ ಶಾಲೆಗಳ ಆವರಣದಲ್ಲಿರುವ ನೀರಿನ ಸಂಪರ್ಕವಿಲ್ಲದ ಮೂತ್ರಾಲಯ, ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸಂಖದ ಜಿಲ್ಲಾ ಪಂಚಾಯಿತಿ ಕನ್ನಡ ಶಾಲೆಯ ವರಾಂಡದ ಮಕ್ಕಳಿಗೆ ಪಾಠ</p><p>ಪ್ರಜಾವಾಣಿ ಚಿತ್ರಗಳು</p></div>

ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸಂಖದ ಜಿಲ್ಲಾ ಪಂಚಾಯಿತಿ ಕನ್ನಡ ಶಾಲೆಗಳ ಆವರಣದಲ್ಲಿರುವ ನೀರಿನ ಸಂಪರ್ಕವಿಲ್ಲದ ಮೂತ್ರಾಲಯ, ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸಂಖದ ಜಿಲ್ಲಾ ಪಂಚಾಯಿತಿ ಕನ್ನಡ ಶಾಲೆಯ ವರಾಂಡದ ಮಕ್ಕಳಿಗೆ ಪಾಠ

ಪ್ರಜಾವಾಣಿ ಚಿತ್ರಗಳು

   

ಬೆಳಗಾವಿ: ‘ಶತಮಾನದ ಈ ಶಾಲೆ ಇಲಿ–ಹೆಗ್ಗಣಗಳಿಗೆ ಮನೆಯಾಗಿದೆ. ಮರೆತು ಹೋದ ಅಥವಾ ನೆಲದ ಮೇಲೆ ಬಿದ್ದ ಆಹಾರ ಪದಾರ್ಥವನ್ನು, ನಾವು ಮಾರನೇ ದಿನ ಬರುವಷ್ಟರಲ್ಲಿ ಅವು ತಿಂದಿರುತ್ತವೆ. ಹಾವು, ಚೇಳು ಕಡಿಮೆಯೇನಿಲ್ಲ. ಬಿರುಕು ಬಿಟ್ಟ ಗೋಡೆ ಅಥವಾ ಕಿಟಕಿಯಲ್ಲಿ ಸ್ವಲ್ಪ ಜಾಗ ಸಿಕ್ಕರೂ ಸಾಕು, ನುಸುಳುತ್ತವೆ. ಅವುಗಳನ್ನು ಕಂಡ ಕೂಡಲೇ ಕಿರುಚುತ್ತ ಓಡುವ ಮಕ್ಕಳನ್ನು ಸಂಭಾಳಿಸಿ, ಸುರಕ್ಷಿತ ಜಾಗಕ್ಕೆ ಒಯ್ಯಬೇಕು. ಪಾಠ ಅರ್ಧಕ್ಕೆ ನಿಲ್ಲುತ್ತದೆ’.

ADVERTISEMENT

ಇದು ಬೆಳಗಾವಿಯ ವ್ಯಾಕ್ಸಿನ್‌ ಡಿಪೊ ಆವರಣದ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ವಾಸ್ತವ ಸ್ಥಿತಿ. ಶಿಕ್ಷಕಿ ಬಿ.ಶೈಲಜಾ ಆತಂಕದಲ್ಲೇ ಈ ಶಾಲೆಯ ವ್ಯಥೆ ವಿವರಿಸುತ್ತಿದ್ದರೆ, ಅಲ್ಲಿ ಮಕ್ಕಳು ಕೊಠಡಿಯಲ್ಲಿ ಕೂರಲು ಹಿಂಜರಿಯುತ್ತಿದ್ದರು. ಯಾವ ಮೂಲೆಯಿಂದ ಯಾವ ಹುಳ–ಹುಪ್ಪಡಿ ಜಿಗಿದು, ತಮ್ಮನ್ನು ಕಚ್ಚುತ್ತೋ ಎಂಬ ಭೀತಿ ಅವರದ್ದು.

ಇನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಸ್ಥಿತಿಯಂತೂ ಇನ್ನಷ್ಟು ಶೋಚನೀಯ. ಕಳಪೆ ಕಾಮಗಾರಿಯಿಂದ ಗೋಡೆಗಳೆಲ್ಲ ಬಿರುಕು ಬಿಟ್ಟಿವೆ. ಕಿಟಕಿ–ಬಾಗಿಲು, ಚಾವಣಿ ಮೂಲಕ ಮಳೆನೀರು ಸೋರಿ, ಗೋಡೆ ಮೇಲೆಲ್ಲ ಪಾಚಿಗಟ್ಟಿದೆ. ಪಾಳುಬಿದ್ದ ಕಟ್ಟಡದಂತೆ ಗೋಚರಿಸುವ ಶಾಲಾ ಕಟ್ಟಡಕ್ಕೆ ಸುಣ್ಣ–ಬಣ್ಣ ಬಳಿದು ತಿಂಗಳುಗಳೇ ಕಳೆದಿವೆ. ಮಕ್ಕಳು ನೆಲದ ಮೇಲೆ ಕೂರಬೇಕು. ಬೇಸಿಗೆಯಲ್ಲಿ ಶಾಲಾ ಅಂಗಳದಲ್ಲಿ ಧೂಳಿನ ಮಜ್ಜನವಾದರೆ, ಮಳೆಗಾಲದಲ್ಲಿ ಆಟದ ಮೈದಾನ ಕೆಸರುಮಯ ಆಗುತ್ತದೆ.

ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸಂಖ ಗ್ರಾಮದಲ್ಲಿನ ಜಿಲ್ಲಾ ಪಂಚಾಯಿತಿ ಕನ್ನಡ ಶಾಲೆಗಳ ಸಮಸ್ಯೆ ಇನ್ನೂ ಗಂಭೀರ ಸ್ವರೂಪದ್ದು. 210 ಮಕ್ಕಳು ಅಲ್ಲಿ ಓದುತ್ತಾರೆ. ತೋರಿಕೆಗೆ ಮೂತ್ರಾಲಯ ಇದೆಯೇ ಹೊರತು ಅದಕ್ಕೆ ನೀರಿನ ಸೌಲಭ್ಯ ಇಲ್ಲ. ಶೌಚಾಲಯದ ಬಾಗಿಲು ಮುರಿದು, ಹಲವು ತಿಂಗಳಾಗಿವೆ. ಊಟಕ್ಕೆ ಬಿಡುವು ಸಿಕ್ಕ ಕೂಡಲೇ ಮಕ್ಕಳು ತಮ್ಮ ಮನೆಯ ಶೌಚಾಲಯಕ್ಕೆ ಹೋಗಿ, ನಿರಾಳರಾಗುತ್ತಾರೆ. ‘ನಮ್ಮ ಶಾಲೆಯ ಸಮಸ್ಯೆಗಳನ್ನು ಎಷ್ಟು ಹೇಳಿದರೂ ಕಡಿಮೆ’ ಎಂದು ಸಂಖ ಗ್ರಾಮದ ಹೋರಾಟಗಾರ ಚಂದ್ರಶೇಖರ ರೇಬಗೊಂಡ ಬೇಸರದಿಂದ ಹೇಳಿದರು.

