ADVERTISEMENT

ಅನ್ನ ಮಾಡುವ ಮುನ್ನ...

ಅಮೃತ ಕಿರಣ ಬಿ.ಎಂ.
Published 31 ಅಕ್ಟೋಬರ್ 2021, 19:30 IST
Last Updated 31 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅನ್ನ ಮಾಡುವುದಕ್ಕಿಂತ ಮುಂಚೆ ಅಕ್ಕಿಯನ್ನು ನೀರಿನಲ್ಲಿ ನೆನೆ ಹಾಕಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಈಗಿನವರಲ್ಲಿ ಜಿಜ್ಞಾಸೆಯಿದೆ. ಹಿಂದೆ ನಮ್ಮ ಹಿರಿಯರು ಕೆಲವು ಗಂಟೆಗಳ ಕಾಲ ನೆನೆ ಹಾಕಿ ತೆರೆದ ಪಾತ್ರೆಯಲ್ಲಿ ಬೇಯಿಸಿ, ಹೆಚ್ಚುವರಿ ತಿಳಿಯನ್ನು ಬಸಿಯುತ್ತಿದ್ದರು. ಇದು ಪಿಷ್ಟವನ್ನು ತೆಗೆದು ಹಾಕುತ್ತದೆ, ಹೀಗಾಗಿ ಒಂದೆರಡು ಸಲ ಅಕ್ಕಿ ತೊಳೆದು ಕುಕರ್‌ನಲ್ಲಿ ಬೇಯಿಸಿ ಎಂಬ ಸಲಹೆಗಳು ಬಂದವು. ಆದರೆ ಅಕ್ಕಿಯನ್ನು ನೆನೆ ಹಾಕಿ ಬೇಯಿಸುವುದರಿಂದ ನಮ್ಮ ಜೀರ್ಣಾಂಗ ವ್ಯೂಹವು ಇದನ್ನು ಚೆನ್ನಾಗಿ ಪಚನ ಮಾಡಿ, ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು. ಹಾಗೆಯೇ ಅನ್ನ ಚೆನ್ನಾಗಿ ಅರಳಿ ಬೇಯುತ್ತದೆ. ಅದರ ಸುವಾಸನೆಯನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂಬುದು ಅನುಭವಿಗಳ ಹೇಳಿಕೆ.

ಇದಕ್ಕೆ ಕಾರಣಗಳೂ ಇವೆ. ಕಾಳು, ಬೇಳೆಗಳಲ್ಲಿರುವ ಫೈಟಿಕ್‌ ಆ್ಯಸಿಡ್‌ ಎಂಬುದು ಖನಿಜಾಂಶವನ್ನು ನಮ್ಮ ದೇಹವು ಹೀರಿಕೊಳ್ಳದಂತೆ ತಡೆಯುತ್ತದೆ. ಆದರೆ ಅಕ್ಕಿಯಂತಹ ಧಾನ್ಯವನ್ನು ನೆನೆ ಹಾಕುವುದರಿಂದ ಫೈಟಿಕ್‌ ಆ್ಯಸಿಡ್‌ ಅನ್ನು ತೆಗೆದು ಹಾಕಬಹುದು ಎನ್ನುತ್ತಾರೆ ತಜ್ಞರು.

ಹೀಗಾಗಿ ಅಕ್ಕಿಯನ್ನು ನೆನೆ ಹಾಕಿ ನೀರನ್ನು ಚೆಲ್ಲಿದ ನಂತರ ಬೇಯಿಸುವುದು ಸೂಕ್ತ.

ADVERTISEMENT

ಭಾರತದಲ್ಲಂತೂ ಬೇಕಾದಷ್ಟು ವಿಧದ ಅಕ್ಕಿ ಲಭ್ಯ. ಕುಕರ್‌ನಲ್ಲಿ ಬೇಯಿಸುವುದು, ಅಗಲವಾದ ಪಾತ್ರೆಯಲ್ಲಿ ಬೇಯಿಸಿ ನೀರನ್ನು ಬಸಿಯುವುದು, ಕೆಲವೊಮ್ಮೆ ನೀರನ್ನು ಕಡಿಮೆ ಹಾಕಿ ಅಕ್ಕಿ ಹೀರಿಕೊಂಡು ಅನ್ನ ಅರಳಿ ಬೇಯುವಂತೆ ಮಾಡುವುದು... ಹೀಗೆ ಬೇಯಿಸುವುದಕ್ಕೆ ಹಲವಾರು ವಿಧಗಳಿವೆ.

ಅನ್ನದಿಂದ ಬೇರೆ ಬೇರೆ ತಿನಿಸು ತಯಾರಿಸುವುದಾದರೆ ಬೇಯಿಸುವ ವಿಧಾನವನ್ನು ಬದಲಿಸಬೇಕಾಗುತ್ತದೆ. ಉದಾಹರಣೆಗೆ ಪುಲಾವ್‌. ಉದ್ದನೆಯ ಬಾಸ್ಮತಿ ಅಕ್ಕಿಯಿಂದ ಮಾಡುವುದಾದರೆ ಹೆಚ್ಚು ನೆನೆ ಹಾಕದೆ ಬೇಯಿಸಿ. ಇದರಿಂದ ಗಟ್ಟಿಯಾದ ಅನ್ನ ತಯಾರಾಗಿ ಪುಲಾವ್‌ ಉದುರು ಉದುರಾಗುತ್ತದೆ. ಸಾದಾ ಅನ್ನ ತಯಾರಿಸಲು ಅಕ್ಕಿಯನ್ನು ನೆನೆ ಹಾಕಿ ಬೇಯಿಸಿ, ಹೆಚ್ಚುವರಿ ಗಂಜಿಯನ್ನು ಬಸಿದು ತೆಗೆಯಿರಿ. ಸಾಮಾನ್ಯವಾಗಿ ಅಕ್ಕಿಯನ್ನು 4–6 ಗಂಟೆ ನೆನೆ ಹಾಕಿದರೆ ಸಾಕು. ಪಾಲಿಷ್‌ ಮಾಡದ ಕೆಂಪು, ಕಂದು ಅಕ್ಕಿಯನ್ನು 6–8 ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ಪಾಲಿಷ್‌ ಮಾಡಿದ ಬಿಳಿ ಅಕ್ಕಿಯನ್ನು 10–15 ನಿಮಿಷ ನೆನೆಸಿದರೆ ಸಾಕು.

ಹಾಗೆಯೇ ನೆನೆ ಹಾಕಿದರೆ ಅಕ್ಕಿ ಬೆಂದು ಅನ್ನವಾಗುವ ಸಮಯವೂ ಕಡಿಮೆ. ಅಕ್ಕಿ ನೀರು ಹೀರಿಕೊಂಡು ಬೇಯುವಾಗ ಚೆನ್ನಾಗಿ ಅರಳಿ, ಮೃದುವಾದ ಅನ್ನ ತಯಾರಾಗುತ್ತದೆ. ಒಳ್ಳೆಯ ಪರಿಮಳವೂ ಹೊರಸೂಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.