ADVERTISEMENT

ಒಳನೋಟ | ಯುಕೆಪಿಗೆ ಇಚ್ಛಾಶಕ್ತಿ ಕೊರತೆ

ಕೇಂದ್ರ ಸರ್ಕಾರದ ಅಸಹಕಾರ l ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ

ಜಯಸಿಂಹ ಆರ್.
Published 13 ಡಿಸೆಂಬರ್ 2025, 23:53 IST
Last Updated 13 ಡಿಸೆಂಬರ್ 2025, 23:53 IST
<div class="paragraphs"><p>ಆಲಮಟ್ಟಿ ಜಲಾಶಯದ ನೋಟ</p></div>

ಆಲಮಟ್ಟಿ ಜಲಾಶಯದ ನೋಟ

   

ಬೆಂಗಳೂರು: ಕೃಷ್ಣಾ ಕೊಳ್ಳದಲ್ಲಿ ಸಂಗ್ರಹವಾಗುವ ಒಟ್ಟು ನೀರಿನಲ್ಲಿ, ಕರ್ನಾಟಕವು 173 ಟಿಎಂಸಿ ಅಡಿಗಳಷ್ಟು ನೀರನ್ನು ಬಳಸಿಕೊಳ್ಳಬಹುದು ಎಂದು ಕೃಷ್ಣಾ ಜಲವಿವಾದ ನ್ಯಾಯಮಂಡಳಿ–2 ತೀರ್ಪಿತ್ತು 15 ವರ್ಷಗಳೇ ಕಳೆದಿವೆ. ಆದರೆ ರಾಜ್ಯದಲ್ಲಿ ಆಡಳಿತ ನಡೆಸಿದ ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ಕಾರಣಕ್ಕೆ ಈ ಹೆಚ್ಚುವರಿ ನೀರಿನಲ್ಲಿ ಒಂದು ಹನಿಯೂ ರಾಜ್ಯದ ರೈತನ ಹೊಲಗಳಿಗೆ ಹರಿದಿಲ್ಲ.

ಯೋಜನೆ ಅನುಷ್ಠಾನಕ್ಕೆ ಅಗತ್ಯವಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಎದುರಾದ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರಗಳು ಎಡವಿದರೆ, ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಯೋಜನೆ ಸಂಬಂಧ ಗೆಜೆಟ್‌ ಅಧಿಸೂಚನೆ ಹೊರಡಿಸದೆ ಕೇಂದ್ರ ಸರ್ಕಾರವು ಕಡೆಗಣಿಸಿತು. ಸರ್ಕಾರಗಳ ನಿರ್ಲಿಪ್ತ ಭಾವನೆಯಿಂದ ರಾಜ್ಯದ ರೈತರು ನ್ಯಾಯವಂಚಿತರಾದರು. 5.95 ಲಕ್ಷ ಹೆಕ್ಟೇರ್‌ಗೆ ನೀರಾವರಿ ಒದಗಿಸಬಹುದಾಗಿದ್ದ ಈ ಯೋಜನೆ ವಿಳಂಬವಾದಷ್ಟೂ ರೈತರ ಬದುಕು ಹಸನಾಗುವುದು ಮುಂದೆ ಹೋಗುತ್ತಿದೆ.

ADVERTISEMENT

ಕೃಷ್ಣಾ ಜಲವಿವಾದ ಹೊಸತಲ್ಲ. 1956ರಲ್ಲೇ ಆಂಧ್ರಪ್ರದೇಶ ನೀರು ಹಂಚಿಕೆ ಸಂಬಂಧ ತಕರಾರು ದಾಖಲಿ ಸಿತ್ತು. ಸುಪ್ರೀಂಕೋರ್ಟ್‌ ಮತ್ತು ಆನಂತರ ರಚನೆಯಾದ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು ಕಾಲಕಾಲಕ್ಕೆ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ನೀರು ಹಂಚಿಕೆ ಮಾಡಿ ತೀರ್ಪಿತ್ತಿದೆ. ಆ ಪ್ರಕಾರವೇ ಕರ್ನಾಟಕವು ಕೃಷ್ಣಾ ಮೇಲ್ದಂಡೆ ಹಂತ–1ರ ಕಾಮಗಾರಿ ಮುಗಿಸಿದೆ, ಹಂತ–2ರ ಕಾಮಗಾರಿ ಮುಗಿಯುವ ವಿವಿಧ ಹಂತಗಳಲ್ಲಿ ಇದೆ. ಈ ಮಧ್ಯೆಯೇ ನ್ಯಾಯಮಂಡಳಿಯು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519.6 ಮೀಟರ್‌ಗಳಿಂದ 524.25 ಮೀಟರ್‌ಗಳಿಗೆ ಹೆಚ್ಚಿಸಲು ಹಾಗೂ ಕರ್ನಾಟಕಕ್ಕೆ ಕೃಷ್ಣಾ ಕೊಳ್ಳದ 173 ಟಿಎಂಸಿ ನೀರು ಹಂಚಿಕೆ ಮಾಡಿ 2010ರಲ್ಲೇ ಅಂತಿಮ ತೀರ್ಪು ನೀಡಿತ್ತು.

2013ರ ನವೆಂಬರ್‌ನಲ್ಲಿ ಪೂರಕ ವರದಿ ನೀಡಿತ್ತು.

ನ್ಯಾಯಮಂಡಳಿಯ ತೀರ್ಪು ಪ್ರಕಟವಾಗುತ್ತಿದ್ದಂತೆ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಗದಗ, ಕೊಪ್ಪಳ, ರಾಯಚೂರು ಭಾಗದ ಬಹುತೇಕ ರೈತರು, ತಮ್ಮ ಹೊಲಗಳಿಗೆ ನೀರು ಹರಿಯುವ ಮತ್ತು ತಾವು ಚಿನ್ನದ ಬೆಲೆಯ ಬೆಳೆ ಬೆಳಯುವ ಕನಸು ಕಂಡಿದ್ದರು. ರಾಜ್ಯ ಸರ್ಕಾರವು ಭೂಸ್ವಾಧೀನಕ್ಕೆ ತಯಾರಿ ನಡೆಸುತ್ತಿದ್ದಂತೆ ತಕರಾರುಗಳು ಆರಂಭವಾಗಿದ್ದವು.

