ಅಮೆರಿಕಾ, ಕೆನಡಾ, ಯುಕೆ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಬಾರ್ಬಿಕ್ಯೂ ಆನಂತರದಲ್ಲಿ ವಿಶ್ವದ ಉದ್ದಗಲಕ್ಕೂ ತನ್ನ ರುಚಿಯ ಹರವು ಹೆಚ್ಚಿಸಿಕೊಂಡಿತು. ಮಾಂಸವನ್ನು ನೇರವಾಗಿ ಬೆಂಕಿಯ ಮೇಲೆ ಸುಡಲು ನೆರವಾಗುವಂತಹ ಸರಳಿನ ಕಾವಲಿಯ ಮೇಲೆ ಕಬ್ಬಿಣದ ಸಲಾಕೆಗೆ ಸಿಕ್ಕಿಸಿದ ಮಾಂಸದ ತುಣುಕನ್ನು ಸುಟ್ಟುಕೊಂಡು ತಿನ್ನುವುದರ ಮಜವೇ ಬೇರೆ. ಈ ರುಚಿಗೆ ಎಲ್ಲರೂ ಮನಸೋತರು. ಈಗ ಮಾಂಸಾಹಾರ ಪ್ರಿಯರೆಲ್ಲರೂ ಬಾರ್ಬಿಕ್ಯೂ ತೆಕ್ಕೆಯಲ್ಲಿದ್ದಾರೆ.
ಇಂದಿರಾನಗರದಲ್ಲಿರುವ `ಬಾರ್ಬಿಕ್ಯೂ ನೇಷನ್~ ರೆಸ್ಟೋರಾ ಏಪ್ರಿಲ್ 15ರವರೆಗೆ ಆಫ್ರಿಕನ್ ಫುಡ್ ಫೆಸ್ಟಿವಲ್ ಆಯೋಜಿಸಿದೆ. ಆಫ್ರಿಕಾದ ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳ ರುಚಿಯನ್ನು ಬೆಂಗಳೂರಿಗರಿಗೂ ಪರಿಚಯಿಸುವುದು ಇದರ ಹಿಂದಿನ ಉದ್ದೇಶ. ಅಂದಹಾಗೆ ಈ ಆಹಾರೋತ್ಸವಕ್ಕೆ ಬಾರ್ಬಿಕ್ಯೂ ನೇಷನ್ `ಹಕುನಾ ಮಟಾಟಾ~ ಎಂದು ಹೆಸರಿಟ್ಟಿದೆ. ಆಫ್ರಿಕನ್ ಭಾಷೆಯಲ್ಲಿ ಹಾಗಂದ್ರೆ `ಡೋಂಟ್ ವರಿ ಬಿ ಹ್ಯಾಪಿ~ ಎಂದರ್ಥವಂತೆ.
ಬಾರ್ಬೆಕ್ಯೂ ನೇಷನ್ ರೆಸ್ಟೋರಾಗೆ ಕಾಲಿಡುತ್ತಿದ್ದಂತೆ ಒಬ್ಬ ಆದಿವಾಸಿ ವೇಷಧಾರಿ ನಿಮಗೆ ತಲೆಬಾಗಿ ನಮಸ್ಕರಿಸಿ ಒಳಕ್ಕೆ ಆಹ್ವಾನಿಸುತ್ತಾನೆ. ಚಿರತೆ ವೇಷ, ತಲೆ ಮೇಲೆ ಪುಕ್ಕ ಸಿಕ್ಕಿಸಿಕೊಂಡಿರುವ ಈತ ಥೇಟ್ ಆಫ್ರಿಕನ್ ಆದಿವಾಸಿಯಂತೆಯೇ ಕಾಣುತ್ತಾನೆ. ಬ್ಯಾಂಕಾಕ್‌ನಿಂದ ಬಂದಿರುವ ರೆಸ್ಟೋರಾದ ಸ್ವಾಗತಕಾರಣಿಯರ ಕೆನ್ನೆ ಮೇಲೆ ಆಫ್ರಿಕನ್ ಬುಡಕಟ್ಟು ಜನರು ಹಾಕಿಸಿಕೊಳ್ಳುತ್ತಿದ್ದ ಟ್ಯಾಟೂಗಳು ಹೊಳೆಯುತ್ತಿರುತ್ತದೆ.
ಆ ಟ್ಯಾಟೂ ನಿಮ್ಮನ್ನು ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ. ನಿಮಗೂ ಟ್ಯಾಟೂ ಹಚ್ಚಿಸಿಕೊಳ್ಳಬೇಕಂತ ಆಸೆಯಾದರೆ ಪಕ್ಕದಲ್ಲೇ ಇರುವ ಕಲಾವಿದೆ ನಿಮ್ಮ ಆಸೆ ಪೂರೈಸುತ್ತಾಳೆ.
