ADVERTISEMENT

ಬಿರಿಯಾನಿ ನನಗಿಷ್ಟ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:30 IST
Last Updated 28 ಫೆಬ್ರುವರಿ 2018, 19:30 IST
ಬಿರಿಯಾನಿ ನನಗಿಷ್ಟ
ಬಿರಿಯಾನಿ ನನಗಿಷ್ಟ   

ನನ್ನೂರು ಕೊಡಗು. ನಾನು ಬೆಂಗಳೂರಿನಲ್ಲಿ ಒಬ್ಬಳೇ ಇದ್ದೀನಿ. ನನಗೆ ಹೊರಗಡೆ ಊಟ ಇಷ್ಟ ಆಗಲ್ಲ. ಮನೆಯಡುಗೆಯೇ ಇಷ್ಟ. ನನ್ನ ಅಡುಗೆಯನ್ನು ನಾನೇ ಮಾಡಿಕೊಳ್ತೀನಿ. ಹಾಗಂತ ನಾನು ಈಚೆಗೆ ಅನಿವಾರ್ಯವಾಗಿ ಅಡುಗೆ ಕಲಿತಿದ್ದಲ್ಲ. ನನಗೆ ಸಣ್ಣವಳಿದ್ದಾಗಿನಿಂದಲೂ ಅಡುಗೆ ಬಗ್ಗೆ ಆಸಕ್ತಿ ಇತ್ತು. ಸಣ್ಣವಳಿದ್ದಾಗ ಅಮ್ಮನ ಜೊತೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೆ. ಅವರು ಅಡುಗೆ ಮಾಡುತ್ತಿದ್ದಾಗ ನನಗೆ ಸ್ವಲ್ಪ ಸ್ವಲ್ಪ ವಿವರಿಸಿ ಹೇಳ್ತಾ ಇದ್ರು. ಹೀಗೆ ಅಡುಗೆ ನೋಡಿ ನೋಡಿ ಎಲ್ಲಾ ಬಗೆಯ ಅಡುಗೆ ಬಗ್ಗೆ ಕಲಿತುಕೊಂಡಿದ್ದೀನಿ.

ಹೈಸ್ಕೂಲಿಗೆ ಬಂದ ಮೇಲೆ ಅಮ್ಮ ರುಚಿರುಚಿಯಾದ ಅಡುಗೆ ಬಗ್ಗೆ ಕಲಿಸಿದರು. ಅವರು ‘ಯಾವಾಗಲೂ ನಾವು ನಿನ್ನ ಜೊತೆ  ಇರೋಕ್ಕಾಗಲ್ಲ. ನೀನೂ ಅಡುಗೆ ಕಲಿಯಬೇಕು’ ಎಂದು ಹೇಳುತ್ತಿದ್ದರು. ಈಗ ಹಾಗೆಯೇ ಆಯಿತು. ಅವರು ಕೊಡಗಿನಲ್ಲಿದ್ದರೆ, ನಾನೂ ಬೆಂಗಳೂರಿನಲ್ಲಿ. ಆದ್ರೆ ಈರುಳ್ಳಿ, ಟೊಮೆಟೊ ಇದ್ರೆ ನಾನೂ ಚೆನ್ನಾಗೇ ಅಡುಗೆ ಮಾಡುತ್ತೇನೆ. ಅಮ್ಮನ ಕೈರುಚಿ ಮುಂದೆ ನನ್ನ ಅಡುಗೆ ಏನಲ್ಲ. ಆದ್ರೆ ಸ್ನೇಹಿತರು ನನ್ನ ಅಡುಗೆ ರುಚಿ ನೋಡಿ, ಹೊಗಳುತ್ತಿರುತ್ತಾರೆ.

ನನಗೆ ಬಿರಿಯಾನಿ ಅಂದ್ರೆ ತುಂಬ ಇಷ್ಟ. ಚಿಕನ್‌ ಬಿರಿಯಾನಿ ಚೆನ್ನಾಗಿ ಮಾಡ್ತೀನಿ. ವೆನಿಲ್ಲಾ ಕೇಕ್‌, ಬಗೆ ಬಗೆ ಪಾಯಸ, ಕ್ಯಾರೆಟ್‌ ಹಲ್ವಾ ನಂಗಿಷ್ಟ. ಇದನ್ನು ಆಗಾಗ ಮಾಡಿಕೊಂಡು ತಿಂತೀನಿ. ಬೆಂಗಳೂರು ಬಂದ್ಮೇಲೆ ಉತ್ತರ ಭಾರತದ ಸ್ನೇಹಿತರಿಂದ ರೋಟಿ, ಡೋಕ್ಲಾ, ದಾಲ್‌ ತಡ್ಕಾ, ಸಬ್ಜಿ, ಕಾಜೂ ಬರ್ಫಿ, ರಸಮಲೈ ಮಾಡೋದನ್ನ ಕಲಿತುಕೊಂಡಿದ್ದನಿ. ಊರಿಗೆ ಹೋದಾಗ ಉತ್ತರ ಭಾರತದ ಸ್ಪೆಷಲ್‌ ಅಪ್ಪ– ಅಮ್ಮನಿಗೆ ಮಾಡಿಕೊಡ್ತೀನಿ. ಅಪ್ಪನಿಗೆ ನನ್ನ ಅಡುಗೆ ಇಷ್ಟ. ನಾನು ಮಾಡಿದ ಅಡುಗೆಯನ್ನು ತಿಂದವರು ಹೊಗಳಿದರೆ ಸಖತ್ ಖುಷಿ ಆಗುತ್ತೆ.