2013ರಲ್ಲಿ ಅಂದಾಜಿಸಿದ್ದಂತೆ, ಅಣೆಕಟ್ಟೆಯ ಎತ್ತರವನ್ನು 524.25 ಮೀಟರ್‌ಗಳಿಗೆ ಹೆಚ್ಚಿಸಿದರೆ 75,000 ಎಕರೆಯಷ್ಟು ಜಮೀನು ಮುಳುಗಡೆಯಾಗಲಿದೆ. ಕಾಲುವೆ ನಿರ್ಮಾಣ ಮತ್ತಿತರ ಕಾಮಗಾರಿಯೂ ಒಳಗೊಂಡು ಒಟ್ಟು 1.33 ಲಕ್ಷ ಎಕರೆ ಪ್ರದೇಶವನ್ನು ಭೂಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯದಲ್ಲೇ ಆವರೆಗಿನ ಅತ್ಯಂತ ದೊಡ್ಡ ನೀರಾವರಿ ಯೋಜನೆ ಅದಾಗಿತ್ತು. ಅಂತೆಯೇ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಮತ್ತು ಹೆಚ್ಚಿನ ಪರಿಹಾರ ಕೋರಿ ವಿವಿಧ ನ್ಯಾಯಾಲಯಗಳಲ್ಲಿ 28,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದವು. ಬೃಹತ್ ಯೋಜನೆ ಎಂಬ ಹೆಗ್ಗಳಿಕೆ ಜತೆಗೇ ಅತಿಹೆಚ್ಚು ಪ್ರಕರಣಗಳನ್ನು ಎದುರಿಸಿದ ಯೋಜನೆ ಎಂಬ ಅಪಖ್ಯಾತಿಗೂ ಕೃಷ್ಣಾ ಮೇಲ್ದಂಡೆ –3ನೇ ಹಂತವು ಗುರಿಯಾಗಬೇಕಾಯಿತು.

ಹತ್ತಾರು ಸಾವಿರ ಪ್ರಕರಣಗಳು ಇದ್ದ ಕಾರಣಕ್ಕೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಯಿತು. ‘ಈ ಸಮಸ್ಯೆಯ ಗಂಭೀರತೆಯನ್ನು ಅರಿಯದ ಸರ್ಕಾರಗಳು, ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡುತ್ತಾ ಬಂದವು. 2013ರಿಂದ ಈವರೆಗೆ ಆಡಳಿತ ನಡೆಸಿದ ಎಲ್ಲ ಪಕ್ಷಗಳ ಸರ್ಕಾರಗಳೂ ಯೋಜನೆಯನ್ನು ಕಡೆಗಣಿಸಿಯೇ ಇದ್ದವು. ಈ ಕಾರಣದಿಂದಲೇ 100 ರೂಪಾಯಿ ಪರಿಹಾರ ಕೊಡಬೇಕಾಗಿದ್ದೆಡೆ, 1,000 ರೂಪಾಯಿ ಕೊಡಬೇಕಾದ ಸ್ಥಿತಿ ಬಂದಿದೆ’ ಎಂಬುದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಟೀಕೆ.

ಯೋಜನೆಯ ರೂಪುರೇಷೆ ಸಿದ್ಧಪಡಿಸಿದ್ದಾಗ ₹17,600 ಕೋಟಿ ವೆಚ್ಚವನ್ನು ಅಂದಾಜು ಮಾಡಲಾಗಿತ್ತು. ಪ್ರಕರಣಗಳು ವಿಳಂಬವಾದಂತೆ ಒಮ್ಮೆ ವೆಚ್ಚವನ್ನು ₹24,000 ಕೋಟಿಗೆ, ಇನ್ನೊಮ್ಮೆ ₹51,148 ಕೋಟಿಗೆ, ಈಗ ಮತ್ತೆ ₹1 ಲಕ್ಷ ಕೋಟಿಗೆ ಪರಿಷ್ಕರಿಸಲಾಗಿದೆ. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೇ ಸುಮಾರು ₹80,000 ಕೋಟಿ ಬೇಕಾಗುತ್ತದೆ ಎಂಬುದು ಸರ್ಕಾರದ ಅಂದಾಜು. ಒಂದು ಹಂತದಲ್ಲಿ ಭೂಸ್ವಾಧೀನದ ವೆಚ್ಚವೇ ₹2.10 ಲಕ್ಷ ಕೋಟಿಗೆ ಮುಟ್ಟುವಂತಹ ಸ್ಥಿತಿ ಎದುರಾಗಿತ್ತು. ‘ಬಾಗಲಕೋಟೆಯ ಒಂದು ಜಮೀನಿಗೆ ಪ್ರತಿ ಎಕರೆಗೆ ₹23 ಕೋಟಿ, ವಿಜಯಪುರದಲ್ಲಿ ಒಂದು ಎಕರೆಗೆ ₹11.92 ಕೋಟಿ ಪರಿಹಾರ ನೀಡುವಂತೆ ವಿವಿಧ ನ್ಯಾಯಾಲಯಗಳು ಆದೇಶ ನೀಡಿದ್ದವು. ಆ ಪ್ರಕಾರ ಒಟ್ಟು 75,000 ಎಕರೆ ಭೂಸ್ವಾಧೀನಕ್ಕೆ ₹2.10 ಲಕ್ಷ ಕೋಟಿ ಬೇಕಾಗುತ್ತದೆ’ ಎಂದು ನೀರಾವರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಗೆ ಉತ್ತರ ನೀಡಿದ್ದರು.

