
ರಾತ್ರಿ ಎಂಟರ ಸಮಯ. ಹಲಸೂರಿನ ಲಿಡೋ ಮಾಲ್‌ನಲ್ಲಿಯ ಬಾರ್ಬೆಕ್ಯೂ ನೇಷನ್ ರೆಸ್ಟೊರೆಂಟ್ ಎದುರು ನಿಂತವರನ್ನು ಸ್ವಾಗತಿಸಿದ್ದು ‘ದಿಲ್ಲಿ ವಾಲಿ ಕುವಾ ಗಲ್ಲಿ’ ಎಂಬ ನಾಮ ಫಲಕ.
ಬಾರ್ಬೆಕ್ಯೂ ನೇಷನ್ ಒಳಗೆ ಹೋಗುತ್ತಿದ್ದಂತೆ ಇಂಪಾದ ಸಂಗೀತ ಅಲೆ ಅಲೆಯಾಗಿ ಹೊಮ್ಮುತ್ತಿತ್ತು. ಬಣ್ಣದ ಮಿನುಗು ದೀಪಗಳು ಕಣ್ಣಿಗೆ ಅದೇನೋ ಮುದ ನೀಡುತ್ತಿತ್ತು. ಮಿನುಗು ದೀಪ, ಸಂಗೀತದ ಅಲೆಯ ಸಮ್ಮಿಲನ ಮನ ತಣಿಯುವಂತಿತ್ತು. ಒಳಗಡೆ ಹೆಜ್ಜೆ ಇರಿಸಿದಾಗ ಮೊದಲು ಸ್ವಾಗತಿಸುವುದು ಬೀದಿ ಆಹಾರಗಳು. ಅದರಲ್ಲೂ ಮುಖ್ಯ ಗೋಲಗಪ್ಪದ ಆ ಸ್ವಾದ ಮುಂದೆ ಹೋಗದಂತೆ ತಡೆ ಹಿಡಿಯುತ್ತದೆ.
ನಮಗಾಗಿ ಕಾದಿರಿಸಿದ ಸೀಟಿನಲ್ಲಿ ಹೋಗಿ ಕುಳಿತಾಗ ನೀಟಾಗಿ ಪಿಂಗಾಣಿ ಪಾತ್ರೆಗಳಲ್ಲಿ ಜೋಡಿಸಿದ್ದ ಕೆಂಪು ಚಟ್ನಿ, ಹಸಿರು ಚಟ್ನಿ, ತಟ್ಟೆಯೊಂದರಲ್ಲಿ ಜೋಡಿಸಿಟ್ಟ ಈರುಳ್ಳಿ, ಸೌತೆಕಾಯಿ, ಕಲ್ಲಂಗಡಿ ಹಣ್ಣಿನ ಚೂರುಗಳು ನಮ್ಮನ್ನು ಸ್ವಾಗತಿಸಿದವು.
ಕುಳಿತ ಟೇಬಲ್ಲಿನ ಎದುರುಗಡೆ ಆಂಗ್ಲ ಯುವತಿಯೊಬ್ಬಳು ಮೈಕ್ ಹಿಡಿದು ಗಾನ ಸುಧೆ ಹರಿಸುತ್ತಿದ್ದಳು. ಅದೆಲ್ಲವೂ ತಾಳ ಮೇಳಕ್ಕೆ ಸರಿಯಾಗಿ ಹೊಟ್ಟೆಯೂ ಹಸಿವಿನ ನೆನಪು ಮಾಡಿಸಿತ್ತು.
