ADVERTISEMENT

ಮಾವಿನ ಹಣ್ಣು ವಿಶೇಷ

​ಪ್ರಜಾವಾಣಿ ವಾರ್ತೆ
Published 15 ಮೇ 2015, 19:30 IST
Last Updated 15 ಮೇ 2015, 19:30 IST
ಮಾವಿನ ಹಣ್ಣು ವಿಶೇಷ
ಮಾವಿನ ಹಣ್ಣು ವಿಶೇಷ   

ಮಾವಿನ ಹಣ್ಣಿನ ಸಾಸಿವೆ
ಸಾಮಗ್ರಿ: 6 ಹುಳಿ ಚಿಕ್ಕ ಮಾವಿನಹಣ್ಣು (ಸಾಸಿವೆ ಹಣ್ಣು), 5 ಚಮಚ ಬೆಲ್ಲದ ತುರಿ, ಒಂದು ಲೋಟ ಮೊಸರು, ಒಂದು ಲೋಟ ತೆಂಗಿನತುರಿ, ಕಾಲು ಚಮಚ ಸಾಸಿವೆ, 2 ಒಣಮೆಣಸು, ರುಚಿಗೆ ಉಪ್ಪು.

ವಿಧಾನ: ಮಾವಿನಹಣ್ಣನ್ನು ಸಿಪ್ಪೆ ತೆಗೆದು ಪಾತ್ರೆಯಲ್ಲಿ ಚೆನ್ನಾಗಿ ಹಿಸುಕಬೇಕು. ತೆಂಗಿನತುರಿ ಹಾಗೂ ಸಾಸಿವೆಯನ್ನು ಹಸಿ ಮೆಣಸಿನ ಕಾಯಿಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿ. ಇದನ್ನು ಮಾವಿನಹಣ್ಣಿನ ರಸಕ್ಕೆ ಸೇರಿಸಿ ಜೊತೆಗೆ ಉಪ್ಪು, ಬೆಲ್ಲ ಹಾಗೂ ಮೊಸರು ಸೇರಿಸಿ ಮಿಕ್ಸ್‌ ಮಾಡಿ. ಇದಕ್ಕೆ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಸೇರಿಸಿದ ಒಗ್ಗರಣೆ ಹಾಕಿದರೆ ರುಚಿಕರ ಮಾವಿನಹಣ್ಣಿನ ಸಾಸಿವೆ ಸಿದ್ಧ
*

ಮಾವಿನ ಹಣ್ಣಿನ ಚಪಾತಿ
ಸಾಮಗ್ರಿ: 4 ಚಿಕ್ಕ ಕಳಿತ ಮಾವಿನ ಹಣ್ಣು , ಅರ್ಧ ಕಪ್ ಗೋಧಿಹಿಟ್ಟು, ರುಚಿಗೆ ಸಕ್ಕರೆ, 3 ಚಮಚ ತುಪ್ಪ, ರುಚಿಗೆ ಉಪ್ಪು.

ವಿಧಾನ: ಮಾವಿನಹಣ್ಣಿನ ಸಿಪ್ಪೆ ತೆಗೆದು ಕೈಯಿಂದ ಹಿಸುಕಬೇಕು. ಆಗ ರಸ ಬರುತ್ತದೆ. ಇದಕ್ಕೆ ಉಪ್ಪು, ತುಪ್ಪ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಬೇಕು. ಇದಕ್ಕೆ ಗೋಧಿಹಿಟ್ಟನ್ನು ಸೇರಿಸಿ ಚಪಾತಿ ಹಿಟ್ಟಿನ ರೀತಿ ನಾದಬೇಕು. ಅರ್ಧ ಮುಕ್ಕಾಲು ಗಂಟೆ ನಂತರ ಈ ಹಿಟ್ಟನ್ನು ಉಂಡೆ ಮಾಡಿಕೊಂಡು ಚಪಾತಿಯಾಕಾರದಲ್ಲಿ ಲಟ್ಟಿಸಬೇಕು. ಚಪಾತಿಯಂತೆ ಬೇಯಿಸಿದರೆ ಆಯಿತು. ಇದೇ ಹಿಟ್ಟಿಂದ ಪೂರಿಯನ್ನೂ ಮಾಡಬಹುದು.
*

ಮಾವಿನ ಹಣ್ಣಿನ ಮಿಠಾಯಿ
ಸಾಮಗ್ರಿ: ನಾಲ್ಕು ಮಧ್ಯಮ ಗಾತ್ರದ ಮಾವಿನ ಹಣ್ಣಿನ ರಸ, 4 ಲೋಟ ತೆಂಗಿನಕಾಯಿ ತುರಿ, 3 ಲೋಟ ಸಕ್ಕರೆ, ಅರ್ಧ ಚಮಚ ಏಲಕ್ಕಿ ಪುಡಿ, ಅರ್ಧ ಲೋಟ ಹಾಲು, ಒಂದು ಲೋಟ‌ ಬೆಣ್ಣೆ ಅಥವಾ ತುಪ್ಪ, ಸ್ವಲ್ಪ ಕೇಸರಿದಳ.

ADVERTISEMENT

ವಿಧಾನ: ಮಾವಿನರಸ, ಕಾಯಿತುರಿ, ಸಕ್ಕರೆ ಏಲಕ್ಕಿಪುಡಿ, ತುಪ್ಪ ಕೇಸರಿದಳ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಹಾಲು ಸೇರಿಸಿ ತಿರುವಿ. ಮಂದ ಉರಿಯಲ್ಲಿ ಕಾಯಿಸಿ. ಮಿಶ್ರಣ ಪಾತ್ರೆ ಬಿಡುತ್ತಾ ಬಂದಾಗ, ಒಲೆಯಿಂದ ಕೆಳಕ್ಕೆ ಇಳಿಸಿ. ಇದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ಹಲ್ವದ ಆಕಾರಕ್ಕೆ ಕತ್ತರಿಸಿ.
*

ಮಾವಿನ ರಸದ ಘೀರೈಸ್


ಸಾಮಗ್ರಿ: ಎರಡು ಲೋಟ ಮಾವಿನ ಹಣ್ಣಿನ ರಸ, ಒಂದು ಲೋಟ ಬಾಸುಮತಿ ಅಕ್ಕಿ, ಅರ್ಧ ಕಪ್‌ ತುಪ್ಪ, 2 ಗ್ಲಾಸ್‌ ಹಾಲು, 2 ಚಮಚ ಜೀರಿಗೆ, 2 ಚಮಚ ಸಕ್ಕರೆ, ಸ್ವಲ್ಪ ಒಣದ್ರಾಕ್ಷಿ. ರುಚಿಗೆ ಉಪ್ಪು.

ವಿಧಾನ: ಅಕ್ಕಿಯನ್ನು ತೊಳೆದ ಮೇಲೆ ನೀರನ್ನು ಆರಿಸಿ ಒಲೆಯ ಮೇಲಿಟ್ಟು ಫ್ರೈ ಮಾಡಿ. ಅದಕ್ಕೆ ಮಾವಿನರಸ, ಹಾಲು, ಜೀರಿಗೆ, ಸ್ವಲ್ಪ ಚಮಚ ತುಪ್ಪ ಹಾಕಿ ತರಿತರಿಯಾಗಿ ಹುರಿಯಿರಿ. ಬಿಸಿಯಿದ್ದಾಗಲೇ ಮಿಕ್ಕ ತುಪ್ಪ, ಸಕ್ಕರೆ ಉಪ್ಪು ಹಾಕಿ ಕಲಸಿ. ಬಳಿಕ ತುಪ್ಪದಲ್ಲಿ ಕರಿದ ದ್ರಾಕ್ಷಿ ಹಾಕಿ.
*

