ADVERTISEMENT

ಒಳನೋಟ | ಸಿರಿಧಾನ್ಯಕ್ಕೆ ಹೊಸ ಬ್ರಾಂಡ್ ಸೃಷ್ಟಿ!

ಆರ್.ಜಿತೇಂದ್ರ
Published 27 ನವೆಂಬರ್ 2021, 20:45 IST
Last Updated 27 ನವೆಂಬರ್ 2021, 20:45 IST
ಮಾರಾಟಕ್ಕೆ ಸಿದ್ಧವಾದ ಸಿರಿಧಾನ್ಯ
ಮಾರಾಟಕ್ಕೆ ಸಿದ್ಧವಾದ ಸಿರಿಧಾನ್ಯ   

ರಾಮನಗರ: ಸಿರಿಧಾನ್ಯಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ, ಈ ರೈತ ತಾವೇ ಬ್ರಾಂಡ್ ಸೃಷ್ಟಿಸಿ ಮಾರಾಟ ಆರಂಭಿಸಿದರು. ‘ರಾಮ್‌ಗೋಲ್ಡ್‌’ ಹೆಸರಿನ ಈ ಉತ್ಪನ್ನವು ಈಗ ದೇಶ–ವಿದೇಶಗಳಿಗೂ ತಲುಪುತ್ತಿದೆ.

ರಾಮನಗರ ತಾಲ್ಲೂಕಿನ ಬಿಳಗುಂಬದವರಾದ ಬಿ.ಸಿ. ವಾಸು, ಸಿರಿಧಾನ್ಯ ಕೃಷಿ ಜೊತೆಗೆ ಅದರ ಸಂಸ್ಕರಣೆ– ಮಾರಾಟದ ಮೂಲಕ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಕುಟುಂಬದವರ ಜೊತೆಗೆ ಸುತ್ತಲಿನ ನಾಲ್ಕಾರು ಮಂದಿಗೂ ಉದ್ಯೋಗದಾತರಾಗಿ ಹೊರಹೊಮ್ಮಿದ್ದಾರೆ.

ವಾಸು ಆರು ವರ್ಷದ ಹಿಂದೆ ತಮ್ಮ ತೋಟದಲ್ಲೇ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಿದ್ದು, ಇಲ್ಲಿನ ಉತ್ಪನ್ನಗಳನ್ನು ‘ರಾಮ್‌ಗೋಲ್ಡ್‌’ ಹೆಸರಿನ ಮೂಲಕ ಮಾರಾಟ ಮಾಡಲಾಗುತ್ತಿದೆ. ₹ 65 ಲಕ್ಷ ಮೂಲ ಬಂಡವಾಳದೊಂದಿಗೆ ಆರಂಭವಾದ ಈ ಘಟಕವು ಸುತ್ತಮುತ್ತಲಿನ ರೈತರ ಉತ್ಪನ್ನಗಳಿಗೂ ಮಾರುಕಟ್ಟೆ ಒದಗಿಸುತ್ತಿದೆ. ಧಾನ್ಯಗಳ ಮೌಲ್ಯವರ್ಧನೆಯಲ್ಲಿ ಅವರು ಸಿಎಫ್‌ಟಿಆರ್‌ಐ ಮೊದಲಾದ ಸಂಸ್ಥೆಗಳ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ADVERTISEMENT

ಲಾಕ್‌ಡೌನ್‌ಗೆ ಮುನ್ನ, ವಾಸು ತಿಂಗಳಿಗೆ 10 ಟನ್‌ನಷ್ಟು ಸಿರಿಧಾನ್ಯ ಮಾರಾಟ ಮಾಡುತ್ತಿದ್ದರು. ಕೋವಿಡ್ ಅವಧಿಯಲ್ಲಿ ಕುಸಿದ ಮಾರಾಟ ಇದೀಗ ಚೇತರಿಕೆ ಕಾಣುತ್ತಿರುವುದಾಗಿ ಅವರು ಹೇಳುತ್ತಾರೆ.

ರಾಮನಗರದ ಜಾನಪದ ಲೋಕದ ಮುಂಭಾಗ ‘ಎಚ್‌.ಡಿ. ದೇವೇಗೌಡ ಸಿರಿಧಾನ್ಯ ಮಳಿಗೆ’ ಹಾಗೂ ರಾಮನಗರ ಬಸ್ ನಿಲ್ದಾಣದ ಸಮೀಪ ಇವರದ್ದೇ ಆದ ಸಿರಿಧಾನ್ಯ ಮಾರಾಟ ಮಳಿಗೆಗಳಿವೆ. ಹಾಪ್‌ಕಾಮ್ಸ್‌ನಲ್ಲೂ ಈ ಉತ್ಪನ್ನಗಳು ಸಿಗುತ್ತವೆ. ಜೊತೆಗೆ, ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡಿದರೆ ಮನೆಗೇ ಕೊರಿಯರ್ ಮೂಲಕ ಕಳುಹಿಸುವ ವ್ಯವಸ್ಥೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.