ಒಳಗೆ ಕಾಲಿರಿಸುತ್ತಿದ್ದಂತೆ ಆಹಾರೋತ್ಸವದ ಅಂಗವಾಗಿ ರೆಸ್ಟೋರಾ ತುಂಬೆಲ್ಲಾ ಆಫ್ರಿಕನ್ ಬುಡಕಟ್ಟು ಜನರ ಆಚಾರ, ಸಂಪ್ರದಾಯ, ನೃತ್ಯ ಹಾಗೂ ಸಂಸ್ಕೃತಿಯನ್ನು ಬಿಂಬಿಸುವಂತಹ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ಹಿತವಾದ ಸಂಗೀತ ಮುದನೀಡುತ್ತದೆ.
ಜತೆಗೆ ಕೆಂಪು ದೀಪದ ಗಾಢ ಬೆಳಕು ನಿಮ್ಮ ಕಣ್ಣು ಕುಕ್ಕುತ್ತದೆ. ಮಾಣಿಗಳೆಲ್ಲರೂ ಬುಡಕಟ್ಟು ಜನರ ವೇಷಭೂಷಣ ತೊಟ್ಟುಕೊಂಡು ಗ್ರಾಹಕರಿಗೆ ಆಹಾರ ಉಣಬಡಿಸುತ್ತಾರೆ.
ಟೇಬಲ್ ಮೇಲೆ ಕುಳಿತಾಕ್ಷಣ ಆಫ್ರಿಕನ್ ಆದಿವಾಸಿಗಳು ತಲೆಯ ಮೇಲೆ ಸಿಕ್ಕಿಸಿಕೊಳ್ಳುವಂತಹ ಪುಕ್ಕಗಳ ಚಿತ್ರವನ್ನು ಹೊಂದಿರುವ ಒಂದು ಟೊಪ್ಪಿ ಕೊಡುತ್ತಾರೆ. ಇದನ್ನು ತಲೆಯ ಮೇಲಿಟ್ಟುಕೊಂಡು ಆಫ್ರಿಕನ್ ಆಹಾರ ಸವಿಯುವುದಕ್ಕೆ ಪ್ರಾರಂಭಿಸಬಹುದು.
ಅದಕ್ಕೂ ಮುನ್ನ ಊಟದ ಟೇಬಲ್‌ನ ಮಧ್ಯಭಾಗಕ್ಕೆ ನಿಗಿನಿಗಿ ಹೊಳೆಯುತ್ತಿರುವ ಕಲ್ಲಿದ್ದಿಲಿನ ಕೆಂಡವನ್ನು ತಂದಿಡುತ್ತಾರೆ. ಆನಂತರ ಹಸಿವನ್ನು ಹೆಚ್ಚಿಸುವಂತಹ ರುಚಿಕರ ಸ್ಟಾಟರ್ಸ್‌ಗಳನ್ನು ಮನಸಾರೆ ಸವಿಯಬಹುದು.
ಸ್ಟಾಟರ್ಸ್‌ಗಳು ಮಾಂಸಾಹಾರ ಮತ್ತು ಸಸ್ಯಾಹಾರ ಎರಡರಲ್ಲೂ ಲಭ್ಯವಿದೆ. ಸೀಗಡಿ, ಏಡಿ, ಚಿಕನ್, ಮಟನ್ ಹಾಗೂ ಆಫ್ರಿಕನ್ ಜನರ ನೆಚ್ಚಿನ ಎಮು ಪಕ್ಷಿಯ ಮಾಂಸವನ್ನು ಕಬ್ಬಿಣದ ಸರಳಿಗೆ ಸಿಕ್ಕಿಸಿ ಇಡುತ್ತಾರೆ. ಅದಕ್ಕೆ ಮತ್ತಷ್ಟು ಕೆಂಡದ ಶಾಖವನ್ನು ತಾಕಿಸಿ ಸಾಸ್‌ನಲ್ಲಿ ಅದ್ದಿ ತಿನ್ನುವುದೇ ಒಂದು ಖುಷಿಯ ಸಂಗತಿ. ಊಟದ ಮಧ್ಯೆ ಮಾಣಿಗಳೆಲ್ಲರೂ ಸೇರಿ `ಜಂಬೋ... ಊ... ಹಾ... ಉ... ಹಾ...~ ಎಂದು ಕೂಗುತ್ತಾ ಆಫ್ರಿಕನ್‌ನ ಬುಡಕಟ್ಟು ನೃತ್ಯ ಮಾಡುತ್ತಾರೆ.
