ADVERTISEMENT

ಮಳೆ ತಂಪಿಗೆ ದಕ್ಷಿಣದ ಭೋಜನ

ರಸಾಸ್ವಾದ

ಪವಿತ್ರ ಶೆಟ್ಟಿ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ಒಳಗಡೆ ಕಾಲಿಡುತ್ತಿದ್ದಂತೆಯೇ ಒಗ್ಗರಣೆಯ ಚಟಪಟ ಸದ್ದು ಕೇಳುತ್ತಿತ್ತು. ಅಡುಗೆ ಎಲ್ಲಾ ಮುಗಿದಿದೆ ಊಟಕ್ಕೆ ತಟ್ಟೆ ಹಾಕುತ್ತಾರೇನೋ ಎಂದು ಖುಷಿಯಿಂದ ಹೋದರೆ ಅಲ್ಲಿ ಇನ್ನೂ ಅಡುಗೆಯ ತಯಾರಿಯಲ್ಲಿದ್ದರು ಸಹಾಯಕರು. ಅಡುಗೆಮನೆಯಲ್ಲಿನ ಖಾದ್ಯಗಳ ಪರಿಮಳದ ಜತೆಗೆ ಬೆರೆತ ಮಧುರ ಸಂಗೀತವನ್ನು ಆಸ್ವಾದಿಸುತ್ತಾ ಹೋದಂತೆ ಹಸಿವು ಮತ್ತಷ್ಟು ಹೆಚ್ಚಿತು.

ಕೋರಮಂಗಲದ `ಬಾನ್‌ಸೌತ್' ರೆಸ್ಟೋರೆಂಟ್‌ನಲ್ಲಿ ಹೀಗೆ ಮೊನ್ನೆ ಊಟದ ಹಾದಿ ಕಾಯುತ್ತಿದ್ದವರೆಲ್ಲ ಗೋಡೆ ಮೇಲೆ ಒಪ್ಪವಾಗಿ ಜೋಡಿಸಿಟ್ಟಿದ್ದ ಹಳೆಯಕಾಲದ ಅಡುಗೆ ಪಾತ್ರೆಗಳಾದ ಮರದ ದೊಡ್ಡ ಸೌಟು, ತಟ್ಟೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. `ಬಾನ್‌ಸೌತ್'ನ ಅಡುಗೆಮನೆ ಎಲ್ಲರಿಗೂ ಕಾಣುವಂತಿರುವ ಕಾರಣ ಗ್ರಾಹಕರೂ ಏನು ಅಡುಗೆ ಆಗುತ್ತಿದೆ, ಹೇಗೆ ಮಾಡುತ್ತಿದ್ದಾರೆ ಎಂದು ಅಡುಗೆಮನೆಯತ್ತ ಕತ್ತು ನಿರುಕಿಸುತ್ತಿದ್ದರು.

ಅಷ್ಟರಲ್ಲಿ `ಊಟಕ್ಕೆ ಬನ್ನಿ' ಎಂದು ಶೆಫ್ ಮನು ಆತ್ಮೀಯವಾಗಿ ಕರೆದರು. `ಸ್ವಲ್ಪ ತಡವಾಯಿತು ಬೇಸರಪಡಬೇಡಿ' ಎಂಬ ಷರಾದೊಂದಿಗೇ ತಟ್ಟೆಯಿಟ್ಟರು. ನಿಂಬೆ ಮತ್ತು ಪುದೀನಾ ಬೆರೆಸಿ ತಂಪುಪಾನೀಯವನ್ನು ತಂದಿಟ್ಟು ಕುಡಿಯಿರಿ ಎಂದಾಗ ಮಾತ್ರ ಕೆಲವರ ಮುಖ ಹುಳಿಹುಳಿಯಾಗಿದ್ದು ಸುಳ್ಳಲ್ಲ.