ರಾಜ್ಯ ಗಡಿಭಾಗದ ಒಂದೊಂದು ಊರಿಗೆ ಭೇಟಿ ನೀಡಿದರೆ, ಅಲ್ಲಿನ ಸರ್ಕಾರಿ ಶಾಲೆಗಳ ಅವಸ್ಥೆ ಕಣ್ಣಿಗೆ ರಾಚುತ್ತದೆ.  ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಗೋವಾದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯದ ಒಂದೊಂದು ದಿಕ್ಕಿನಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. ಮೂಲಸೌಲಭ್ಯ ವಂಚಿತ ಮತ್ತು ಸಮಸ್ಯಾತ್ಮಕ ಸರ್ಕಾರಿ ಶಾಲೆಗಳ ಪಟ್ಟಿಯಲ್ಲಿ ಕನ್ನಡ ಅಲ್ಲದೇ ಇತರ ಮಾಧ್ಯಮಗಳ ಶಾಲೆಗಳೂ ಸೇರಿವೆ.

‘ವಿದ್ಯಾರ್ಥಿಗಳು ಇಲ್ಲವೆಂದು ನಮ್ಮ ಶಾಲೆ ಮುಚ್ಚಲಾಗಿತ್ತು. ಮನೆ–ಮನೆಗೆ ಹೋಗಿ ಪಾಲಕರ ಮನವೊಲಿಸಿ, ಬೇರೆ ಶಾಲೆಗೆ ಹೋಗುತ್ತಿದ್ದವರನ್ನು ಬಿಡಿಸಿ ಕರೆತಂದು 2019ರಲ್ಲಿ ಶಾಲೆ ಪುನರಾರಂಭಿಸಿದೆವು. ಈಗ 1ರಿಂದ 5ನೇ ತರಗತಿಯಲ್ಲಿ 59 ಮಕ್ಕಳಿದ್ದಾರೆ. ಆದರೆ, ಪಾಠ ಮಾಡಲು ಒಬ್ಬ ಕಾಯಂ ಶಿಕ್ಷಕ ಇಲ್ಲ. ಈಗಿರುವ ಮೂವರು ಅತಿಥಿ ಶಿಕ್ಷಕರು ಬದಲಾಗುತ್ತ ಇರುತ್ತಾರೆ. ಕೆಲವರು ಶೈಕ್ಷಣಿಕ ವರ್ಷದ ಮಧ್ಯೆಯೇ ಬಿಟ್ಟುಹೋಗುತ್ತಾರೆ. ಹೀಗಾದರೆ ಮಕ್ಕಳ ಕಲಿಕೆ ನಡೆಯುವುದಾದರೂ ಹೇಗೆ’ ಎಂದು ಅಥಣಿ ತಾಲ್ಲೂಕಿನ ಶಿರೂರಿನ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಮದೇವ ಖರಾತ್‌ ಕಳವಳ ವ್ಯಕ್ತಪಡಿಸಿದರು.

‘ನಮ್ಮ ಶಾಲೆಗೆ ಆಟದ ಮೈದಾನವಿಲ್ಲ. ಶೌಚಗೃಹವಿಲ್ಲ. ಕಾಂಪೌಂಡ್‌ ಕೂಡ ಇಲ್ಲ. ಮೂರು ಕೊಠಡಿಗಳ ಪೈಕಿ, ಒಂದು ಕಚೇರಿ ಕೆಲಸಕ್ಕೆ ಬಳಕೆ ಆಗುತ್ತಿದೆ. ಎರಡೇ ಕೊಠಡಿಯಲ್ಲಿ 5 ತರಗತಿಗಳ ಮಕ್ಕಳಿಗೆ ಪಾಠ. ಐದಾರು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಕಾಯಂ ಶಿಕ್ಷಕರ ನೇಮಕವಾಗಿಲ್ಲ’ ಎಂದು ನೋವಿನಿಂದ ಹೇಳಿದರು.

ಅವ್ಯವಸ್ಥೆ, ಶಿಕ್ಷಕರು ಮತ್ತು ಸೌಲಭ್ಯ ಕೊರತೆ ಕಾರಣಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದೆ.  ಒಂದು ಕಾಲಕ್ಕೆ 500ಕ್ಕೂ ಹೆಚ್ಚು ಮಕ್ಕಳಿದ್ದ ಬೆಳಗಾವಿಯ ಕಂಬಳಿ ಖೂಟದ, ಒಂದೂವರೆ ಶತಮಾನದ ಹಿಂದಿನ ಸರ್ಕಾರಿ ಬಾಲಕಿಯರ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ–1ರಲ್ಲಿ ಈಗ ಆರೇ ಮಕ್ಕಳು ಇದ್ದಾರೆ.

ಬೆಳಗಾವಿ ತಾಲ್ಲೂಕಿನ ತುರಮರಿಯ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಮನೆಯಿಂದಲೇ ಬಾಟಲಿಗಳಲ್ಲಿ ನೀರು ತರುವ ಮಕ್ಕಳು ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಶಿಕ್ಷಕರ ಕೊರತೆ

ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಜೊತೆ ಗಡಿ ಹಂಚಿಕೊಂಡ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಕನ್ನಡ, ಮರಾಠಿ, ತೆಲುಗು, ಉರ್ದು ಸರ್ಕಾರಿ ಶಾಲೆಗಳು ಅನಾಥ ಸ್ಥಿತಿಯಲ್ಲಿವೆ. 300ಕ್ಕೂ ಅಧಿಕ ಶಾಲೆಗಳಲ್ಲಿ 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಾರೆ. ಆದರೆ, ಕೆಲವೆಡೆ ಕನ್ನಡ ಭಾಷಾ ಶಿಕ್ಷಕರ ನೇಮಕಾತಿ ಆಗಿಲ್ಲ. ಕನ್ನಡವೇ ಬಾರದ ಮರಾಠಿ ಶಿಕ್ಷಕರೂ ಕೆಲವೆಡೆ ಇದ್ದಾರೆ.

ಸರ್ಕಾರಿ ಶಾಲೆಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯಲ್ಲಿ 5,705 ಮತ್ತು ರಾಯಚೂರು ಜಿಲ್ಲೆಯಲ್ಲಿ 5,286 ಶಿಕ್ಷಕರ ಹುದ್ದೆ ಖಾಲಿ ಇವೆ. ವಿಷಯ ಶಿಕ್ಷಕರ ಹುದ್ದೆಯೇ ಭರ್ತಿ ಆಗದಿರುವಾಗ, ದೈಹಿಕ ಶಿಕ್ಷಣ ಶಿಕ್ಷಕರ ಬಗ್ಗೆ ಕೇಳುವಂತಿಲ್ಲ. ಸಾಧನೆಯ ನಾಗಲೋಟದಲ್ಲಿ ಮುನ್ನುಗ್ಗುವ ಮಕ್ಕಳಿಗೆ ಬೆಳಗಾವಿ ಜಿಲ್ಲೆಯ 799 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲದಿರುವುದು ಮತ್ತೊಂದು ತೊಡಕಾಗಿದೆ.

ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡ ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್‌ನ ಶಾಲೆಗಳು, ಆಂಧ್ರ ಪ್ರದೇಶ ಜೊತೆ ಗಡಿ ಹಂಚಿಕೊಂಡ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಯಾದಗಿರಿ ಜಿಲ್ಲೆ ಶಾಲೆಗಳ ಪರಿಸ್ಥಿತಿಯೂ ಚೆನ್ನಾಗಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗಡಿ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಇಂಗ್ಲಿಷ್ ಕಲಿಸುತ್ತಾರೆ ಎಂದು ಪಾಲಕರು, ತಮ್ಮೂರಿನಿಂದ ಮಕ್ಕಳನ್ನು ಬಸ್, ಆಟೊರಿಕ್ಷಾಗಳಲ್ಲಿ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಬಹುತೇಕ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲಗೊಂಡಿದ್ದು, ತಾಲ್ಲೂಕಿನ ಕೊತ್ತಕೋಟೆ, ಮಾರ್ಗಾನುಕುಂಟೆ, ಅಡವಿಕೊತ್ತೂರು, ಬಿಳ್ಳೂರು ಮತ್ತಿತರ 60 ಸರ್ಕಾರಿ ಶಾಲೆ ಮುಚ್ಚಲಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದಾರೆ. ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿನ ಶೈಕ್ಷಣಿಕ ವರ್ಷ ಏಳು ವಿದ್ಯಾರ್ಥಿಗಳು ದಾಖಲಾಗಿದ್ದರು. ಶಿಕ್ಷಕರು, ಮೂಲಸೌಕರ್ಯ ಕೊರತೆ ಕಾರಣಕ್ಕೆ ಇಬ್ಬರು ವರ್ಗಾವಣೆ ಪ್ರಮಾಣಪತ್ರ ಪಡೆದು ಬೇರೆ ಶಾಲೆ ಸೇರಿದರು. ‘ಇಲ್ಲಿ ಕನ್ನಡ ಭಾಷಾ ಶಿಕ್ಷಕಿ ಇದ್ದು, ಉರ್ದು ಭಾಷಾ ಶಿಕ್ಷಕಿ ಇರಲಿಲ್ಲ. ಹಾಗಾಗಿ ಉಳಿದ ಐದು ಮಕ್ಕಳೂ ಬೇರೆ ಶಾಲೆ ಸೇರಿದರು. ಮಕ್ಕಳಿಲ್ಲದ ಕಾರಣ ಸರ್ಕಾರವು ಶಾಲೆಯನ್ನೇ ಮುಚ್ಚಿತು’ ಎಂದು ಮಾರ್ಗಾನುಕುಂಟೆ ಗ್ರಾಮದ ಸೈಯ್ಯದ್ ಬಾಬಾಜಾನ್ ತಿಳಿಸಿದರು.

ಬೆಳಗಾವಿಯ ವ್ಯಾಕ್ಸಿನ್‌ ಡಿಪೊ ಆವರಣದಲ್ಲಿರುವ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆ   ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ 

ಮನೆಯಿಂದ ತರಬೇಕು ನೀರು

‘ನಮ್ಮ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 200 ವಿದ್ಯಾರ್ಥಿಗಳಿದ್ದೇವೆ. ಇಲ್ಲಿನ ಶುದ್ಧ ನೀರಿನ ಘಟಕ ಬಂದ್‌ ಆಗಿ, ವರ್ಷಗಳೇ ಗತಿಸಿವೆ. ಹೀಗಾಗಿ ಮನೆಯಿಂದಲೇ ಬಾಟಲಿಯಲ್ಲಿ ನೀರು ತರುತ್ತೇವೆ. ಆಗಾಗ ಸ್ವಲ್ಪವೇ ಕುಡಿಯುತ್ತೇವೆ. ಒಂದು ವೇಳೆ ನೀರು ಖಾಲಿಯಾದರೆ, ಇಡೀ ದಿನ ಬಾಯಾರಿಸಿಕೊಂಡು ಇರಬೇಕು. ಇಲ್ಲದಿದ್ದರೆ, ನೀರು ತರಲು ಮನೆಗೆ ದೌಡಾಯಿಸಬೇಕು’ ಎನ್ನುತ್ತಾರೆ ಬೆಳಗಾವಿ ತಾಲ್ಲೂಕಿನ ತುರಮರಿಯ ಮರಾಠಿ ಶಾಲೆಯ ವಿದ್ಯಾರ್ಥಿನಿಯರು.

‘ಬೀದರ್‌ನ ಕೋಟೆ ಸಮೀಪದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ಬಿರುಕು ಉಂಟಾಗಿದ್ದು, ಗೋಡೆ ತುಂಬೆಲ್ಲ ಪೊದೆಗಳು ಬೆಳೆದಿವೆ. ಇಲ್ಲಿ ಓದುವವರೆಲ್ಲರೂ ಮುಸ್ಲಿಂ ಸಮುದಾಯದವರು ಎಂಬ ಭಾವನೆ ಇರುವುದರಿಂದ ಜನಪ್ರತಿನಿಧಿಗಳೂ ಅಭಿವೃದ್ಧಿಗೆ ಹೆಚ್ಚಿನ ಲಕ್ಷ್ಯ ವಹಿಸಿಲ್ಲ. ಶಾಲೆಯಲ್ಲಿ ಹೇಳಿಕೊಳ್ಳುವಂಥ ಯಾವ ಮೂಲಸೌಕರ್ಯವೂ ಇಲ್ಲ’ ಎಂದು ವಿದ್ಯಾರ್ಥಿಯೊಬ್ಬರ ಪಾಲಕ ಇರ್ಷಾದ್‌ ಖಾಜಿ ಬೇಸರದಿಂದ ಹೇಳುತ್ತಾರೆ.

ಬೀದರ್‌ ಜಿಲ್ಲೆಯ ಕಮಲನಗರ ತಾಲ್ಲೂಕಿನ ದೊಡ್ಡ ಹೋಬಳಿ ದಾಬಕಾದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯೇ ಇಲ್ಲ. ಅಲ್ಲಿನ ಮರಾಠಿ ಶಾಲೆಗಳಲ್ಲಿ ಒಂದು ವಿಷಯವಾಗಿ ಕನ್ನಡ ಕಲಿಸಲಾಗುತ್ತದೆ. ಕನ್ನಡ ಕಲಿಯಲು 15 ಕಿ.ಮೀ ದೂರದ ಔರಾದ್‌ಗೆ ಹೋಗಬೇಕು. ಸರ್ಕಾರಿ ಬಸ್‌ ಸೌಲಭ್ಯವಿರದ ಕಾರಣ ವಿದ್ಯಾರ್ಥಿಗಳು ನಡೆದುಕೊಂಡು ಹೋಗಬೇಕು ಇಲ್ಲವೇ ಖಾಸಗಿ ವಾಹನಗಳನ್ನು ಆಶ್ರಯಿಸಬೇಕು.

