ADVERTISEMENT

ಒಳನೋಟ: ಘನ ಉದ್ದೇಶದ ನಿರ್ಲಕ್ಷ್ಯ, ವಿಶೇಷ ವಿಶ್ವವಿದ್ಯಾಲಯಗಳ ಅವಸ್ಥೆ, ಅವ್ಯವಸ್ಥೆ

ಎಸ್.ರಶ್ಮಿ
Published 25 ಡಿಸೆಂಬರ್ 2021, 19:45 IST
Last Updated 25 ಡಿಸೆಂಬರ್ 2021, 19:45 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯ   

ಹುಬ್ಬಳ್ಳಿ: ರಾಜ್ಯದಲ್ಲಿ ಕನ್ನಡ ನಾಡು, ನುಡಿ, ಭಾಷೆ, ಸಂಗೀತ, ಜಾನಪದ, ಮಹಿಳಾ ಸಬಲೀಕರಣ, ಪಂಚಾಯತ್‌ರಾಜ್‌ ಮೂಲಕ ಸ್ವರಾಜ್ಯ ಮತ್ತು ಗ್ರಾಮರಾಜ್ಯದ ಸುಭಿಕ್ಷ, ಸುಶಿಕ್ಷಿತ ರಾಜ್ಯದ ಧ್ಯೇಯೋದ್ದೇಶಗಳಿಂದ ಐದು ವಿಶೇಷ ವಿಶ್ವವಿದ್ಯಾಲಯಗಳನ್ನು ಕಳೆದ 25 ವರ್ಷಗಳಲ್ಲಿ ಸ್ಥಾಪಿಸಲಾಗಿದೆ. ಈಗ ಮತ್ತೆ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಒತ್ತಿ ಹೇಳುತ್ತಿದ್ದಾರೆ.

ಸದ್ಯ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗಿಂತಲೂ ಈಗಿರುವ ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪದ ಅಗತ್ಯವಿದೆ. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ವಿಶ್ವವಿದ್ಯಾಲಯಗಳ ಸುಧಾರಣೆಗಾಗಿ ಮಾಡಿರುವ ಶಿಫಾರಸುಗಳನ್ನು ನೋಡಿದಾಗ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆಗೆ ಕಾಯಕಲ್ಪವಾಗಬೇಕಿರುವುದು ಸ್ಪಷ್ಟವಾಗುತ್ತಿದೆ.

ರಾಜ್ಯದಲ್ಲಿ ಭಾಷೆ, ಸಂಸ್ಕೃತಿಗಳ ರಕ್ಷಣೆಗೆಂದೇ ಈ ವಿಶೇಷ ವಿವಿಗಳನ್ನು ಸ್ಥಾಪಿಸಲಾಯಿತು. ಮೊದಲು ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ ಆಯಿತು. ನಂತರ, ಮಹಿಳಾ ವಿಶ್ವವಿದ್ಯಾಲಯ, ಸಂಗೀತ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ ಹಾಗೂ ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಯಿತು.

ADVERTISEMENT

‘ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು’ ಎಂಬ ಉದ್ದೇಶದೊಂದಿಗೆ 1991ರಲ್ಲಿ ಆರಂಭವಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಈಗಲೂ ಕಾಯಂ ಬೋಧಕರ, ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಸಾಧನೆ, ಸಂಶೋಧನೆ ಹಾಗೂ ಅಧ್ಯಯನಕ್ಕಿಂತಲೂ ಚರ್ಚೆಗೆ ಒಳಪಟ್ಟಿದ್ದು ಭ್ರಷ್ಟಾಚಾರದ ಕಾರಣಕ್ಕಾಗಿ. ನಿಯಮಗಳ ಉಲ್ಲಂಘನೆ, ನಿಯಮಗಳ ತಿರುಚುವಿಕೆ, ಮುಕ್ತ ಭ್ರಷ್ಟಾಚಾರದಿಂದಲೇ ಹಂಪಿಯ ಈ ವಿಶ್ವವಿದ್ಯಾಲಯ ಸುದ್ದಿಯಾಗುತ್ತಿದೆ.

