ADVERTISEMENT

ಕರಾವಳಿಯ ಶರಬತ್ತಿನ ಸವಿ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಜೂನ್ 2018, 9:37 IST
Last Updated 16 ಜೂನ್ 2018, 9:37 IST
ಕರಾವಳಿಯ ಶರಬತ್ತಿನ ಸವಿ...
ಕರಾವಳಿಯ ಶರಬತ್ತಿನ ಸವಿ...   

ನಕ್ಷತ್ರಹಣ್ಣಿನ ರಸ

ಬೇಕಾಗುವ ಸಾಮಾಗ್ರಿಗಳು: ದಾರೆಹುಳಿ ಅಥವಾ ನಕ್ಷತ್ರಹಣ್ಣು, ಬೆಲ್ಲ, ನೀರು, ಕಾಳುಮೆಣಸಿನ ಪುಡಿ.

ತಯಾರಿಸುವ ವಿಧಾನ: ದಾರೆಹುಳಿಯನ್ನು ಸಿಪ್ಪೆ ಸಮೇತ ಸಣ್ಣ ತುಂಡುಗಳಾಗಿ ಹೆಚ್ಚಿಕೊಂಡು, ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ. ನಂತರ ಪಾತ್ರೆಗೆ ಹಾಕಿ ಅಗತ್ಯವಿದ್ದಷ್ಟು ನೀರು ಹಾಗೂ ಬೆಲ್ಲವನ್ನು ಹಾಕಿ, ಅದರೊಂದಿಗೆ ಕಾಳುಮೆಣಸಿನ ಪುಡಿ ಹಾಕಿ ಕಡದಿದರೆ ದಾರೆಹುಳಿ ಶರಬತ್ತು ಕುಡಿಯಲು ರೆಡಿ. ಅಗತ್ಯವಿದ್ದರೆ ಐಸ್‍ತುಂಡುಗಳನ್ನು ಹಾಕಬಹುದು.

ADVERTISEMENT

ಪರಿಮಳ ಬೀರುವ ಈ ಹಣ್ಣಿನ ರಸ ನಿಯಮಿತವಾಗಿ ಕುಡಿದರೆ ಕೆಮ್ಮು, ಕಫ ಎಲ್ಲವೂ ಮಾಯ.

**

ಬೊಂಡ ಶರಬತ್ತು

ಬೇಕಾಗುವ ಸಾಮಾಗ್ರಿಗಳು: ತೆಳು ಗಂಜಿ ಇರುವ ಎಳನೀರು, ಸಕ್ಕರೆ, ಶುಂಠಿ

ತಯಾರಿಸುವ ವಿಧಾನ: ಎಳನೀರನ್ನು ತೆಳುವಾದ ಗಂಜಿಯ ಸಮೇತ ಪಾತ್ರೆಗೆ ಹಾಕಬೇಕು. ಶುಂಠಿಯನ್ನು ಸಣ್ಣ ತುಂಡುಗಳಾಗಿ ಮಾಡಿ, ಮಿಕ್ಸಿಗೆ ಹಾಕಿ ಶುಂಠಿ ಪೇಸ್ಟ್ ತಯಾರಿಸಿಟ್ಟುಕೊಳ್ಳಬೇಕು. ಅನಂತರ ಎಳನೀರಿನ ಪಾತ್ರೆಗೆ ಸಕ್ಕರೆ ಹಾಗೂ ಶುಂಠಿ ಪೇಸ್ಟ್ ಹಾಕಿ ಮಿಶ್ರಣ ಮಾಡಿ ಕುಡಿದರೆ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು.

ಎಳನೀರಿನ ಶರಬತ್ತು ಅಮೃತಸಮಾನ, ಇದು ಜ್ವರ, ತಲೆನೋವುಗಳಿಗೆ ಔಷಧವೂ ಆಗಬಹುದು.

**

ಕಾಮಕಸ್ತೂರಿ ಪಾನಕ

ಬೇಕಾಗುವ ಸಾಮಾಗ್ರಿಗಳು: ಕಾಮಕಸ್ತೂರಿಬೀಜ, ನಿಂಬೆಹಣ್ಣು, ಸಕ್ಕರೆ,ಉಪ್ಪು, ನೀರು

ತಯಾರಿಸುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ನೀರಿಗೆ ಸಕ್ಕರೆಯನ್ನು ಹಾಕಿ ಹದವಾದ ಮಿಶ್ರಣ ಮಾಡಿಕೊಳ್ಳಿ. ನಿಂಬೆಹಣ್ಣನ್ನು ಸಿಪ್ಪೆ ಸಮೇತ ಹೆಚ್ಚಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

ಈಗ ನೀರು, ನಿಂಬೆಹಣ್ಣು ಹಾಗೂ ಅರ್ಧ ಗಂಟೆ ಮೊದಲೇ ನೀರಿನಲ್ಲಿ ನೆನೆಸಿಟ್ಟಿರುವ ಕಾಮಕಸ್ತೂರಿಬೀಜವನ್ನು ಮಿಶ್ರಣ ಮಾಡಿ. ಚಿಟಿಕೆ ಉಪ್ಪು ಸೇರಿಸಿ. ಅಗತ್ಯವಿದ್ದರೆ ಐಸ್‍ಕ್ಯೂಬ್ ಬಳಸಬಹುದು. ಇದೇ ಮಿಶ್ರಣಕ್ಕೆ ಅಂಸೋಲ್ ಅಥವಾ ಪುನ್ನಾರ್‍ಪುಳಿಯನ್ನು ಹಾಕಿ ಕುಡಿದರೆ ಹೊಸ ರುಚಿ ಸಿಗುತ್ತದೆ.

**

ಗೇರುಹಣ್ಣಿನ ಪಾನೀಯ

ಬೇಕಾಗುವ ಸಾಮಾಗ್ರಿಗಳು: ಗೇರುಹಣ್ಣು, ಸಕ್ಕರೆ, ಉಪ್ಪು, ಕಾಳುಮೆಣಸಿನ ಪುಡಿ, ನೀರು.

ತಯಾರಿಸುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ನೀರಿಗೆ ಸಕ್ಕರೆ ಹಾಕಿ ಹದವಾದ ಮಿಶ್ರಣ ಮಾಡಿಕೊಳ್ಳಿ. ಗೇರುಹಣ್ಣು ಸಾಕಷ್ಟಿದ್ದರೆ ಕೈಯಲ್ಲೇ ರಸ ಹಿಂಡಿ ಅದೇ ಪಾತ್ರೆಗೆ ಹಾಕಿಟ್ಟುಕೊಳ್ಳಿ, ಇಲ್ಲದಿದ್ದರೆ ಹೋಳು ಮಾಡಿಕೊಂಡು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬಹುದು.

ಅನಂತರ ಒಂದು ಚಿಟಿಕೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಹಾಕಿ ಕದರಿದರೆ ಗೇರುಹಣ್ಣಿನ ಶರಬತ್ತು ಕುಡಿಯಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.