ಯಾದಗಿರಿ ಜಿಲ್ಲೆಯ ಸೈದಾಪುರ, ಗುರುಮಠಕಲ್‌ ತಾಲ್ಲೂಕುಗಳಲ್ಲಿ ತೆಲುಗು ಪ್ರಭಾವ ದಟ್ಟವಾಗಿದೆ. ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಅನಿವಾರ್ಯವಾಗಿ ತೆಲುಗು ಶಾಲೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಕನ್ನಡ ಪ್ರೌಢಶಾಲೆಗಳಲ್ಲಿ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಪಾಠ ಮಾಡಲು ಅತಿಥಿ ಶಿಕ್ಷಕರೂ ಸಿಗುತ್ತಿಲ್ಲ. ಕೆಲ ಶಾಲೆಗಳಲ್ಲಿ ಪಾಠೋಪಕರಣ, ಪೀಠೋಪಕರಣಗಳು ಇಲ್ಲ. ಕೋಲಾರದ ಮುಳಬಾಗಿಲು, ಕೆಜಿಎಫ್‌ ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲೂ ಶಿಕ್ಷಣ ವ್ಯವಸ್ಥೆ ಉತ್ತಮವಾಗಿಲ್ಲ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ತಮಿಳು ಭಾಷೆ ಪ್ರಭಾವ ಇದೆ. ಅಲ್ಲಿನ ಸರ್ಕಾರಿ ಶಾಲೆಗಳು ಮೂಲಸೌಕರ್ಯದಿಂದ ವಂಚಿತವಾಗಿವೆ. ಶಾಲಾ ಆವರಣದಲ್ಲಿ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಶೌಚಕ್ಕೆ ವಿದ್ಯಾರ್ಥಿಗಳು ಬಯಲು ಪ್ರದೇಶ ಅವಲಂಬಿಸಬೇಕಿದೆ. ಹಲವು ವರ್ಷಗಳಿಂದ ಇರುವ ಈ ಸಮಸ್ಯೆ ಇಂದಿಗೂ ನಿವಾರಣೆ ಆಗಿಲ್ಲ.

‘ಗಡಿ ಗ್ರಾಮಗಳಿಂದ ಸರ್ಕಾರಿ ಶಾಲೆಗಳಿಗೆ ಬರಲು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್‌ ಸೌಲಭ್ಯ ಇಲ್ಲ. ಬಹುತೇಕ ಗ್ರಾಮಗಳು ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಇರುವುದರಿಂದ ಉತ್ತಮ ರಸ್ತೆಗಳಿಲ್ಲದೆ ಬಸ್‌ ಸಂಚರಿಸುವುದಿಲ್ಲ. ರಾಮಾಪುರದಿಂದ ದಿನ್ನಳ್ಳಿ, ಮಾರಳ್ಳಿ, ಗಾಜನೂರು, ಕೊಪ್ಪ, ಸತ್ಯಮಂಗಲ, ಮೀಣ್ಯಂ ಮಾರ್ಗವಾಗಿ ಹೂಗ್ಯಂ ತಲುಪಲು ಬೆಳಿಗ್ಗೆ ಹಾಗೂ ಸಂಜೆ ಒಂದು ಕೆಎಸ್‌ಆರ್‌ಟಿಸಿ ಬಸ್ ಹೊರತುಪಡಿಸಿದರೆ, ಬೇರೆ ಬಸ್‌ ಸೌಲಭ್ಯ ಇಲ್ಲ. ಈ ಭಾಗದ ಜನರು ವೈಯಕ್ತಿಕ ವಾಹನಗಳನ್ನೇ ಅವಲಂಬಿಸಬೇಕಾಗಿದ್ದು, ಶಿಕ್ಷಕರು ಶಾಲೆಗಳಿಗೆ ತಲುಪಲು ಹರಸಾಹಸ ಪಡಬೇಕಿದೆ’ ಎಂಬುದು ಪಾಲಕರ ದೂರು.

ಗೋವಾದೊಂದಿಗೆ ಗಡಿ ಹಂಚಿಕೊಂಡ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಜೊಯಿಡಾ ತಾಲ್ಲೂಕಿನ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಕಾರವಾರ ತಾಲ್ಲೂಕಿನ ಮಾಜಾಳಿ, ಮುಡಗೇರಿ, ಸದಾಶಿವಗಡ, ಅಸ್ನೋಟಿ ಮತ್ತಿತರ ಹಳ್ಳಿಗಳ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಕ್ಕದ ಗೋವಾದ ಮಾಶೆಮ್, ಲೊಲೆಮ್, ಕಾಣಕೋಣ ಭಾಗದಲ್ಲಿರುವ ಖಾಸಗಿ ಇಂಗ್ಲಿಷ್‌ ಶಾಲೆಗೆ ತೆರಳುತ್ತಾರೆ.

‘ಜೊಯಿಡಾ ತಾಲ್ಲೂಕಿನ ಡಿಗ್ಗಿ ಭಾಗದ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ. ಜೊಯಿಡಾ ತಾಲ್ಲೂಕಿನ 42 ಶಾಲೆಗಳಲ್ಲಿ ಒಬ್ಬ ಕಾಯಂ ಶಿಕ್ಷಕರಿಲ್ಲ. ಕುಗ್ರಾಮಗಳಲ್ಲಿ ಶಾಲೆ ಇರುವ ಕಾರಣಕ್ಕೆ ಶಿಕ್ಷಕರ ವಾಸಕ್ಕೆ ಬಾಡಿಗೆ ಮನೆಯೂ ಸಿಗುತ್ತಿಲ್ಲ. ತಾಲ್ಲೂಕು ಕೇಂದ್ರದಿಂದ ಓಡಾಟ ಕಷ್ಟ ಎಂಬ ಕಾರಣಕ್ಕೆ ಶಿಕ್ಷಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಕನ್ನಡ ಶಾಲೆ ನಡೆಸುವುದಕ್ಕೆ ಹಲವು ಸವಾಲು ಎದುರಾಗಿವೆ’ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಕೂಡ ಹೀಗೆ ಹೇಳಿದರು. ‘ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಏನೆಲ್ಲ ಕಸರತ್ತು ಮಾಡುತ್ತಿದ್ದೇವೆ. ಆದರೆ, ಇಂಗ್ಲಿಷ್‌ ಮಾಧ್ಯಮ ಮತ್ತು ಕಾನ್ವೆಂಟ್‌ ಶಾಲೆಗಳ ಮೋಹದಿಂದ ಪಾಲಕರಿಂದ ಮಕ್ಕಳನ್ನು ಖಾಸಗಿ ಶಾಲೆಗೇ ಸೇರಿಸುತ್ತಿದ್ದಾರೆ’.

ಬೀದರ್‌ನ ಕೋಟೆ ಸಮೀಪದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ

ಗಡಿ ವಿವಾದವೂ ಅಡ್ಡಿ

‘ಮಹಾರಾಷ್ಟ್ರದ ಜತ್ತ ತಾಲ್ಲೂಕಿನಲ್ಲಿ 129 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿರುವ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥವಾಗಿ ಮಹಾಜನ್‌ ವರದಿ ಜಾರಿಯಾದರೆ, ಇಲ್ಲಿನ 44 ಗ್ರಾಮಗಳು ಕರ್ನಾಟಕಕ್ಕೆ ಸೇರಬಹುದು ಎಂಬುದು ಮಹಾರಾಷ್ಟ್ರ ಸರ್ಕಾರದ ಆತಂಕ. ಹಾಗಾಗಿ ಇಲ್ಲಿನ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ’ ಎಂದು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಗುಲಗುಂಜನಾಳ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಪ್ಪ ಮೇತ್ರಿ ಬೇಸರ ವ್ಯಕ್ತಪಡಿಸಿದರು.

