ADVERTISEMENT

ಮಲೆನಾಡಿನ ಅವಲಕ್ಕಿ ವೈವಿಧ್ಯ

ಪ್ರಕಾಶ್.ಕೆ.ನಾಡಿಗ್
Published 30 ಅಕ್ಟೋಬರ್ 2015, 19:56 IST
Last Updated 30 ಅಕ್ಟೋಬರ್ 2015, 19:56 IST

ಸೌತೆಕಾಯಿ ಅವಲಕ್ಕಿ
ಸಾಮಗ್ರಿ: ಅರ್ಧ ಕೆಜಿ ಮಿಡಿಯಂ ಅವಲಕ್ಕಿ, ಒಂದು ಮಧ್ಯಮ ಗಾತ್ರದ ಸೌತೆಕಾಯಿ, 6 ಹಸಿಮೆಣಸಿನಕಾಯಿ, ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಅರ್ಧ ಚಮಚ ಸಾಸಿವೆ, ಕಡ್ಲೆಬೇಳೆ ಹಾಗೂ ಉದ್ದಿನಬೇಳೆ ಅರ್ಧ ಚಮಚ, ಎಣ್ಣೆ, ಉಪ್ಪು,

ವಿಧಾನ: ಅವಲಕ್ಕಿಯನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದು, ಸೌತೆಕಾಯಿಯನ್ನು ಸಣ್ಣಗೆ ತುರಿದು ಇದನ್ನು ನೀರು ಬಸಿದ ಅವಲಕ್ಕಿಯ ಜೊತೆಗೆ ಕಲಸಿ, ಸ್ವಲ್ಪಹೊತ್ತು ಬಿಡಿ. ಒಲೆಯ ಮೇಲೆ ಬಾಣೆಲೆಯಲ್ಲಿ ಎಣ್ಣೆಯನ್ನು ಹಾಕಿ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿಕೊಳ್ಳಿ, ಒಗ್ಗರಣೆ ಆದ ನಂತರ ಬೇಕಾದರೆ ಸ್ವಲ್ಪ ಅರಿಶಿನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೊದಲೇ ಸೌತೆಕಾಯಿಯಲ್ಲಿ ನೆನೆಸಿಟ್ಟ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಐದು ನಿಮಿಷ ಕೈ ಅಡಿಸುತ್ತಾ ಇರಿ, ನಂತರ ಸಣ್ಣಗೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ನಿಂಬೆಹಣ್ಣು ಹಾಕಿ ಕೈಯಾಡಿಸಿದರೆ ಬಿಸಿಬಿಸಿಯಾದ ಸೌತೆಕಾಯಿ ಅವಲಕ್ಕಿ ತಿನ್ನಲು ರೆಡಿ.
*
ಅವಲಕ್ಕಿ ಪುಳಿಯೋಗರೆ
ಸಾಮಗ್ರಿ: ಮಿಡಿಯಂ ಅವಲಕ್ಕಿ ಅರ್ಧ ಕೆ.ಜಿ, ಪುಳಿಯೋಗರೆ ಪುಡಿ ಅಥವಾ ಪುಳಿಯೋಗರೆ ಗೊಜ್ಜು, ಎಣ್ಣೆ, ಕರಿಬೇವು, ಶೇಂಗಾ ಬೀಜ ಹಾಗೂ ಸ್ವಲ್ಪ ಅರಿಶಿಣ.

ವಿಧಾನ: ಅವಲಕ್ಕಿಯನ್ನು ತೊಳೆದು ಸ್ವಲ್ಪಹೊತ್ತು ನೆನೆಯಲು ಬಿಡಿ. ಬಾಣೆಲೆಯಲ್ಲಿ ಎಣ್ಣೆಹಾಕಿ ಕಾದ ನಂತರ ಸ್ವಲ್ಪ ಸಾಸಿವೆ, ಶೇಂಗಾಬೀಜ, ಕರಿಬೇವಿನಸೊಪ್ಪು ಹಾಗೂ ಅರಿಶಿಣ ಹಾಕಿ ಬಾಡಿಸಿ ಇದಕ್ಕೆ ಪುಳಿಯೋಗರೆ ಪುಡಿ ಅಥವಾ ಗೊಜ್ಜನ್ನು ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ ಬಾಡಿಸಿ,ಇದಕ್ಕೆ ಮೊದಲೆ ನೆನೆಸಿಟ್ಟುಕೊಂಡ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಬಾಡಿಸಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಅದಕ್ಕೆ ಬೇಕಾದರೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಬಹುದು.
*
ಹಚ್ಚಿದ ಅವಲಕ್ಕಿ (ಚೂಡ)
ಸಾಮಗ್ರಿ: ತೆಳು ಅವಲಕ್ಕಿ ಒಂದು ಕೆ.ಜಿ, ಶೇಂಗಾಬೀಜ 100 ಗ್ರಾಂ, ಹುರಿಗಡ್ಲೆ 100 ಗ್ರಾಂ, ಕರಿಬೇವು ಸ್ವಲ್ಪ, ಚಿಟಿಕೆ ಇಂಗು, ಅರಿಶಿಣ ಪುಡಿ, ಬಾಳಕ ಮೆಣಸಿನಕಾಯಿ ಅಥಾವ ಕೆಂಪು ಮೆಣಸಿನಕಾಯಿ 8-10, ಎಣ್ಣೆ 100 ಗ್ರಾಂ, ಸಾಸಿವೆ, ಅಚ್ಚಕಾರದ ಪುಡಿ 1 ಚಮಚ.

ವಿಧಾನ; ಅವಲಕ್ಕಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಇಲ್ಲದ್ದಿದ್ದರೆ ದೊಡ್ಡ ಬಾಣಲೆಯಲ್ಲಿ ಸ್ವಲ್ಪ ಹುರಿದರೂ ಸರಿ ಗರಿಗರಿಯಾಗುತ್ತದೆ. ಒಂದು ಬಾಣಲೆಯಲ್ಲಿ 50 ಗ್ರಾಂ ಎಣ್ಣೆಯನ್ನು ಹಾಕಿ ಕಾದ ನಂತರ ಸಾಸಿವೆ, ಶೇಂಗಾಬೀಜ, ಹುರಿಗಡಲೆ ಹಾಕಿ ಚೆನ್ನಾಗಿ ಬಾಡಿಸಿರಿ(ಕಂದುಬಣ್ಣಕ್ಕೆ ತಿರುಗಿದಮೇಲೆ ಇದನ್ನು ಅವಲಕ್ಕಿಗೆ ಹಾಕಿ), ಮತ್ತೊಮ್ಮೆ ಬಾಣಲೆಗೆ ಎಣ್ಣೆಹಾಕಿ ಬಾಳಕ ಮೆಣಸಿನಕಾಯಿ ಅಥವಾ ಕೆಂಪುಮೆಣಸಿನಕಾಯಿ ಹಾಕಿ ಚೆನ್ನಾಗೆ ಬಾಡಿಸಿರಿ.

