ADVERTISEMENT

ಬೀಗರ ಊಟ ಬಡಿಸುವ ಗೌಡ್ರು

ರಸಸ್ವಾದ

​ಪ್ರಜಾವಾಣಿ ವಾರ್ತೆ
Published 30 ಜುಲೈ 2013, 19:59 IST
Last Updated 30 ಜುಲೈ 2013, 19:59 IST
ಚಿತ್ರಗಳು: ರಂಜು ಪಿ.
ಚಿತ್ರಗಳು: ರಂಜು ಪಿ.   

ಗಲ್ಲಿಯೊಂದರ ಆ ಹೋಟೆಲ್‌ನ ಒಳ ಹೋಗುತ್ತಿದ್ದಂತೆ ಮಾಂಸಾಹಾರಿ ಊಟದ ಪರಿಮಳ ಮೂಗಿಗೆ ರಾಚುತ್ತದೆ. ಆಸನವನ್ನು ಅಲಂಕರಿಸಿದ ಕೂಡಲೆ ಹೆಗಲ ಮೇಲೊಂದು ಟವೆಲ್ಲನ್ನು ಹಾಕಿಕೊಂಡ ಮಾಲೀಕ ಬಂದು `ಮೆನು' ಮುಂದಿಡುತ್ತಾರೆ. ಅದರಲ್ಲಿ ನಮ್ಮ ಗಮನ ಸೆಳೆಯುವುದು ಮುಖ್ಯವಾಗಿ `ತಲೆ ಮಾಂಸ', `ಮೆದುಳು ಫ್ರೈ', `ಕಾಲು ಸೂಪ್', `ಬೋಟಿ ಫ್ರೈ' ಹಾಗೂ `ಮಟನ್ ಬೀಗರ ಊಟ'. 

ಇಂದಿರಾನಗರದಲ್ಲಿ ಐದು ವರ್ಷಗಳ ಹಿಂದೆ ಆರಂಭವಾದ `ಗೌಡ್ರು ಹೋಟೆಲ್'ನಲ್ಲಿ ಮಾಂಸಾಹಾರಿ ಪ್ರಿಯರನ್ನು ಸೆಳೆಯುವ ತಿನಿಸುಗಳಿವೆ. ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ಪಕ್ಕಾ ಮಾಂಸಾಹಾರಿ ಆಹಾರವನ್ನು ಉಣಬಡಿಸುತ್ತಿರುವುದು ಇಲ್ಲಿನ ವಿಶೇಷ.

ಕುರಿಮಾಂಸದ ಊಟದೊಂದಿಗೆ ರಾಗಿಮುದ್ದೆ ಕಾಂಬಿನೇಷನ್ ಇದೆ. ಮಸಾಲೆ ಹೆಚ್ಚು ಬಳಸದ ಹಾಗೂ ಹಸಿರು ಮೆಣಸಿನಕಾಯಿ ಹಾಕದೇ ಒಣ ಮೆಣಸಿನಕಾಯಿ ಪುಡಿಯನ್ನು ಅಡುಗೆಗೆ ಬಳಸುತ್ತಾರೆ. ಹಸಿರು ಮೆಣಸಿನಕಾಯಿ ಆರೋಗ್ಯದ ದೃಷ್ಟಿಯಿಂದಲೂ ಕೆಲವರಿಗೆ ಆಗಿಬರುವುದಿಲ್ಲ ಎಂಬುದು ಮಾಲೀಕರ ಕಾಳಜಿ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹುಳಗನಹಳ್ಳಿ ಗ್ರಾಮದ ಎಚ್.ಕೆ. ನಂದೀಶ ಗೌಡ ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದ ಕೂಡಲೇ ಉದ್ಯೋಗ ಬಯಸಿ ಸೀದಾ ಬಂದದ್ದು ಬೆಂಗಳೂರಿಗೆ. ಬಾರೊಂದರಲ್ಲಿ ಕೆಲಸಕ್ಕೆ ಸೇರಿ ಸಪ್ಲಯರ್ ಆದರು. ಅಲ್ಲಿಂದ ಅವರ ಅದೃಷ್ಟದ ಬಾಗಿಲು ತೆರೆಯುತ್ತಾ ಹೋಯಿತು.