ಗುಲಗುಂಜನಾಳ ಕನ್ನಡ ಶಾಲೆಯಲ್ಲಿ 2007ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಅಧಿಕ ಇತ್ತು. ಈಗ 1–5ನೇ ತರಗತಿಯಲ್ಲಿ 27 ವಿದ್ಯಾರ್ಥಿಗಳಿದ್ದಾರೆ. ಒಂದೇ ಕೊಠಡಿಯಲ್ಲಿ ಎಲ್ಲರಿಗೂ ಪಾಠ ನಡೆದಿದೆ. ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೀಗೆ ಮುಂದುವರಿದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಇನ್ನೂ ಕಷ್ಟಕರವಾಗಲಿದೆ ಎಂಬ ಭೀತಿ ಗಡಿ ಗ್ರಾಮಸ್ಥರದ್ದು.

ವಿಧಾನಸೌಧದಿಂದ ರಾಜ್ಯದ ಗಡಿಯತ್ತ ದೂರ ದೂರಕ್ಕೆ ಹೋಗುತ್ತಿದ್ದಂತೆ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ, ಕಾಯಂ ಶಿಕ್ಷಕ ಮತ್ತು ಗುಣಮಟ್ಟ ಎನ್ನುವುದು ದೂರವಾಗುತ್ತ ಹೋಗುತ್ತದೆ. ಸವಲತ್ತು ಎನ್ನುವ ಮರೀಚಿಕೆ ಸರ್ಕಾರದ ಕನ್ನಡ, ಮರಾಠಿ ಅಥವಾ ಉರ್ದು ಶಾಲೆಗೆ ಒಂದೇ ರೀತಿ ಇದೆ. ಇಲ್ಲಿ ಸೌಲಭ್ಯ ಇಲ್ಲದ ಕಾರಣಕ್ಕೆ ಪೋಷಕರು ದುಬಾರಿ ಶುಲ್ಕ ಕೊಟ್ಟು ಖಾಸಗಿ ಶಾಲೆಗಳತ್ತ ಮಕ್ಕಳನ್ನು ಸೇರಿಸುತ್ತಿದ್ದಾರೆ. ಪರಿಹಾರ ಎನ್ನುವ ಮದ್ದು ಯಾವಾಗ ಸರಿಯಾಗುವುದು ಎನ್ನುವ ದಾರಿಯನ್ನು ಪೋಷಕರು ಕಾಯುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಶ್ರೀನಿವಾಸಪುರ ಶಾಲೆಯ ಆವರಣ
ವಿಜಯಪುರ ಜಿಲ್ಲೆಯ ತಿಕೋಟಾ ‍ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಠಡಿ ಬೆಂಚ್‌ಗಳ ಸಮಸ್ಯೆ ನಡುವೆ ನೆಲದ ಮೇಲೆ ಒತ್ತೊಟ್ಟಿಗೆ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿನಿಯರು   ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ಜಿಲ್ಲೆಯ ತಿಕೋಟಾ ‍ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಠಡಿ ಬೆಂಚ್‌ಗಳ ಸಮಸ್ಯೆ ನಡುವೆ ನೆಲದ ಮೇಲೆ ಒತ್ತೊಟ್ಟಿಗೆ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿನಿಯರು   ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ಜಿಲ್ಲೆಯ ತಿಕೋಟಾ ‍ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಠಡಿ ಬೆಂಚ್‌ಗಳ ಸಮಸ್ಯೆ ನಡುವೆ ನೆಲದ ಮೇಲೆ ಒತ್ತೊಟ್ಟಿಗೆ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿನಿಯರು   ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ಕಲಬುರಗಿ‌ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ‌ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ದುಸ್ಥಿತಿ  ಪ್ರಜಾವಾಣಿ ಚಿತ್ರ:ಜಗನ್ನಾಥ ಡಿ. ಶೇರಿಕಾರ
ಕಲಬುರಗಿ‌ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕರ್ಚಖೇಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹೊರ ಆವರಣ  ಪ್ರಜಾವಾಣಿ ಚಿತ್ರ:ಜಗನ್ನಾಥ ಡಿ. ಶೇರಿಕಾರ
ಕಲಬುರಗಿ‌ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ‌ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ದುಸ್ಥಿತಿ    ಪ್ರಜಾವಾಣಿ ಚಿತ್ರ:ಜಗನ್ನಾಥ ಡಿ. ಶೇರಿಕಾರ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿರುವುದು    ಪ್ರಜಾವಾಣಿ ಚಿತ್ರ:ಜಗನ್ನಾಥ ಡಿ. ಶೇರಿಕಾರ
ಶಿಥಿಲಗೊಂಡ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಪಾಠ   ಪ್ರಜಾವಾಣಿ ಚಿತ್ರ:ಜಗನ್ನಾಥ ಡಿ. ಶೇರಿಕಾರ

ಯಾರು ಏನೆನ್ನುತ್ತಾರೆ?

ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗಳು ದಯನೀಯ ಸ್ಥಿತಿಯಲ್ಲಿವೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ಕರ್ನಾಟಕ ಸರ್ಕಾರವೂ ಇವುಗಳಿಗೆ ಸೌಲಭ್ಯ ಒದಗಿಸಬೇಕು

-ಆರ್‌.ಜಿ.ಬಿರಾದಾರ, ಅಧ್ಯಕ್ಷ ಕನ್ನಡ ಶಿಕ್ಷಕರ ಬಳಗ ಜತ್ತ ಮಹಾರಾಷ್ಟ್ರ

---

ಗಡಿಭಾಗದ ಕನ್ನಡ ಶಾಲೆಗಳಲ್ಲಿ ಒಬ್ಬ ಕಾಯಂ ಶಿಕ್ಷಕರೂ ಇಲ್ಲದಿರುವುದು ಗಮನಕ್ಕೆ ಬಂದಿಲ್ಲ. ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ತಕ್ಷಣ ಕ್ರಮ ವಹಿಸುತ್ತೇವೆ.

-ಆರ್‌.ಎಸ್‌.ಸೀತಾರಾಮು, ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿ

---

ಕರ್ನಾಟಕಕ್ಕಿಂತ ಗೋವಾ ಖಾಸಗಿ ಶಾಲೆಗಳಲ್ಲಿ ಶುಲ್ಕ ಕಡಿಮೆ. ಅಲ್ಲಿ ಓದಿದರೆ ಅದೇ ರಾಜ್ಯದಲ್ಲಿ ಉದ್ಯೋಗ ಸಿಗುತ್ತದೆ. ಅಲ್ಲಿ ಉದ್ಯೋಗಕ್ಕೆ ಪೈಪೋಟಿಯೂ ಕಡಿಮೆ ಇರುವುದಕ್ಕೆ ಮಕ್ಕಳನ್ನು ಗೋವಾ ಶಾಲೆಗೆ ಕಳುಹಿಸುತ್ತೇವೆ.

-ನಾರಾಯಣ ನಾಯ್ಕ ಪಾಲಕ ಮಾಂಜಾಳಿ, ಉತ್ತರ ಕನ್ನಡ ಜಿಲ್ಲೆ

---

ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದಿಂದ ಕನ್ನಡಿಗರು ಮತ್ತು ಮರಾಠಿಗರಿಗೆ ತೊಂದರೆ ಆಗಬಾರದು. ಗಡಿನಾಡಿನ ಶೈಕ್ಷಣಿಕ ಸಮಸ್ಯೆ ನಿವಾರಣೆಗೆ ಉಭಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ನಡೆಯಬೇಕು.