ಜೋಡಿಸಿಟ್ಟ ಪಿಂಗಾಣಿ ಪಾತ್ರೆಗಳಂತೆ ಅಲ್ಲಿನ ಆತಿಥ್ಯವೂ ಅಷ್ಟೇ ನೀಟಾಗಿತ್ತು. ಕುಳಿತವರನ್ನು ಸ್ವಲ್ಪವೂ ಕಾಯಿಸದೆ ಆರ್ಡರ್ ನೀಡಲು ರೆಡಿಯಾಗಿ ನಿಂತಿದ್ದರು ಬಾರ್ಬೆಕ್ಯೂನ ಸಿಬ್ಬಂದಿ. ‘ದಿಲ್ಲಿ ವಾಲಿ ಕುವಾ ಗಲ್ಲಿ’ ಮುಖ್ಯವಾಗಿ ಸ್ಟ್ರೀಟ್ ಫುಡ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದರೂ, ಊಟದ ಮುಖ್ಯ ಮೆನುವಿನಲ್ಲಿ ಸಸ್ಯಾಹಾರ, ಮಾಂಸಾಹಾರದ ಆಹಾರಗಳು ನಿಮ್ಮ ಜಿಹ್ವಾ ಚಾಪಲ್ಯವನ್ನು ತಣಿಸುತ್ತವೆ.
ಸ್ಟಾರ್ಟ್‌ಸ್ಸ್‌ನಲ್ಲಿ ಸಸ್ಯಾಹಾರ ಪ್ರಿಯರ ನಾಲಗೆ ತಣಿಸಲು, ಬಾಯಲ್ಲಿ ಒಮ್ಮೆಲೆ ನೀರು ಬರಿಸುವಷ್ಟು ಖಾರ ಸವರಿದ ನದೂರ್ ಕಬಾಬ್‌ನಿಂದ ಆರಂಭವಾಗಿ ಲೋಟಸ್ ಸ್ಟೆಮ್ ಮತ್ತು ಆಲೂ, ತಂದೂರ್ ಮಲಾಯಿ ಖುಂಬ್, ಏಲಕ್ಕಿಯನ್ನು ಹದವಾಗಿ ಮಿಶ್ರಣ ಮಾಡಿ ಮೇಲೆ ಕ್ರೀಮ್ ಸವರಿ ನೀಡುವ ಮಶ್ರೂಮ್ ಫ್ರೈ ಬಾಯಲ್ಲಿ ಇಟ್ಟ ಕೂಡಲೇ ಕರಗಿ ಹೋಗುತ್ತದೆ.
ಪುದಿನಾ ಎಲೆಯೊಂದಿಗೆ ಗ್ರಿಲ್ ಮಾಡಿ ಬೇಯಿಸುವ ಪೈನಾಪಲ್‌ನ ಹೋಳುಗಳು ಹೊಸತೊಂದು ರುಚಿಯನ್ನು ನೀಡಿತ್ತು. ಆಲೂಗಡ್ಡೆಯನ್ನು ಸಿಹಿ ಖಾರ ಬೆರೆಸಿದ ಮೊಸರಿನ ಮಿಶ್ರಣದೊಂದಿಗೆ ನೀಡುವ ಆಲೂ ದಹಿ ಕಬಾಬ್‌ನ ರುಚಿ ನಿಜಕ್ಕೂ ಅದ್ಭುತ.
ದೆಹಲಿಯ ಬೀದಿ ಆಹಾರಗಳಲ್ಲಿ ಜನಪ್ರಿಯತೆ ಪಡೆದಿರುವ ಮಟನ್ ದೆಲ್‌ವಿ ಅದರಾಕಿ ಸೀಖ್, ನಿಂಬೆರಸದ ಸವಿಯೊಂದಿಗೆ ಉಪ್ಪು, ಖಾರ ಹದವಾಗಿ ಸವರಿದ್ದ ಸಿಗಡಿಯಿಂದ ತಯಾರಿಸಿದ ‘ನಿಮುಡಾ ತಂದೂರಿ ಜಿಂಗಾ’ದ ಸುವಾಸನೆ ಸಸ್ಯಾಹಾರಿಗಳ ಮೂಗು ಕೂಡ ಆಘ್ರಾಣಿಸುವಂತಿತ್ತು. ಜಲ್ ಅರಬಿ ಸಲಾಡ್, ಫತೇಪುರಿ ಫ್ರೈಡ್ ಚಿಕನ್, ಸುರ್ಕ್ ಫಿಶ್ ಟಿಕ್ಕಾ ಸೇರಿದಂತೆ ವಿವಿಧ ಬಗೆಯ ಮಾಂಸಾಹಾರದ ಬಗೆ ಬಗೆ ತಿನಿಸುಗಳು ಅಲ್ಲಿ ಆಹಾರ ಪ್ರಿಯರಿಗಾಗಿ ಸಿದ್ಧವಿದ್ದವು.