ಭೂಸ್ವಾಧೀನದ ವೆಚ್ಚವೇ ₹2 ಲಕ್ಷ ಕೋಟಿ ದಾಟುತ್ತದೆ ಎಂಬುದು ಗೊತ್ತಾದಾಗ, ಇನ್ನು ಈ ಯೋಜನೆ ಸಂಪೂರ್ಣವಾಗಿ ನನೆಗುದಿಗೆ ಬಿದ್ದಹಾಗೆ ಎಂಬುದು ಉತ್ತರ ಕರ್ನಾಟಕದ ರೈತರು ಕೈಚೆಲ್ಲಿದ್ದರು. ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ಕೆಲ ಶಾಸಕರು, ಈ ಯೋಜನೆ ಅನುಷ್ಠಾನ ಸಾಧ್ಯವೇ ಇಲ್ಲ ಎಂಬಂತಹ ಹೇಳಿಕೆಗಳನ್ನು ನೀಡಿದರು. ಯೋಜನೆ ಕೈತಪ್ಪುವ ಅಪಾಯವನ್ನು ಅರಿತ ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿತು.

ಭೂಮಿ ಕಳೆದುಕೊಳ್ಳಲಿರುವ ರೈತರ ಜಮೀನಿಗೆ ಏಕರೀತಿಯ ಪರಿಹಾರ ನಿಗದಿ ಮಾಡಲು ಮತ್ತು ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ಹಿಂಪಡೆಯುವಂತೆ ರೈತರ ಮನವೊಲಿಸಲು ಮುಂದಾಯಿತು. ರೈತ ಮುಖಂಡರ ಜತೆಗೆ, ಸಂಬಂಧಿತ ಜಿಲ್ಲೆಯ ಜನಪ್ರತಿನಿಧಿಗಳ ಜತೆಗೆ ಸಾಲು–ಸಾಲು ಸಭೆ ನಡೆಸಿತು. ಕಡೆಗೆ ಪ್ರತಿ ಎಕರೆ ಖುಷ್ಕಿ ಜಮೀನಿಗೆ ₹25 ಲಕ್ಷ ಮತ್ತು ಪ್ರತಿ ಎಕರೆ ನೀರಾವರಿ ಜಮೀನಿಗೆ ₹30 ಲಕ್ಷ ನಿಗದಿ ಮಾಡುವುದಾಗಿ ಘೋಷಿಸಿತು. ಈ ಮೊತ್ತದ ಪರಿಹಾರ‌ಕ್ಕೆ ರೈತರಿಂದ ಮತ್ತೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಮತ್ತಷ್ಟು ಸುತ್ತಿನ ಸಭೆ ನಡೆಸಿದ ಸರ್ಕಾರವು ಪ್ರತಿ ಎಕರೆ ಖುಷ್ಕಿ ಜಮೀನಿಗೆ ₹30 ಲಕ್ಷ ಮತ್ತು ಪ್ರತಿ ಎಕರೆ ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರವನ್ನು ನಿಗದಿಪಡಿಸಿತು.

ಇಷ್ಷಕ್ಕೇ, ಈ ಯೋಜನೆಯ ಕಾಮಗಾರಿ ಆರಂಭವಾಗುತ್ತದೆ ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ ಇನ್ನು 13,900ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಾಲಯದಲ್ಲಿ ಇವೆ. ರೈತರು ಆ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು. ಆನಂತರವೇ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗುತ್ತದೆ. ಆದರೆ ಈ ಕೆಲಸ ಅಷ್ಟು ಸುಲಭದಂತೆ ಕಾಣುತ್ತಿಲ್ಲ. ಭೂಸ್ವಾಧೀನ ವಿಳಂಬವಾದರೆ, ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ ಎಂಬ ಅಪಾಯವೂ ಇದ್ದೇ ಇದೆ. ಒಟ್ಟಿನಲ್ಲಿ ಭೂಸ್ವಾಧೀನ ವಿರೋಧಿಸಿ ಮತ್ತು ಹೆಚ್ಚಿನ ಪರಿಹಾರ ಕೋರಿ ದಾಖಲಿಸಲಾದ ಪ್ರಕರಣಗಳ ನಿರ್ವಹಣೆಯಲ್ಲಿ ಎಲ್ಲ ಸರ್ಕಾರಗಳು ಹಾಗೂ ಸಂಬಂಧಿತ ಅಧಿಕಾರಿಗಳು ಎಡವಿದ ಕಾರಣಕ್ಕೆ ₹17,600 ಕೋಟಿ ವೆಚ್ಚದ ಯೋಜನೆ, ಈಗ ₹1 ಲಕ್ಷ ಕೋಟಿಯಷ್ಟಾಗಿದೆ.

ನಾರಾಯಣಪುರದ ಬಸವಸಾಗರ ಜಲಾಶಯ

ಕೇಂದ್ರದ ಜಾಣ ಕಡೆಗಣನೆ

ಆರಂಭದಿಂದಲೂ ಭೂಸ್ವಾಧೀನ ಮತ್ತು ಸಂಬಂಧಿತ ಪ್ರಕರಣಗಳೇ ಈ ಯೋಜನೆಯ ಬಹುದೊಡ್ಡ ವೈರಿ ಎಂಬಂತೆ ಬಿಂಬಿಸಲಾಯಿತು. ವಾಸ್ತವದಲ್ಲಿ ಯೋಜನೆ ವಿಳಂಬವಾಗುವಲ್ಲಿ ಕೇಂದ್ರ ಸರ್ಕಾರದ ಪಾಲು ಬಹಳ ದೊಡ್ಡದಿದೆ. ನ್ಯಾಯಮಂಡಳಿಯು 2010ರಲ್ಲಿ ತೀರ್ಪು ನೀಡಿದ ಮತ್ತು ಅಣೆಕಟ್ಟೆ ಎತ್ತರವನ್ನು 1956ರ ಮೂಲ ಯೋಜನೆಯಲ್ಲಿ ಇದ್ದಂತೆ 524.25 ಮೀಟರ್‌ಗೆ ಹೆಚ್ಚಿಸಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದ ನಂತರ ಕೇಂದ್ರ ಸರ್ಕಾರವು ಈ ಸಂಬಂಧ ಅಧಿಸೂಚನೆ ಹೊರಡಿಸಬೇಕಿತ್ತು. ಆದರೆ ಈವರೆಗೆ ಅಂತಹ ಅಧಿಸೂಚನೆ ಹೊರಡಿಸಿಲ್ಲ.

