ADVERTISEMENT

‘ದಕ್ಷಿಣ ಭಾರತೀಯ ಅಡುಗೆ ಅಂದ್ರೆ ಇಷ್ಟ’

ಸೆಲೆಬ್ರಿಟಿ ಕಿಚನ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:15 IST
Last Updated 20 ಮಾರ್ಚ್ 2019, 20:15 IST
ಶ್ವೇತಾ ರಾವ್
ಶ್ವೇತಾ ರಾವ್   

‘ನನಗೆ ಪ್ರತಿದಿನ ರೈಸ್ ಇರಲೇಬೇಕು. ಅನ್ನ ತಿನ್ನದಿದ್ದರೆ ಸಮಾಧಾನ ಆಗುವುದೇ ಇಲ್ಲ. ಮೊದಲಿನಿಂದಲೂ ದಕ್ಷಿಣ ಭಾರತದ ಖಾದ್ಯಗಳೇ ನನ್ನ ಫೇವ್‌ರೇಟ್‌’ ಎನ್ನುತ್ತಾರೆ ಕಿರುತೆರೆ ನಟಿ ಶ್ವೇತಾ ರಾವ್.

ಉದಯ ಟಿ.ವಿಯಲ್ಲಿ ಪ್ರಸಾರವಾಗುವ ‘ಕ್ಷಮಾ‘ ಧಾರಾವಾಹಿಯಲ್ಲಿ ಅವರದ್ದು ಮುಖ್ಯಪಾತ್ರ. ಒಂಟಿ ತಾಯಿ ಪಾತ್ರವನ್ನು ನಿಭಾಯಿಸುತ್ತಿರುವ ಅವರು ಸಮಾಜಮುಖಿ ಪಾತ್ರ ಒಪ್ಪಿಕೊಂಡಿದ್ದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ. ಒಂಟಿ ತಾಯಿಯಾಗಿ ನಾನು ನಟನೆ ಮಾಡಬಲ್ಲೆ. ಆದರೆ ನಿಜ ಜೀವನದಲ್ಲಿ ಒಬ್ಬಂಟಿಯಾಗಿ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟ. ತಂದೆ–ತಾಯಿ ಇಬ್ಬರ ಆರೈಕೆಯೂ ಮಕ್ಕಳಿಗೆ ಬೇಕು ಎನ್ನುತ್ತಾರೆ ಅವರು.

‘ಅಮ್ಮನ ಮನೆಯಲ್ಲಿ ನಾನು ಅಡುಗೆ ಮನೆಗೆ ಹೋದವಳೇ ಅಲ್ಲ. ತುಮಕೂರಿನಲ್ಲಿ ಹುಟ್ಟಿ, ಬೆಳೆದಿದ್ದರೂ ಬೆಂಗಳೂರಿನಲ್ಲಿ ಪಿ.ಜಿ.ಯಲ್ಲಿ ಇದ್ದೆ. 15 ವರ್ಷ ಮನೆಯಿಂದ ಹೊರಗೆ ಇದ್ದೇನೆ. ಮದುವೆ, ಗಂಡ, ಮಗು ಆದಮೇಲೆ ಅಡುಗೆ ಮಾಡಲೇಬೇಕಲ್ಲ. ಮಗಳಿಗೆ ಇಷ್ಟವಾಗುವ ಅಡುಗೆಗಳನ್ನೇ ಹೆಚ್ಚು ಮಾಡುವುದನ್ನು ಕಲಿತುಕೊಂಡಿದ್ದೇನೆ. ಮಗಳು ನಾನ್‌ವೆಜ್‌ ಇಷ್ಟಪಡುತ್ತಾಳೆ. ಫಿಶ್‌ ಹಾಗೂ ಚಿಕನ್‌ ಫ್ರೈ ಮಾಡುತ್ತೇನೆ‘ ಎಂದು ಅಡುಗೆ ಮನೆಯ ನಂಟನ್ನು ಬಿಚ್ಚಿಟ್ಟರು.