–ಅಶೋಕ ಚಂದರಗಿ, ಸದಸ್ಯ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ

–––

ವಿಜಯಪುರ ಜಿಲ್ಲೆಯಲ್ಲಿ ಸುಮಾರು 300 ಉರ್ದು ಪ್ರಾಥಮಿಕ ಶಾಲೆಗಳಿವೆ. ಬಹುತೇಕ ಕಡೆ ಮಕ್ಕಳ ದಾಖಲಾತಿ ಕಡಿಮೆ ಆಗುತ್ತಿದೆ. 25ಕ್ಕೂ ಅಧಿಕ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ.

–ರಫೀ ಭಂಡಾರಿ, ಸದಸ್ಯ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿ ವಿಜಯಪುರ

***

ತೆಲಂಗಾಣದಲ್ಲಿ ಕನ್ನಡ ಶಾಲೆಗಳಿಗೆ ಸೌಲಭ್ಯ

ತೆಲಂಗಾಣದಲ್ಲಿ ರೇವಂತ ರೆಡ್ಡಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಯಚೂರಿಗೆ ಹೊಂದಿಕೊಂಡ ತೆಲಂಗಾಣ ಗಡಿಯೊಳಗಿನ ಸರ್ಕಾರಿ ಕನ್ನಡ ಶಾಲೆಗಳ ಚಿತ್ರಣ ಬದಲಾಗಿದೆ. ತೆಲಂಗಾಣ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಅನೇಕ ಶಾಲೆಗಳಿಗೆ ಹೊಸ ಕಟ್ಟಡ ಮಂಜೂರುಗೊಳಿಸಿದೆ. ‘ನಮ್ಮ ಊರು ನಮ್ಮ ಶಾಲೆ’ ಯೋಜನೆಯಡಿ ಪೀಠೋಪಕರಣ ಒದಗಿಸಿದೆ. ಕನ್ನಡ ಶಾಲೆಗಳಿಗೆ ಕನ್ನಡ ಪುಸ್ತಕ ಮುದ್ರಿಸಿಕೊಟ್ಟಿದೆ. ಪ್ರಾಥಮಿಕ ಶಾಲೆಗಳಲ್ಲಿ ಎಡಿಎಫ್‌ ಬೋರ್ಡ್‌ ಪ್ರೌಢಶಾಲೆಗಳಲ್ಲಿ ಸ್ಮಾರ್ಟ್‌ ಬೋರ್ಡ್‌ ಇದೆ. ಶಾಲೆಗೆ ಉಚಿತ ಇಂಟರ್‌ನೆಟ್‌ ವಿದ್ಯುತ್‌ ಫ್ಯಾನ್‌ ಸೌಲಭ್ಯವಿದೆ. ಮಧ್ಯಾಹ್ನದ ಬಿಸಿಯೂಟ ಸಂಜೆ ಉ‍ಪಾಹಾರ ಸಿಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. ಗುಣಾತ್ಮಕ ಶಿಕ್ಷಣ ಸಿಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವೂ ಚೆನ್ನಾಗಿದೆ. ಸಕಾಲಕ್ಕೆ ಬಸ್‌ ಬಾರದಿದ್ದರೆ ಮಕ್ಕಳಿಗೆ ಶಾಲೆಗೆ ಬರಲು ತೊಂದರೆ ಆಗದಿರಲಿಯೆಂದು ಪ್ರಯಾಣ ವೆಚ್ಚವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಹೀಗಾಗಿ ನಾಲ್ಕು–ಐದು ಗ್ರಾಮಗಳ ಮಕ್ಕಳು ಒಂದೇ ಆಟೊದಲ್ಲಿ ನಿತ್ಯ ಬಂದು ಹೋಗುತ್ತಾರೆ. ಅವರು ಬಸ್‌ಗಾಗಿ ಕಾಯುವುದು ಅಗತ್ಯವಿಲ್ಲ. ತುಂಗಭದ್ರಾ ನದಿ ಆಚೆ ಇರುವ ಆಂಧ್ರಪ್ರದೇಶದ ಗಡಿಯ ಶಾಲೆಗಳೂ ಉತ್ತಮ ಸ್ಥಿತಿಯಲ್ಲಿವೆ. ತೆಲಂಗಾಣ ಆಂಧ್ರಪ್ರದೇಶದಲ್ಲಿ 10ನೇ ತರಗತಿಯವರೆಗೆ ಗುಣಮಟ್ಟದ ಶಿಕ್ಷಣ ದೊರಕಿದರೂ ನಂತರದ ಶಿಕ್ಷಣಕ್ಕೆ ರಾಯಚೂರಿಗೆ ಬರಬೇಕು. ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳೊಂದಿಗೆ ಬಳ್ಳಾರಿ ಜಿಲ್ಲೆ ಗಡಿ ಹಂಚಿಕೊಂಡಿದೆ. ಆಂಧ್ರ ಪ್ರದೇಶದಲ್ಲಿ ವಾಲ್ಮೀಕಿ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿದ್ದರೆ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಈ ಕಾರಣದಿಂದ ಅಲ್ಲಿನ ವಿದ್ಯಾರ್ಥಿಗಳು ಕನ್ನಡದಲ್ಲಿ ಕಲಿಯಲು ಆಸಕ್ತಿ ಹೊಂದಿದ್ದಾರೆ. ಶಾಲೆಗಳಿಗೆ ಹೆಚ್ಚಿನ ದಾಖಲಾತಿ ಆಗುತ್ತದೆ.   ‘ಆಂಧ್ರಪ್ರದೇಶದ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮವಾಗಿ ಪರಿವರ್ತಿಸುವ ಪ್ರಯತ್ನ ನಡೆಯಿತು. ಆದರೆ ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಅದು ಸದ್ಯಕ್ಕೆ ನಿಂತಿದೆ.  ಅನಂತಪುರ ಜಿಲ್ಲೆಯಲ್ಲಿ 19 ಕನ್ನಡ ಶಾಲೆಗಳಿದ್ದರೆ ಕರ್ನೂಲು ಜಿಲ್ಲೆಯಲ್ಲಿ 50 ಕನ್ನಡ ಶಾಲೆಗಳಿವೆ. ಶಾಲೆಗಳಿಗೆ ಸೌಲಭ್ಯ ಒದಗಿಸುವ ವಿಷಯದಲ್ಲಿ ಆಂಧ್ರ ಪ್ರದೇಶ ಯಾವುದೇ ಕೊರತೆ ಮಾಡಿಲ್ಲ’ ಎನ್ನುತ್ತಾರೆ ಕನ್ನಡ ಶಾಲೆಗಳ ಸಂಘದ ಅಧ್ಯಕ್ಷ ಶಿಕ್ಷಕ ಗಿರಿಜಾಪತಿ.  

ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಮಂಡಲದ ಕೃಷ್ಣಾ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಪ್ರೌಢ ಶಾಲೆಯಲ್ಲಿ ಸ್ಮಾರ್ಟ್‌ ಬೋರ್ಡ್‌ ಅಳವಡಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ. / ಚಿತ್ರ: ಶ್ರೀನಿವಾಸ ಇನಾಮದಾರ್

ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಮಂಡಲದ ಕೃಷ್ಣಾ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಪ್ರೌಢ ಶಾಲೆಯಲ್ಲಿ ಸ್ಮಾರ್ಟ್‌ ಬೋರ್ಡ್‌ ಅಳವಡಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ.  ಚಿತ್ರ: ಶ್ರೀನಿವಾಸ ಇನಾಮದಾರ್

ಆಂಧ್ರದಲ್ಲಿ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕುಸಿತ!

ಆಂಧ್ರಪ್ರದೇಶ ಸರ್ಕಾರ ಗಡಿ ಭಾಗದ ತೆಲುಗು ಶಾಲೆಗಳಲ್ಲಿ ಶಾಲೆ ಸೇರುವ ವಿದ್ಯಾರ್ಥಿಗಳಿಗೆ ಸಹಾಯಧನ ಘೋಷಿಸಿದ ಕಾರಣ ಕನ್ನಡ ಶಾಲೆಗಳಿಗೆ ಸೇರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕುಸಿತಗೊಂಡಿದೆ. ಕನ್ನಡ ಭಾಷಿಕರ ಮಕ್ಕಳು ಕನ್ನಡ ಶಾಲೆಗಳತ್ತ ಬರುತ್ತಿಲ್ಲ. ಮೊಳಕಾಲ್ಮುರು ತಾಲ್ಲೂಕಿನ ಯಡ್ಡಲಬೊಮ್ಮನಹಟ್ಟಿ ಗ್ರಾಮಕ್ಕೆ ಆಂಧ್ರ ಗಡಿ ಕೇವಲ 30 ಮೀಟರ್‌ ದೂರದಲ್ಲಿದೆ. ಈ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಆಂಧ್ರದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದರು. ರಾಯದುರ್ಗ ಜಿಲ್ಲೆಯ ಪೈತೋಟಲು ಭಾಗದ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ದಾಖಲು ಮಾಡುತ್ತಿದ್ದರು. ಆದರೆ ಈಗ ಸಹಾಯಧನದ ಆಸೆಗೆ ಮಕ್ಕಳು ತೆಲುಗು ಶಾಲೆಗಳಿಗೆ ದಾಖಲಾಗಿದ್ದು ಯಡ್ಡಲಬೊಮ್ಮನಹಟ್ಟಿ ಶಾಲೆ ಮಕ್ಕಳ ಸಂಖ್ಯೆ 36ಕ್ಕೆ ಕುಸಿದಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 22 ಹಳ್ಳಿಗಳು ಹಿರಿಯೂರು ತಾಲ್ಲೂಕಿನಲ್ಲಿ 2 ಮೊಳಕಾಲ್ಮುರು ತಾಲ್ಲೂಕಿನಲ್ಲಿ 12 ಹಳ್ಳಿಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 36 ಹಳ್ಳಿಗಳು ಆಂಧ್ರದೊಂದಿಗೆ ಗಡಿ ಹಂಚಿಕೊಂಡಿವೆ. ಈ ಭಾಗದಲ್ಲಿ 20ಕ್ಕೂ ಹೆಚ್ಚು ಶಾಲೆಗಳು ಶಿಕ್ಷಕರ ಕೊರತೆ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿವೆ. ಆಂಧ್ರಪ್ರದೇಶದ ಅಮರಾಪುರ ಮಂಡಲ್‌ ರೊಳ್ಳೆ ಅಗಳಿ ಗ್ರಾಮಗಳು ಹಿರಿಯೂರು ತಾಲ್ಲೂಕಿನ ಧರ್ಮಪುರ ಭಾಗದೊಂದಿಗೆ ಗಡಿ ಹಂಚಿಕೊಂಡಿವೆ. ಇಲ್ಲಿ ಒಟ್ಟು 10 ಕನ್ನಡ ಶಾಲೆಗಳಿದ್ದು ತೀರಾ ಶೋಚನೀಯ ಸ್ಥಿತಿಯಲ್ಲಿವೆ. ಶಿಕ್ಷಕರು ಹಾಗೂ ಕನ್ನಡ ಪಠ್ಯಪುಸ್ತಕಗಳ ಕೊರತೆಯಿಂದ ಈ ಶಾಲೆಗಳು ನರಳುತ್ತಿವೆ. ‘1956ಕ್ಕೂ ಮೊದಲೂ ಈ ಭಾಗ ಮೈಸೂರು ಸಂಸ್ಥಾನದ ಭಾಗವಾಗಿತ್ತು. ಇಲ್ಲಿ ಈಗಲೂ ಕನ್ನಡಿಗರ ಸಂಖ್ಯೆ ಹೆಚ್ಚಿದ್ದು ಕನ್ನಡ ಮಾಧ್ಯಮದ ಶಾಲೆಗಳಿಗೆ ಬೇಡಿಕೆ ಇದೆ. ಆದರೆ ಸರ್ಕಾರ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸದ ಕಾರಣ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ’ ಎಂದು ಧರ್ಮಪುರದ ಶಿಕ್ಷಕರೊಬ್ಬರು ತಿಳಿಸಿದರು.

----

ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲ್ಲೂಕಿನ ದೊಡ್ಡಿವಾರಪಲ್ಲಿ ಗ್ರಾಮದ ಶಾಲೆ ಕಟ್ಟಡ