ಊಟದ ಮುಖ್ಯ ಕೋರ್ಸ್‌ಗಾಗಿ ಬಫೆ ವ್ಯವಸ್ಥೆ ಇದ್ದು ಅಲ್ಲಿಯೂ ಕೂಡ ಎಲ್ಲವನ್ನೂ ನೀಟಾಗಿ, ಫಳಫಳ ಹೊಳೆಯುವ ಪಾತ್ರೆಯಲ್ಲಿ ಜೋಡಿಸಲಾಗಿತ್ತು. ದಾಲ್ ಶೋರಬ್ ಮತ್ತು ಮುಗ್ರಾ ಝಾಂಗ್ರಿ ಶೋರಬ್ ಸೂಪ್‌ಗಳು ಉಪ್ಪು ಖಾರ, ಹುಳಿಯ ಮಿಶ್ರಣದೊಂದಿಗೆ ಹೊಟ್ಟೆಯ ದಾಹವನ್ನು ತಣಿಸುತ್ತವೆ.
ಮುಘಲೈ ಧಮ್ ಬಿರಿಯಾನಿ, ಮೂರ್ಗ್ ಶುರ್ಕ್ ಕಡಾ, ಫನ್ ಖುಡಿ ಮಸಾಲಾ, ಝೈಕೇ್ ಫಿಶ್ ಕರಿ, ಘೋಶ್ ಪಲಾವ್‌್ ಹಾಗೂ ಇತ್ಯಾದಿ ಮಾಂಸಾಹಾರಿ ಊಟದ ಕೋರ್ಸ್‌ನ ಭಾಗವಾಗಿದ್ದರೆ, ಮಕ್‌ಮಲೈ ಪನ್ನೀರ್, ದುಂಕಾರ್ ಅಂಜೀರ್ ಕೋಫ್ತಾ ಕರಿ, ದಾಲ್ ತೀನ್ ಪಟ್ಟಾ ತಡ್ಕಾ, ಹರಿಯಾಲಿ ಸಬ್ಜಿ, ಪನ್ನೀರ್ ಬಿರಿಯಾನಿ ಸಸ್ಯಾಹಾರಿ ಊಟದ ಕೋರ್ಸ್‌ನ ಭಾಗವಾಗಿದ್ದವು.
ಡೆಸರ್ಟ್‌ನಲ್ಲಿ ಗುಲಾಬ್ ಜಾಮೂನ್, ಗಲಿಯೊಂಕಿ ಫೀರಾನಿ, ವಿವಿಧ ಹಣ್ಣುಗಳ ಹೋಳುಗಳು, ಬ್ಲೂಬೇರಿ ಚೀಸ್ ಕೇಕ್, ವೆನ್ನಿಲ್ಲಾ ಮ್ಯಾಂಗೋ ಐಸ್ ಕ್ರೀಮ್‌ಗಳು ಊಟದ ಕೊನೆಯಲ್ಲಿ ಹೊಟ್ಟೆ ತಣಿಸುವುದರಲ್ಲಿ ಎರಡು ಮಾತಿಲ್ಲ.
ಆಹಾರೋತ್ಸವದ ವಿವರ
‘ದಿಲ್ಲಿ ವಾಲಿ ಕುವಾ ಗಲ್ಲಿ’ ಆಹಾರೋತ್ಸವೂ ಆಗಸ್ಟ್ 7ರವರೆಗೆ ನಡೆಯಲಿದೆ.
ಸ್ಥಳ: ಬಾರ್ಬೆಕ್ಯೂ ನೇಷನ್‌ನ 7 ಕಡೆಗಳಲ್ಲಿ ಈ ಆಹಾರೋತ್ಸವ ನಡೆಯಲಿದೆ. ( ಇಂದಿರಾನಗರ, ಜೆ.ಪಿ. ನಗರ, ಲಿಡೋ ಮಾಲ್ ಹಲಸೂರು, ಕೋರಮಂಗಲ, ಕಲ್ಯಾಣ ನಗರ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್)
ಇಬ್ಬರಿಗೆ ₹1,600
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.