ADVERTISEMENT

ಪರೋಟದ ರುಚಿಯೂಟ

ನಳಪಾಕ

​ಪ್ರಜಾವಾಣಿ ವಾರ್ತೆ
Published 19 ಮೇ 2017, 19:30 IST
Last Updated 19 ಮೇ 2017, 19:30 IST
ಪರೋಟದ ರುಚಿಯೂಟ
ಪರೋಟದ ರುಚಿಯೂಟ   

ಸ್ವೀಟ್ ಪರೋಟ
ಬೇಕಾಗುವ ಸಾಮಗ್ರಿಗಳು
ಗೋಧಿಹಿಟ್ಟು – 1ಕಪ್‌
ಬೆಲ್ಲ –3/4 ಕಪ್‌
ಉಪ್ಪು –ಚಿಟಿಕೆ
ಏಲಕ್ಕಿಪುಡಿ– ಸ್ವಲ್ಪ
ಎಣ್ಣೆ – 1 ಚಮಚ ಹಾಗೂ ಸಾಕಷ್ಟು ತುಪ್ಪ

ತಯಾರಿಸುವ ವಿಧಾನ
ಗೋಧಿಹಿಟ್ಟಿಗೆ ಎಣ್ಣೆ ಮತ್ತು ಉಪ್ಪು ಸೇರಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ.  ಇಪ್ಪತ್ತು ನಿಮಿಷ ಬಿಟ್ಟು ಹಿಟ್ಟಿನಲ್ಲಿ ಉಂಡೆ ಕಟ್ಟಿ ಚಪಾತಿ ಹದಕ್ಕೆ ಲಟ್ಟಿಸಿ. ಬೆಲ್ಲದಪುಡಿ ಮತ್ತು ಏಲಕ್ಕಿಪುಡಿಯನ್ನು ಅರ್ಧ ಭಾಗಕ್ಕೆ ಉದುರಿಸಿ ಸುತ್ತಲೂ ಸ್ವಲ್ಪ ತುಪ್ಪವನ್ನು ಸವರಿ ಮಡಚಿ ಕಾದ ಕಾವಲಿ ಮೇಲೆ ಎರಡೂ ಬದಿ ತುಪ್ಪವನ್ನು ಹಾಕಿ ಕಾಯಿಸಿದರೆ ರುಚಿಯಾದ ಪರೋಟ ಸವಿಯಲು ರೆಡಿ.

ಆಲೂ ಪರೋಟ
ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಆಲೂಗಡ್ಡೆ– 2
ಗೋಧಿಹಿಟ್ಟು – 1ಕಪ್‌
ಉಪ್ಪು– ರುಚಿಗೆ
ಸಣ್ಣಗೆ ಹೆಚ್ಚಿರುವ ಈರುಳ್ಳಿ– 1ಚಮಚ
ಕುತ್ತೊಂಬರಿ ಸೊಪ್ಪು– ಸ್ವಲ್ಪ
ಹಸಿರುಮೆಣಸಿನ ಪೇಸ್ಟ್‌– ಸ್ವಲ್ಪ
ಅರಶಿನಪುಡಿ – ಚಿಟಿಕೆ
ನಿಂಬೆರಸ – 1/2ಚಮಚ
ಕಾಯಿಸಲು ಎಣ್ಣೆ ಅಥವಾ ತುಪ್ಪ

