ADVERTISEMENT

ಮಾವಿನಕಾಯಿ ವ್ಯೆವಿಧ್ಯ

ನಮ್ಮೂರ ಊಟ

ಪ್ರಕಾಶ್ ಕೆ ನಾಡಿಗ್
Published 3 ಏಪ್ರಿಲ್ 2015, 19:30 IST
Last Updated 3 ಏಪ್ರಿಲ್ 2015, 19:30 IST

ಚಿತ್ರಾನ್ನ

ವಿಧಾನ: ಮೇಲೆ ಹೇಳಿದ ಹಾಗೆ ಮಾವಿನಕಾಯಿ ಚಟ್ನಿಯನ್ನು ತಯಾರಿಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಸೇಂಗಾ ಬೀಜ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿಕೊಂಡು ಇದಕ್ಕೆ ಮೇಲೆ ತಯಾರಿಸಿದ ಚಟ್ನಿಯನ್ನು ಬೆರಸಿ ಮಿಶ್ರಣಮಾಡಿಕೊಳ್ಳಬೇಕು. ಇದಕ್ಕೆ ಬೇಕಾದಷ್ಟು ಅನ್ನವನ್ನು ಬೆರಸಿ ಕಲಸಿದರೆ ರುಚಿಯಾದ ಮಾವಿನಕಾಯಿ ಚಿತ್ರಾನ್ನ ರೆಡಿ!

*

ಮಾವಿನಕಾಯಿ ಚಟ್ನಿ
ಸಾಮಗ್ರಿ: ಎರಡು ದೊಡ್ಡ ಮಾವಿನಕಾಯಿ ( ಹುಳಿಯಿದ್ದರೆ ಒಳ್ಳೆಯದು), ಒಂದು ಚಮಚ ಮೆಂತ್ಯ, ಆರರಿಂದ ಎಂಟು ಕೆಂಪು ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಸಾಸಿವೆ ಹಾಗು ಇಂಗು.
ವಿಧಾನ: ಮಾವಿನಕಾಯಿಯ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಕೆಂಪು ಮೆಣಸಿನಕಾಯಿ, ಉಪ್ಪು ಹಾಗು ಹುರಿದ ಮೆಂತ್ಯಯನ್ನು ಹಾಕಿ ನೀರು ಹಾಕದೆ ಮಿಕ್ಸಿಯಲ್ಲಿ ಸಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಸಾಸಿವೆ ಹಾಗು ಇಂಗಿನ ಒಗ್ಗರಣೆ ಹಾಕಿದರೆ ಮಾವಿನಕಾಯಿ ಚಟ್ನಿ ತಯಾರು.
*
ಮಾವಿನಕಾಯಿ ನೀರು ಗೊಜ್ಜು
ಸಾಮಗ್ರಿ: ಎರಡು ಮಧ್ಯಮ ಗಾತ್ರದ ಮಾವಿನಕಾಯಿ (ಹುಳಿಯಿದ್ದರೆ ರುಚಿ ಹೆಚ್ಚುತ್ತದೆ), ಹಸಿರು ಮೆಣಸಿನಕಾಯಿ ನಾಲ್ಕು ಸಾಸಿವೆ ಒಂದು

ಚಮಚ, ಕಡಲೆಕಾಯಿ ಎಣ್ಣೆ ನಾಲ್ಕು ಚಮಚ, ಇಂಗು ಎರಡು ಚಿಟಿಕೆ, ಕರಿಬೇವು ೮-೧೦ ಎಲೆ, ಉಪ್ಪು ರುಚಿಗೆ ತಕ್ಕಷ್ಟು.

ADVERTISEMENT

ವಿಧಾನ: ಎರಡು ಮಾವಿನಕಾಯಿಗಳನ್ನು ತೊಳೆದು ಮಾವಿನಕಾಯಿ ಮುಳುಗುವಷ್ಟು ನೀರು ಹಾಕಿ ಚೆನ್ನಾಗಿ ಬೇಯಿಸಿರಿ. ಮಾವಿನಕಾಯಿ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಐದು ನಿಮಿಷ ಬೇಯಿಸಿರಿ ನಂತರ ಅದನ್ನು ಆರಲು ಬಿಡಿ. ಆರಿದ ಮೇಲೆ ಬೆಂದ ಮಾವಿನಕಾಯಿಯನ್ನು ಚೆನ್ನಾಗಿ ಕಿವುಚಿ ಸಿಪ್ಪೆ ಮತ್ತು ವಾಟೆಯನ್ನು ತೆಗೆದುಬಿಡಿ.
ತೆಳುವಾದ ಗಂಜಿಯ ರೂಪದ ದ್ರವ ಉಳಿದುಕೊಳ್ಳುತ್ತದೆ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಎಣ್ಣೆಕಾದ ನಂತರ ಸಾಸಿವೆ ಹಾಗೂ ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಬಿಳಿ ಬಣ್ಣಕ್ಕೆ ಬರುವ ವರೆಗೆ ಬಾಡಿಸಿ, ನಂತರ ಕರಿಬೇವಿನ ಸೊಪ್ಪು ಎರಡು ಚಿಟಿಕೆ ಇಂಗು ಹಾಕಿ ಇದನ್ನು ಮೊದಲೆ ಮಾಡಿಟ್ಟುಕೊಂಡ ಮಾವಿನಕಾಯಿ ರಸಕ್ಕೆ ಬೆರೆಸಿರಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮೆಣಸಿನಕಾಯಿಯನ್ನು ಚೆನ್ನಾಗಿ ಕಿವುಚಿ ಕದಡಿದರೆ ಮಾವಿನಕಾಯಿ ನೀರ್ಗೊಜ್ಜು ರೆಡಿ. ಬಿಸಿ ಅನ್ನದ ಜೊತೆ ತಿನ್ನಲು ತುಂಬ ರುಚಿಯಾಗಿರುತ್ತದೆ.
*
ಮಾವಿನಕಾಯಿ ತೊಕ್ಕು

ಸಾಮಗ್ರಿ: ಎರಡು ದೊಡ್ಡ ಮಾವಿನಕಾಯಿ, ಉಪ್ಪು, ಆಡುಗೆ ಎಣ್ಣೆ, ಸಾಸಿವೆ,ಇಂಗು, ಅಚ್ಚಖಾರದ ಪುಡಿ, ಅರ್ಧ ಚಮಚ ಮೆಂತ್ಯ.

ವಿಧಾನ: ಮೊದಲಿಗೆ ಅರ್ಧ ಚಮಚ ಮೆಂತ್ಯಯನ್ನು ಹುರಿದು ಪುಡಿಮಾಡಿಟ್ಟುಕೊಳ್ಳಿ. ಮಾವಿನಕಾಯಿಯ ಸಿಪ್ಪೆ ತೆಗೆದು ತುರೆಮಣೆಯಲ್ಲಿ ತುರಿದಿಟ್ಟುಕೊಳ್ಳಿ, ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾದ ನಂತರ ಸಾಸಿವೆ ಹಾಕಿ, ಸಾಸಿವೆ ಚಿಟುಗುಟ್ಟಿದ ನಂತರ ಇಂಗು ಹಾಕಿ ನಂತರ ಮೊದಲೆ ತುರಿದಿಟ್ಟುಕೊಂಡ ಮಾವಿನಕಾಯಿ ತುರಿಯನ್ನು  ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿರಿ. ನಂತರ ಅಚ್ಚ ಖಾರದ ಪುಡಿ ಹಾಗು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮತ್ತೊಂದೆರಡು ನಿಮಿಷ ಬಾಡಿಸಿರಿ. ಕೊನೆಯಲ್ಲಿ ಪುಡಿಮಾಡಿದ ಮೆಂತ್ಯಪುಡಿಯನ್ನು ಹಾಕಿ ಕಲಸಿ ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿಟ್ಟುಕೊಂಡರೆ ಇಡ್ಲಿ, ದೊಸೆ ಮತ್ತು ಚಪಾತಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
*
ಸಿಹಿಗೊಜ್ಜು
ಸಾಮಗ್ರಿ: ಎರಡು ದೊಡ್ಡ ಮಾವಿನಕಾಯಿ, ಸಾರಿನ ಪುಡಿ, ಸಾಸಿವೆ, ಕಡಲೆಬೇಳೆ ಉದ್ದಿನಬೇಳೆ ಒಂದೊಂದು ಚಮಚ, ಉಪ್ಪು, ಬೆಲ್ಲ, ಕೆಂಪುಮೆಣಸಿನಕಾಯಿ ಎರಡು, ಕರಿಬೇವಿನ ಸೊಪ್ಪು, ಇಂಗು ಹಾಗು ಆಡುಗೆ ಎಣ್ಣೆ,

