ADVERTISEMENT

ವಿದೇಶ ವಿದ್ಯಮಾನ | ಐರೋಪ್ಯ ಒಕ್ಕೂಟ–ಮಲೇಷ್ಯಾ ಜಟಾಪ‍ಟಿ

ತಾಳೆ ಎಣ್ಣೆ ರಫ್ತು ಕುರಿತು ಭಿನ್ನಮತ

ರಾಯಿಟರ್ಸ್
Published 16 ಜನವರಿ 2023, 6:24 IST
Last Updated 16 ಜನವರಿ 2023, 6:24 IST
ತಾಳೆ
ತಾಳೆ   

ಕ್ವಾಲಾಲಂಪುರ: ಜಗತ್ತಿನ ಎರಡನೇ ಅತಿದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರ ಮಲೇಷ್ಯಾ, ಐರೋಪ್ಯ ಒಕ್ಕೂಟದ (ಇಯು) ರಾಷ್ಟ್ರಗಳಿಗೆ ತಾಳೆ ಎಣ್ಣೆ ರಫ್ತು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಐರೋಪ್ಯ ದೇಶಗಳು ಮಲೇಷ್ಯಾ ಮೇಲೆ ವಿಧಿಸಿರುವ ನಿರ್ಬಂಧಗಳಿಗೆ ತಿರುಗೇಟು ನೀಡಲು ಮಲೇಷ್ಯಾ ಈ ನಿರ್ಧಾರ ತೆಗೆದುಕೊಳ್ಳಬಹುದು ಎನ್ನಲಾಗಿದೆ.

ವ್ಯಾಪಕವಾಗಿ ತಾಳೆ ಎಣ್ಣೆ ಉತ್ಪಾದನೆ ಮಾಡುವ ಉದ್ದೇಶದಿಂದ ಮಲೇಷ್ಯಾದಲ್ಲಿ ಅರಣ್ಯವನ್ನು ಸವರಲಾಗುತ್ತಿದೆ. ಅರಣ್ಯನಾಶ ನಿಲ್ಲಿಸುವ ಮಾತಿಗೆ ಒಪ್ಪಿಕೊಂಡರೆ, ಮಲೇಷ್ಯಾದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಐರೋಪ್ಯ ರಾಷ್ಟ್ರಗಳು ನಿಯಮ ವಿಧಿಸಿವೆ. ಆದರೆ ಈ ನಿಯಮಗಳು ಒಪ್ಪುವಂತಹವಲ್ಲ ಎಂದಿರುವ ಮಲೇಷ್ಯಾ, ಐರೋಪ್ಯ ದೇಶಗಳ ಮಾರುಕಟ್ಟೆಯನ್ನೇ ಕೈಬಿಡಲು ಮುಂದಾಗಿದೆ.

ತಾಳೆ ಎಣ್ಣೆಯಿಂದ ಉತ್ಪಾದಿಸುವ ಜೈವಿಕ ಇಂಧನ ಬಳಕೆಯನ್ನು 2030ರೊಳಗೆ ಹಂತ ಹಂತವಾಗಿ ಸ್ಥಗಿತಗೊಳಿಸುವ ನೀತಿಯನ್ನು 2018ರಲ್ಲಿ ಐರೋಪ್ಯ ಒಕ್ಕೂಟ ಪ್ರಕಟಿಸಿತ್ತು. ನವೀಕರಿಸಬಹುದಾದ ಇಂಧನಕ್ಕೆ ಒತ್ತುಕೊಟ್ಟಿರುವ ಒಕ್ಕೂಟವು, ತಾಳೆ ಉತ್ಪಾದನೆ ಹೆಚ್ಚಿಸಬೇಕು ಎಂಬ ಉದ್ದೇಶಕ್ಕೆ ಆಗುತ್ತಿರುವ ಅರಣ್ಯನಾಶವನ್ನು ತಡೆಯುವ ಉದ್ದೇಶದಿಂದ ಮಲೇಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು.