ADVERTISEMENT

ತಯಾರಿಸುವ ವಿಧಾನ
ಗೋಧಿಹಿಟ್ಟಿಗೆ ಎಣ್ಣೆ, ಉಪ್ಪು ಸೇರಿಸಿ ನೀರಿನಲ್ಲಿ ಚಪಾತಿಹಿಟ್ಟಿನ ಹದಕ್ಕೆ ಕಲಿಸಿ  ಸ್ವಲ್ಪ ಹೊತ್ತು ನೆನೆಯಲು ಬಿಡಿ. ಬೇಯಿಸಿದ ಆಲೂಗಡ್ಡೆಯನ್ನು ಸ್ವಲ್ಪ ನುಣ್ಣಗೆ ಮಾಡಿ ಹಸಿರುಮೆಣಸಿನ ಪೇಸ್ಟ್‌ , ಉಪ್ಪು, ಕೊತ್ತುಂಬರಿಸೊಪ್ಪಿನ ಚೂರು,  ನಿಂಬೆರಸ, ಅರಶಿನಪುಡಿ, ಈರುಳ್ಳಿ ಚೂರನ್ನು ಸೇರಿಸಿ ಉಂಡೆಗಳನ್ನು ಮಾಡಿಕೊಳ್ಳಿ, ನಂತರ ಚಪಾತಿ ಹಿಟ್ಟಿನಲ್ಲಿ ಚಿಕ್ಕದಾಗಿ ಲಟ್ಟಿಸಿ ಉಂಡೆ ಮಧ್ಯೆ ಇಟ್ಟು ಮುಚ್ಚಿ. ನಿಧಾನವಾಗಿ ಲಟ್ಟಿಸಿ ಕಾದ ಕಾವಲಿಯ ಮೇಲೆ ಎರಡೂ ಬದಿ ತುಪ್ಪು ಅಥವಾ ಎಣ್ಣೆಯನ್ನು ಹಾಕಿ ಕಾಯಿಸಿದರೆ ಸವಿಯಲು ರುಚಿಯಾದ ಆಲೂ ಪರೋಟ ರೆಡಿ.

ಮೂಲಂಗಿ ಪರೋಟ
ಬೇಕಾಗುವ ಸಾಮಗ್ರಿಗಳು
ಗೋಧಿಹಿಟ್ಟು– 1ಕಪ್‌
ಉಪ್ಪು – ರುಚಿಗೆ
ಎಣ್ಣೆ– 1ಚಮಚ
ಸಣ್ಣಗೆ ತುರಿದಿರುವ ಮೂಲಂಗಿ – 1
ಕೆಂಪು ಮೆಣಸಿನ ಪುಡಿ– 3/4 ಚಮಚ
ಜಿರಿಗೆಪುಡಿ– ಸ್ವಲ್ಪ

ತಯಾರಿಸುವ ವಿಧಾನ
ಗೋಧಿಹಿಟ್ಟಿಗೆ ಎಣ್ಣೆ, ಉಪ್ಪನ್ನು ಸೇರಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ  ಕಲೆಸಿ ಸ್ವಲ್ಪ ಹೊತ್ತು ಬಿಡಿ. ಮೂಲಂಗಿ ತುರಿಗೆ ಉಪ್ಪು, ಕೆಂಪು ಮೆಣಸಿನಪುಡಿಯನ್ನು ಸೇರಿಸಿ ಇಪ್ಪತ್ತು ನಿಮಿಷ ಬಿಟ್ಟು ಮೂಲಂಗಿ ತುರಿಯ ರಸವನ್ನು ಹಿಂಡಿ ಜೀರಿಗೆ ಪುಡಿಯನ್ನು ಸೇರಿಸಿ ಉಂಡೆ ಕಟ್ಟಿ ಚಪಾತಿಯನ್ನು ಚಿಕ್ಕದಾಗಿ ಲಟ್ಟಿಸಿ ಮಧ್ಯದಲ್ಲಿ ವಿಶ್ರಣವನ್ನು ಇಟ್ಟು ಮುಚ್ಚಿ ನಿಧಾನವಾಗಿ ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಎರಡು ಕಡೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಕಾಯಿಸಿದರೆ ರುಚಿಯಾದ ಮೂಲಂಗಿ ಪರೋಟ ರೆಡಿ.

