ADVERTISEMENT

ಅಯ್ಯೋ ಸೇಬಿನ ಬೀಜ ತಿಂದ್ಬಿಟ್ಟೆ!

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 20:05 IST
Last Updated 8 ಜುಲೈ 2018, 20:05 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

‘ದಿನಕ್ಕೊಂದು ಸೇಬು ತಿನ್ನಿ, ವೈದ್ಯರನ್ನು ದೂರವಿಡಿ’ ಎಂಬುದು ಗಾದೆಯಷ್ಟೇ ಜನಜನಿತವಾದ ಮಾತು. ಆದರೆ ‘ಸೇಬಿನ ಬೀಜ ತಿಂದರೆ ಸಾಯ್ತೀವಂತೆ’, ‘ಸೇಬಿನ ಬೀಜ ವಿಷವಂತೆ’ ಎಂಬುದು ಈಗ ದೊಡ್ಡ ಮಟ್ಟದ ಚರ್ಚೆಯ ವಿಷಯವಾಗಿದೆ. ಇದಕ್ಕೆ ಕಾರಣ, ಮಹಿಳೆಯೊಬ್ಬಳು ತನ್ನ ಗಂಡನಿಗೆ ಸೇಬಿನ ಬೀಜ ತಿನ್ನಿಸಿ ಕೊಲೆಗೈದಿದ್ದಾಳೆ ಎಂಬ ಆರೋಪ.

ಸೇಬಿನ ಬೀಜ ವಿಷಕಾರಿ ಎಂಬುದು ಈಗ ಎಲ್ಲರ ಆತಂಕಕ್ಕೆ ಕಾರಣವಾಗಿರುವ ಸಂಗತಿ. ಮಕ್ಕಳಿಗೆ ಹಾಲು ಹಲ್ಲು ಮೂಡುವುದಕ್ಕೂ ಮೊದಲು ವಸಡು ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಕೈಗೆ ಸಿಕ್ಕಿದ್ದನ್ನು ಕಚ್ಚಲು ಶುರು ಮಾಡುತ್ತಾರೆ. ವಸಡಿನ ನಂಜು ನೀಗುವುದಕ್ಕೂ ಆಯಿತು, ಪೌಷ್ಟಿಕ ಆಹಾರ ಸೇವಿಸಿದಂತೆಯೂ ಆಯಿತು ಎಂದು ತಾಯಂದಿರು ಮಕ್ಕಳ ಕೈಗೆ ಸೇಬನ್ನು ತೊಳೆದು ಕೊಡುತ್ತಾರೆ. ಸಿಪ್ಪೆ, ನಾರು, ಬೀಜ ಸಮೇತ ಅವರು ತಿಂದುಬಿಡುತ್ತಾರೆ. ಹಾಗಂತ ಯಾವ ಮಕ್ಕಳೂ, ಸೇಬಿನ ಬೀಜ ತಿಂದ ಕಾರಣಕ್ಕೆ ಸಾವನ್ನಪ್ಪಿಲ್ಲ.

ಹಾಗಿದ್ದರೆ ಸೇಬಿನ ಬೀಜ ವಿಷಕಾರಿಯಾಗುವುದು ಹೇಗೆ ಎಂಬ ಪ್ರಶ್ನೆಯನ್ನು ಮಕ್ಕಳೂ ಈಗ ಕೇಳಲಾರಂಭಿಸಿದ್ದಾರೆ. ಸೇಬಿನಲ್ಲಿ ‘ಅಮಿಗ್ಡಲಿನ್‌’ ಎಂಬ ನೈಸರ್ಗಿಕವಾಗಿ ಉಂಟಾಗುವ ರಾಸಾಯನಿಕ ಇರುತ್ತದೆ. ಆ್ಯಪ್ರಿಕಾಟ್‌, ಬಾದಾಮಿ, ಪೀಚ್‌ ಮತ್ತು ಪ್ಲಮ್‌ ಹಣ್ಣುಗಳ ಬೀಜಗಳಲ್ಲಿಯೂ ಈ ರಾಸಾಯನಿಕ ಕಂಡುಬರುತ್ತದೆ. ಈ‘ಅಮಿಗ್ಡಲಿನ್‌’ ರಾಸಾಯನಿಕವನ್ನು ಸಯನೋಜೆನಿಕ್‌ ಗ್ಲೈಕೊಸೈಡ್‌ ಎಂಬ ಅಂಶ ಇರುತ್ತದೆ. ಇದನ್ನು ಒಳಗೊಂಡಿರುವ ಹಣ್ಣುಗಳನ್ನು ಕತ್ತರಿಸಿ ಜಗಿದು ತಿಂದು, ಹೊಟ್ಟೆ ಸೇರುವ ಪ್ರಕ್ರಿಯೆ ವೇಳೆ ‘ಟಾಕ್ಸಿಕ್‌ ಸಯನೈಡ್‌’ ಎಂಬವಿಷಕಾರಿ ಅಂಶ ಬಿಡುಗಡೆಯಾಗುತ್ತದೆ. ಸೇಬನ್ನು ಬೀಜ ಸಮೇತ ತಿಂದಾಗ ಸಯನೈಡ್‌ ವಿಷ ಹೀಗೆ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ.

ADVERTISEMENT

ಮುಂಬೈನ ಎಸ್.ಎಲ್. ರಹೇಜಾ ಆಸ್ಪತ್ರೆಯ ತುರ್ತು ನಿಗಾ ಘಟಕದ ಮುಖ್ಯಸ್ಥರಾದ ಡಾ.ಸಂಜೀತ್‌ ಶಶಿಧರನ್‌ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಉಲ್ಲೇಖನೀಯ. ‘ಒಂದು ಸೇಬಿನ ಬೀಜದಲ್ಲಿ ಗರಿಷ್ಠ 1 ಗ್ರಾಂ ಸಯನೈಡ್‌ ಉತ್ಪತ್ತಿಯಾಗಬಲ್ಲದು. ಒಬ್ಬ ವ್ಯಕ್ತಿ ಒಂದು ಗಂಟೆ ಅವಧಿಯಲ್ಲಿ 40ರಿಂದ 50 ಕೋಟಿ ಬೀಜಗಳನ್ನು ಸೇವಿಸಿದರೆ ಮಾತ್ರ ಪ್ರಾಣಾಪಾಯ ಸಂಭವಿಸಬಹುದೇ ವಿನಾ ಒಂದೆರಡು ಸೇಬಿನ ಬೀಜಗಳನ್ನು ಜಗಿದು ತಿಂದರೂ ಯಾವುದೇ ಅಪಾಯ ಉಂಟಾಗದು’.

‘ಜಗಿದು ನುಂಗಿದ ಸೇಬಿನ ಬೀಜದಲ್ಲಿರುವ ಸಯನೈಡ್‌ ಅಂಶ ರಕ್ತವನ್ನು ಸೇರಿಕೊಂಡಾಗ, ರಕ್ತನಾಳಗಳಲ್ಲಿರುವ ಆಮ್ಲಜನಕ ಕೆಲಸ ಮಾಡದಂತೆ ಅದು ತಡೆಯುತ್ತದೆ. ಆ ಮೂಲಕ ನಮಗೆ ಆಮ್ಲಜನಕದ ಕೊರತೆ ಉಂಟಾಗಿ ಸಾವು ಸಂಭವಿಸುತ್ತದೆ’ಎಂಬುದು, ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಶಿಲ್ಪಾ ಮೆಹ್ತಾ ಅವರ ವಿವರಣೆ.

ಗರಿಷ್ಠ ಪೋಶಕಾಂಶಗಳನ್ನು ಹೊಂದಿರುವ ಸೇಬನ್ನು ತಿನ್ನುವ ಬಗ್ಗೆ ತಲೆದೋರಿರುವ ತಪ್ಪುಗ್ರಹಿಕೆಯಿಂದ ಹೊರಬರುವುದು ತುರ್ತು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.