ಜಾಗತಿಕ ತಂತ್ರಜ್ಞಾನವನ್ನು ಕನ್ನಡಿಗರಿಗೆ ತಲುಪಿಸುವ ಉದ್ದೇಶ ಈ ವಿಶ್ವವಿದ್ಯಾಲಯಕ್ಕೆ ಇತ್ತು. ದುರಂತವೆಂದರೆ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಈಗಲೂ ಅಪ್‌ಡೇಟ್‌ ಆಗಿಲ್ಲ.ಪಿಂಚಣಿ, ಬಡ್ತಿ, ಫೆಲೊಶಿಪ್‌, ಗುತ್ತಿಗೆ ಆಧಾರದಲ್ಲಿರುವವರಿಗೆ ನೀಡುವ ಸಂಬಳದಲ್ಲಿಯೂ ಪಾಲು ಕೇಳುವ ಸಂಸ್ಕೃತಿ ಬೆಳೆದಿದೆ.

2003ರಲ್ಲಿ ಆರಂಭವಾದ ಮಹಿಳಾ ವಿಶ್ವವಿದ್ಯಾಲಯಕ್ಕೆ 2017ರಲ್ಲಿ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಯಿತು. ಹದಿನೆಂಟರ ಹರೆಯದ ಈ ವಿಶ್ವವಿದ್ಯಾಲಯಕ್ಕೆ ಈಗಲೂ ಅಗತ್ಯವಿರುವ ಒಟ್ಟು ಸಿಬ್ಬಂದಿಯಲ್ಲಿ ಶೇ 33ರಷ್ಟು ಮಾತ್ರ ಸಿಬ್ಬಂದಿ ಲಭ್ಯವಿದ್ದಾರೆ. ಶೇ 50ರಷ್ಟು ಸಿಬ್ಬಂದಿಯಾದರೂ ಬೇಕು ಎನ್ನುವುದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಬೇಡಿಕೆ. ಉತ್ತರ ಕರ್ನಾಟಕ ವಿಭಾಗದ 13 ಜಿಲ್ಲೆಗಳ 156 ಕಾಲೇಜುಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಯ ಲ್ಲಿವೆ. ಮಹಿಳೆಯರ ಸ್ವಾವಲಂ ಬನೆ ಹಾಗೂ ಸಬಲೀಕರಣದ ಉದ್ದೇಶದಿಂದ ಆರಂಭವಾದ ಈ ವಿಶ್ವವಿದ್ಯಾಲಯ ಪೂರ್ಣಪ್ರಮಾಣ ದಲ್ಲಿ ಕಾರ್ಯನಿರ್ವಹಿಸಲು ಆಗುತ್ತಲೇ ಇಲ್ಲ.

ಸ್ವಂತ ಕಟ್ಟಡವೇ ಇಲ್ಲ: ಡಾ.ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವನ್ನು 2009ರಲ್ಲಿ ಸ್ಥಾಪಿಸಲಾಯಿತು.

ಈ ವರೆಗೂ ಸ್ವಂತ ಕಟ್ಟಡದ ಭಾಗ್ಯ ಈ ವಿಶ್ವವಿದ್ಯಾಲಯಕ್ಕಿಲ್ಲ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಬಡಾವಣೆಯಲ್ಲಿ ಈಚೆಗೆ ಏಳು ಎಕರೆ ನಿವೇಶನ ಮಂಜೂರಾಗಿದೆ.

ಅಭಿವೃದ್ಧಿ ಹಣದಿಂದ ನಿಯಮಬಾಹಿರವಾಗಿ ವೇತನ ನೀಡುವುದು, ಅನುಮೋದನೆ ದೊರೆತ ಹುದ್ದೆಗಳಿಗೆ ನೇಮಕಾತಿ ಆಗದಿರುವುದು, ಸದ್ಯ ಕೋವಿಡ್‌ ನೆಪದಲ್ಲಿ ಎಂಟು ಜನರನ್ನು ಕೆಲಸದಿಂದ ತೆಗೆದಿರುವುದು, ಕಳೆದೆಂಟು ತಿಂಗಳಿಂದ ವೇತನವನ್ನೂ ನೀಡದೇ ಇರುವುದು.. ಹೀಗೆ ಗೊಂದಲಗಳ ಗೂಡಾಗಿದೆ ಈ ವಿಶ್ವವಿದ್ಯಾಲಯ.