ADVERTISEMENT

ಚಿಕನ್‌ ಬಿರಿಯಾನಿ

ಸಾಮಗ್ರಿಗಳು:  500 ಗ್ರಾಂ ಚಿಕನ್, 800 ಗ್ರಾಂ ಬಾಸುಮತಿ ಅಕ್ಕಿ, 1 ಚಮಚ ಜೀರಿಗೆ, ತುಪ್ಪ, ಎಣ್ಣೆ, ಕೊತ್ತಂಬರಿ ಮತ್ತು ಪುದೀನಾ, 5 ಹಸಿ ಮೆಣಸಿನಕಾಯಿ, 1 ಚಮಚ ಕೆಂಪು ಮೆಣಸಿನ ಪುಡಿ, ಅರಿಶಿಣ, ಅರ್ಧ ಕಪ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 1 ಚಮಚ ಗರಂ ಮಸಾಲಾ ಪುಡಿ, 2 ಈರುಳ್ಳಿ, ಉಪ್ಪು, ಚಕ್ಕೆ, ಲವಂಗಾ, ಏಲಕ್ಕಿ, ಮೊಸರು.

ಮಾಡುವ ವಿಧಾನ: ಚಿಕನ್ ಅನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು. ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಅರಿಶಿಣ ಹಾಕಿ ಕಲಸಿಟ್ಟುಕೊಳ್ಳಬೇಕು. ಇದಕ್ಕೆ ಸ್ವಲ್ಪ ಕೆಂಪು ಮೆಣಸಿನಕಾಯಿ ಪುಡಿ ಹಾಗೂ ಲಿಂಬೆರಸ ಸೇರಿಸಬಹುದು. ಇದನ್ನು 10 ನಿಮಿಷ ಹಾಗೆಯೇ ಬಿಡಬೇಕು.

ಬಳಿಕ ಗ್ಯಾಸ್‌ನ ಸಣ್ಣ ಉರಿಯಲ್ಲಿ ಸ್ವಲ್ಪ ತುಪ್ಪ ಹಾಗೂ ಅಡುಗೆ ಎಣ್ಣೆಯನ್ನು ಎರಡೆರಡು ಚಮಚ ಹಾಕಬೇಕು. ಇದಕ್ಕೆ ಚಕ್ಕೆ, ಲವಂಗಾ, ಏಲಕ್ಕಿ, ಹಸಿಮೆಣಸು  ಮತ್ತು ಉದ್ದುದ್ದಾಗಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಹುರಿಯಬೇಕು. ಈರುಳ್ಳಿ ಕೆಂಪಗಾಗುವವರೆಗೆ ಹುರಿಯಬೇಕು. ಇದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ ಸೇರಿಸಬೇಕು. ಇದರ
ಹಸಿವಾಸನೆ ಹೋದ ಮೇಲೆ ಟೊಮೆಟೊ, ಬಿರಿಯಾನಿ ಹುಡಿ, ಜೀರಿಗೆ ಹುಡಿ, ಉಪ್ಪು, ಮೆಣಸಿನ ಹುಡಿ, ಪುದೀನಾ, ಸ್ವಲ್ಪ ಮೊಸರು ಸೇರಿಸಬೇಕು.  ಬಳಿಕ ಈ ಮಿಶ್ರಣಕ್ಕೆ ಚಿಕನ್‌ ತುಂಡುಗಳನ್ನು ಹಾಕಿ ಬೇಯಿಸಬೇಕು.

ಚಿಕನ್‌ ಬೇಯುತ್ತಿದೆ ಎಂದಾಗ ಅಕ್ಕಿಯನ್ನು ತೊಳೆದು ಅದರ ಎರಡರಷ್ಟು ನೀರು ಹಾಕಿ ಚಿಕನ್‌, ಅಕ್ಕಿಯನ್ನು ಒಟ್ಟಿಗೆ ಬೇಯಿಸಬೇಕು. ಎರಡು ವಿಶಲ್‌ ಆದ ಕೂಡಲೇ ಗ್ಯಾಸ್‌ ಆಫ್‌ ಮಾಡಿದರೆ ಚಿಕನ್‌ ಬಿರಿಯಾನಿ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.