ಗಾಜಿನ ಅರಮನೆಯಂತಿದ್ದ ರೆಸ್ಟೋರೆಂಟ್‌ನ ಒಳಗೆ ಕುಳಿತಿದ್ದ ಗ್ರಾಹಕರ ಕಣ್ಣುಗಳಲ್ಲಿ ಕುತೂಹಲ ಮಡುಗಟ್ಟಿತ್ತು. ರೆಸ್ಟೋರಾ ಮಧ್ಯಭಾಗದಲ್ಲಿ ಉದ್ದವಾಗಿ ಜೋಡಿಸಿಟ್ಟ ಟೇಬಲ್ ಮೇಲೆ ಮೀನು, ಕೋಳಿ, ಮೊಟ್ಟೆಯಿಂದ ತಯಾರಾದ ಖಾದ್ಯಗಳಿದ್ದವು. ಅದರ ಮತ್ತೊಂದು ಬದಿಯಲ್ಲಿ ರೆಸ್ಟೋರಾದ ಮುಖ್ಯ ಬಾಣಸಿಗ ಪಾಸ್ತಾ ತಯಾರಿಸುತ್ತಿದ್ದರು. ಕಡುನೀಲಿ ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಜೀನ್ಸ್ ಧರಿಸಿದ್ದ ಮಹಿಳೆ ಮತ್ತು ಆಕೆಯ ಪುಟ್ಟ ಮಗು ಬಾಣಸಿಗರ ಪಾಕಕಲೆಯನ್ನು ಬೆರಗಿನಿಂದ ಕಣ್ತುಂಬಿಕೊಳ್ಳುತ್ತಿದ್ದರು.
ಇಟಲಿ ಸೊಗಡಿನ ಆಹಾರಕ್ಕೆ ಪ್ರಸಿದ್ಧಿಯಾಗಿರುವ `ಸ್ಪಗೆಟಿ ಕಿಚನ್'ನಲ್ಲಿ ಈಗ `ಟಸ್ಕನ್ ಫುಡ್ ಫೆಸ್ಟಿವಲ್' ನಡೆಯುತ್ತಿದೆ. ಮೆನುವಿನಲ್ಲಿರುವ ಪ್ರತಿಯೊಂದು ತಿನಿಸು ಕೂಡ ಶೆಫ್ ಬಿಲ್ ಮಾರ್ಚೆಟ್ಟಿ ಅವರ ವಿಶೇಷ ಕೈರುಚಿಯಿಂದ ತಯಾರಾಗಿದ್ದು ಗ್ರಾಹಕರಿಗೆ ಅಪ್ಪಟ ಇಟಲಿ ಸ್ವಾದ ನೀಡುತ್ತಿವೆ. ಬಾಣಸಿಗರು ತಯಾರಿಸಿದ ಸೊಗಸಾದ ಖಾದ್ಯಗಳನ್ನು ಅಷ್ಟೇ ಸೊಗಸಾಗಿ ತಟ್ಟೆಯಲ್ಲಿ ಅಲಂಕರಿಸಿ ಬಡಿಸುವುದು ಈ ರೆಸ್ಟೋರಾದ ವಿಶೇಷಗಳಲ್ಲಿ ಒಂದು.
ಇಟಲಿಯ ಸುಂದರ ನಗರಿ ಟಸ್ಕನ್. ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾದ ಈ ನಗರಿಯ ತಿನಿಸುಗಳು ಸಹ ವಿಶ್ವ ಪ್ರಸಿದ್ಧಿ ಪಡೆದುಕೊಂಡಿವೆ. ಪಾಸ್ತಾ ಪ್ರಿಯರನ್ನು ಸಂತೋಷಪಡಿಸಲೆಂದೇ ಈ ಆಹಾರೋತ್ಸವದಲ್ಲಿ ಮಧುರ ಭಕ್ಷ್ಯಗಳನ್ನು ಉಣಬಡಿಸಲಾಗುತ್ತಿದೆ. ಅಂದಹಾಗೆ, ಈ ಉತ್ಸವ ಜೂನ್ 29ರವರೆಗೆ ನಡೆಯಲಿದೆ.
