ADVERTISEMENT

ಬಾಯಿ ನೀರೂರಿಸುವ ಕಲ್ತಪ್ಪ

ಪ.ರಾಮಕೃಷ್ಣ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ಕಲ್ತಪ್ಪ
ಕಲ್ತಪ್ಪ   

ಉಡುಪಿಗೆ ಬರುವ ಬಹುತೇಕ ಯಾತ್ರಿಕರು ಧರ್ಮಸ್ಥಳಕ್ಕೆ ಭೇಟಿ ನೀಡದೆ ಹೋಗುವುದಿಲ್ಲ. ಕಾರ್ಕಳಕ್ಕೆ ಬಂದು ಬಜಗೋಳಿ, ನಾರಾವಿ, ಬೆಳ್ತಂಗಡಿ ಮೂಲಕ ಧರ್ಮಸ್ಥಳ ತಲಪಲು ಒಳ್ಳೆಯ ರಸ್ತೆಯಿದೆ. ಹೀಗೆ ದಿನವೂ ಸಾವಿರಾರು ಯಾತ್ರಿಕರು ಸಂಚರಿಸುವ ಈ ದಾರಿಯಲ್ಲಿ ಬೆಳ್ತಂಗಡಿ ತಲಪಲು ಏಳು ಕಿಲೊಮೀಟರ್ ಇರುವಾಗ ಪೆರಾಲ್ದರಕಟ್ಟೆ ಎಂಬ ಚಿಕ್ಕ ಊರು ಸಿಗುತ್ತದೆ. ಇಲ್ಲೊಂದು ಉಪಾಹಾರ ಗೃಹವಿದೆ. ಹೆಸರು ‘ಹೋಟೆಲ್ ಹೈವೆ’ ಹೆದ್ದಾರಿ ಪಕ್ಕದಲ್ಲಿದೆ.

ಉಪಾಹಾರಕ್ಕಾಗಿ ಒಮ್ಮೆ ಈ ಹೋಟೆಲಿಗೆ ಬಂದವರು ಮುಂದಿನ ಸಲ ಬಂದಾಗ ತಪ್ಪದೆ ಅಲ್ಲಿಗೆ ಹೋಗುವುದು ಖಚಿತ. ಯಾಕೆಂದರೆ ಇಲ್ಲಿ ಸಿಗುವ ಕಲ್ತಪ್ಪದ ರುಚಿಗೆ ಮಾರು ಹೋಗದವರೇ ಇಲ್ಲ. ಸ್ಥಳೀಯರಿಗಂತೂ ಇದೆಂದರೆ ಪಂಚಪ್ರಾಣ.

ಒಂದು ಕಾಲದಲ್ಲಿ ಬಳಪದ ಕಲ್ಲಿನ ವಿಶಿಷ್ಟ ತವಾದಲ್ಲಿ ತಯಾರಾಗುತ್ತಿದ್ದ ಈ ರುಚಿಕರ ತಿಂಡಿ ಕಲ್ಲಿನ ಅಪ್ಪ ಇಂದು ಕಲ್ಲಿನ ಬದಲು ಲೋಹದ ತವಾದಲ್ಲಿ ಸಿದ್ಧವಾಗುತ್ತಿದ್ದರೂ ಅದರ ಹೆಸರು 'ಕಲ್ತಪ್ಪ' ಎಂದೇ ಉಳಿದುಕೊಂಡಿದೆ.

ADVERTISEMENT

ಕೇರಳ ಮೂಲದ ತಿಂಡಿ ಕರಾವಳಿಯಲ್ಲಿ ತಯಾರಾಗುತ್ತಿದ್ದರೂ ಬೇಯಿಸುವ ತವಾ ಕೇರಳದಲ್ಲಿ ಮಾತ್ರ ಸಿಗುತ್ತದೆ. ಬೇರೆ ತವಾದಲ್ಲಿ ತಯಾರಿಸಿದರೆ ಅದಕ್ಕೆ ಅಂತಹ ರುಚಿ ಬರುವುದಿಲ್ಲ. ಒಂದು ತವಾ ಬೇಕಿದ್ದರೆ ಒಂದು ಸಾವಿರ ರೂಪಾಯಿ ಕೊಟ್ಟು ಅಲ್ಲಿಂದಲೇ ತರಬೇಕು.

