ನಗರದ ಜಂಜಡಗಳಿಂದ ಕೊಂಚ ದೂರ ಹೋಗಿ, ಒಂದು ಸುಂದರ ಸಂಜೆಯಲ್ಲಿ ಪುಷ್ಕಳ ಭೋಜನ ಸವಿಯುವ ಮನಸ್ಸಾಗಿದ್ದಲ್ಲಿ ದೇವನಹಳ್ಳಿ ರಸ್ತೆಯತ್ತ ಸಾಗುವುದು ಸೂಕ್ತ. ಬೆಂಗಳೂರಿನ ಹೃದಯ ಭಾಗದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ ಬಳಸಿ ಹುಣಸೇಮಾರನಹಳ್ಳಿಯ ಬಳಿ ‘ಕುಡ್ಲ ಪರೀಕ’ ಎಂಬ ಕಾಂಟಿನೆಂಟಲ್ ಹೋಟೆಲ್ ಸಿಗುತ್ತದೆ.
ಹೋಟೆಲ್ ಬಳಿ ಬಂದು ನಿಲ್ಲುತ್ತಿದ್ದಂತೆ ಬಂದ ಅತಿಥಿಗಳ ಆರೈಕೆ ಆರಂಭವಾಗುತ್ತದೆ. ವ್ಯಾಲೆಟ್ ಪಾರ್ಕಿಂಗ್‌ಗೆ ವಾಹನ ತೆಗೆದುಕೊಂಡು ಹೋಗುವ ಹಾಗೂ ಹೆಜ್ಜೆಹೆಜ್ಜೆಗೂ ಸಿಗುವ ಪರಿಚಾರಕರು ಸ್ವಾಗತ ಸ್ವೀಕರಿಸುತ್ತಲೇ ಮೊದಲ ಮಹಡಿಯಲ್ಲಿನ ಹೋಟೆಲ್ ಪ್ರವೇಶವಾಗುತ್ತದೆ. ಇಂಡಿಯನ್, ತಂದೂರ್, ಕಾಂಟಿನೆಂಟಲ್, ಮೆಡಿಟರೇನಿಯನ್, ಚೈನೀಸ್ ಹೀಗೆ ಬಗೆಬಗೆಯ ಪ್ರಕಾರಗಳ ತಿನಿಸುಗಳ ಮೆನು ಕೊಂಚ ಗೊಂದಲ ಮೂಡಿಸಬಹುದು. ಆದರೆ ಅದರ ನಿವಾರಣೆಗೆ ಇಲ್ಲಿನ ಪರಿಚಾರಕರು ನೆರವಿಗೆ ನಿಲ್ಲುತ್ತಾರೆ.
ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಸ್ಟಾರ್ಟರ್‌ಗಳ ಮೂಲಕ ಪರೀಕದ ಊಟವನ್ನು ಆರಂಭಿಸಬಹುದು. ಉದಾಹರಣೆಗೆ, ಪಾನಿಪೂರಿ ರೀತಿಯಲ್ಲೇ ನೀಡುವ ಮಸಾಲ ಟಕೀಲಾ, ರಸಂ ಆಸಂ ಮುಂತಾದ ಕಾಕ್‌ಟೇಲ್‌ಗಳು ಊಟದ ಹಸಿವನ್ನು ಹೆಚ್ಚಿಸುತ್ತವೆ. ಜತೆಗೆ ಒಂದಿಷ್ಟು ಕಿಕ್ ನೀಡುತ್ತದೆ.