ಕೃಷ್ಣಾ ಜಲವಿವಾದ ನ್ಯಾಯಮಂಡಳಿ–2, ‘ಈ ತೀರ್ಪಿನ ಅನುಷ್ಠಾನಕ್ಕಾಗಿ ಕೃಷ್ಣಾ ಜಲ ತೀರ್ಪು ಅನುಷ್ಠಾನ ಮಂಡಳಿ ರಚಿಸಬೇಕು’ ಎಂದು ತೀರ್ಪಿನಲ್ಲಿ ಆದೇಶಿಸಿತ್ತು. ಆದರೆ ಈವರೆಗೆ ಅನುಷ್ಠಾನ ಮಂಡಳಿ ರಚನೆಯಾಗಿಲ್ಲ.

2010ರ ತೀರ್ಪಿನ ವಿರುದ್ಧ ಆಂಧ್ರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

‘ಮುಂದಿನ ಆದೇಶದವರೆಗೆ, ನ್ಯಾಯಮಂಡಳಿಯು ತೆಗೆದುಕೊಳ್ಳಬಹುದಾದ ಯಾವುದೇ ನಿರ್ಧಾರಗಳಿಗೆ ಅಧಿಸೂಚನೆ ಹೊರಡಿಸಬಾರದು’ ಎಂದು ತಡೆಯಾಜ್ಞೆ ನೀಡಿದೆ. ಇದು ಪೂರ್ವಾನ್ವಯ ಆಗದೇ ಇದ್ದರೂ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಧಿಸೂಚನೆ ಹೊರಡಿಸದೇ ಇರಲು ಈ ತಡೆಯಾಜ್ಞೆಯನ್ನು ಮುಂದು ಮಾಡಿದ್ದಿದೆ. ಈ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸಿ ಎಂದು ರಾಜ್ಯ ಸರ್ಕಾರವು ಕೋರಿದ್ದರೂ, 14 ವರ್ಷದಲ್ಲಿ ಕೇಂದ್ರ ಸರ್ಕಾರವು ಅಂತಹದ್ದೊಂದು ಕ್ರಮ ತೆಗೆದುಕೊಂಡಿಲ್ಲ.

ಕೃಷ್ಣಾ ನದಿಯ ನೀರನ್ನು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಅವಲಂಬಿಸಿರುವ ಕಾರಣಕ್ಕೆ ನದಿಯ ಪಾತ್ರದಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸುವುದು ಕಡ್ಡಾಯ. ಬೃಹತ್ ಯೋಜನೆ ಆಗಿರುವ ಕಾರಣಕ್ಕೆ ಇದನ್ನು ‘ರಾಷ್ಟ್ರೀಯ ಯೋಜನೆ’ ಎಂದೂ ಘೋಷಿಸಬೇಕಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆ–3ನೇ ಹಂತ ಅನುಷ್ಠಾನಕ್ಕೆ ಬಂದರೆ ಮಹಾರಾಷ್ಟ್ರಕ್ಕೂ ಹೆಚ್ಚು ನೀರು ಲಭ್ಯವಾಗುತ್ತದೆ ಮತ್ತು ಆಂಧ್ರಪ್ರದೇಶಕ್ಕೂ ಜಲಾಶಯದಿಂದ ಹೆಚ್ಚು ನೀರು ಬಿಡಬೇಕಾಗುತ್ತದೆ. ಆದರೆ ಪ್ರಮುಖ ಕಾಮಗಾರಿಗಳೆಲ್ಲವೂ ಕರ್ನಾಟಕ ನೆಲದಲ್ಲಿ ನಡೆಯುತ್ತದೆ ಹಾಗೂ ಪೂರ್ಣ ವೆಚ್ಚವನ್ನು ಕರ್ನಾಟಕವೇ ಭರಿಸಬೇಕಾಗುತ್ತದೆ. ಇದೊಂದು ರೀತಿಯಲ್ಲಿ ಕರ್ನಾಟಕವು ಹೊರೆ ಹೊತ್ತುಕೊಂಡು ಮಹಾರಾಷ್ಟ್ರಕ್ಕೆ ಮತ್ತು ಆಂಧ್ರಪ್ರದೇಶಕ್ಕೆ ನೀರಿನ ಅನುಕೂಲ ಮಾಡಿಕೊಡುವ ಕೆಲಸವಾಗುತ್ತದೆ.

ಕರ್ನಾಟಕಕ್ಕೆ ಆಗುವ ಈ ಹೆಚ್ಚಿನ ಹೊರೆಯನ್ನು ತಪ್ಪಿಸಲು ಕೇಂದ್ರ ಸರ್ಕಾರವೂ ಒಂದಷ್ಟು ಹಣ ಬಿಡುಗಡೆ ಮಾಡಬೇಕಾಗುತ್ತದೆ. ಕೇಂದ್ರವು ಹಾಗೆ ಹಣ ಬಿಡುಗಡೆ ಮಾಡಲು ಅಧಿಸೂಚನೆ ಹೊರಡಿಸಿದ್ದರಷ್ಟೇ ಸಾಧ್ಯ.