2011ರಲ್ಲಿ ಜೀವತಳೆದ ಜಾನಪದ ವಿಶ್ವವಿದ್ಯಾಲಯವು ಜನಪದ ಕ್ಷೇತ್ರಕ್ಕಾಗಿ ವಿಶೇಷವಾದ, ಪ್ರತ್ಯೇಕವಾದ ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಇದರ ಜೊತೆಗೇ, ಈವರೆಗೆ ಒಂದೇ ಒಂದು ಕಾಯಂ ಬೋಧಕರ ನೇಮಕಾತಿ ಇಲ್ಲದ ವಿಶ್ವವಿದ್ಯಾಲಯ ಎಂಬ ಅಪಖ್ಯಾತಿಯನ್ನೂ ಹೊಂದಿದೆ. ಈ ವಿಶ್ವವಿದ್ಯಾಲಯದಿಂದ ಆಚೆ ಬರುವವರಿಗೆ ಉದ್ಯೋಗಾವಕಾಶವಾಗಲೀ, ಉದ್ಯೋಗ ಸೃಷ್ಟಿಯಾಗಲಿ ಆಗಲಿಲ್ಲ. ಅಲಕ್ಷಿತ ಮತ್ತು ತಳಮಟ್ಟದ ಸಮುದಾಯದ ಅಧ್ಯಯನ, ಅವರಿಗೂ ಓದು ಜೊತೆಗೆ ಮುಖ್ಯವಾಹಿನಿಗೆ ತರುವ ಗುರುತರ ಉದ್ದೇಶ ಈ ವಿಶ್ವವಿದ್ಯಾಲಯಕ್ಕೆ ಇತ್ತು. ಕಾಲಕಾಲಕ್ಕೆ ಜಾನಪದ ಅಧ್ಯಯನ ವಿಷಯವನ್ನು ವಿಸ್ತಾರಗೊಳಿಸಿ, ಪಾರಂಪರಿಕ ಜ್ಞಾನಕ್ಕೆ ವಿವಿಯ ಚೌಕಟ್ಟಿನ ಶಿಸ್ತಿಗೆ ಒಳಪಡಿಸಬೇಕಿತ್ತು. ಸದ್ಯಕ್ಕೆ ಯಾವ ಕೆಲಸಗಳೂ ಆಗುತ್ತಿಲ್ಲ. ಓದುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ.

2016ರ ಜೂನ್‌ನಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂತು. ‌‘ಗ್ರಾಮೀಣ ಬೇರು ಜಾಗತಿಕ ಮೇರು’ ಎಂಬ ಧ್ಯೇಯವಾಕ್ಯದೊಂದಿಗೆವಿಶ್ವವಿದ್ಯಾಲಯವು ಕಾರ್ಯ ಆರಂಭಿಸಿತು. ಗಾಂಧೀಜಿ ಅವರ ಗ್ರಾಮರಾಜ್ಯ ಕಲ್ಪನೆಯೇ ಇದಕ್ಕೆ ಬುನಾದಿಯಾಗಿತ್ತು. 2017–18ರಿಂದ ಶೈಕ್ಷಣಿಕ ಚಟುವಟಿಕೆಗಳಿಲ್ಲಿ ಆರಂಭವಾದವು. ಸ್ವಉದ್ಯೋಗ, ಸುಸ್ಥಿರ ಬೆಳವಣಿಗೆಯ ಪರಿಕಲ್ಪನೆಯಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಮುಂದುವರಿಯುತ್ತಿದ್ದಾರೆ. ಕೊರತೆಗಳಿದ್ದಾಗಲೂ ತನ್ನ ಉದ್ದೇಶವನ್ನು ಸಾಧಿಸುವಲ್ಲಿ ಈ ವಿಶ್ವವಿದ್ಯಾಲಯವು ದಾಪುಗಾಲು ಹಾಕುತ್ತಿದೆ ಎಂಬುದೊಂದೇ ಕಾರ್ಮೋಡದಂಚಿನ ಬೆಳ್ಳಿಗೆರೆ. ಆದರೆ ಪ್ರಾಧ್ಯಾಪಕ ಹುದ್ದೆ 10, ಅಸೋಸಿಯೇಟ್‌ ಪ್ರೊಫೆಸರ್‌ 10, ಅಸಿಸ್ಟೆಂಟ್‌ ಪ್ರೊಫೆಸರ್‌ 20, ರಿಸರ್ಚ್‌ ಪ್ರೊಫೆಸರ್‌ 10 ಹುದ್ದೆಗಳು ಸೇರಿದಂತೆ ಒಟ್ಟು 50 ಕಾಯಂ ಹುದ್ದೆಗಳಿವೆ. ಆದರೆ, ಈವರೆಗೂ ಈ ಹುದ್ದೆಗಳ ಭರ್ತಿಯಾಗಿಲ್ಲ.

ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ, ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಇರುವುದು. ಆರಂಭ ಶೂರತ್ವ ಹಾಗೂ ಘೋಷಿಸುವಲ್ಲಿ ಇರುವಾಗಿನ ಉತ್ಸಾಹ ಅನುದಾನ ನೀಡುವಲ್ಲಿ ಇರುವುದಿಲ್ಲ. ವಿಶ್ವವಿದ್ಯಾಲಯವನ್ನು ಪೋಷಿಸಲಾಗದೇ ಅವು ಸಮಸ್ಯೆಗಳ ಗೂಡಾಗಿದೆ, ಭ್ರಷ್ಟಾಚಾರದ ಬಲೆಯಾಗಿದೆ. ಕಾಯಂ ಸಿಬ್ಬಂದಿ ಇಲ್ಲದೇ ಯುಜಿಸಿ ಅನುದಾನ ಸಿಗುವುದಿಲ್ಲ. ಅನುದಾನವಿಲ್ಲದೆ ಇವು ಬೆಳೆಯುವುದಿಲ್ಲ. ಇದು ಮುಗಿಯದ ವಿಷವರ್ತುಲವಾಗುತ್ತಿದೆ.

ಸಾರ್ವಜನಿಕ ಲೆಕ್ಕಪತ್ರಗಳ ವರದಿಯ ಪ್ರಮುಖ ಶಿಫಾರಸುಗಳು

* ನಿಯಮಬಾಹಿರವಾಗಿ ನೇಮಕವಾಗಿರುವ, ಪದೋನ್ನತಿ ಪಡೆದಿರುವ ಪ್ರಾಧ್ಯಾಪಕರು, ಸಹಾಯಕ ಗ್ರಂಥಪಾಲಕರು, ಇತರೆ ಬೋಧನಾ ಸಿಬ್ಬಂದಿ ಸೇವೆಯಲ್ಲಿದ್ದರೆ, ತಕ್ಷಣವೇ ವಜಾಗೊಳಿಸಬೇಕು. ಪಾವತಿಸಿರುವ ಹೆಚ್ಚುವರಿ ಮೊತ್ತವನ್ನು ವಿಶ್ವವಿದ್ಯಾಲಯಗಳು, ಕಾಲೇಜುಗಳು ವಸೂಲಿ ಮಾಡಬೇಕು.

* ಅರ್ಹತೆ ಇಲ್ಲದವರನ್ನು ಕುಲಪತಿಗಳನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯಗಳ ಗುಣಮಟ್ಟ ಕುಸಿಯುತ್ತಿದೆ. ಉನ್ನತ ಶಿಕ್ಷಣದ ಗುಣಮಟ್ಟ ಕಾಪಾಡಲು ಅಗತ್ಯವಿರುವ ಕ್ರಮ ತೆಗೆದುಕೊಳ್ಳಬೇಕು.

* ಯುಜಿಸಿ ಮತ್ತು ಎಐಸಿಟಿಇ ಶೈಕ್ಷಣಿಕ ಸಿಬ್ಬಂದಿ ನೇಮಕಾತಿ ಕುರಿತು ಕನಿಷ್ಠ ವಿದ್ಯಾರ್ಹತೆ, ಆಯ್ಕೆ ಸಮಿತಿಯ ರಚನೆ ಕುರಿತು ನೇಮಕಾತಿ ಸೂತ್ರಗಳನ್ನು ನಿಗದಿಪಡಿಸುತ್ತದೆ. ಸೂತ್ರಗಳನ್ನು ಉಲ್ಲಂಘಿಸಿ, ಹಲವಾರು ವಿಶ್ವವಿದ್ಯಾಲಯಗಳಲ್ಲಿ ನಿಯಮಬಾಹಿರ ನೇಮಕಾತಿ ಮಾಡಿರುವುದನ್ನು ಮಹಾಲೇಖಪಾಲರ ವರದಿ ಹೇಳಿದೆ. ಇಂತಹ ಲೋಪದೋಷಗಳನ್ನು ನಿಯಂತ್ರಿಸಲು ಮತ್ತು ಉತ್ತಮ ಗುಣಮಟ್ಟದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡಲು ಪಾರದರ್ಶಕವಾದ ಒಂದು ನೇಮಕಾತಿ ಆಯೋಗ ರಚನೆ ಅಥವಾ ಬದಲಿ ವ್ಯವಸ್ಥೆ ಕಾರ್ಯಗತಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.