ಸಪ್ಲಯರ್ ಆಗಿದ್ದ ನಂದೀಶ್ ಅವರ ಕೆಲಸ ಮೆಚ್ಚಿದ ಮಾಲೀಕರು ಕ್ಯಾಷಿಯರ್‌ಆಗಿ ನೇಮಕ ಮಾಡಿಕೊಂಡರು. ಅಲ್ಲಿ ಕೆಲ ವರ್ಷ ದುಡಿದ ನಂತರ ಸ್ನೇಹಿತ ಅಮರನಾಥ್ ಅವರ ಸಲಹೆಯಂತೆ ಇಂದಿರಾನಗರದಲ್ಲಿ 2008ರಲ್ಲಿ `ಗೌಡ್ರು' ಹೆಸರಿನ ಹೋಟೆಲ್ ಆರಂಭಿಸಿದರು. ಸಣ್ಣ ಹೋಟೆಲ್‌ಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಾದ್ದರಿಂದ ಅಲ್ಲಿಯೇ ಸಮೀಪದ ಗಲ್ಲಿಯೊಂದರಲ್ಲಿ ದೊಡ್ಡದಾಗಿ ಎಂಟು ಟೇಬಲ್‌ಗಳ 32 ಮಂದಿ ಕೂರಬಹುದಾದ ಹೋಟೆಲ್ ಆರಂಭಿಸಿದರು. ಇಲ್ಲಿನ ರುಚಿಗೆ ವರ್ತೂರು, ಹೊಸಕೋಟೆ, ಕೆಂಗೇರಿ, ಯಲಹಂಕದಿಂದಲೂ ಆಹಾರಪ್ರಿಯರು ಬರುತ್ತಿದ್ದಾರೆ.

“ಮಂಡ್ಯದ ಒಕ್ಕಲಿಗ ಗೌಡ ಸಮುದಾಯದ ಮನೆಗಳಲ್ಲಿ ಮಾಡುವಂತೆ ನಮ್ಮಲ್ಲಿ ಅಡುಗೆ ಮಾಡಲಾಗುತ್ತದೆ. `ಮಟನ್ ಫ್ರೈ', `ಖೀಮಾ ಫ್ರೈ', `ಚಿಕನ್ ಬೀಗರ ಊಟ', `ಬೋಟಿ ಫ್ರೈ' ಹಾಗೂ `ತಲೆ ಮಾಂಸದ ಫ್ರೈ' ಹೆಚ್ಚು ಜನಪ್ರಿಯವಾಗಿವೆ. ಅಮ್ಮನ ಕೈರುಚಿಯಂತೆ ಊಟವಿರಬೇಕು, ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ಮಸಾಲೆ ಬಳಸದೇ ನಾವೇ ಮಾಡಿದ ಮಸಾಲೆ ಹಾಕುತ್ತೇವೆ. ಹಾಗಾಗಿ ರುಚಿಯೂ ಇಮ್ಮಡಿಸುತ್ತದೆ. ನಮ್ಮಲ್ಲಿ `ಗೌಡ್ರು ಮಟನ್ ಮಸಾಲ', `ನಾಟಿ ಕೋಳಿ ಸಾರು', `ಮಟನ್ ಬೀಗರ ಊಟ' ಹಾಗೂ ಮೊಲದ `ಮಟನ್ ಫ್ರೈ' ಕೂಡ ಹೆಚ್ಚು ಫೇಮಸ್ಸು ಬ್ರದರ್‌” ಎಂದು ಥೇಟ್ ಮಂಡ್ಯ ಶೈಲಿಯಲ್ಲಿ ಮಾಹಿತಿ ನಿಡುತ್ತಾರೆ ನಂದೀಶ್.

`ಕೋಳಿ ಮಾಂಸವನ್ನು ಫ್ರೈ ಮಾಡಿ ಇಟ್ಟುಕೊಂಡಿರುತ್ತೇವೆ. ನಂತರ ಬಾಣಲೆಯಲ್ಲಿ ಒಗ್ಗರಣೆ ಹಾಕಿ, ಮೊಟ್ಟೆ ಹಾಕಿ ಹುರಿಯಲಾಗುತ್ತದೆ. ನಸುಗೆಂಪು ಬಣ್ಣಕ್ಕೆ ಬರುವ ವೇಳೆಗೆ ಮೆಣಸು, ಖಾರ ಹಾಗೂ ಸೋಯಾಸಾಸ್ ಸೇರಿಸುತ್ತೇವೆ. ಹುರಿದುಕೊಂಡಿದ್ದ ಕೋಳಿಮಾಂಸವನ್ನು ಹಾಕಿ ಎರಡು ನಿಮಿಷ ಕಲಕಿದ ಮೇಲೆ ಚಿಕನ್ 65 ಸಿದ್ಧವಾಗುತ್ತದೆ' ಎನ್ನುತ್ತಾರೆ ಬಾಣಸಿಗ ರಮೇಶಗೌಡ.

