ADVERTISEMENT

ದೋಸಾ ಸ್ಪೆಷಲ್....

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 19:30 IST
Last Updated 18 ಫೆಬ್ರುವರಿ 2011, 19:30 IST

ದೋಸೆ ಹಿಟ್ಟನ್ನು ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಒಂದು ಅಳತೆ ಉದ್ದಿನ ಬೇಳೆ, ನಾಲ್ಕು ಅಳತೆ ಅಕ್ಕಿ, ಒಂದು ಹಿಡಿ ಕಡಲೆಬೇಳೆ, ಒಂದು ಹಿಡಿ ಮೆಂತೆಕಾಳು, ಒಂದು ಹಿಡಿ ತೊಗರಿಬೇಳೆ, ಚಿಟಿಕೆಯಷ್ಟು ಅಡುಗೆ ಸೋಡ.

ಮಾಡುವ ವಿಧಾನ: ಮೇಲೆ ತಿಳಿಸಿದ ಎಲ್ಲ ಕಾಳುಗಳನ್ನು ಹಾಗೂ ಅಕ್ಕಿಯನ್ನು ಪ್ರತ್ಯೇಕವಾಗಿ 6-8 ಗಂಟೆಗಳ ವರೆಗೆ ನೆನೆಯಲು ಇಡಬೇಕು. ನಂತರ ನೆನೆದ ಬೇಳೆ ಕಾಳುಗಳು, ಉದ್ದಿನಬೇಳೆ ಹಾಗೂ ಅಕ್ಕಿಯನ್ನು ಮಿಕ್ಸರ್ ಗ್ರೈಂಡರ್‌ನಲ್ಲಿ ಹದವಾಗಿ, ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಈ ರೀತಿ ತಯಾರಿಸಿದ ಹಿಟ್ಟಿಗೆ ಚಿಟಿಕೆಯಷ್ಟುಅಡುಗೆ ಸೋಡಾ ಬೆರೆಸಿ, ಚೆನ್ನಾಗಿ ಕಲಸಿ, ಮುಚ್ಚಿ ಇಡಬೇಕು. ಸುಮಾರು 8-10 ಗಂಟೆಗಳಲ್ಲಿ ಈ ಹಿಟ್ಟು ಉಬ್ಬಿ, ದೋಸೆ ಮಾಡಲು ರೆಡಿಯಾಗುತ್ತದೆ.

ಸಾದಾ ದೋಸೆ
ದೋಸೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಚೆನ್ನಾಗಿ ಕಾಯ್ದ ದೋಸೆ ಹಂಚಿಗೆ ಸ್ವಲ್ಪ ಎಣ್ಣೆ ಸಿಂಪಡಿಸಿ, ದೋಸೆ ಹಿಟ್ಟನ್ನು ಹಾಕಿ, ತೆಳ್ಳಗೆ ಚಮಚದಿಂದ ಅಗಲವಾಗಿ ಹರಡಬೇಕು. ಸುಮಾರು 2-3 ನಿಮಿಷ ಮಂದ ಉರಿಯಲ್ಲಿ ದೋಸೆ ಕೆಂಪಾಗುವವರೆಗೆ ಬೇಯಿಸಿ ನಂತರ ತಿರುವಿ ಹಾಕಬೇಕು. ಈ ರೀತಿ ತಯಾರಿಸಿದ ದೋಸೆಯನ್ನು ಕೊಬ್ಬರಿಚಟ್ನಿ ಹಾಗೂ ಆಲೂಗಡ್ಡೆ ಪಲ್ಲೆಯೊಂದಿಗೆ ತಿಂದರೆ ರುಚಿಯಾಗಿರುತ್ತದೆ.


ಸೆಟ್ ದೋಸೆ
ಕಾಯ್ದ ದೋಸೆ ಹಂಚಿಗೆ ಸ್ವಲ್ಪ ಎಣ್ಣೆ ಸಿಂಪಡಿಸಿ ದೋಸೆ ಹಿಟ್ಟನ್ನು ಹಾಕಿ, ದಪ್ಪಗೆ ಇರುವಂತೆ 2-3 ನಿಮಿಷ ಮಂದ ಉರಿಯಲ್ಲಿ ಬೇಯಿಸಬೇಕು, ಬೆಣ್ಣೆ ಹಾಗೂ ಕೊಬ್ಬರಿ ಚಟ್ನಿಯೊಂದಿಗೆ ತಿಂದರೆ ರುಚಿಯಾಗಿರುತ್ತದೆ.


ಈರುಳ್ಳಿ ದೋಸೆ (ಉತ್ತಪ್ಪಾ)
ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೋ ಹಾಗೂ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ, ದೋಸೆ ಹಿಟ್ಟಿಗೆ ಸೇರಿಸಿ, ದೋಸೆ ಬೇಯಿಸಿದರೆ ಉತ್ತಪ್ಪಾ ರೆಡಿ. ಇದನ್ನು ಕೊಬ್ಬರಿ ಚಟ್ನಿಯೊಂದಿಗೆ ತಿಂದರೆ ರುಚಿ.


ಸಾದಾ ಪಡ್ಡು
ಚೆನ್ನಾಗಿ ಕಾಯ್ದ ಪಡ್ಡಿನ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ದೋಸೆಹಿಟ್ಟನ್ನು (ಸ್ವಲ್ಪ ಗಟ್ಟಿಯಾಗಿ ಕಲಸಿದ) ಹಾಕಿ, ಮುಚ್ಚಿ, ಮಂದ ಬೆಂಕಿಯಲ್ಲಿ 2-3 ನಿಮಿಷ ಬೇಯಿಸಬೇಕು. ಈ ರೀತಿ ತಯಾರಿಸಿದ ಪಡ್ಡುಗಳನ್ನು ಕೊಬ್ಬರಿ ಚಟ್ನಿಯೊಂದಿಗೆ ತಿಂದರೆ ರುಚಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.