‘ಜಲ ವ್ಯವಹಾರಗಳ ಸಂಸದೀಯ ಸಮಿತಿಯು 2018ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಪ್ರಕಾರ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿದರೆ, ಕೇಂದ್ರವು ಅಂದಾಜು ₹29,000 ಕೋಟಿಯನ್ನು ರಾಜ್ಯಕ್ಕೆ ನೀಡಬೇಕಾಗುತ್ತದೆ. ₹19,000 ಕೋಟಿಯಷ್ಟು ನೇರವಾಗಿ ಯೋಜನೆಗೆ ನೀಡಿದರೆ, ಕೇಂದ್ರ ಪ್ರಾಯೋಜಿತ ವಿವಿಧ ನೀರಾವರಿ ಯೋಜನೆಗಳ ಅಡಿಯಲ್ಲಿ ಸುಮಾರು ₹10,000 ಕೋಟಿಯನ್ನು ಕರ್ನಾಟಕಕ್ಕೆ ಒದಗಿಸಬೇಕಾಗುತ್ತದೆ. ಇದು ರಾಜ್ಯ ಸರ್ಕಾರದ ವೆಚ್ಚವನ್ನು ಶೇ 30ರಷ್ಟು ಕಡಿಮೆ ಮಾಡುವ ಸಂಭವವಿತ್ತು. ಆದರೆ ಈ ವರದಿಯನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಸಮಿತಿ ಮತ್ತೊಮ್ಮೆ ಅಂತಹ ವರದಿ ನೀಡಲಿಲ್ಲ. ಯೋಜನೆ ಕುರಿತಾಗಿ ಅಧಿಸೂಚನೆ ಹೊರಡಿಸುವ ಬಗ್ಗೆ ಕೇಂದ್ರ ಸರ್ಕಾರ ಯಾವ ತರಹದ ಕ್ರಮವನ್ನೂ ತೆಗೆದುಕೊಂಡಿಲ್ಲ’ ಎಂಬುದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಯೊಬ್ಬರ ಆರೋಪ.

2010ರಿಂದ 2023ರವರೆಗೆ ರಾಜ್ಯದಲ್ಲಿ ಐದು ಸರ್ಕಾರಗಳು ಆಡಳಿತ ನಡೆಸಿದ್ದು, ಕೇಂದ್ರದಿಂದ ಅಧಿಸೂಚನೆ ಪಡೆಯುವಂತೆ ಮಾಡುವಲ್ಲಿ ವಿಫಲವಾಗಿವೆ. ಈಗಿನ ಕಾಂಗ್ರೆಸ್‌ ಸರ್ಕಾರವು, ‘ಅಧಿಸೂಚನೆ ಹೊರಡಿಸಿ’ ಎಂದು ಕೇಂದ್ರಕ್ಕೆ ಹಲವು ಬಾರಿ ಪತ್ರ ಬರೆದಿದೆ. ಮುಖ್ಯಮಂತ್ರಿ, ನೀರಾವರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ರಾಜ್ಯ ಸರ್ಕಾರವು ಹಲವು ಬಾರಿ ಹೇಳಿದೆ. ಆದರೆ, ಅದೂ ಸಾಧ್ಯವಾಗಿಲ್ಲ.

ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಸಂಸದರು ಈವರೆಗೆ ಈ ವಿಷಯದ ಬಗ್ಗೆ
ಪ್ರಸ್ತಾಪಿಸಿಲ್ಲ.

ಯೋಜನೆಗೆ ಅಗತ್ಯವಿರುವ ಜಮೀನು

  • ಒಟ್ಟು ಜಮೀನು– 1,33,867 ಎಕರೆ

  • ಮುಳುಗಡೆ ಆಗುವ ಜಮೀನು– 75,563 ಎಕರೆ

  • ಕಾಲುವೆ ನಿರ್ಮಾಣಕ್ಕೆ ಜಮೀನು –51,837 ಎಕರೆ

  • ರೈತರ ಪುನರ್‌ವಸತಿ ಮತ್ತು ಪುನರ್‌ವ್ಯವಸ್ಥೆಗೆ– 6469 ಎಕರೆ

  • ಮುಳುಗಡೆ ಆಗುವ ಗ್ರಾಮಗಳು, ಪಟ್ಟಣ ವಾರ್ಡ್‌ಗಳು– 20

ಕೇಂದ್ರದ ರಾಜಕೀಯ: ಡಿಕೆಶಿ

ಕೇಂದ್ರ ಸರ್ಕಾರವು ಈ ಯೋಜನೆಗೆ ಸಂಬಂಧಿಸಿದಂತೆ ರಾಜಕೀಯ ಮಾಡುತ್ತಿದೆ. ಅಧಿಸೂಚನೆ ಹೊರಡಿಸುವುದು ಇರಲಿ, 15 ವರ್ಷದಲ್ಲಿ ಈ ಬಗ್ಗೆ ಚರ್ಚೆಯನ್ನೇ ಎತ್ತಿಕೊಂಡಿಲ್ಲ. ರಾಜ್ಯದಿಂದ ಏನಾದರೂ ಸಮಸ್ಯೆ ಆಗಿದೆಯೇ ಎಂಬ ತಮ್ಮ ಪ್ರಶ್ನೆಗೆ ಉತ್ತರಿಸಿಯೂ ಇಲ್ಲ. ಆಂಧ್ರಪ್ರದೇಶದ ಅರ್ಜಿ ಆಧಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತಡೆಯನ್ನು ಮುಂದು ಮಾಡುತ್ತಿದೆ. ಅದನ್ನು ತೆರವು ಮಾಡಿಸುವ ಯತ್ನವನ್ನೂ ಮಾಡಿಲ್ಲ ಎಂಬುದನ್ನು ಡಿ.ಕೆ.ಶಿವಕುಮಾರ್ ತಮ್ಮ ‘ನೀರಿನ ಹೆಜ್ಜೆ’ ಪುಸ್ತಕದಲ್ಲಿ ಹೇಳಿದ್ದಾರೆ.