ಮಾವಿನ ಹಣ್ಣಿನ ಮುಳಕ
ಸಾಮಗ್ರಿ: ಒಂದು ಲೋಟ‌ ಮಾವಿನ ಹಣ್ಣಿನರಸ, ಒಂದು ಬೆಲ್ಲದ ಅಚ್ಚು, ಒಂದು ಲೋಟ ಅಕ್ಕಿ, ಒಂದು ಲೋಟ‌ ತೆಂಗಿನಕಾಯಿತುರಿ, ಸ್ವಲ್ಪ ಏಲಕ್ಕಿಪುಡಿ, ಕರಿಯಲು  ಎಣ್ಣೆ.

ವಿಧಾನ: ಅಕ್ಕಿಯನ್ನು ರಾತ್ರಿ ನೆನೆ ಹಾಕಿ. ಇದಕ್ಕೆ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥ ಸೇರಿಸಿ ಗಟ್ಟಿಯಾಗಿ ತಿರುವಿ. ಒಲೆಯ ಮೇಲೆ ಎಣ್ಣೆ ಇಟ್ಟು ಕಾಯಿಸಿ. ಎಣ್ಣೆ ಕಾದ ನಂತರ ಕೈಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟನ್ನು ಎಣ್ಣೆಯಲ್ಲಿ ಹಾಕುತ್ತ ಕರಿಯಿರಿ. ಇದನ್ನು ದೋಸೆ ಬಂಡಿಯ ಮೇಲೆ ದೋಸೆಯ ಹಾಗೆ ಮಾಡಿಯೂ ತಿನ್ನಬಹುದು.
*

ಮಾವಿನ ಹಣ್ಣಿನ ರಸಾಯನ


ಸಾಮಗ್ರಿ: ಐದು ಕಳಿತ ಮಾವಿನ ಹಣ್ಣು, 3 ಲೋಟ ಸಕ್ಕರೆ, 2 ಲೋಟ ತೆಂಗಿನತುರಿ, ಸ್ವಲ್ಪ ಏಲಕ್ಕಿ ಪುಡಿ, ಚಿಟಿಕೆ ಉಪ್ಪು.

ವಿಧಾನ: ಮಾವಿನಹಣ್ಣಿನ ಸಿಪ್ಪೆ ತೆಗೆದು ಸಣ್ಣ ತುಂಡು ಮಾಡಿ. ಇದಕ್ಕೆ ಸಕ್ಕರೆ, ಉಪ್ಪು, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿದರೆ ಮುಗಿಯಿತು. ಇದನ್ನು ಕೂಡ ದೋಸೆ, ಪೂರಿ, ಚಪಾತಿ, ರೊಟ್ಟಿ ಜೊತೆ ಸವಿಯಬಹುದು.
*

ಮಾವಿನ ಹಣ್ಣಿನ ಸೀಕರಣೆ
ಸಾಮಗ್ರಿ: ಒಂದು ಮಾವಿನ ಹಣ್ಣು, 3 ಕಪ್‌ ಹಾಲು, ಸ್ವಲ್ಪ ಕೇಸರಿದಳ, ‌ಸ್ವಲ್ಪ ಏಲಕ್ಕಿಪುಡಿ, ಸ್ವಲ್ಪ ಸಕ್ಕರೆ.

ವಿಧಾನ: ಹಣ್ಣಿನರಸಕ್ಕೆ ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿ ಸೇರಿಸಿ ರುಬ್ಬಿಕೊಳ್ಳಿ. ನೀರು ಸೇರಿಸಬೇಡಿ. ಗಟ್ಟಿಯಾಗಿಯೇ ಇರಲಿ. ಇದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರುಗಳನ್ನ ಸೇರಿಸಿ. ಇದನ್ನು ಊಟದ ಜೊತೆ ಹಾಗೆಯೇ ಸವಿಯಬಹುದು ಇಲ್ಲವೇ ಚಪಾತಿ, ಪೂರಿ, ರೊಟ್ಟಿ ಜೊತೆಯೂ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.