ತಟ್ಟೆಗೆ ಹುರಿದ ಹಪ್ಪಳದ ತುಂಡು ಹಾಕಿದ ಸಹಾಯಕರು ಕಾಯಿ ಚಟ್ನಿ, ಪುದೀನಾ ಚಟ್ನಿ, ಟೊಮೊಟೊ ಚಟ್ನಿಯ ಮೂರು ಕಪ್‌ಗಳನ್ನೂ ತಂದಿಟ್ಟರು. `ಹೊರಗೆ ಮಳೆ ಬರುತ್ತಿದೆ ಹಪ್ಪಳ-ಚಟ್ನಿ ಕಾಂಬಿನೇಶನ್ ಸಖತ್ತಾಗಿರುತ್ತದೆ' ಎಂದರು. ಅವರ ಮಾತು ನಿಜವಾಗಿತ್ತು.
`ನೋಡಿ, ದಹಿ ವಡಾ (ಮೊಸರು ವಡಾ)' ಎಂದು ಪುಟಾಣಿ ತಟ್ಟೆಯಲ್ಲಿ ತಂದಿಟ್ಟರು. ಗುಲಾಬ್ ಜಾಮೂನ್ ಆಕಾರದ ಆ ವಡಾದ ಮೇಲೆ ಒಂದು ಚಮಚ ಗಟ್ಟಿ ಮೊಸರು ಹಾಕಿ, ಎರಡು ಎಸಳು ಕೊತ್ತಂಬರಿ ಸೊಪ್ಪು, ಸ್ವಲ್ಪ ಕಾರಬೂಂದಿ ಉದುರಿಸಿದರು. ತಿನ್ನುವುದಕ್ಕೂ ಮೊದಲು, `ಮನೆಯಲ್ಲಿ ದಹಿ ವಡಾ ಮಾಡುವಾಗ ವಡಾ ತಣ್ಣಗಾದ ಮೇಲೆಯೇ ಮೊಸರು ಹಾಕಿ. ರುಚಿ ಹೆಚ್ಚುತ್ತದೆ. ವಡಾ ಚಿಕ್ಕದಿದ್ದರೆ ಬೇಗ ಬೇಯುತ್ತದೆ' ಎಂದು ಉಚಿತ ಟಿಪ್ಸ್ ಕೊಟ್ಟರು ಮನು.

ಮೊಸರು ವಡಾ ತಿನುತ್ತಿದ್ದಂತೆ ಎರಡು ಪುಟಾಣಿ ಇಡ್ಲಿಯನ್ನು ತಂದಿಟ್ಟರು. ಇಡ್ಲಿನಾ... ಎಂದು ನಿರಾಕರಿಸಿದವರಿಗೆ ರುಚಿ ನೋಡಿ ಹೇಳಿ ಇದು ಮಸಾಲಾ ಇಡ್ಲಿ ಎಂಬ ಒತ್ತಾಯಕ್ಕೆ ಚಿಕ್ಕ ತುಣುಕು ಬಾಯಿಗಿಟ್ಟುಕೊಂಡರೆ ಮಾಮೂಲಿ ಇಡ್ಲಿಯಂತೆಯೇ ಭಾಸವಾಯಿತು. ಅಷ್ಟರಲ್ಲಿ ರೋಸ್ಟ್ ಮಾಡಿದ ಜೋಳದ ಚಿಕ್ಕ ತುಂಡು ತಂದಿಟ್ಟರು. ಅದನ್ನು ತಿಂದವರು ಕಡಿಮೆಯೇ.

ಮುಂದಿನ ಸರದಿಯಲ್ಲಿ ಹಬೆಯಾಡುತ್ತಿದ್ದ ಬಾಳೆ ಹಣ್ಣಿನ ದೋಸೆ ಬಂತು. ಊರಲ್ಲಿ ಅಮ್ಮ ಕಾವಲಿ (ತವಾ) ಬಿಸಿಯಾಗಿದೆಯೋ ಇಲ್ಲವೋ ಎಂದು ಖಾತರಿಪಡಿಸಿಕೊಳ್ಳಲು ಮಾಡುತ್ತಿದ್ದ ಪುಟಾಣಿ ದೋಸೆಯಂತಿತ್ತು ಅದು. ಆದರೆ ಬಾಯಲ್ಲಿ ನೀರೂರಿಸುವ ರುಚಿ! ಅದಾದ ನಂತರ ಬಡಿಸಿದ್ದು ಉತ್ತಪ್ಪ. ಸಣ್ಣಗೆ ಹೆಚ್ಚಿದ ಟೊಮೊಟೊ ಮತ್ತು ಈರುಳ್ಳಿಯ ಮಿಶ್ರಣದ ಉತ್ತಪ್ಪ ಇಷ್ಟವಾಯಿತು.