ಕಲ್ತಪ್ಪ ದೂರದಿಂದಲೇ ತನ್ನ ಕಂಪಿನಿಂದ ಮನ ಸೆಳೆಯುತ್ತದೆ. ಆಗ ತಾನೇ ತಯಾರಾದ ಈ ತಿಂಡಿ ಬಟ್ಟಲಿನಾಕಾರವಾಗಿದ್ದು ಗ್ರಾಹಕರ ಬಳಿಗೆ ಬರುವ ಮೊದಲು ಅದನ್ನು ಕತ್ತರಿಸಿ ಆರು ತುಂಡುಗಳಾಗಿ ಮಾಡಲಾಗುತ್ತದೆ. ಹೀಗೆಯೇ ತಿನ್ನಬಹುದು. ಬಾಯಲ್ಲಿರಿಸಿದರೆ ತಾನಾಗಿ ಕರಗಿ ಇನ್ನೊಂದು ತುಂಡು ಬೇಕೆನ್ನುವಂತೆ ಮಾಡುತ್ತದೆ.

ಕಡಲೇಕಾಳು, ಆಲೂಗೆಡ್ಡೆ, ಬೀನ್ಸ್, ಕ್ಯಾರೆಟ್ ಸೇರಿಸಿ ತಯಾರಿಸಿದ ಕೂರ್ಮ ಎಂಬ ಗಸಿಯನ್ನು ಇದರ ಜೊತೆಗೆ ನಂಜಿಕೊಳ್ಳಲು ಕೊಡುತ್ತಾರೆ. ನಾಲಿಗೆ ಚಪ್ಪರಿಸಿಕೊಂಡು ತಿನ್ನುವ ಸ್ವಾದ ವರ್ಣಿಸಲು ಪದಗಳೇ ಸಿಗದು. ತಿಂದವರು ಮನೆಗೂ ಕಟ್ಟಿಸಿಕೊಂಡು ಹೋಗದೆ ಬಿಡುವುದಿಲ್ಲ. ಕೆಲವರು ಒಳಗೆ ಹೋಗಿ, 'ಇದನ್ನು ತಯಾರಿಸಲು ಯಾವ ವಿಧದ ಅಕ್ಕಿ ಬಳಸುತ್ತೀರಿ?' ಎಂದು ಕೇಳುತ್ತಾರೆ.

ಈ ಕಲ್ತಪ್ಪ ತಯಾರಿಕೆಯ ಕೌಶಲ ಹೋಟೆಲ್ ಒಡೆಯ ಶೇಖ್ ಮೊಯ್ದೀನ್ ಅವರದು. ತಯಾರಿಕೆಯಲ್ಲಿ ರಹಸ್ಯವೇನೂ ಇಲ್ಲ, ಆದರೆ ಅಂಗಡಿಯಿಂದ ತರುವ ಅಕ್ಕಿಯಿಂದ ಇದನ್ನು ತಯಾರಿಸಲು ಬರುವುದಿಲ್ಲ ಎನ್ನುತ್ತಾರೆ ಅವರು. ಬಿಳಿ ಅಕ್ಕಿ ಸಿಗುವ ಬತ್ತವನ್ನು ನೆನೆಸಿ ಹೊಟ್ಟು ಬಿರಿಯುವವರೆಗೆ ಮಾತ್ರ ಬೇಯಿಸಿ ಒಣಗಿಸಿ ತಯಾರಿಸುವ ಎದುರು ಬೆಳ್ತಿಗೆ ಅಕ್ಕಿಯನ್ನು ಗಿರಣಿಯವರಿಗೆ ಹೇಳಿ ಮಾಡಿಸುತ್ತಾರೆ. ಹನ್ನೆರಡು ತಾಸುಗಳ ಕಾಲ ಅಕ್ಕಿಯನ್ನು ನೆನೆಸಿ ನುಣ್ಣಗೆ ಹದವಾಗಿ ರುಬ್ಬುತ್ತಾರೆ. ಹಿಟ್ಟಿಗೆ ಉಪ್ಪು ಮತ್ತು ಅಡುಗೆ ಸೋಡ ಬೆರೆಸಿ ಸ್ವಲ್ಪ ಹೊತ್ತು ಇರಿಸುತ್ತಾರೆ.