‘ಲೋಕಸಭೆಯಲ್ಲಿ ರಾಜ್ಯವನ್ನು 28 ಸಂಸದರು ಪ್ರತಿನಿಧಿಸುತ್ತಿದ್ದು, ಸಂಸತ್ ಅಧಿವೇಶನದ ವೇಳೆ ಒಮ್ಮೆಯೂ ಈ ಯೋಜನೆಯ ಬಗ್ಗೆ ಚರ್ಚೆ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದ್ದೇ 19 ಸಂಸದರು ಇದ್ದಾರೆ. ಸರ್ವಪಕ್ಷ ನಿಯೋಗಕ್ಕೆ ಕರೆದರೆ, ಒಬ್ಬರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಎದುರು ಹೋಗಿ, ‘ನಮ್ಮ ರಾಜ್ಯದ ಪಾಲಿನ ನೀರನ್ನು ನಮಗೆ ಕೊಡಿ’ ಎಂದು ಕೇಳುವ ಧೈರ್ಯ ಬಿಜೆಪಿ ಮತ್ತು ಜೆಡಿಎಸ್‌ ಸಂಸದರಿಗೆ ಇಲ್ಲ. ಆದರೆ ರಾಜಕೀಯ ಮಾತ್ರ ಮಾತನಾಡುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಲವು ಬಾರಿ ನೇರಾನೇರ ಆರೋಪ ಮಾಡಿದ್ದಾರೆ.

ಸರ್ಕಾರದ ಬಳಿ ಹಣವಿಲ್ಲ: ಅಶೋಕ

ಉತ್ತರ ಕರ್ನಾಟಕಕ್ಕೆ ಸರ್ಕಾರ ಘೋಷಿಸಿರುವ ಯಾವ ಯೋಜನೆಗಳೂ ಸರಿಯಾದ ಸಮಯಕ್ಕೆ ಆರಂಭವಾಗಿಲ್ಲ. ಎಲ್ಲವೂ ವಿಳಂಬವಾಗಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯೂ ಇದಕ್ಕೆ ಹೊರತಲ್ಲ. ಯೋಜನೆ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ಅದು ಇನ್ನಷ್ಟು ವಿಳಂಬವಾಗುತ್ತದೆ ಎಂಬುದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರ ಆರೋಪ.

ಈ ಯೋಜನೆಗೆ 75,000 ಎಕರೆಗಳಷ್ಟು ಜಮೀನು ಅಗತ್ಯವಿದ್ದು, ಒಂದೇ ಬಾರಿಗೆ ಅವನ್ನು ಭೂಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಹೇಳಿದ್ದರು. ಆದರೆ ಈಗ ಮತ್ತೊಂದು ಚಳಿಗಾಲದ ಅಧಿವೇಶನ ಬಂದಿದೆ. ಯೋಜನೆ ಯಾವ ಹಂತಕ್ಕೆ ಬಂದಿದೆ ಎಂಬುದು ಅವರ ಪ್ರಶ್ನೆ.

ಯೋಜನೆಗೆ ಹಣ ಹೊಂದಿಸಿ ಎಂದು ಆರ್ಥಿಕ ಇಲಾಖೆಗೆ ಸೂಚಿಸಿದರೆ, ‘ಉಚಿತ ಯೋಜನೆಗಳನ್ನು ನಿಲ್ಲಿಸಿ. ಆಗ ಈ ಯೋಜನೆಗೆ ಹಣ ಹೊಂದಿಸುತ್ತೇವೆ’ ಎಂದು ಹಿಂಬರಹ ಬಂದಿದೆಯಂತೆ. ಇನ್ನೆಲ್ಲಿ ಈ ಯೋಜನೆ ಜಾರಿಗೆ ತರುತ್ತಾರೆ ಎಂಬುದು ಅಶೋಕ ಅವರ ಪ್ರತಿಪಾದನೆ.

ಯುಕೆಪಿ ಯೋಜನೆಗೆ ಸಂಬಂಧಿಸಿದ ಪ್ರತಿಕ್ರಿಯೆಗಳು

‘ಬದ್ಧತೆಯೇ ಕೊರತೆ’

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವು ವಿಳಂಬವಾಗುವಲ್ಲಿ ರಾಜಕೀಯ ಪಕ್ಷಗಳಲ್ಲಿ ಇಚ್ಛಾಶಕ್ತಿ ಇಲ್ಲದಿರುವುದೇ ಕಾರಣ. ಕೃಷ್ಣಾ ನೀತು ಹಂಚಿಕೆ ಐತೀರ್ಪು ಬಂದ ನಂತರ ಬಿಜೆಪಿ ಕಾಂಗ್ರೆಸ್‌ ಜೆಡಿಎಸ್‌ ರಾಜ್ಯದಲ್ಲಿ ಆಡಳಿತ ನಡೆಸಿವೆ. ಕೇಂದ್ರದಲ್ಲೂ ಈ ಎಲ್ಲ ಪಕ್ಷಗಳು ಸರ್ಕಾರ ನಡೆಸಿವೆ ಇಲ್ಲವೇ ಸರ್ಕಾರದ ಭಾಗವಾಗಿವೆ. ಹೀಗಿದ್ದೂ ಯೋಜನೆ ಅನುಷ್ಠಾನಕ್ಕೆ ಅಧಿಸೂಚನೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎನ್ನುವಾದರೆ ಅವರಿಗೆ ಇಚ್ಛಾಶಕ್ತಿ ಇಲ್ಲ ಎಂದೇ ಹೇಳಬೇಕಾಗುತ್ತದೆ. ನೀರಾವರಿ ವಿಚಾರದಲ್ಲಿ ನಾವು ತಮಿಳುನಾಡಿನವರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಕಾವೇರಿ ವಿಚಾರ ಬಂದಾಗ ಅಲ್ಲಿನ ಎಲ್ಲ ರಜಕಾರಣಿಗಳು ಪಕ್ಷಭೇದ ಮರೆತು ಒಂದಾಗುತ್ತಾರೆ. ಅಲ್ಲಿನ ಎಲ್ಲ ಸಂಸದರು ಪಕ್ಷಾತೀತವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ತಮ್ಮ ರಾಜ್ಯದ ಕೆಲಸ ಮಾಡಿಸಿಕೊಳ್ಳುತ್ತಾರೆ. ಕರ್ನಾಟಕದ ಸಂಸದರಲ್ಲಿ ಇಂತಹ ಬದ್ಧತೆ ಇಲ್ಲ. ಈ ಕಾರಣದಿಂದಲೇ ನಮ್ಮ ಪಾಲಿನ ನೀರು ನಮಗೆ ಸಿಗದಂತಾಗಿದೆ. ರೈತರಿಗೆ ಅನ್ಯಾಯವಾಗಿದೆ.