ಮೆಂತ್ಯೆಸೊಪ್ಪಿನ ಪರೋಟ
ಬೇಕಾಗುವ ಸಾಮಗ್ರಿ
ಗೋಧಿಹಿಟ್ಟು – 1ಕಪ್‌
ಉಪ್ಪು– ರುಚಿಗೆ
ಸಣ್ಣಗೆ ಹೆಚ್ಚಿರುವ ಮೆಂತ್ಯೆಸೊಪ್ಪಿನ ಚೂರುಗಳು–  1/4 ಕಪ್‌
ಹಸಿರುಮೆಣಸು ಪೇಸ್ಟ್‌– 3/4 ಚಮಚ
ಇಂಗು –ಸ್ವಲ್ಪ
ತುಪ್ಪ– ಸ್ವಲ್ಪ

ತಯಾರಿಸುವ ವಿಧಾನ
ಗೋಧಿಹಿಟ್ಟಿಗೆ, ಉಪ್ಪು, ಹಸಿರುಮೆಣಸಿನ ಪೇಸ್ಟ್‌, ಇಂಗು, ಎಣ್ಣೆ, ಮೆಂತೆಸೊಪ್ಪಿನ ಚೂರುಗಳನ್ನು ಸೇರಿಸಿ ನೀರಿನಲ್ಲಿ ಚಪಾತಿಹಿಟ್ಟಿನ ಹದಕ್ಕೆ ಲಟ್ಟಿಸಿ. ಕಾದ ಕಾವಲಿಯ ಮೇಲೆ ಹಾಕಿ ತುಪ್ಪ ಅಥವಾ ಎಣ್ಣೆಯನ್ನು ಎರಡೂ ಕಡೆ ಹಾಕಿ ಕಾಯಿಸಿದರೆ ಮೆಂತ್ಯೆಸೊಪ್ಪಿನ ಪರೋಟ ಸಿದ್ಧ.

ಕ್ಯಾರೆಟ್ ಪರೋಟ
ಬೇಕಾಗುವ ಸಾಮಗ್ರಿಗಳು
ಗೋಧಿಹಿಟ್ಟು – 1ಕಪ್‌
ಸಣ್ಣಗೆ ಹೆಚ್ಚಿದ ಕ್ಯಾರೆಟ್‌– 1 ಕಪ್‌
ಕೊತ್ತುಂಬರಿ – 1ಚಮಚ
ಜೀರಿಗೆಪುಡಿ– ಸ್ವಲ್ಪ
ಧನಿಯಾ ಪುಡಿ– ಸ್ವಲ್ಪ
ಉಪ್ಪು – ರುಚಿಗೆ
ಕೆಂಪು ಮೆಣಸಿನ ಪುಡಿ– 3/4 ಚಮಚ
ಕಾಯಿಸಲು – ತುಪ್ಪ
ಎಣ್ಣೆ – 1ಚಮಚ

ತಯಾರಿಸುವ ವಿಧಾನ
ಕ್ಯಾರೆಟ್‌ ತುರಿಗೆ, ಕೊತ್ತುಂಬರಿ ಸೊಪ್ಪಿನ ಚೂರು, ಜೀರಿಗೆ, ಧನಿಯಾಪುಡಿ, ಉಪ್ಪು, ಕೆಂಪು ಮೆಣಸಿನಪುಡಿ ಸೇರಿಸಿ ಬೆರೆಸಿ. ಹಿಟ್ಟಿಗೆ ಉಪ್ಪು, ಎಣ್ಣೆಯನ್ನು ಸೇರಿಸಿ ನೀರಿನಲ್ಲಿ ಕಲೆಸಿ ನೆನೆಯಲು ಸ್ವಲ್ಪ ಹೊತ್ತು ಬಿಟ್ಟು, ಚಪಾತಿಯ ಹದಕ್ಕೆ ತೆಳ್ಳಗೆ ಎರಡನ್ನು ಲಟ್ಟಿಸಿ ಒಂದರ ಮೇಲೆ ತಯಾರಿಸಿದ ಮಿಶ್ರಣವನ್ನು ಹಿಂಡಿ ಹರವಿ. ಲಟ್ಟಿಸಿದ ಮತ್ತೊಂದು ಚಪಾತಿಯನ್ನು ಅದರ ಮೇಲೆ ಇಟ್ಟು ಮತ್ತೊಂದು ಸಲ ನಿಧಾನವಾಗಿ ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ತುಪ್ಪ ಸವರಿ ಎರಡೂ ಬದಿ ಕಾಯಿಸಿದರೆ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.