ಈ ಆಹಾರೋತ್ಸವದಲ್ಲಿ ಗ್ರಾಹಕರು ಟಸ್ಕನ್‌ನ ಅದ್ಭುತ ರುಚಿಯನ್ನು ಸವಿಯುವುದಷ್ಟೇ ಅಲ್ಲದೇ, ಬಾಣಸಿಗರು ಪಾಸ್ತಾ ತಯಾರಿಸುವ ವಿಧಾನವನ್ನು ಲೈವ್ ಆಗಿ ನೋಡುವ ಅವಕಾಶವೂ ಇಲ್ಲಿದೆ. ಮೆನುವಿನಲ್ಲಿ ಇಷ್ಟವಾದ ಖಾದ್ಯವನ್ನು ಆರ್ಡರ್ ಮಾಡಿ ಕಾಯುವ ಕಷ್ಟ ಇಲ್ಲಿಲ್ಲ. ಬದಲಾಗಿ ರೆಸ್ಟೋರಾ ಒಳಗಡೆಯೇ ಬಾಣಸಿಗರ ಪಾಕಶಾಸ್ತ್ರವನ್ನು ಗ್ರಾಹಕರು ಕಣ್ತುಂಬಿಕೊಳ್ಳಬಹುದು. ಇಲ್ಲಿ ನೋಡಿದ್ದನ್ನು ಮನೆಯಲ್ಲಿ ಟ್ರೈ ಮಾಡಬಹುದು. ಘಮಿಘಮಿಸುವ ಶುದ್ಧ ಮಸಾಲಾ ಪದಾರ್ಥಗಳಿಂದ ತಯಾರಾದ ವಿಶೇಷ ರುಚಿಯ ಪಾಸ್ತಾವನ್ನು ಸ್ನೇಹಿತರು ಮತ್ತು ಕುಟುಂಬದ ಜತೆಗೂಡಿ ಸವಿಯುವುದೇ ಒಂದು ಮಜಾ.
ಟಸ್ಕನ್ ಸ್ಪೆಷಲ್...
ಸ್ಪಗೆಟಿ ಕಿಚನ್‌ಗೆ ಬರುವ ಗ್ರಾಹಕರು ಟಸ್ಕನ್‌ನ ಕ್ಲಾಸಿಕ್ ತಿನಿಸುಗಳಾದ ಪೆಪ್ಪರ್‌ಡೆಲ್ಲೆ ಸುಲ್ಲಾನಿತ್ರ, ಆರೆಂಜ್ ಬೋಲಾಗ್‌ನೈಸ್, ಕ್ರೋಸ್ಟಿನಿ ಫಿರೋನ್‌ಟಿನಿ ರುಚಿ ನೋಡಬಹುದು.
`ಟಸ್ಕನ್‌ನ ಶ್ರೀಮಂತ ಅಡುಗೆ ಪರಂಪರೆಯನ್ನು ಬೆಂಗಳೂರು ನಗರಿಗೆ ಪರಿಚಯಿಸುತ್ತಿರುವುದು ಸಂತಸದ ಸಂಗತಿ. ಟಸ್ಕನ್ ಇಟಲಿಯ ಪ್ರಮುಖ ನಗರಿ. ಈ ನಗರಿ ಚೆಂದದ ಇತಿಹಾಸ, ಭವ್ಯ ಪರಂಪರೆ ಹಾಗೂ ಸ್ವಾದಿಷ್ಟ ತಿನಿಸುಗಳ ತಯಾರಿಕೆಗೆ ವಿಶ್ವಪ್ರಸಿದ್ಧಿ ಪಡೆದಿದೆ.
ಅಲ್ಲಿನ ರುಚಿಕಟ್ಟಾದ ತಿನಿಸುಗಳನ್ನು ಇಲ್ಲಿನವರಿಗೆ ಉಣಬಡಿಸುವುದರ ಜತೆಗೆ, ಅವುಗಳ ತಯಾರಿಕೆಯ ವಿಧಾನವನ್ನು ನೇರವಾಗಿ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಟಸ್ಕನ್ ಅಡುಗೆ ತಯಾರಿಕೆ ಮೇಲೆ ದಕ್ಷಿಣ ಹಾಗೂ ಉತ್ತರ ಇಟಲಿಯ ಪ್ರಭಾವವಿರುವುದರಿಂದ ಟಸ್ಕನ್ ಮೆನುವಿನಲ್ಲಿ ಪಾಸ್ತಾ, ಚೀಸ್, ಸೀಪುಡ್ ಹಾಗೂ ಮಾಂಸಾಹಾರಿ ತಿನಿಸುಗಳು ಸ್ಥಾನಪಡೆದುಕೊಂಡಿವೆ' ಎಂದು ಆಹಾರೋತ್ಸವದ ವಿಶೇಷತೆಯನ್ನು ವಿವರಿಸುತ್ತಾರೆ ಸ್ಪಗೆಟಿ ಕಿಚನ್‌ನ ಮಾರ್ಚೆಟ್ಟಿ.
ಸ್ನೇಹಿತರು ಮತ್ತು ಕುಟುಂಬದೊಂದಿಗೆ ತೆರಳಿ ಇಟಲಿ ಸೊಗಡಿನ ಅಪ್ಪಟ ಖಾದ್ಯಗಳನ್ನು ಸವಿಯಲು ಸ್ಪಗೆಟಿ ಕಿಚನ್ ಅತ್ಯುತ್ತಮ ಆಯ್ಕೆ.
ಸ್ಥಳ: ಸ್ಪಗೆಟಿ ಕಿಚನ್, ನಂ. 2006, ಮೊದಲನೇ ಮಹಡಿ, 100 ಅಡಿ ರಸ್ತೆ, ಎಚ್‌ಎಎಲ್ 2ನೇ ಹಂತ, ವೊಡಾಫೋನ್ ಬಿಲ್ಡಿಂಗ್ ಪಕ್ಕ, ಇಂದಿರಾನಗರ. ಮಾಹಿತಿಗೆ: 080 4089 4999.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.