ADVERTISEMENT

ಕಚೇರಿಗಳಲ್ಲಿ ಇಲ್ಲ: ನಗರ ಪ್ಲಾಸ್ಟಿಕ್‌ಮಯ

ಕೋಡಿಬೆಟ್ಟು ರಾಜಲಕ್ಷ್ಮಿ
Published 18 ಮೇ 2019, 19:46 IST
Last Updated 18 ಮೇ 2019, 19:46 IST
   

ಮಂಗಳೂರು: ನಗರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ಹಾನಿಯ ಬಗ್ಗೆ ಅರಿವಿದೆ. ಅದೇ ಕಾರಣಕ್ಕಾಗಿ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ, ಪಾಲಿಕೆಯಲ್ಲಿ ಹಾಗೂ ಡಿಸಿ ಕಚೇರಿಯ ಸಭೆಗಳಲ್ಲಿ ಕುಡಿಯುವ ನೀರನ್ನು ಹೂಜಿಯಲ್ಲಿ ಇರಿಸುತ್ತಿದ್ದಾರೆ. ಆದರೆ ಈ ಕ್ರಮದ ಹೊರತಾಗಿ ಮಹಾನಗರವು ಪ್ಲಾಸ್ಟಿಕ್‌ ಕಾಟದಿಂದ ಮುಕ್ತವಾಗಿಲ್ಲ.

ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧವನ್ನು ನೆನಪಿಸುವ ನಿಟ್ಟಿನಲ್ಲಿ 2018ರಲ್ಲಿ ಪರಿಸರ ಅಧಿಕಾರಿಗಳು 15 ಬಾರಿ ದಾಳಿ ನಡೆಸಿ 1,150 ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್‌ ವಶಪಡಿಸಿಕೊಂಡಿದ್ದಾರೆ. 325 ಕೆ.ಜಿ ಪ್ಲಾಸ್ಟಿಕ್‌ ಅನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಸ್ತಾಂತರ ಮಾಡ ಲಾಗಿದೆ. ಉಳಿದವನ್ನು ಮರುಸಂಸ್ಕರಣಾ ಘಟಕಕ್ಕೆ ನೀಡಲಾಗಿದೆ.

ಆದರೆ ದಾಳಿ ನಡೆಸುವ ಸಂದರ್ಭದಲ್ಲಿ ವಿಧಿಸುವ ದಂಡ ಪ್ರಮಾಣ ಚಿಕ್ಕದು. ಕಳೆದ ಒಂದು ವರ್ಷದಲ್ಲಿ ₹ 5 ಸಾವಿರ ದಂಡ ಶುಲ್ಕ ಸಂಗ್ರಹವಾಗಿದೆ. 2019ರಲ್ಲಿ ಈ ರೀತಿಯ ದಾಳಿಗಳು ನಡೆದಿಲ್ಲ. ಪ್ಲಾಸ್ಟಿಕ್‌ ಲಕೋಟೆ ಬಳಸಬಾರದು ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗುತ್ತಿದ್ದಂತೆಯೇ ಪಾಲಿಸ್ಟೈರನ್‌ನಿಂದ ತಯಾರಿಸಿದ ಬಟ್ಟೆಯನ್ನು ಹೋಲುವ ಲಕೋಟೆಗಳು ಈಗ ಮಾರುಕಟ್ಟೆಯಲ್ಲಿವೆ. ಪರಿಸರ ತಜ್ಞರು ಹೇಳುವ ಪ್ರಕಾರ ಪ್ಲಾಸ್ಟಿಕ್‌ ಲಕೋಟೆಗಳನ್ನಾದರೂ ಮರು ಸಂಸ್ಕರಣೆ ಮಾಡಬಹುದು. ಆದರೆ ಪಾಲಿಸ್ಟೈರನ್‌ ಚೀಲಗಳ ಮರುಸಂಸ್ಕರಣೆಯೂ ಸಾಧ್ಯವಿಲ್ಲ.

ADVERTISEMENT

ಮಾಲಿನ್ಯ ವಿರೋಧಿ ಅಭಿಯಾನ ಸಹಯೋಗದಲ್ಲಿ ಜಾಗೃತಿ ಮೂಡಿ ಸುವ ಕೆಲಸ, ಪ್ಲಾಸ್ಟಿಕ್‌ನಿಂದ ಆಗುವ ಹಾನಿಯ ಕುರಿತು ಶಾಲೆಗಳಲ್ಲಿ ವಿವರಿಸುವುದು, ಬಟ್ಟೆ ಚೀಲಗಳನ್ನು ವಿತರಿಸುವ ಕೆಲಸಗಳನ್ನು ಪರಿಸರ ವಿಭಾಗದ ಅಧಿಕಾರಿಗಳು ಮಾಡುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.