“ರುಚಿ ಎಲ್ಲಿ ಚೆನ್ನಾಗಿರುತ್ತದೆಯೋ ಅಲ್ಲಿಗೆ ಹೋಗುವ ನಮಗೆ ತಿಂಗಳಿಗೆ ನಾಲ್ಕು ಬಾರಿಯಾದರೂ ಇಲ್ಲಿ ತಿನ್ನುವ ಆಸೆಯಾಗುತ್ತದೆ. ಮನೆಯಲ್ಲಿ ಮಾಡಿದಷ್ಟೇ ರುಚಿಯಾಗಿ ಇಲ್ಲಿ ಊಟ ಇರುತ್ತದೆ. `ಮಟನ್ ಚಾಪ್ಸ್', `ಬೋಟಿ ಫ್ರೈ' ಇಷ್ಟವಾಗುತ್ತವೆ. ನಾನು ಮೂಲತಃ ಉತ್ತರ ಕರ್ನಾಟಕದವನು. ಮುದ್ದೆ ತಿಂದು ಅಭ್ಯಾಸವಿಲ್ಲ, ಇಲ್ಲಿಗೆ ಬರಲು ಆರಂಭಿಸಿದ ಮೇಲೆ ಮುದ್ದೆ ತಿನ್ನುವುದನ್ನೂ ಕಲಿತೆ” ಎಂದು ರುಚಿಯನ್ನು ಬಣ್ಣಿಸಿದರು ಹಲಸೂರಿನಿಂದ ಬಂದಿದ್ದ ಶಶಿಧರ್.

`ಮಟನ್ ಬೀಗರ ಊಟ'ವು ಬಿರಿಯಾನಿ, ಅನ್ನ, ಸಲಾಡ್, ರಾಗಿ ಮುದ್ದೆ ಮತ್ತು ಮಟನ್ ಮಸಾಲ, 1 ಚಪಾತಿ ಹಾಗೂ ಮೊಟ್ಟೆಯನ್ನು ಒಳಗೊಂಡಿರುತ್ತದೆ. `ಚಿಕನ್ ಬೀಗರ ಊಟ'ವಾದರೆ ಒಂದು ಚಿಕನ್ ಮಸಾಲ ಸೇರಿರುತ್ತದೆ. ಪ್ರತಿ ಭಾನುವಾರ ಬೆಳಿಗ್ಗೆ ತಿಂಡಿಗೆ ಇಡ್ಲಿ ಹಾಗೂ `ಕಾಲು ಸೂಪ್' ದೊರೆಯುತ್ತದೆ. ಅಂದು ಸಂಜೆ 4ರವರೆಗೆ ಮಾತ್ರ ಹೋಟೆಲ್ ತೆರೆದಿರುತ್ತದೆ.

ಉಳಿದಂತೆ ಬೆಳಿಗ್ಗೆ 11ಕ್ಕೆ ಆರಂಭವಾಗುವ ಹೋಟೆಲ್ 4ರವರೆಗೆ, ಮತ್ತೆ ಸಂಜೆ 6.30ರಿಂದ ರಾತ್ರಿ 10ರವರೆಗೂ ತೆರೆದಿರುತ್ತದೆ. ಬೆಲೆ ಹೆಚ್ಚೇನೂ ದುಬಾರಿ ಎನಿಸದ ಈ ಹೋಟೆಲ್‌ಗೆ ನಿವೂ ಒಮ್ಮೆ ಭೇಟಿ ಕೊಡಿ.

ಸ್ಥಳ: ನಂ. 23, ಅಪ್ಪರೆಡ್ಡಿ ಪಾಳ್ಯ, ಡಬ್ಬಲ್ ರಸ್ತೆ, ಇಂದಿರಾನಗರ (ಇಎಸ್‌ಐ ಸಮೀಪ). ಮಾಹಿತಿಗೆ: 94482 33814, 2529 4475.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT