ಬೆಂಗಳೂರಿನವರಾದ ಕೆ.ಆರ್. ನಾಗೇಶ್ ಅವರು ಓದಿದ್ದು ಡಿಪ್ಲೊಮಾ ಇನ್ ಫಾರ್ಮಸಿ. ಆದರೆ ಇವರಿಗೆ ಅಡುಗೆ ಮಾಡುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಮನೆಯಲ್ಲಿ ಸಿರಿಧಾನ್ಯಗಳಿಂದ ಮಾಡಬಹುದಾದ ಹೊಸ ಹೊಸ ಅಡುಗೆಗಳನ್ನು ಪ್ರಯತ್ನಿಸಿ ಯಶಸ್ವಿಯೂ ಆದರು.
ಇವರ ಅಡುಗೆಗಳ ರುಚಿ ನೋಡಿ ವಿಮರ್ಶೆ ಮಾಡುವುದು ಮನೆಯ ಸದಸ್ಯರು. ಉದ್ಯಮಿಯೂ ಆಗಿರುವ ಇವರು 2011ರಲ್ಲಿ ರಾಜಾಜಿನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ವಂದೇ ಮಾತರಂ ಎಂಬ ಹೋಟೆಲ್‌ಅನ್ನು ಆರಂಭಿಸಿದರು. ಹೋಟೆಲ್‌ನಲ್ಲಿ ಮುಖ್ಯ ಬಾಣಸಿಗರೂ ಆಗಿರುವ ಇವರು ಸಿರಿಧಾನ್ಯಗಳ ಅಡುಗೆಗೆ ಪ್ರಾಮುಖ್ಯ ನೀಡಿದ್ದಾರೆ. ನವಣೆ ಜಾಮೂನು, ರಾಗಿ ದೋಸೆ, ಹುರುಳಿ ಪಾಯಸ ಸೇರಿದಂತೆ ಸಿರಿಧಾನ್ಯಗಳಿಂದ ಮಾಡಿದ ಬಿಸಿಬೇಳೆಭಾತ್, ಪೊಂಗಲ್, ರೊಟ್ಟಿ ಸಹ ಆಹಾರ ಪ್ರಿಯರನ್ನು ಆಕರ್ಷಿಸುತ್ತಿವೆ.
ಸಾಮೆ ಕಿಚಡಿ
ಸಾಮಗ್ರಿ: ಸಾಮೆ ಅಕ್ಕಿ 125 ಗ್ರಾಂ, ಹೆಸರು ಕಾಳು 150 ಗ್ರಾಂ, ಹಿಪ್ಪಲಿ ಪುಡಿ ಎರಡು ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ, ಸ್ವಲ್ಪ ಕಾಳು ಮೆಣಸು ಪುಡಿ, ಸ್ವಲ್ಪ ಧನಿಯಾ ಪುಡಿ, ಹಸಿ ಶುಂಠಿ ಅರ್ಧ ಇಂಚು, ತುಪ್ಪ ನಾಲ್ಕು ಚಮಚ.
ವಿಧಾನ: ಸಾಮೆ ಅಕ್ಕಿ ಹಾಗೂ ಹೆಸರು ಕಾಳನ್ನು ತುಪ್ಪದೊಂದಿಗೆ ಪ್ರತ್ಯೇಕವಾಗಿ ಉರಿದುಕೊಳ್ಳಬೇಕು. ಪಾತ್ರೆಯಲ್ಲಿ ಒಂದು ಲೀಟರ್‌ನಷ್ಟು ನೀರನ್ನು ಹಾಕಿ ಅದಕ್ಕೆ ಹೆಸರು ಕಾಳು ಹಾಗೂ ಸಾಮೆ ಅಕ್ಕಿಯನ್ನು ಹಾಕಿ ಹದವಾಗಿ ಬೇಯಿಸಬೇಕು. ನಂತರ ಹಿಪ್ಪಲಿ ಪುಡಿ, ಧನಿಯಾ ಪುಡಿ, ಉಪ್ಪು, ಕಾಳು ಮೆಣಸು ಪುಡಿ, ಹಸಿ ಶುಂಠಿ, ಸ್ವಲ್ಪ ಜೀರಿಗೆ ಹಾಕಿ ಮಿಶ್ರಣ ಮಾಡಬೇಕು. ಒಂದೆರಡು ನಿಮಿಷ ಬಿಟ್ಟು ತೆಗೆದರೆ ಸಾಮೆ ಕಿಚಡಿ ಸಿದ್ಧವಾದಂತೆ. ಆಯುರ್ವೇದದಲ್ಲಿ ಇದಕ್ಕೆ ‘ಅಷ್ಟಗುಣ ಮಂಡ’ ಎಂದೂ ಕರೆಯುತ್ತಾರೆ. ಆರೋಗ್ಯಕ್ಕೂ ಒಳ್ಳೆಯ ಆಹಾರವಾಗಿದೆ.
