ADVERTISEMENT

ಕೆಂಡದ ಡಬ್ಬವೂ ‘ರೈಲು ಭೋಜನ’ವೂ

ರಸಾಸ್ವಾದ

ಸತೀಶ ಬೆಳ್ಳಕ್ಕಿ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST
ಕೆಂಡದ ಡಬ್ಬವೂ ‘ರೈಲು ಭೋಜನ’ವೂ
ಕೆಂಡದ ಡಬ್ಬವೂ ‘ರೈಲು ಭೋಜನ’ವೂ   

ಲಿಡೋ ಮಾಲ್‌ನಲ್ಲಿರುವ ಬಾರ್ಬೆಕ್ಯೂ ನೇಷನ್‌ ಈಗ ‘ಲಿಡೋ ಜಂಕ್ಷನ್‌’ ಆಗಿ ಪರಿವರ್ತನೆಗೊಂಡಿದೆ. ಅರೆ, ಫುಡ್‌ಕೋರ್ಟ್‌ ಹೇಗೆ ಜಂಕ್ಷನ್‌ ಆಯ್ತು ಅಂತ ಹುಬ್ಬೇರಿಸಬೇಡಿ. ಇಲ್ಲಿ ರೈಲುಗಾಡಿಗಳು ಬರುವುದಿಲ್ಲ. ಬದಲಾಗಿ ಇಲ್ಲಿ ಕಾಶ್ಮೀರದಿಂದ ಕೊಚ್ಚಿವರೆಗಿನ ಎಲ್ಲ ಬಗೆಯ ವಿಶೇಷ ಖಾದ್ಯಗಳು ದೊರೆಯುತ್ತವೆ. ಬಾರ್ಬೆಕ್ಯೂ ನೇಷನ್‌ನಲ್ಲಿ ನಡೆಯುತ್ತಿರುವ ‘ದಿ ಪ್ಯಾನ್‌ ಇಂಡಿಯನ್‌ ಫುಡ್‌ ಫೆಸ್ಟಿವಲ್‌’ ಅಂಗವಾಗಿ ಈ ರೀತಿ ವಿನ್ಯಾಸವನ್ನು ಮಾಡಲಾಗಿದೆ ಎಂಬುದು ಹೋಟೆಲ್‌ ಸಿಬ್ಬಂದಿಯ ಹೇಳಿಕೆ.
  
ರೆಸ್ಟೋರೆಂಟ್‌ಗೆ ಬರುವ ಗ್ರಾಹಕರನ್ನು ಬಾಗಿಲಲ್ಲಿ ನಿಲ್ಲಿಸಿರುವ   ರೈಲ್ವೆ ಬೋಗಿಯ ಪ್ರತಿಕೃತಿಯೊಂದು ಸ್ವಾಗತಿಸುತ್ತದೆ. ಅದನ್ನು ದಾಟಿ ಒಳ ನಡೆದರೆ ರೈಲ್ವೆ ಹಳಿ ಚಿತ್ರವಿರುವ ಪೋಸ್ಟರ್‌ ಮೇಲೆ ‘ಲಿಡೋ ಜಂಕ್ಷನ್‌’ ಎಂಬ ಬರಹ ಕಣ್ಣಿಗೆ ಬೀಳುತ್ತದೆ.  ಜತೆಗೆ ಪ್ರತಿ ಟೇಬಲ್‌ನ ಮೇಲ್ಭಾಗದಲ್ಲೂ ಶ್ರೀನಗರ, ಅಮೃತ್‌ಸರ, ದೆಹಲಿ, ವಡೋದರ, ಜೈಪುರ ಹೀಗೆ ದೇಶದ ಪ್ರಮುಖ 32 ನಗರಗಳ ಹೆಸರನ್ನು ತೂಗುಹಾಕಿರುವುದು ಕಾಣಿಸುತ್ತದೆ.