ಕೊನೆಯಲ್ಲಿ ಇದಕ್ಕೆ ಕರಿಬೇವಿನ ಸೊಪ್ಪು, ಚಿಟಿಕೆ ಇಂಗು ಸ್ವಲ್ಪ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪನ್ನ ಹಾಗೂ ಅಚ್ಚಕಾರದ ಪುಡಿಯನ್ನು ಹಾಕಿ ಬಾಡಿಸಿ, ತಕ್ಷಣ ಇಳಿಸಿಬಿಡಿ. ಇದೆಲ್ಲವನ್ನು ಒಂದು ದೊಡ್ಡ ಪೇಪರ್ ಮೇಲೆ ಹಾಕಿ ಚೆನ್ನಾಗಿ ಕಲೆಸಿರಿ,ಇದಕ್ಕೆ ಬೇಕಾದರೆ ಹಪ್ಪಳ ಅರಳು ಸಂಡಿಗೆಯನ್ನು ಕರಿದು ಸೇರಿಸಿದರೆ ರುಚಿಯಾಗಿರುತ್ತದೆ. ಪ್ರವಾಸಕ್ಕೆ ಇದನ್ನು ಸ್ನ್ಯಾಕ್ಸ್‌ ರೀತಿ ಮಾಡಿಕೊಂಡು ಹೊಗಬಹುದಲ್ಲದೆ ಸಂಜೆಯವೇಳೆ ಕಾಫಿ, ಟೀಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ, ಬೇಕಾದರೆ ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿಕೊಂಡು ತಿಂದರೆ ರುಚಿಯಾಗಿರುತ್ತದೆ. ಮಲೆನಾಡು ಭಾಗದಲ್ಲಿ ಹಚ್ಚಿದ ಅವಲಕ್ಕಿ ಅಂದರೆ ಉತ್ತರ ಕರ್ನಾಟಕದ ಕಡೆ ಚೂಡಾ ಎನ್ನುತ್ತಾರೆ.
*
ಕುಟ್ಟವಲಕ್ಕಿ
ಸಾಮಗ್ರಿ: ದಪ್ಪ ಅವಲಕ್ಕಿ ಅರ್ಧ ಕೆ.ಜಿ, ಇಂಗು ಜೀರಿಗೆ, ಕೊತ್ತಂಬರಿ ಬೀಜ ಒಂದು ಚಮಚ, ಐವತ್ತು ಗ್ರಾಂ ಶೇಂಗಾ ಹಾಗೂ ಹುರಿಗಡಲೆ, ಕೆಂಪು ಮೆಣಸಿನಕಾಯಿ ಐದು, ಒಣ ಕೊಬ್ಬರಿ ತುರಿ ಅರ್ಧ ಲೋಟ, ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವು, ಅರಿಶಿನ, ಎಣ್ಣೆ

ವಿಧಾನ: ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ  ಸಣ್ಣಗೆ ಪುಡಿಮಾಡಿಟ್ಟುಕೊಳ್ಳಿ, ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆಯನ್ನು  ಹಾಕಿ ನಾಲ್ಕು ಕೆಂಪು ಮೆಣಸಿನ ಕಾಯಿಯನ್ನು ಹಾಕಿ ಸ್ವಲ್ಪ ಹುರಿದು ಇದಕ್ಕೆ ಕೊತ್ತಂಬರಿ ಬೀಜ, ಜೀರಿಗೆ ಹಾಗೂ ಇಂಗನ್ನು ಹಾಕಿ ಮಿಕ್ಸಿಯಲ್ಲಿ ಸಣ್ಣಗೆ ಪುಡಿಮಾಡಿ. ಇದನ್ನು ಮೊದಲೆ ಪುಡಿಮಾಡಿಟ್ಟುಕೊಂಡ ಅವಲಕ್ಕಿಗೆ ಹಾಕಿ ಚೆನ್ನಾಗಿ ಬೆರೆಸಿರಿ.ಇದಕ್ಕೆ ಸಾಸಿವೆ, ಶೇಂಗಾ ಬೀಜ, ಹುರಿಗಡಲೆ, ಒಣಕೊಬ್ಬರಿತುರಿ ಹಾಗೂ ಕರಿಬೇವಿನ ಸೊಪ್ಪಿನ ಒಗ್ಗರಣೆ ಹಾಕಿ ಬೆರೆಸಿದರೆ ಕಾಫಿ–ಟೀಯೊಂದಿಗೆ ಸವಿಯಲು ಕುಟ್ಟವಲಕ್ಕಿ ರೆಡಿ!
*
ಗೊಜ್ಜವಲಕ್ಕಿ
ಸಾಮಗ್ರಿ: ದಪ್ಪ ಅವಲಕ್ಕಿ ಅರ್ಧ ಕೆ.ಜಿ, ಹುಣಸೆಹಣ್ಣು ಐವತ್ತು ಗ್ರಾಂ, ಸಾರಿನ ಪುಡಿ ಐದು ಚಮಚ, ಬೆಲ್ಲ ಎರಡು ಸಣ್ಣ ಉಂಡೆ, ಉಪ್ಪು, ಒಗ್ಗರಣೆಗೆ ಸಾಸಿವೆ, ಎಣ್ಣೆ, ಶೇಂಗಾಬೀಜ, ಹುರಿಗಡಲೆ, ಕರಿಬೇವು ಹಾಗೂ ಇಂಗು.

ADVERTISEMENT

ವಿಧಾನ: ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಟ್ಟುಕೊಳ್ಳಿ, 3 ಲೋಟ ನೀರಿನಲ್ಲಿ ಹುಣಸೆಹಣ್ಣು ಹಾಕಿ ಸ್ವಲ್ಪ ಹೊತ್ತು ನೆನೆಯಲು ಬಿಡಿ, ನೆಂದ ನಂತರ ಚೆನ್ನಾಗಿ ಹಿಂಡಿ ಹುಣಸೆ ಚರಟವನ್ನು ತೆಗೆದು ಈ ಹುಣಸೆ ರಸಕ್ಕೆ, ಪುಡಿಮಾಡಿದ ಬೆಲ್ಲ, ಸಾರಿನಪುಡಿ ಹಾಗೂ ಉಪ್ಪನ್ನು ಹಾಕಿ ಮೊದಲೆ ಪುಡಿಮಾಡಿಟ್ಟುಕೊಂಡ ಅವಲಕ್ಕಿಯನ್ನು ಅದರಲ್ಲಿ ಹಾಕಿ, ಸ್ವಲ್ಪಹೊತ್ತು ನೆನೆಯಲು ಬಿಡಿ. ಸಾಸಿವೆ, ಶೇಂಗಾಬೀಜ, ಹುರಿಗಡಲೆ, ಕರಿಬೇವು ಹಾಗೂ ಇಂಗಿನ ಒಗ್ಗರಣೆ ಮಾಡಿ ಅದನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕ್ಯೆಯಾಡಿಸಿದರೆ ಹುಳಿ ಸಿಹಿಮಿಶ್ರಿತ ಗೊಜ್ಜವಲಕ್ಕಿ ತಿನ್ನಲು ರೆಡಿ.
*
ಅವಲಕ್ಕಿ ಪಾಯಸ
ಸಾಮಗ್ರಿ: ದಪ್ಪ ಅವಲಕ್ಕಿ ಇನ್ನೂರು ಗ್ರಾಂ, ಬೆಲ್ಲ ಕಾಲು ಕೆ.ಜಿ, ಹಾಲು ಅರ್ಧ ಲೀಟರ್, ಏಲಕ್ಕಿ ನಾಲ್ಕು, ತುಪ್ಪ, ಗೊಡಂಬಿ, ದ್ರಾಕ್ಷಿ, ಕಾಯಿತುರಿ ಅರ್ಧ ಲೋಟ.

ವಿಧಾನ: ಅವಲಕ್ಕಿಯನ್ನು ಸ್ವಲ್ಪ ತುಪ್ಪ ಹಾಕಿ ಕಂದುಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಿ. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಾದ ನಂತರ ಅದಕ್ಕೆ ಬೆಲ್ಲವನ್ನು ಹಾಕಿ ಕುದಿಯಲು ಪ್ರಾರಂಭಿಸಿದಾಗ ಮೊದಲೆ ಹುರಿದಿಟ್ಟುಕೊಂಡ ಅವಲಕ್ಕಿಯನ್ನು ಹಾಕಿ ತಳಹಿಡಿಯದಂತೆ ಕಲೆಸುತ್ತಾ ಇರಿ, ಅವಲಕ್ಕಿ ಬೆಂದ ನಂತರ ಕಾಯಿತುರಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ ಸೊಸಿ ಹಾಲನ್ನು ತೆಗೆದು ಇದನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ ಐದು ನಿಮಿಷ ಕುದಿಸಿರಿ. ನಂತರ ಒಲೆಯಿಂದ ಇಳಿಸಿ ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಗೂ ಪುಡಿಮಾಡಿದ ಏಲಕ್ಕಿಯನ್ನು ಹಾಕಿರಿ, ಹಬ್ಬಗಳಲ್ಲಿ ಶ್ಯಾವಿಗೆ, ಗಸಗಸೆ ಪಾಯಸಕ್ಕೆ ಬದಲಾಗಿ ಇದನ್ನು ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.