ಕೆಲವರಂತೂ ಆದಿವಾಸಿಗಳಂತೆ ಬಾಯಿ ಬಡಿದುಕೊಳ್ಳುತ್ತಾ ನೃತ್ಯ ಮಾಡಿ ಗ್ರಾಹಕರಿಗೆ ರಂಜನೆ ನೀಡುತ್ತಾರೆ. ಬಾರ್ಬಿಕ್ಯೂ ಆಹಾರವನ್ನು ಯಾವ ರೀತಿ ಆಸ್ವಾದಿಸಬೇಕು ಎಂದು ತಿಳಿಯದಿದ್ದರೆ ಏನೂ ಚಿಂತಿಸಬೇಕಿಲ್ಲ. ಯಾಕಂದ್ರೆ ಅಲ್ಲಿನ ಸಿಬ್ಬಂದಿ ಹೇಗೆ ತಿನ್ನಬೇಕು ಎಂಬುದರ ಬಗ್ಗೆ ಕೂಡ ಗ್ರಾಹಕರಿಗೆ ವಿವರಣೆ ನೀಡುತ್ತದೆ. `ನೋಡಿ, ಎಮುವಿನ ಮಾಂಸದ ತುಣುಕನ್ನು ಚಿಲ್ಲಿ ಸಾಸ್‌ನಲ್ಲಿ ಅದ್ದಿ ತಿಂದರೆ ರುಚಿ ಇಮ್ಮಡಿಗೊಳ್ಳುತ್ತದೆ.
ಗ್ರಿಲ್ಡ್ ಆಗಿರುವ ತಿನಿಸುಗಳಿಗೆ ಹೀಗೆ ಬ್ರಷ್‌ನಿಂದ ಸಾಸ್ ಸವರಿಕೊಳ್ಳಬೇಕು. ಮಾಂಸದ ತುಣುಕನ್ನು ಚಿಲ್ಲಿ, ಟೊಮೊಟೊ ಸಾಸ್‌ನಲ್ಲಿ ಅದ್ದಿ ತಿಂದರೆ ಮನಸ್ಸು ವಾಹ್ ಎನ್ನುತ್ತದೆ~ ಎಂದು ವಿವರಿಸುತ್ತಾ ಹೋಗುತ್ತಾರೆ. ಜತೆಗೆ ಆಹಾರದ ರೆಸಿಪಿ ಕೂಡ ತಿಳಿಸುತ್ತಾರೆ. ಊಟದ ಜತೆಗೆ ಆಫ್ರಿಕನ್ ಜನರ ನೆಚ್ಚಿನ ಕಾಕ್‌ಟೇಲ್, ಮಾಕ್‌ಟೇಲ್ ಸರಬರಾಜು ಮಾಡುತ್ತಾರೆ. ಇದು ಆಹಾರದ ಸವಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬಾರ್ಬಿಕ್ಯೂ ಪ್ರಿಯರು ಭಾನುವಾರದವರೆಗೆ ಇದರ ರುಚಿ ಆಸ್ವಾದಿಸಬಹುದು.
`ದಕ್ಷಿಣ ಆಫ್ರಿಕಾದ ಆಹಾರವನ್ನು ಬೆಂಗಳೂರಿಗರಿಗೆ ಪರಿಚಯಿಸುವುದು ಈ ಆಹಾರೋತ್ಸದ ಉದ್ದೇಶ. ಕಳೆದ ವರ್ಷ ಕೂಡ ಆಫ್ರಿಕನ್ ಫುಡ್ ಫೆಸ್ಟಿವಲ್‌ಗೆ ಜನ ಅಭೂತಪೂರ್ವವಾಗಿ ಪ್ರತಿಕ್ರಿಯಿಸಿದ್ದರು. ಅಲ್ಲಿನ ಸ್ಪೈಸಿ ಫುಡ್‌ಗೆ ಬೆಂಗಳೂರಿಗರು ಮನಸೋತಿದ್ದರು. ಗ್ರಾಹಕರ ಒತ್ತಾಯದ ಮೇರೆಗೆ ಮತ್ತೆ ಈ ಆಹಾರೋತ್ಸವ ಆಯೋಜಿಸಿದ್ದೇವೆ.
ವಿದೇಶೀಯರು ಕೂಡ ಬಂದು ಬಾರ್ಬಿಕ್ಯೂ ತಿನಿಸನ್ನು ಇಷ್ಟಪಟ್ಟಿದ್ದಾರೆ. ಬಾಣಸಿಗರು ಅಲ್ಲಿಂದಲೇ ತರಬೇತಿ ಪಡೆದವರಾದ್ದರಿಂದ ಅಲ್ಲಿನ ದೇಸಿಯತೆ ಹಾಗೂ ಸೊಗಡು ಪ್ರತಿ ಆಹಾರದಲ್ಲೂ ಬೆರೆತಿದೆ~ ಎನ್ನುತ್ತಾರೆ ಬಾರ್ಬೆಕ್ಯೂ ನೇಷನ್ ಆರ್‌ಎಸ್‌ಎಂ ಕೌಶಿಕ್ ದೇ. ಈ ಊಟವನ್ನು ನೆನಪಿಸಿಕೊಂಡರೇ ಬಾಯಲ್ಲಿ ನೀರೂರುತ್ತದೆ.
ಸ್ಥಳ: ಬಾರ್ಬೆಕ್ಯೂ ನೇಷನ್, ಪ್ಲಾಟ್ 4005, 100 ಅಡಿ ರಸ್ತೆ, ಎಚ್‌ಎಎಲ್ 2ನೇ ಹಂತ. ಮಾಹಿತಿಗೆ: 6060 0000.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.