ಕಾದ ತವಾಕ್ಕೆ ಐವತ್ತು ಗ್ರಾಮ್ ಸೂರ್ಯಕಾಂತಿ ರೀಫೈನ್ಡ್‌ ಎಣ್ಣೆ ಹಾಕಿ ಬಿಸಿಯಾಗುತ್ತಲೇ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯುತ್ತಾರೆ. ಅದರ ಮೇಲಿಂದ ಹಿಟ್ಟನ್ನು ದಪ್ಪವಾಗಿ ದೋಸೆಯಂತೆ ಹೊಯ್ದು ಮುಚ್ಚಳ ಮುಚ್ಚಿ ಹತ್ತು ನಿಮಿಷ ಬೇಯಿಸುತ್ತಾರೆ. ಮುಚ್ಚಳ ತೆರೆಯುತ್ತಿದ್ದಂತೆ ಘಮಘಮ ಎನ್ನುವ ಈರುಳ್ಳಿಯ ಪರಿಮಳದೊಂದಿಗೆ ಬೆಳ್ಳಿಯ ಬಟ್ಟಲಿನಂತಹ ಕಲ್ತಪ್ಪ ತಯಾರಾಗಿರುತ್ತದೆ.

‘ಒಂದು ಕಿಲೋ ಅಕ್ಕಿಯಿಂದ ಮೂರು ಕಲ್ತಪ್ಪ ತಯಾರಿಸಬಹುದು. ಹದಿನೆಂಟು ಪ್ಲೇಟ್‌ಗಳಿಗೆ ಹಂಚಲು ಸಾಕಾಗುತ್ತದೆ. ದಿನಕ್ಕೆ ಏಳು ಕಿಲೋ ಅಕ್ಕಿಯ ಕಲ್ತಪ್ಪ ಮುಗಿಯುತ್ತದೆ. ಶನಿ- ಭಾನುವಾರ ಮತ್ತು ರಜಾದಿನಗಳಲ್ಲಿ ಯಾತ್ರಿಕರ ಸಂಚಾರ ಹೆಚ್ಚಿರುವಾಗ ಇದರ ಮೂರು ಪಟ್ಟು ಕಲ್ತಪ್ಪ ಖಾಲಿಯಾಗುತ್ತದೆ. ಎಂದೋ ತಿಂದು ಹೋದವರು ಮತ್ತೆ ನೆನಪಿಟ್ಟುಕೊಂಡು ಬಂದು ಇದನ್ನೇ ಕೇಳುತ್ತಾರೆ’ ಎನ್ನುವ ಷೇಕ್ ಮೊಯ್ದಿನ್ ‘ಈ ತಿಂಡಿ ಪಂಚತಾರಾ ಹೋಟೆಲುಗಳಲ್ಲಿ ಕೂಡ ಸಿಗುವುದಿಲ್ಲ. ರುಚಿ ಹೆಚ್ಚೆಂದು ನಾವು ಯಾರನ್ನೂ ಸುಲಿಯುವುದಿಲ್ಲ, ಒಂದು ತುಂಡಿಗೆ ಕೇವಲ ಹತ್ತು ರೂಪಾಯಿ ಬೆಲೆ ತೆಗೆದುಕೊಳ್ಳುತ್ತೇವೆ. ಕರಾವಳಿಯ ತಿಂಡಿಗೆ ಅಭಿಮಾನಿಗಳು ಹೆಚ್ಚಾದರೆ ನಮ್ಮ ಭಾಗ್ಯ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.