ADVERTISEMENT

‘ನಾನ್‌ವೆಜ್‌ ಮಾಡುವುದರಲ್ಲಿ ನಾನು ಎಕ್ಸ್‌ಫರ್ಟ್ ಆಗಿದ್ದೇನೆ. ವೆಜ್‌ನಲ್ಲಿ ಕೆಲವು ಅಡುಗೆಗಳು ಮಾತ್ರ ಬರುತ್ತವೆ. ದೋಸೆ, ಬೇಳೆಬಾತ್‌, ಪೊಂಗಲ್‌, ಚಪಾತಿಯನ್ನು ಚೆನ್ನಾಗಿ ಮಾಡುತ್ತೇನೆ. ಬೆಳಿಗ್ಗೆ ಶೂಟಿಂಗ್‌ ಇದ್ದಾಗ ಹೋಟೆಲ್‌ನಿಂದ ತರಿಸಿಕೊಂಡು ತಿನ್ನುವುದು ಅನಿವಾರ್ಯ. ಕೆಲವೊಮ್ಮೆ ಪತಿ, ಚಿತ್ರಾನ್ನ, ಉಪ್ಪಿಟ್ಟು ಮಾಡಿಕೊಡುತ್ತಾರೆ. ನಾನು ಅಮ್ಮ ಮಾಡುವ ಅಡುಗೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವರು ಏನು ಮಾಡಿದರೂ ರುಚಿಯಾಗಿಯೇ ಇರುತ್ತದೆ‘ ಎನ್ನುತ್ತಾರೆ ಶ್ವೇತಾ.

ಪಾಲಕ್‌ ರೈಸ್‌

ಬೇಕಾಗುವ ಪದಾರ್ಥ: ಒಂದು ಕಟ್ಟು ಪಾಲಕ್ ಸೊಪ್ಪು, ಜೀರಿಗೆ, ಗೋಡಂಬಿ, ಎಣ್ಣೆ, ನಾಲ್ಕೈದು ಹಸಿಮೆಣಸಿನಕಾಯಿ, ಅಗತ್ಯಕ್ಕೆ ತಕ್ಕಷ್ಟು ಈರುಳ್ಳಿ, ಬೆಳ್ಳುಳ್ಳಿ.

ಮಾಡುವ ವಿಧಾನ: ಒಂದು ಕಟ್ಟು ಪಾಲಕ್‌ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಸೊಪ್ಪಿನಲ್ಲಿ ನೀರು ಇರದಂತೆ ಸೋಸಿಕೊಳ್ಳಿ. ಕಾದ ಬಾಣಲಿಗೆ ಎಣ್ಣೆ, ಜೀರಿಗೆ, 7 ರಿಂದ 8 ಗೋಡಂಬಿ, ನಾಲ್ಕೈದು ಹಸಿಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ಹಾಕಿ ಹುರಿದುಕೊಳ್ಳಿ, ಕೊನೆಯಲ್ಲಿ ಸೊಪ್ಪನ್ನು ಹಾಕಿ ಬಾಡಿಸಿಕೊಳ್ಳಿ.

ತಣ್ಣಗಾದ ಮೇಲೆ ಎಲ್ಲವನ್ನೂ ನುಣ್ಣಗೆ ಮಿಕ್ಸಿ ಮಾಡಿಕೊಳ್ಳಬೇಕು. ಇದಕ್ಕೆ ನೀರು ಹಾಕಬಾರದು. ಬಳಿಕ ಬಾಣಲಿಯಲ್ಲಿ ಕ್ರೀಮ್‌ ಅಥವಾ ತುಪ್ಪ ಹಾಕಿಕೊಂಡು ಕಾಯಿಸಿಕೊಳ್ಳಿ, ಗೋಡಂಬಿ ಈರುಳ್ಳಿ, ಕರಿಬೇವು, ಮಿಕ್ಸಿ ಮಾಡಿದ್ದ ಮಿಶ್ರಣವನ್ನು ಹಾಕಿ ಕುದಿಸಬೇಕು. ಕುಕ್ಕರ್‌ನಲ್ಲಿ ಅನ್ನ ಮಾಡಿಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ಪಾಲಕ್ ಮಿಶ್ರಣಕ್ಕೆ ಚೆನ್ನಾಗಿ ಕಲಸಿಕೊಳ್ಳಿ. ಈಗ ಪಾಲಕ್ ರೈಸ್ ತಿನ್ನಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.