ADVERTISEMENT

ಒಳನೋಟ | ಸಿರಿಧಾನ್ಯ: ‘ಎಥ್ನಿಕ್‌ ಕೆಫೆ’ಯಲ್ಲಿ ಉತ್ತಮ ವಹಿವಾಟು

ಸತೀಶ ಬೆಳ್ಳಕ್ಕಿ
Published 27 ನವೆಂಬರ್ 2021, 20:46 IST
Last Updated 27 ನವೆಂಬರ್ 2021, 20:46 IST
ಮಾರಾಟಕ್ಕೆ ಇರಿಸಿರುವ ಸಾವಯವ ಪದಾರ್ಥಗಳು ಹಾಗೂ ಸಿರಿಧಾನ್ಯಗಳು
ಮಾರಾಟಕ್ಕೆ ಇರಿಸಿರುವ ಸಾವಯವ ಪದಾರ್ಥಗಳು ಹಾಗೂ ಸಿರಿಧಾನ್ಯಗಳು   

ಗದಗ: ಹುಲಕೋಟಿಯ ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ಎಥ್ನಿಕ್‌ ಕೆಫೆ ಮತ್ತು ಸಾವಯವ ಆಹಾರ ಮಳಿಗೆ ಉತ್ತಮ ವಹಿವಾಟು ನಡೆಸುವುದರ ಜತೆಗೆ ಸಿರಿಧಾನ್ಯಗಳಿಂದ ತಯಾರಾದ ತಿನಿಸುಗಳ ರುಚಿಯನ್ನು ಜನರಿಂದ ಜನರಿಗೆ ದಾಟಿಸುವ ಕೆಲಸವನ್ನೂ ಮಾಡುತ್ತಿದೆ.

‘ಕೆಫೆಗೆ ಬಂದವರು ಸಿರಿಧಾನ್ಯದಿಂದ ತಯಾರಾದ ತಿಂಡಿ– ತಿನಿಸುಗಳು ಇಷ್ಟವಾದಲ್ಲಿ ಪದಾರ್ಥಗಳನ್ನೂ ಕೊಂಡೊಯ್ಯುತ್ತಾರೆ’ ಎನ್ನುತ್ತಾರೆ ಹೋಟೆಲ್‌ನ ವ್ಯವಸ್ಥಾಪಕ ಬಸವರಾಜ ಹಣ್ಣಿನಾಯ್ಕರ್‌.

ಎಥ್ನಿಕ್‌ ಕೆಫೆಗೆ ಆಗಾಗ ಭೇಟಿ ನೀಡುವ ನವಲಗುಂದದ ಬಸವನಗೌಡ ಪಾಟೀಲರು ಸಿರಿಧಾನ್ಯದ ಪಡ್ಡು ಸವಿಯುತ್ತಿದ್ದರು. ‘ಸಿರಿಧಾನ್ಯಗಳಿಂದ ತಯಾರಾದ ತಿನಿಸುಗಳ ಬೆಲೆ ಸ್ವಲ್ಪ ದುಬಾರಿ ಅನಿಸಿದರೂ ಆರೋಗ್ಯಕ್ಕೆ ಅತ್ಯುತ್ತಮ. ಕಲಬೆರಕೆ ವಸ್ತುಗಳಿಂದ ತಯಾರಾದ ತಿಂಡಿ ತಿನಿಸುಗಳು ಬಾಯಿಗೆ ರುಚಿ ನೀಡುತ್ತವೆ. ಆದರೆ ಸಾವಯವ, ಸಿರಿಧಾನ್ಯಗಳಿಂದ ತಯಾರಿಸಿದ ತಿನಿಸುಗಳನ್ನು ತಿಂದಾಗಲಷ್ಟೇ ನಿಜವಾದ ರುಚಿ ನಾಲಗಗೆ ತಿಳಿಯುತ್ತದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಸಾವಯವ, ಸಿರಿಧಾನ್ಯ ಕೆಫೆ ಚೆನ್ನಾಗಿ ನಡೆಯುತ್ತಿದೆ. ಸ್ಥಳೀಯರಿಗಿಂತಲೂ ಹೈವೆಯಲ್ಲಿ ಅಡ್ಡಾಡುವ ಗ್ರಾಹಕರೇ ನಮ್ಮ ಕೆಫೆಯ ಗ್ರಾಹಕರು. ಒಮ್ಮೆ ಇಲ್ಲಿಗೆ ಬಂದು ರುಚಿ ನೋಡಿದವರು ಮತ್ತೊಮ್ಮೆ ಖಂಡಿತ ಬರುತ್ತಾರೆ. ರೆಸ್ಟೊರೆಂಟ್‌ ಅತ್ಯುತ್ತಮ ವಹಿವಾಟು ನಡೆಸುತ್ತಿದೆ ಅಂತ ಹೇಳುವಂತಿಲ್ಲ. ಆದರೆ, ನಷ್ಟದಲ್ಲೇನೂ ನಡೆಯುತ್ತಿಲ್ಲ. ವಾರಾಂತ್ಯದಲ್ಲಿ ವಹಿವಾಟು ಜೋರಾಗಿರುತ್ತದೆ’ ಎನ್ನುತ್ತಾರೆ ಕೆವಿಕೆ ಕಾರ್ಯಕ್ರಮ ಸಂಯೋಜಕ ಡಾ. ಎಲ್‌.ಜಿ.ಹಿರೇಗೌಡರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.