ಸ್ಟಾರ್ಟರ್‌ಗಳಲ್ಲಿ ಸಾಕಷ್ಟು ಆಯ್ಕೆಗಳಿವೆ. ಕುರಿ ಮಾಂಸದ ಶೀಕಬಾಬ್ ಸವಿದರವರಿಗೆ ಪರೀಕದಲ್ಲಿ ಏಡಿಯ ಶೀಕಬಾಬ್ ಹೊಸ ರುಚಿ ನೀಡಬಲ್ಲದು. ಫಿಷ್ ಓರ್ಲಿ, ಚಿಕನ್ ಸ್ಟೀಕ್ ಸಿಜ್ಲರ್ಸ್, ಲ್ಯಾಂಬ್ ಚಾಪ್ ಮುಂತಾದ ಕಾಂಟಿನೆಂಟಲ್ ಖಾದ್ಯ ಬಾಯಿಗೆ ಹೊಸ ರುಚಿ ನೀಡಲಿದೆ. ಲೆಬನೀಸ್ ಆಹಾರ ಪದ್ಧತಿಯ ಚಿಕನ್ ಶಿಶ್ ಥೌಕ್, ಚೈನೀಸ್‌ನ ಬೇಸಿಲ್ ಚಿಲ್ಲಿ ಚಿಕನ್ ಮುಂತಾದ ಸ್ಟಾರ್ಟರ್‌ಗಳು ಬೇರೆ ರೀತಿಯ ರುಚಿ ನೀಡಲಿವೆ.
ಇನ್ನು ಮುಖ್ಯಮೆನುವಿನಲ್ಲಿ ಸಾಕಷ್ಟು ಆಯ್ಕೆಗಳಿದ್ದರೂ ತೀರಾ ಗಮನ ಸೆಳೆದದ್ದು ‘ಗರ್‌ಬರ್ ಬಿರಿಯಾನಿ’. ಮಡಿಕೆಯಲ್ಲಿ ಸಿದ್ಧವಾಗುವ ಈ ಬಿರಿಯಾನಿಯಲ್ಲಿ ಅಪ್ಪಟ ಬಾಸ್ಮತಿ ಅನ್ನ, ಕೋಳಿಯ ತುಂಡು, ಕ್ಯಾರೆಟ್, ಬೀನ್ಸ್‌ನಂತ ಒಂದಷ್ಟು ತರಕಾರಿಯನ್ನು ಶುದ್ಧ ತುಪ್ಪ ಹಾಕಿ ತಯಾರಿಸಿದ ಅಪ್ಪಟ ಹೈಬ್ರಿಡ್ ಬಿರಿಯಾನಿ ಇದು. ಒಂದು ಬಿರಿಯಾನಿ ತಿಂದರೆ ಬೇರೆನೂ ಬೇಕೆನಿಸದು.
ಉಳಿದಂತೆ ದೇಸೀ ಶೈಲಿಯ ಝಫ್ರಾನಿ ಮುರ್ಗ್, ಕಾಶ್ಮೀರಿ ನಲ್ಲಿ ಘೋಷ್, ರಾಜಸ್ತಾನಿ ಲ್ಯಾಂಬ್ ನೆಶ್‌ನ ಸ್ವಾದವನ್ನು ಸವಿಯಬಹುದು.
ಇನ್ನು ಡೆಸರ್ಟ್ ವಿಭಾಗಕ್ಕೆ ಬಂದಲ್ಲಿ, ಹೊಟ್ಟೆ ತುಂಬಿದರೂ ಬಾಯಲ್ಲಿ ನೀರೂರಿಸುವ ತರಹೇವಾರಿ ಡೆಸರ್ಟ್‌ಗಳು ಲಭ್ಯ. ಹದವಾಗಿ ಕರಿದ ಐಸ್ ಕ್ರೀಂ ಇಲ್ಲಿನ ವಿಶೇಷಗಳಲ್ಲಿ ಒಂದು. ರುಚಿಕರ ವೆನಿಲ್ಲಾ ಐಸ್‌ಕ್ರೀಂಗೆ ಒಂದಷ್ಟು ಡ್ರೈಫ್ರೂಟ್ ಬೆರೆಸಿ ಅದಕ್ಕೆ ಬ್ರೆಡ್‌ನ ಪುಡಿಯನ್ನು ಲೇಪಿಸಿ ಕೇವಲ ಮೂರರಿಂದ ನಾಲ್ಕು ಸೆಕೆಂಡುಗಳ ಕಾಲ ಎಣ್ಣೆಯಲ್ಲಿ ಕರಿದ ಈ ಫ್ರೈಡ್ ಐಸ್‌ಕ್ರೀಂ ಬಿಸಿ ಹಾಗೂ ತಣ್ಣನೆಯ ಅನುಭವ ನೀಡುತ್ತದೆ. ಉಳಿದಂತೆ ಫ್ರೂಟ್ ಪಂಚ್ ಹಾಗೂ ಮತ್ತಿತರ ಮಾಕ್‌ಟೇಲ್‌ಗಳು ಇವೆ.