ADVERTISEMENT

ಜಗತ್ತಿನ ತಾಳೆ ಎಣ್ಣೆ ರಫ್ತಿನಲ್ಲಿ ಮಲೇಷ್ಯಾ ಹಾಗೂ ಇಂಡೊನೇಷ್ಯಾ ದೇಶಗಳು ಶೇ 85ರಷ್ಟು ಪಾಲು ಹೊಂದಿವೆ. ಐರೋಪ್ಯ ಒಕ್ಕೂಟವು ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ಈ ಎರಡೂ ದೇಶಗಳು ದೂರು ಸಲ್ಲಿಸಿವೆ. ಐರೋಪ್ಯ ಒಕ್ಕೂಟದ ಮಾನದಂಡಗಳಿಗೆ ಪೂರಕವಾಗಿ ಆಹಾರ ಗುಣಮಟ್ಟ ಕಾಯ್ದುಕೊಂಡು ಹಾಗೂ ಪರಿಸರದ ನಿಯಮಗಳನ್ನು ಪಾಲಿಸಿಯೇ ಉತ್ಪನ್ನ ರಫ್ತು ಮಾಡಲು ಸಿದ್ಧವಿದ್ದರೂ ಒಕ್ಕೂಟವು ಹೊಸ ನಿರ್ಬಂಧಗಳನ್ನು ಹಾಕುತ್ತಿದೆ ಎಂದು ವಾದ ಮಂಡಿಸಿವೆ.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಕ್ಕೂಟ, ಯಾವುದೇ ದೇಶವನ್ನು ಗುರಿಯಾಗಿಸಿ ನಿಯಮಗಳನ್ನು ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಅರಣ್ಯ ನಾಶಕ್ಕೆ ಕಾರಣವಾಗುವ ಉತ್ಪನ್ನಗಳನ್ನು ತಡೆಯುವುದಷ್ಟೇ ಉದ್ದೇಶ ಎಂದು ಒಕ್ಕೂಟ ತಿಳಿಸಿದೆ. ಆದರೆ, ತಾರತಮ್ಯ ನೀತಿ ಅನುಸರಿಸುತ್ತಿರುವ ಒಕ್ಕೂಟದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಮಲೇಷ್ಯಾ ಹಾಗೂ ಇಂಡೊನೇಷ್ಯಾ ನಿರ್ಧರಿಸಿವೆ.

ಐರೋಪ್ಯ ರಾಷ್ಟ್ರಗಳಿಗೆ ಮಲೇಷ್ಯಾದ ತಾಳೆ ರಫ್ತಾಗುವ ಪ್ರಮಾಣ 2015ರಿಂದಲೂ ಕುಸಿಯುತ್ತಿದೆ. ಈಗ, ಮೇಲೇಷ್ಯಾಗೆ ಐರೋಪ್ಯ ಮಾರುಕಟ್ಟೆ ಬಂದ್ ಆಗುವ ಸಾಧ್ಯತೆಯಿದೆ. ಇದಕ್ಕೆ ಪರ್ಯಾಯ ಮಾರುಕಟ್ಟೆಯನ್ನು ಹುಡುಕಿಕೊಳ್ಳುವಲ್ಲಿ ಮಲೇಷ್ಯಾ ಯಶ ಕಂಡಿದೆ ಎನ್ನಲಾಗಿದೆ. ಮಧ್ಯಪ್ರಾಚ್ಯ, ಮಧ್ಯ ಏಷ್ಯಾ ಹಾಗೂ ಉತ್ತರ ಆಫ್ರಿಕಾ ದೇಶಗಳಲ್ಲಿ ತಾಳೆ ಎಣ್ಣೆಗೆ ಮಾರುಕಟ್ಟೆಯನ್ನು ಕಂಡುಕೊಂಡಿದೆ. ಆದರೆ ಯುರೋಪ್‌ನಲ್ಲಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿರುವ ಮಲೇಷ್ಯಾದ ಕಂಪನಿಗಳಿಗೆ ರಫ್ತು ನಿರ್ಬಂಧದಿಂದ ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗಿದೆ.

ಜೈವಿಕ ಇಂಧನಕ್ಕೆ ಬೇಡಿಕೆ
ಮಲೇಷ್ಯಾದಲ್ಲಿ ಮಾರಾಟವಾಗುವ ಡೀಸೆಲ್‌ ಜೊತೆಗೆ ಶೇ 35ರಷ್ಟು ಜೈವಿಕ ಇಂಧನ ಮಿಶ್ರಣವನ್ನು (ಬಿ35) ಕಡ್ಡಾಯ ಮಾಡಲಾಗುತ್ತಿದೆ. ಹೀಗಾಗಿ ತಾಳೆ ಎಣ್ಣೆಯಿಂದ ಉತ್ಪಾದಿಸುವ ಜೈವಿಕ ಇಂಧನಕ್ಕೆ ಬೇಡಿಕೆ ಇದೆ ಎಂಬುದನ್ನು ಅರಿತ ರೈತರು, ಭಾರಿ ಪ್ರಮಾಣದಲ್ಲಿ ತಾಳೆ ಬೆಳೆಯಲು ಆರಂಭಿಸಿದ್ಧಾರೆ. ಇದಕ್ಕಾಗಿ ಅರಣ್ಯಗಳು ತಾಳೆ ತೋಟಗಳಾಗಿ ಬದಲಾಗುತ್ತಿವೆ. ದೇಶದಲ್ಲಿ ಬೇಡಿಕೆ ಇರುವ ಕಾರಣಕ್ಕೆ, ಐರೋಪ್ಯ ದೇಶಗಳಿಗೆ ಜೈವಿಕ ಇಂಧನ ರಫ್ತು ಪ್ರಮಾಣವೂ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.