–ಟಿ.ಎನ್‌.ಪ್ರಕಾಶ್‌ ಕಮ್ಮರಡಿ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

ಕಾಮಗಾರಿ ನನೆಗುದಿಗೆ

ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ಭಾಗ್ಯ ಜಲ ನಿಗಮದ ‘ಬಿ’ ಸ್ಕೀಮ್ (ಅಣೆಕಟ್ಟು ಎತ್ತರ ಕಾಮಗಾರಿ ನಡೆದಾಗ ನೀರು ಹರಿಸುವುದು) ಯೋಜನೆಯಡಿ ನಾರಾಯಣಪುರ ಬಲದಂಡೆ 9 (ಎ) ವಿತರಣಾ ಕಾಲುವೆ ಕಾಮಗಾರಿ 13 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕಾಮಗಾರಿ ಪುನರಾರಂಭಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು.

ಕಾಲುವೆ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈತರು ಕಾಮಗಾರಿ ತಡೆದಿದ್ದಾರೆ. 9ಎ ಕಾಲವೆ ಕಾಮಗಾರಿ ಪೂರ್ಣಗೊಂಡರೆ ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.

-ಹನುಮಂತರಾಯ ನಾಯಕ, ಜೆಡಿಎಸ್‌ ಮುಖಂಡ, ದೇವದುರ್ಗ, ರಾಯಚೂರು ಜಿಲ್ಲೆ

ಯೋಜನೆ ಪೂರ್ಣಗೊಳ್ಳಲು ಇನ್ನೆಷ್ಟು ವರ್ಷ ಬೇಕು?

ಯಾವುದೇ ಯೋಜನೆಯಾದರೂ 10 ಅಥವಾ 20 ವರ್ಷಗಳಲ್ಲಿ ಪೂರ್ಣಗೊಳ್ಳಬೇಕು. ಯುಕೆಪಿ ಯೋಜನೆಯೂ ಆರಂಭವಾಗಿ ಆರು ದಶಕಗಳೇ ಕಳೆದಿದೆ.

ಭೂಸ್ವಾಧೀನ ಪ್ರಕ್ರಿಯೆಯು ಸರಿಯಾಗಿ ಆಗುತ್ತಿಲ್ಲ. ಜಮೀನು ಕಳೆದುಕೊಂಡವರಿಗೆ ಪರಿಹಾರ ಸಿಗುತ್ತಿಲ್ಲ. ಜಮೀನು ಕೊಡಲು ಸಿದ್ಧರಿರುವವರಿಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಯೋಜನೆ ಅನುಷ್ಠಾನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

ಯೋಜನೆ ಪೂರ್ಣಗೊಳಿಸುವ ಬದ್ಧತೆಯಿದ್ದಲ್ಲಿ ರಾಜ್ಯ ಸರ್ಕಾರವು ಕೂಡಲೇ ಅಗತ್ಯ ಪ್ರಮಾಣದಷ್ಟು ಅನುದಾನ ಬಿಡುಗಡೆ ಮಾಡಬೇಕು. ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು.

-ಪ್ರಕಾಶ ಅಂತರಗೊಂಡ, ಪ್ರಧಾನ ಕಾರ್ಯದರ್ಶಿ, ಯುಕೆಪಿ ಮುಳುಗಡೆ ಹಿತರಕ್ಷಣಾ ಸಮಿತಿ, ಬಾಗಲಕೋಟೆ

3ನೇ ಹಂತ ಎಂಬುದೇ ಕ್ಲೀಷೆ

ಯುಕೆಪಿ ಎರಡನೇ ಹಂತದ ಕಾರ್ಯವೇ ಇನ್ನೂ ಪೂರ್ಣವಾಗದೇ ಇರುವ ಕಾರಣ ಮೂರನೇ ಹಂತದ ಬಗ್ಗೆ ಮಾತನಾಡುವುದು ಕ್ಲೀಷೆ ಅನ್ನಿಸುತ್ತದೆ. ಎರಡನೇ ಹಂತದಲ್ಲಿ ಪೂರ್ಣಪ್ರಮಾಣದಲ್ಲಿ ಪರಿಹಾರ, ಪುನರ್ವಸತಿ ಆಗಿಲ್ಲ. ಎರಡು ದಶಕಗಳಿಂದ ಸಂತ್ರಸ್ತರು ಭೂಮಿ, ಮನೆ ಕಳೆದುಕೊಂಡು, ಸಮರ್ಪಕ ಪರಿಹಾರವೂ ಸಿಗದೇ ಪರಿತಪಿಸುತ್ತಿದ್ದಾರೆ.

ಅದರ ಶಾಪ ಈವರೆಗೆ ಯಾರಿಗೂ ತಟ್ಟಿಲ್ಲ. ಅಧಿಕಾರಕ್ಕೆ ಬರುವ ಎಲ್ಲರೂ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಬದ್ಧರಿದ್ದೇವೆ ಎನ್ನುತ್ತಾರೆ. ಬದ್ಧತೆ ಇದ್ದಿದ್ದರೇ ಯೋಜನೆ ಅನುಷ್ಠಾನವಾಗಿ 25 ವರ್ಷಗಳು ಆ‌ಗಬೇಕಿತ್ತು. 