ವಿಧಾನ: ಮಾವಿನಕಾಯಿನ್ನು ತೊಳೆದು ದೊಡ್ಡ ದೊಡ್ಡ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ, ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಕುದಿಯಲು ಪ್ರಾರಂಭವಾದಾಗ ಅದಕ್ಕೆ ಎರಡು ಚಮಚ ಸಾರಿನಪುಡಿ ಇಲ್ಲದ್ದಿದ್ದರೆ ಅಚ್ಚಖಾರದ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿರಿ. ಇದಕ್ಕೆ ಒಂದು ಸಣ್ಣ ಉಂಡೆ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿರಿ. ಇದಕ್ಕೆ ಬಾಣಲೆಯಲ್ಲಿ ಎಣ್ಣೆಹಾಕಿ ಕಾದ ನಂತರ ಸಾಸಿವೆ, ಕಡಲೆಬೇಳೆ ಉದ್ದಿನಬೇಳೆ ಕರಿಬೇವಿನಸೊಪ್ಪು, ಇಂಗು ಹಾಗು ಕತ್ತರಿಸಿದ ಕೆಂಪು ಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಅದನ್ನು ಕುದಿಯುತ್ತಿರುವ ಗೊಜ್ಜಿಗೆಹಾಕಿ. ಅನ್ನದ ಜೊತೆ ಕಲಸಿ ತಿನ್ನಲು ಹಾಗೂ ದೋಸೆ, ಚಪಾತಿಯೊಂದಿಗು ಸವಿಯಬಹುದು.
*
ದಿಢಿರ್ ಉಪ್ಪಿನಕಾಯಿ (ಮಾವಿನಕಾಯಿ ಪಳಲೆ)
ಸಾಮಗ್ರಿ: ಎರಡು ದೊಡ್ಡ ಮಾವಿನಕಾಯಿ, ಅಚ್ಚಖಾರದ ಪುಡಿ, ಉಪ್ಪು, ಇಂಗು ಹಾಗು ಸಾಸಿವೆ.

ವಿಧಾನ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಶುಭ್ರ್ರವಾದ ಬಾಟಲಿಗೆ ಹಾಕಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗು ಅಚ್ಚಖಾರದ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿರಿ. ಇದಕ್ಕೆ ಸಾಸಿವೆ ಹಾಗು ಇಂಗಿನ ಒಗ್ಗರಣೆ ಕೊಟ್ಟರೆ ಬಹಳ ದಿನಗಳವರೆಗೂ ಉಪಯೋಗಿಸಬಹುದು. ತೇವವಿಲ್ಲದ ಚಮಚವನ್ನು ಉಪಯೋಗಿಸುವುದರಿಂದ ಮೇಲಿನ ಏಲ್ಲಾ ಪದಾರ್ಥವನ್ನು ಬಹಳ ದಿನಗಳವರೆಗೆ ಕೆಡದಂತೆ ಇಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.