ಟೇಬಲ್‌ ಮೇಲೆ ಕುಳಿತ ನಂತರ ವೇಟರ್‌ ಒಂದು ಕೆಂಡದ ಡಬ್ಬವೊಂದನ್ನು ತಂದಿಟ್ಟರು. ಅಲ್ಲಿಂದ ಸ್ಟಾರ್ಟರ್ಸ್‌ಗಳ ಸರಬರಾಜು ಪ್ರಾರಂಭವಾಯ್ತು. ವೆಜ್‌ನಲ್ಲಿ ಐದು ಸ್ಟಾರ್ಟರ್ ಮತ್ತು ನಾನ್‌ವೆಜ್‌ ಐದು ಬಗೆಯ ಸ್ಟಾರ್ಟರ್ಸ್‌ಗಳನ್ನು ಸರಬರಾಜು ಮಾಡಿದರು. ನಾನ್‌ವೆಜ್‌ನಲ್ಲಿ ಪ್ರಾನ್ಸ್‌, ಚಿಕನ್‌, ಮಟನ್‌ ಮತ್ತು ಮೀನಿನ ಖಾದ್ಯಗಳಿದ್ದರೆ, ವೆಜ್‌ ಸ್ಟಾರ್ಟರ್ಸ್‌ನಲ್ಲೂ ವೈವಿಧ್ಯಗಳಿದ್ದವು. ಟೇಬಲ್‌ ಮೇಲೆ ಇಟ್ಟಿದ್ದ ಬಾವುಟವನ್ನು ಇಳಿಸುವವರೆಗೂ ಅನಿಯಮಿತವಾಗಿ ಸ್ಟಾರ್ಟರ್ಸ್‌ಗಳು ಬರುತ್ತಲೇ ಇದ್ದವು.

ಅಂದಹಾಗೆ, ಸ್ಟಾರ್ಟರ್ಸ್‌ ಸವಿಯುವುದಕ್ಕೂ ಮುನ್ನ ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ, ರೈಲಿನೊಳಗೆ ಚುರುಮುರಿ ಮಾರುವ ವ್ಯಕ್ತಿಯಂತೆ ರೆಸ್ಟೋರೆಂಟ್ ಒಳಗೂ ಒಬ್ಬ ಚುರುಮುರಿ ಮಾರಲು ಬಂದ. ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತಿರುವಾಗಲೇ ಆತ, ಕಡ್ಲೆಪುರಿ, ಕಡ್ಲೆಬೀಜ, ಈರುಳ್ಳಿ, ಮೆಣಸಿನ ಕಾಯಿ ಮಿಶ್ರಣ ಮಾಡಿ ಒಂದು ಪೇಪರ್‌ ಸುತ್ತಿ ಚುರುಮುರಿ ಕೈಗಿತ್ತ. ಅಷ್ಟರಲ್ಲಿ ಹೋಟೆಲ್‌ನ ವ್ಯವಸ್ಥಾಪಕ ಅಭಿಲಾಶ್‌ ಕುಮಾರ್‌ ಬಂದರು. ‘ಇದೇನಿದು ಹೊಸ ತರಹ ಇದೆಯಲ್ಲಾ’ ಎಂದು ಪ್ರಶ್ನಿಸಿದಾಗ ವಿವರಣೆ ನೀಡಿದ್ದು ಹೀಗೆ: ‘ನಮ್ಮ ಆಹಾರೋತ್ಸವಕ್ಕೂ ರೈಲು ಪ್ರಯಾಣಕ್ಕೂ ಸಂಬಂಧವಿದೆ.

ಬಾರ್ಬೆಕ್ಯೂ ಆಹಾರಗಳನ್ನು ಸವಿಯುತ್ತಲೇ ರೈಲು ಪ್ರಯಾಣದ ಅನುಭವವನ್ನು ಹೊಂದಬಹುದು. ಹೇಗೆಂದರೆ, ರೈಲು ಪ್ರಯಾಣದ ಮಧ್ಯೆ ಮಧ್ಯೆ ಚುರುಮುರಿ, ಚಾಯ್‌, ನೀರು, ತಂಪು ಪಾನೀಯ ಮಾರಾಟ ಮಾಡಲು ಬರುತ್ತಾರೆ. ಅದೇ ರೀತಿ ನಮ್ಮ ರೆಸ್ಟೋರೆಂಟ್‌ ಒಳಗೂ ಆ ವಾತಾವರಣ ನಿರ್ಮಿಸಲಾಗಿದೆ’ ಎನ್ನುವಷ್ಟರಲ್ಲಿ ಮತ್ತೊಬ್ಬ ಹುಡುಗ ಐಸ್‌ ಕ್ಯೂಬ್‌ಗಳನ್ನು ತುಂಬಿದ ಬಕೆಟ್‌ನೊಳಗೆ ನೀರು ಮಾರುತ್ತಾ ಬಂದ. ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಗ್ರಾಹಕರಿಗೆ ಮತ್ತೊಬ್ಬ ಹುಡುಗ ಚಾಯ್‌ ನೀಡುತ್ತಿದ್ದ.