ರಾಜ್ಯ ಸರ್ಕಾರ ಆದಷ್ಟು ಬೇಗ ಯುಕೆಪಿ 2ನೇ ಹಂತವನ್ನು ಪೂರ್ಣಗೊಳಿಸಿ, ಮುಂದಿನ ಆರ್ಥಿಕ ವರ್ಷದಲ್ಲಿ ಮೂರನೇ ಹಂತದ ಅನುಷ್ಠಾನಕ್ಕೆ ಆದ್ಯತೆ ನೀಡಲಿ.

-ಪ್ರೊ.ಕೃಷ್ಣಕೊಲ್ಹಾರ ಕುಲಕರ್ಣಿ, ನೀರಾವರಿ ತಜ್ಞ, ವಿಜಯಪುರ

ಸರ್ಕಾರ ಸ್ಪಷ್ಟ ನಿರ್ಧಾರ ಮಾಡಲಿ

ಆಲಮಟ್ಟಿ ಜಲಾಶಯ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರಿಗೆ ಏರಿಸಬೇಕು. ಈ ನಿಟ್ಟಿನಲ್ಲಿ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಆಂಧ್ರಪ್ರದೇಶ ಹೂಡಿರುವ ದಾವೆ ತೆರವಾಗಬೇಕು.

ಅದೇ ರೀತಿ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಇಲಾಖೆಗೆ ಈಗಿರುವ ಆಯುಕ್ತರಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಬೇಕು ಹಾಗೂ ಈ ಇಲಾಖೆಗೆ ಪೂರ್ಣ ಪ್ರಮಾಣದ ಸಿಬ್ಬಂದಿ ನೀಡಬೇಕು.

-ಜಿ.ಸಿ.ಮುತ್ತಲದಿನ್ನಿ, ಸಂಚಾಲಕ, ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆ, ಆಲಮಟ್ಟಿ, ವಿಜಯಪುರ 

‘ಅಂತಿಮ ಗೆಜೆಟ್ ಆಗಲಿ’

ಕೃಷ್ಣಾ ನ್ಯಾಯಾಧೀಕರಣ ಪ್ರಾಧಿಕಾರದ ಅಂತಿಮ ತೀರ್ಪಿನ‌ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಬಗ್ಗೆ ರಾಜ್ಯದ ಎಲ್ಲಾ ಸಂಸದರು, ವಿಶೇಷವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ವಿ.ಸೋಮಣ್ಣ ಹಾಗೂ ರಾಜ್ಯದ ಜಲಸಂಪನ್ಮೂಲ ಸಚಿವರು ಮುತುವರ್ಜಿ ವಹಿಸಿ ಗೆಜೆಟ್ ನೋಟಿಫಿಕೇಶನ್ ಆಗುವಂತೆ ಕ್ರಮ ಕೈಗೊಳ್ಳಬೇಕು.

-ಬಸವರಾಜ ಕುಂಬಾರ, ಅಧ್ಯಕ್ಷ, ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ, ವಿಜಯಪುರ

ಹೊಲಗಾಲುವೆ ನಿರ್ಮಿಸಿ

ರಾಯಚೂರು ಜಿಲ್ಲೆಯ ನದಿ ತೀರದ ಗ್ರಾಮಗಳ ರೈತರ ಹೊಲಗಳಿಗೆ ಪ್ರಸ್ತುತ ಮಾರ್ಚ್‌ 30ರವರೆಗೆ ಮಾತ್ರ ನೀರು ಪೂರೈಕೆ ಆಗುತ್ತಿದೆ. ಆಲಮಟ್ಟಿ ಅಣೆಕಟ್ಟು ಎತ್ತರಿಸಿದರೆ ಏಪ್ರಿಲ್ 15ರವರೆಗೂ ನೀರು ಲಭಿಸಲಿದೆ. ಇದರಿಂದ ಬೇಸಿಗೆಯಲ್ಲಿನ ನೀರಿನ ಕೊರತೆ ನೀಗಿಸಲು ಸಾಧ್ಯವಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಮುಖ್ಯ ಕಾಲುವೆಗಳು ನಿರ್ಮಾಣವಾಗಿವೆ. ಇದರ ಜತೆಗೆ ಹೊಲಗಾಲುವೆಗಳೂ ನಿರ್ಮಾಣವಾಗಬೇಕು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ.

-ಚಾಮರಸ ಮಾಲೀಪಾಟೀಲ, ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ, ರಾಯಚೂರು

ಲೂಟಿ ಮಾಡಲು ವರದಾನ

ನಾರಾಯಣಪುರ ಜಲಾಶಯ ದಶಕಗಳ ಹಿಂದೆಯೇ ನಿರ್ಮಾಣವಾಗಿದ್ದರೂ ಇದುವರೆಗೂ ಕೊನೆಯ ಭಾಗದ ರೈತರ ಜಮೀನಿಗೆ ನೀರು ತಲುಪಿಲ್ಲ. ಯೋಜನೆಯ ಮೊತ್ತ ಎರಡು ಪಟ್ಟು ಆಗಿದ್ದರೂ ನಿರ್ಮಾಣ ಆಗಿರುವ ಕಾಲುವೆಯಲ್ಲಿನ ಮುಳ್ಳು ಕಂಟಿಗಳಲ್ಲಿನ ಒಂದು ಮುಳ್ಳು ಸಹ ತೆಗೆಯಲು ಆಗಿಲ್ಲ. ಕಾಲುವೆಯಲ್ಲಿ ಭ್ರಷ್ಟಾಚಾರ ಹಣದ ಹೊಳೆಯೇ ಹರಿದಿದೆ.

-ಮಲ್ಲಿಕಾರ್ಜುನ ಸತ್ಯಂಪೇಟೆ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘಟನೆ, ಯಾದಗಿರಿ

ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ,
ಪೂರಕ ಮಾಹಿತಿ: ಬಸವರಾಜ ಹವಾಲ್ದಾರ,
ಬಸವರಾಜ್ ಸಂಪಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.