ವೈವಿಧ್ಯಮಯ ಮಾಂಸಾಹಾರ
ಇಷ್ಟೆಲ್ಲ ಸಸ್ಯಾಹಾರಿ ಖಾದ್ಯಗಳ ರುಚಿ ನೋಡಿ ಹೊಟ್ಟೆ ಭಾರವಾಯಿತು ಅನ್ನುವಾಗ ನಾನ್‌ವೆಜ್ ಐಟಂಗಳು ಟೇಬಲ್‌ಗೆ ಬಂದವು. ಮಸಾಲೆ ಮೆತ್ತಿ ಬಾಳೆ ಎಲೆಯಲ್ಲಿ ಸುತ್ತಿ ಕೆಂಡದ ಮೇಲೆ ಸುಟ್ಟ ಮೀನು ಬಾಳೆ ಎಲೆಯಲ್ಲಿ ಬೆಂದು ಕಂದು ಬಣ್ಣಕ್ಕೆ ತಿರುಗಿದ್ದರೂ ಬಾಯಿಗಿಟ್ಟರೆ ಸಪ್ಪೆ  ಎನಿಸಿತು. ಚಿಕನ್ ಬಿರಿಯಾನಿ, ಮಸಾಲೆಯಲ್ಲಿ ಹುರಿದ ಸಿಗಡಿ ಫ್ರೈ ಮಾತ್ರ ಬಲು ರುಚಿಯಾಗಿತ್ತು.

ಹೀಗಿದೆ ಮೆನು...
ಬಾನ್‌ಸೌತ್‌ನಲ್ಲಿ ಪ್ರಸ್ತುತ 10 ವಿಧದ ದಕ್ಷಿಣ ಭಾರತದ ಖಾದ್ಯಗಳನ್ನು ತಯಾರಿಸಲಾಗುತ್ತಿದ್ದು ಇದರಲ್ಲಿ ಆರು ವೆಜ್, ನಾಲ್ಕು ನಾನ್‌ವೆಜ್. ಸಿಹಿ ತಿನಿಸುಗಳ ಪಟ್ಟಿಯಲ್ಲಿ ಐಸ್‌ಕ್ರೀಂ, ಎಳನೀರು ಪಾಯಸ, ಪೇಸ್ಟ್ರಿ ಕೇಕ್, ಗುಲಾಬ್ ಜಾಮೂನ್, ಹಣ್ಣಿನ ಹೋಳು, ಐಸ್ಡ್ ಗೋಲಾ ಸ್ಪೆಷಲ್ ಇತ್ಯಾದಿ. ದಕ್ಷಿಣ ಭಾರತ, ಮೊಘಲ್, ಚೀನಾ, ಇಟಲಿ, ಯೂರೋಪಿಯನ್ ಆಹಾರವೂ ಲಭ್ಯ.

ಮಧ್ಯಾಹ್ನದೂಟ ವಾರದ ದಿನಗಳಲ್ಲಿ: ರೂ. 349 (ಸಸ್ಯಾಹಾರಿ) ರೂ. 399 (ಮಾಂಸಾಹಾರಿ), ರಾತ್ರಿಯೂಟ ವಾರದ ದಿನಗಳಲ್ಲಿ: ರೂ. 449 (ಸಸ್ಯಹಾರಿ),ರೂ. 549 (ಮಾಂಸಾಹಾರಿ), ವಾರಾಂತ್ಯದ ಊಟ /ಡಿನ್ನರ್:ರೂ. 449 (ಸಸ್ಯಾಹಾರಿ) ಮತ್ತುರೂ. 549 (ಮಾಂಸಾಹಾರಿ). ಮಾಹಿತಿಗೆ: 080-2552 6363.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.