ಶಾಲೆಗಳಿಗೆ ಗಡಿ ಪ್ರಾಧಿಕಾರದ ನೆರವು

‘ಕರ್ನಾಟಕ ಮತ್ತು ನೆರೆ ರಾಜ್ಯಗಳಲ್ಲಿ ಸಾಂಸ್ಕೃತಿಕ ಉತ್ಸವ ಆಯೋಜಿಸುತ್ತಿದ್ದೇವೆ. ಸಭೆ–ಸಮಾರಂಭಗಳ ಆಯೋಜನೆಗೆ ಅನುಕೂಲವಾಗಲೆಂದು ಸಾಂಸ್ಕೃತಿಕ ಭವನ ಕಟ್ಟುತ್ತಿದ್ದೇವೆ. ಜತ್ತ ತಾಲ್ಲೂಕಿನ ಕನ್ನಡ ಶಾಲೆಗಳಿಗೆ 2 ಸಾವಿರ ನಲಿ–ಕಲಿ ಪುಸ್ತಕ ಕೊಟ್ಟಿದ್ದೇವೆ. ರಾಜ್ಯದ ಗಡಿಭಾಗದ 62 ಶಾಲೆಗೆ ಸ್ಮಾರ್ಟ್‌ಬೋರ್ಡ್‌ ನೀಡಿದ್ದೇವೆ. ಈಗ ನಮಗೆ ಬರುತ್ತಿರುವ ವಾರ್ಷಿಕ ₹15 ಕೋಟಿ ಅನುದಾನದಲ್ಲಿ ವಿವಿಧ ಚಟುವಟಿಕೆ ಕೈಗೊಳ್ಳುತ್ತಿದ್ದೇವೆ’ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದರು. ‘ಪ್ರಾಧಿಕಾರಕ್ಕೆ ಪ್ರತಿವರ್ಷ ₹100 ಕೋಟಿ ಕೊಟ್ಟರೆ ತುಂಬಾ ಚಟುವಟಿಕೆ ಕೈಗೊಳ್ಳಬಹುದು. ಮುಖ್ಯವಾಗಿ ಗಡಿ ಸರ್ಕಾರಿ ಶಾಲೆಗಳಿಗೆ ಸೌಕರ್ಯ ಕಲ್ಪಿಸಬಹುದು. ಹಾಗಾಗಿ ಅಷ್ಟೊಂದು ಹಣ ಕೊಡುವಂತೆ ಮುಖ್ಯಮಂತ್ರಿ ಬಳಿ ಕೇಳಿದ್ದೇವೆ’ ಎಂದು ಅವರು ವಿವರಿಸಿದರು. ‘ಗಡಿ ಶಾಲೆಗಳಲ್ಲಿ ಗ್ರಂಥಾಲಯ ಇಲ್ಲ. ಇರುವ ಕಡೆ ಕನ್ನಡ ಪುಸ್ತಕವಿಲ್ಲ. ಈ ಕೊರತೆ ನೀಗಿಸುವ ಜತೆಗೆ ಪ್ರತಿ ಗ್ರಂಥಾಲಯಕ್ಕೆ ಕನ್ನಡ ದಿನಪತ್ರಿಕೆ ತಲುಪಿಸಲು ಯೋಜಿಸಿದ್ದೇವೆ. ಮಹಾರಾಷ್ಟ್ರದಲ್ಲಿನ ಸಂಘ–ಸಂಸ್ಥೆಗಳ ಶಾಲೆಗೆ ಅನುದಾನ ಕೊಟ್ಟು ಅವುಗಳ ಮೂಲಕ ತೋಟಪಟ್ಟಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳ ಮಕ್ಕಳಿಗೆ ತರಗತಿಗೆ ಹೋಗಲು ವಾಹನ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಿದ್ದೇವೆ’ ಎಂದರು.

ಸೋಮಣ್ಣ ಬೇವಿನಮರದ

ಗಡಿಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಅಧಿಕಾರಿಗಳನ್ನು ಗಡಿಭಾಗದ ಶಾಲೆಗಳಿಗೆ ಕಳುಹಿಸಿ ವಸ್ತುಸ್ಥಿತಿ ಪರಿಶೀಲಿಸಲು ಸೂಚಿಸುವೆ. ಶಿಕ್ಷಕರ ಕೊರತೆ ನೀಗಿಸಿ ಸೌಲಭ್ಯ ಕಲ್ಪಿಸುತ್ತೇವೆ.
-ಮಧು ಬಂಗಾರಪ್ಪ ಶಾಲಾ ಶಿಕ್ಷಣ ಸಚಿವ

ಮಧು ಬಂಗಾರಪ್ಪ

ಮಲಯಾಳಂ ಶಿಕ್ಷಕರನ್ನು ನೇಮಿಸಿದಾಗಲೆಲ್ಲ ಹೋರಾಟ!

ಕೇರಳದ ಕಾಸರಗೋಡಿನಲ್ಲೂ ಸರ್ಕಾರಿ ಕನ್ನಡ ಶಾಲೆಗಳು ಇವೆ. 2016ರಲ್ಲಿ ಪಿಎಸ್‌ಸಿ (ಪಬ್ಲಿಕ್ ಸರ್ವಿಸ್ ಕಮಿಷನ್‌) ಪರೀಕ್ಷೆಯಲ್ಲಿ  ಉತ್ತೀರ್ಣರಾದ ಮಲಯಾಳಂ ಶಿಕ್ಷಕರನ್ನು ಕನ್ನಡ ಶಾಲೆಗಳಿಗೆ ನೇಮಕ ಮಾಡಿದ ವಿಷಯ ವಿವಾದವಾಗಿತ್ತು. ನಂತರ ಕನ್ನಡ ಶಾಲೆಗಳಿಗೆ ನೇಮಕ ಆಗುವವರು 1ರಿಂದ 10ನೇ ತರಗತಿಯವರೆಗೆ ಕನ್ನಡ ಶಾಲೆಯಲ್ಲಿ ಓದಿರಬೇಕು ಎಂಬ ನಿಯಮ ಜಾರಿಗೆ ಬಂತು. ಆದರೆ 2016ರಲ್ಲಿ ಆಯ್ಕೆಯಾಗಿದ್ದ ಮಲಯಾಳಂ ಶಿಕ್ಷಕರ ಪೈಕಿ ಕೆಲವರನ್ನು ಈಗಲೂ ಕೆಲ ಶಾಲೆಗಳಿಗೆ ನೇಮಕ ಮಾಡಲಾಗುತ್ತಿದೆ.  ಕಾಸರಗೋಡು ಜಿಲ್ಲೆಯಲ್ಲಿ 184 ಕನ್ನಡ ಶಾಲೆ ಇವೆ. ಸೌಲಭ್ಯಗಳ ವಿಷಯದಲ್ಲಿ ಸಮಸ್ಯೆ ಇಲ್ಲ. ಒಂದೇ ವಿದ್ಯಾರ್ಥಿ ಇದ್ದರೂ ಶಿಕ್ಷಕರನ್ನು ಉಳಿಸಿಕೊಳ್ಳಲಾಗಿದೆ. ಆದರೆ ಪಾಲಕರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಲ್ಲ. ‘ಸರ್ಕಾರದ ಸೌಲಭ್ಯ ವಿಶೇಷವಾಗಿ ಉದ್ಯೋಗ ಗಳಿಸಲು ಆಡಳಿತ ಭಾಷೆ ಅಗತ್ಯವಿದೆ ಎಂಬುದು ಸ್ಥಳೀಯರ ಮನಸ್ಸಿನಲ್ಲಿದೆ. ಹೀಗಾಗಿ ಕನ್ನಡ ಶಾಲೆಗಳಿಗೆ ಕಳುಹಿಸಲು ಹೆಚ್ಚಿನವರು ಹಿಂಜರಿಯುತ್ತಾರೆ’ ಎಂದು ಶಿಕ್ಷಕರ ಸಂಘದ ಸದಸ್ಯರೊಬ್ಬರು ತಿಳಿಸಿದರು.

***

ಪೂರಕ ಮಾಹಿತಿ: ಬ್ಯೂರೊಗಳಿಂದ– ಮಲ್ಲಿಕಾರ್ಜುನ ನಾಲವಾರ, ಚಂದ್ರಕಾಂತ ಮಸಾನಿ, ಶಶಿಕಾಂತ ಎಸ್‌. ಶೆಂಬೆಳ್ಳಿ, ವಿಕ್ರಂ ಕಾಂತಿಕೆರೆ, ಬಸವರಾಜ್‌ ಸಂಪಳ್ಳಿ, ಎಂ.ಎನ್‌.ಯೋಗೇಶ್‌, ಆರ್‌.ಹರಿಶಂಕರ್‌, ಡಿ.ಎಂ. ಕುರ್ಕೆ ಪ್ರಶಾಂತ್‌, ಕೆ.ಓಂಕಾರ ಮೂರ್ತಿ, ಗಣಪತಿ ಹೆಗಡೆ, ಬಾಲಚಂದ್ರ ಎಚ್‌, ಬಿ.ಜಿ.ಪ್ರವೀಣಕುಮಾರ.

––––––––––––––––––––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.