ADVERTISEMENT

ಸಿಹಿ ಕುಂಬಳದ ರುಚಿಕರ ಅಡುಗೆ

ಎಸ್.ಸರಸ್ವತಿ ಎಸ್.ಭಟ್ಟ
Published 3 ಸೆಪ್ಟೆಂಬರ್ 2017, 19:30 IST
Last Updated 3 ಸೆಪ್ಟೆಂಬರ್ 2017, 19:30 IST
ಸಿಹಿ ಕುಂಬಳದ ರುಚಿಕರ ಅಡುಗೆ
ಸಿಹಿ ಕುಂಬಳದ ರುಚಿಕರ ಅಡುಗೆ   

ಸಿಹಿಕುಂಬಳ ಸಾಂಬಾರು

ಬೇಕಾಗುವ ವಸ್ತುಗಳು: 1 ಕಪ್ ತಿರುಳು ತೆಗೆದು ಸಣ್ಣಗೆ ತುಂಡು ಮಾಡಿದ ಸಿಹಿಕುಂಬಳ, 1½ ಕಪ್ ತೆಂಗಿನತುರಿ, ¼ ಕಪ್ ತೊಗರಿಬೇಳೆ, ¼ ಚಮಚ ಕೆಂಪುಮೆಣಸಿನ ಪುಡಿ, 1 ಚಮಚ ಕೊತ್ತಂಬರಿ, 1 ಚಮಚ ಉದ್ದಿನಬೇಳೆ, ¼ ಚಮಚ ಮೆಂತೆ, ¼ ಚಮಚ ಜೀರಿಗೆ, 3-4 ಒಣಮೆಣಸು, 2 ಚಮಚ ಎಣ್ಣೆ, ½ ಚಮಚ ಬೆಲ್ಲ, ½ ಚಮಚ ಹುಳಿ, ½ ಚಮಚ ಸಾಸಿವೆ, 1 ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಷಿಣ.

ಮಾಡುವ ವಿಧಾನ: ಸಿಹಿಕುಂಬಳದ ತುಂಡು, ಸ್ವಲ್ಪ ನೀರು, ಉಪ್ಪು, ಕೆಂಪುಮೆಣಸಿನ ಪುಡಿ, ಹುಳಿ, ಬೆಲ್ಲ ಸೇರಿಸಿ ಬೇಯಿಸಿ. ಬಾಣಲೆಗೆ ಎಣ್ಣೆ ಹಾಕಿ. ಬಿಸಿಯಾದಾಗ ಅನುಕ್ರಮವಾಗಿ ಕೊತ್ತಂಬರಿ, ಉದ್ದಿನಬೇಳೆ, ಮೆಂತೆ, ಜೀರಿಗೆ, ಒಣಮೆಣಸು ಹಾಕಿ ಹುರಿದು ಅರಿಷಿಣ ಸೇರಿಸಿ. ಹುರಿದ ಪದಾರ್ಥಗಳನ್ನು ಕಾಯಿ ಜೊತೆ ಸೇರಿಸಿ ನೀರು ಹಾಕಿ ರುಬ್ಬಿ ಅದನ್ನು ಬೆಂದ ತರಕಾರಿಗೆ ಹಾಕಿ. ಕುಕ್ಕರಿನಲ್ಲಿ ಬೇಯಿಸಿದ ತೊಗರಿಬೇಳೆ ಸೇರಿಸಿ. ನಂತರ ಸಾಕಷ್ಟು ನೀರು ಹಾಕಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ.

ADVERTISEMENT

**

ಸಿಹಿಕುಂಬಳ ರೊಟ್ಟಿ

ಬೇಕಾಗುವ ವಸ್ತುಗಳು: 1 ಕಪ್ ಸಿಪ್ಪೆ, ಬೀಜ, ತಿರುಳು ತೆಗೆದು ತುರಿದ ಸಿಹಿಕುಂಬಳ, 1 ಕಪ್ ಅಕ್ಕಿ ಹಿಟ್ಟು, ¼ ಕಪ್ ಜೋಳದ ಹಿಟ್ಟು, ½ ಚಮಚ ಕಾರದ ಪುಡಿ, ½ ಚಮಚ ಜೀರಿಗೆ ಪುಡಿ, ಇಂಗು ಚಿಟಿಕಿ, 2 ಚಮಚ ಈರುಳ್ಳಿ ಚೂರು, 2 ಚಮಚ ಕೊತ್ತಂಬರಿಸೊಪ್ಪು, 2 ಚಮಚ ಕರಿಬೇವಿನ ಚೂರು, ಉಪ್ಪು ರುಚಿಗೆ ತಕ್ಕಷ್ಟು, 4 ಚಮಚ ಎಣ್ಣೆ.

ಮಾಡುವ ವಿಧಾನ: ಎಣ್ಣೆಯೊಂದನ್ನು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ, ನೀರು ಹಾಕಿ ಚೆನ್ನಾಗಿ ಕಲಸಿ ಉಂಡೆ ಮಾಡಿ. ನಂತರ ಎಣ್ಣೆ ಪಸೆ ಮಾಡಿದ ಬಾಳೆಲೆಯ ಮೇಲೆ ತಟ್ಟಿ. ನಂತರ ಎಣ್ಣೆ ಪಸೆ ಇರುವ ತವಾದಲ್ಲಿ ಹಾಕಿ ಎರಡೂ ಬದಿ ಬೇಯಿಸಿ. ಬಿಸಿ ಇರುವಾಗಲೇ ಬೆಣ್ಣೆ ಅಥವಾ ತುಪ್ಪದೊಂದಿಗೆ ಸವಿಯಲು ಬಲು ರುಚಿ.

**

ಸಿಹಿಕುಂಬಳ ತಿರುಳು ಪಚ್ಚಡಿ

ಬೇಕಾಗುವ ವಸ್ತುಗಳು: 1 ಕಪ್ ಸಿಹಿಕುಂಬಳ ತಿರುಳು, ½ ಕಪ್ ತೆಂಗಿನತುರಿ, ¼ ಚಮಚ ಕೊತ್ತಂಬರಿ, ¼ ಚಮಚ ಉದ್ದಿನಬೇಳೆ, ¼ ಚಮಚ ಹುಳಿ, 2 ಒಣಮೆಣಸು, ಉಪ್ಪು ರುಚಿಗೆ ತಕ್ಕಷ್ಟು, ½ ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, ಚಿಟಿಕೆ ಇಂಗು.

ಮಾಡುವ ವಿಧಾನ: ಸಿಹಿಕುಂಬಳ ತಿರುಳನ್ನು ಬೀಜ ತೆಗೆದು ಬೇಯಿಸಿ. ಕೊತ್ತಂಬರಿ, ಮೆಣಸು, ಉದ್ದಿನಬೇಳೆ, ಇಂಗು, ಎಣ್ಣೆ ಹಾಕಿ ಕೆಂಪಗೆ ಹುರಿಯಿರಿ. ತೆಂಗಿನತುರಿಯ ಜೊತೆ ಸೇರಿಸಿ ಉಪ್ಪು, ಹುಳಿ ಹಾಕಿ ರುಬ್ಬಿ. ಕೊನೆಗೆ ಬೇಯಿಸಿದ ತಿರುಳು ಸೇರಿಸಿ ರುಬ್ಬಿ. ನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸು, ಕರಿಬೇವಿನ ಒಗ್ಗರಣೆ ಕೊಡಿ. ಈ ಚಟ್ನಿಯನ್ನು ದೋಸೆ, ಅನ್ನದೊಂದಿಗೆ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.