ನವಣೆ ಜಾಮೂನು
ಸಾಮಗ್ರಿ: ನವಣೆ ಹಿಟ್ಟು 100 ಗ್ರಾಂ, ಸಿಹಿರಹಿತ ಕೋವಾ 50 ಗ್ರಾಂ, ಸಿಹಿ ಕೋವಾ 100 ಗ್ರಾಂ, ಸ್ವಲ್ಪ ಏಲಕ್ಕಿ, ಪಾಕಕ್ಕೆ ಸಕ್ಕರೆ.
ವಿಧಾನ: ಮೊದಲು ಸಕ್ಕರೆ ಪಾಕವನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ನಂತರ ನವಣೆ ಹಿಟ್ಟು, ಕೋವಾ ಹಾಗೂ ಏಲಕ್ಕಿಯನ್ನು ಮಿಶ್ರಣ ಮಾಡಿ ಉಂಡೆ ಉಂಡೆ ಮಾಡಿಕೊಳ್ಳಿ, ನಂತರ ಉಂಡೆಗಳನ್ನು ಎಣ್ಣೆಯಲ್ಲಿ ಕರೆದು ಸಕ್ಕರೆ ಪಾಕಕ್ಕೆ ಹಾಕಿ. 3ರಿಂದ ನಾಲ್ಕು ಗಂಟೆ ಬಿಟ್ಟು ನವಣೆ ಜಾಮೂನು ಸವಿಯಿರಿ.
ರಾಗಿ ಕಾಫಿ
ಸಾಮಗ್ರಿ: ರಾಗಿ 250 ಗ್ರಾಂ, ಒಂದು ಲೀಟರ್ ಕಾಫಿ ಅಥವಾ ಟೀ ಆಗುವಷ್ಟು ಕಾಫಿ ಅಥವಾ ಟೀ ಪುಡಿ. ರುಚಿಗೆ ತಕ್ಕಷ್ಟು ಬೆಲ್ಲ.
ವಿಧಾನ: ರಾಗಿಯನ್ನು ರಾತ್ರಿಯೇ ನೆನೆಸಿಟ್ಟುಕೊಳ್ಳಿ. ಬೆಳಿಗ್ಗೆ ನೆಂದ ರಾಗಿಯನ್ನು ಮಿಕ್ಸಿಯಲ್ಲಿ ರುಬ್ಬಿ ಹಾಲು ತೆಗೆಯಿರಿ. ಈ ರಾಗಿ ಹಾಲನ್ನು ಸಣ್ಣ ಉರಿಯಲ್ಲಿ ಹೊಗೆಯಾಡುವಂತೆ ಕಾಯಿಸಿ. ನಂತರ ಬೆಲ್ಲ ಹಾಕಿ ಹಾಗೂ ಟೀ ಅಥವಾ ಕಾಫಿ ಯಾವುದು ಬೇಕೋ ಅದನ್ನು ಹಾಕಿ ಬಿಸಿಮಾಡಿ ಕೆಳಗಿಳಿಸಿ. ಈ ಪೇಯ ಆರೋಗ್ಯಕ್ಕೂ ಉತ್ತಮ.
ಸಿರಿಧಾನ್ಯದ ಲಡ್ಡು
ಸಾಮಗ್ರಿ: 250 ಗ್ರಾಂ ನವಣೆ, 250 ಗ್ರಾಂ ಹೆಸರುಕಾಳು, ಬೆಲ್ಲ 400 ಗ್ರಾಂ, ಸ್ವಲ್ಪ ಏಲಕ್ಕಿ, ದ್ರಾಕ್ಷಿ ಮತ್ತು ಗೋಡಂಬಿ 50 ಗ್ರಾಂ, ತುಪ್ಪ 50 ಗ್ರಾಂ.
ವಿಧಾನ: ಹೆಸರು ಕಾಳು ಹಾಗೂ ನವಣೆಯನ್ನು ಪ್ರತ್ಯೇಕವಾಗಿ ಉರಿದಿಟ್ಟುಕೊಂಡು ತಣ್ಣಗಾದ ಮೇಲೆ ಪುಡಿ ಮಾಡಿಟ್ಟುಕೊಳ್ಳಬೇಕು. ಬೆಲ್ಲವನ್ನು ಪುಡಿಮಾಡಿಟ್ಟುಕೊಳ್ಳಿ. ಪಾತ್ರೆಗೆ ತುಪ್ಪ ಹಾಕಿ ಕಾದ ಮೇಲೆ ಹೆಸರುಕಾಳು ಹಾಗೂ ನವಣೆ ಹಿಟ್ಟು ಹಾಕಿ ಮಿಶ್ರಣ ಮಾಡಬೇಕು, ನಂತರ ಬೆಲ್ಲ, ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿ ಹಾಕಿ ಕಲಸಿ, ತಣ್ಣಗಾಗುವ ಮೊದಲೇ ಉಂಡೆ ಕಟ್ಟಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.