ಹೋಟೆಲ್ ಪರೀಕದಲ್ಲಿ ಒಂದೊಂದು ವಿಭಾಗಕ್ಕೆ ಒಬ್ಬೊಬ್ಬ ಮಾಸ್ಟರ್ ಶೆಫ್ ಇದ್ದಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ವಿದೇಶಿಯರಿಗೆ ಅದೇ ಗುಣಮಟ್ಟ ಹಾಗೂ ರುಚಿಯನ್ನು ಕಾಪಾಡುವ ದೃಷ್ಟಿಯಿಂದ ಪ್ರತ್ಯೇಕ ಅಡುಗೆ ತಯಾರಿಕಾ ಪದ್ಧತಿಯನ್ನು ತಮ್ಮ ಅಡುಗೆ ಕೋಣೆಯಲ್ಲಿ ಅಳವಡಿಸಿದ್ದಾರೆ.
ಮಧ್ಯಾಹ್ನ 12ಕ್ಕೆ ಆರಂಭವಾದ ಹೋಟೆಲ್‌ನಲ್ಲಿ ಮಧ್ಯಾಹ್ನದ ಬಫೆ ಲಂಚ್ ಲಭ್ಯ. ವಾರದ ದಿನದಲ್ಲಿ ₨249 ಹಾಗೂ ಭಾನುವಾರ ಬ್ರಂಚ್ ₨349ಕ್ಕೆ (ತೆರಿಗೆ ಪ್ರತ್ಯೇಕ) ಲಭ್ಯ. ಇದರಲ್ಲಿ ಬೇಕಾದಷ್ಟು ರುಚಿಕರ ಮೀನಿನ ಖಾದ್ಯ ಸವಿಯಬಹುದು. ಮತ್ತೆ ರಾತ್ರಿ 7ರಿಂದ 11.30ರವರೆಗೆ ಹೋಟೆಲ್ ತೆರೆದಿರುತ್ತದೆ. ವಿಮಾನ ನಿಲ್ದಾಣದಿಂದ ಬರುವ ಅತಿಥಿಗಳಿಗೆ ಉಣಬಡಿಸಲು ಮಧ್ಯಾಹ್ನ 3.30ರಿಂದ 6ರವರೆಗೂ ಇಲ್ಲಿನ ಬಾಣಸಿಗರು ಸದಾ ಸಿದ್ಧವಿರುತ್ತಾರಂತೆ. 200 ಆಸನಗಳ ‘ಕನಕ’ ಎಂಬ ಪಾರ್ಟಿ ಹಾಲ್ ಕೂಡ ಇದೆ.
ರಮಣಶ್ರೀ ಸಮೂಹದ ಹೋಟೆಲ್ ಪರೀಕ ಅಂತರರಾಷ್ಟ್ರೀಯ ಅತಿಥಿಗಳ ಜತೆಗೆ ಬೆಂಗಳೂರಿಗರಿಗೂ ಅಪ್ಪಟ ಕಾಂಟಿನೆಂಟಲ್ ಆಹಾರವನ್ನು ಉಣಬಡಿಸುತ್ತಿದೆ. 120 ಆಸನಗಳಿರುವ ಈ ಹೋಟೆಲ್‌ನಲ್ಲಿ ಮುಂಗಡ ಆಸನ ಕಾಯ್ದಿರಿಸಲು ಮೊಬೈಲ್ ಸಂಖ್ಯೆ: 96861 98146.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.