ಮಾತು ಮುಂದುವರಿಸಿದ ಅಭಿಷೇಕ್‌, ‘ಸೂಪ್‌ನಂತೆ ಚುರುಮುರಿಗೆ ಹಸಿವು ಹೆಚ್ಚಿಸುವ ಗುಣ ಇದೆ’ ಅಂತಂದರು. ಸ್ಟಾರ್ಟರ್ಸ್‌ ನಂತರ ಮುಖ್ಯ ಮೆನು ಸವಿಯಲು ಅವಕಾಶ ಮಾಡಿಕೊಟ್ಟರು ಅಭಿಷೇಕ್‌. ‘ದೇಶದ 32 ಪ್ರಮುಖ ನಗರಗಳನ್ನು ಆಯ್ದುಕೊಂಡು ಅಲ್ಲಿನ ಸಿಗ್ನೇಚರ್‌ ಡಿಶ್‌ಗಳನ್ನು ಉತ್ಸವದಲ್ಲಿ ಪರಿಚಯಿಸಲಾಗಿದೆ. ಕೊಚ್ಚಿಯ ಮಲಬಾರಿ ಗ್ರಿಲ್ಡ್‌ ಫಿಶ್‌, ಜೈಪುರದ ಶೇಖಾವತಿ ಬಟರ್‌, ಅಮೃತ್‌ಸರ್‌ನ ತವಾ ಖೀಮಾ ಕಲೇಗಿ ಚಾಪ್‌ ಈ ಉತ್ಸವದ ವಿಶೇಷ ಖಾದ್ಯಗಳು. ಕ್ವಿಲ್‌ ಬರ್ಡ್‌ನಿಂದ ತಯಾರಿಸಿದ ತಂದೂರಿ, ಚೋಲೆ ಚಾಪ್‌ನ ರುಚಿ ಸಹ ಮುದ ನೀಡುತ್ತದೆ’ ಎಂದು ವಿವರಣೆ ನೀಡಿದರು.

ಸ್ಟಾರ್ಟರ್ಸ್‌ ಸವಿದ ಮೇಲೆ ಬಫೆ ಊಟವಿರುತ್ತದೆ. ಮಟನ್‌, ಚಿಕನ್‌, ಫಿಶ್‌ ಮತ್ತು ತಂದೂರಿ ಐಟಂಗಳು ಇಲ್ಲಿ ಲಭ್ಯ. ಡಸರ್ಟ್‌ನಲ್ಲಿ ಮೆಣಸಿನಕಾಯಿಯಿಂದ ತಯಾರಿಸಿದ ಹಲ್ವಾ ಚೆನ್ನಾಗಿರುತ್ತದೆ. ಬಾರ್ಬೆಕ್ಯೂ ತಿನಿಸುಗಳನ್ನು ಇಷ್ಟಪಡುವವರಿಗೆ ಲಿಡೋ ಜಂಕ್ಷನ್‌ನಲ್ಲಿ ಸಿಗುವ ಖಾದ್ಯಗಳ ರುಚಿ ಮನತಣಿಸುತ್ತದೆ. ಉತ್ಸವ ಸೆ.29ಕ್ಕೆ ಕೊನೆಗೊಳ್ಳಲಿದೆ. ಟೇಬಲ್‌ ಕಾಯ್ದಿರಿಸಲು: 99000 10682, 080–6500 0004.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT