ADVERTISEMENT

ಮನಸ್ಸಿನ ಉತ್ಸಾಹ ಹೆಚ್ಚಿಸುವ ಟೀ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 19:30 IST
Last Updated 2 ನವೆಂಬರ್ 2021, 19:30 IST
Herbal tea with chamomile and fresh mint leavesHerbal tea
Herbal tea with chamomile and fresh mint leavesHerbal tea   

ಮನುಷ್ಯನ ಮನಸ್ಸು ಕ್ಷಣಕೊಮ್ಮೆ ಬದಲಾಗುತ್ತಲೇ ಇರುತ್ತದೆ. ಮನಸ್ಸು ಯಾವಾಗ ಯಾವ ರೀತಿ ಬದಲಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮೂಡ್ ಆಫ್‌ ಆದಾಗ ಒಂದು ಬೆಚ್ಚನೆಯ ಟೀ ಕುಡಿದರೆ ಮನಸ್ಸು ಉಲ್ಲಸಿತವಾಗುತ್ತದೆ. ಆ ಕಾರಣಕ್ಕೆ ಹಲವರು ದಿನಕ್ಕೊಮ್ಮೆಯಾದರೂ ಟೀ ಕುಡಿಯುತ್ತಾರೆ. ಟೀ ಮನಸ್ಸಿನ ಒತ್ತಡ ನಿವಾರಿಸಿ ನವಚೈತನ್ಯ ಮೂಡಿಸುವುದರಲ್ಲಿ ಅನುಮಾನವಿಲ್ಲ. ವಿವಿಧ ಬಗೆಯ ಟೀಗಳು ಮನುಷ್ಯನ ಮನಸ್ಸಿಗೆ ಆರಾಮ ನೀಡುತ್ತವೆ. ಕೆಲವು ಹರ್ಬಲ್ ಟೀಗಳು ಮನುಷ್ಯನ ದೇಹ ಹಾಗೂ ಮನಸ್ಸಿಗೆ ಚೈತನ್ಯ ನೀಡುವುದಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.

ಕೆಲವು ಬಗೆಯ ಟೀಯಲ್ಲಿ ಕೆಫಿನ್ ಅಂಶ ಅಧಿಕವಿದ್ದು ಅವು ನಮ್ಮಲ್ಲಿ ಶಕ್ತಿ ಹೆಚ್ಚಿಸಿ ಮನಸ್ಸು ರಿಪೇರಿಯಾಗಲು ಸಹಾಯ ಮಾಡುತ್ತವೆ. ನಿದ್ದೆ ಬರಲು ಕಷ್ಟವಾಗುತ್ತಿದ್ದರೆ, ಮನಸ್ಸಿನಲ್ಲಿ ಒತ್ತಡ ಅಥವಾ ಚಿಂತೆ ಕೊರೆಯುತ್ತಿದ್ದರೆ ಕೆಲವೊಂದು ವಿಶೇಷ ಟೀಗಳನ್ನು ಕುಡಿಯಬಹುದು. ಮನಸ್ಸಿನ ಒತ್ತಡ ಕಡಿಮೆ ಮಾಡಲು ಎಲ್ಲಾ ಸಮಯದಲ್ಲೂ ಗ್ರೀನ್ ಟೀ ಬೆಸ್ಟ್ ಎನ್ನುತ್ತದೆ ಅಧ್ಯಯನ. ಕೆಲವೊಂದು ಸಮಯದಲ್ಲಿ ಕ್ಯಾಮೊಮೊಯಿಲ್ ಟೀ ಉತ್ತಮ. ಈ ಕೆಳಗಿನ ಟೀಗಳು ನಮ್ಮ ಮನಸ್ಸು ಹಾಗೂ ದೇಹಕ್ಕೆ ಚೈತನ್ಯ ನೀಡಿ ದೇಹಾರೋಗ್ಯವನ್ನು ಉತ್ತಮಗೊಳಿಸುತ್ತವೆ.

ತುಳಸಿ ಟೀ

ADVERTISEMENT

ಮನೆಯ ಎದುರುಗಡೆ ತುಳಸಿ ಗಿಡವನ್ನು ಬೆಳೆಸುವುದರಿಂದ ದೈವಿಕ ಶಕ್ತಿ ನೆಲೆ ಕಾಣುತ್ತದೆ ಎಂಬ ನಂಬಿಕೆ ಇದೆ. ಆ ಕಾರಣಕ್ಕೆ ಬಹುತೇಕರು ಮನೆಯ ಎದುರು ತುಳಸಿ ಗಿಡ ನೆಟ್ಟಿರುತ್ತಾರೆ. ತುಳಸಿಯಿಂದ ತಯಾರಿಸಿದ ಟೀ ಕುಡಿಯುವುದರಿಂದ ಹಲವು ಉಪಯೋಗಗಳಿವೆ. ತುಳಸಿ ಟೀಯಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಅಂಶಗಳಿವೆ. ಖಿನ್ನತೆ ಹಾಗೂ ಆತಂಕವನ್ನು ದೂರ ಮಾಡುವ ಶಕ್ತಿ ಇದಕ್ಕಿದೆ. ಆ ಕಾರಣಕ್ಕೆ ಮನಸ್ಸಿಗೆ ಬೇಸರವಾದಾಗ, ದುಃಖವಾದಾಗ ತುಳಸಿ ಟೀ ಸೇವಿಸುವುದು ಉತ್ತಮ.

ಗ್ರೀನ್ ಟೀ

ಮನಸ್ಸಿಗೆ ಅತೀ ಒತ್ತಡ ಎನ್ನಿಸಿದಾಗ, ಮನಸ್ಸು ಭಾರವಾದಾಗ ಗ್ರೀನ್ ಟೀ ಸೇವನೆ ಉತ್ತಮ. ಇದರಲ್ಲಿ ಹಲವು ರೀತಿಯ ಆರೋಗ್ಯಕರ ಅಂಶಗಳಿವೆ. ಗ್ರೀನ್ ಟೀ ಸೇವನೆಯಿಂದ ಮನಸ್ಸು ಹಾಗೂ ದೇಹ ಎರಡೂ ಉಲ್ಲಸಿತವಾಗಿರುತ್ತದೆ. ಗ್ರೀನ್ ಟೀಯಲ್ಲಿರುವ ಕೆಫಿನ್ ಅಂಶ ನಮ್ಮಲ್ಲಿ ಚೈತನ್ಯವನ್ನು ಹೆಚ್ಚಿಸುತ್ತದೆ. ಇದು ದೇಹ ಹಾಗೂ ಮನಸ್ಸು ಎರಡರಲ್ಲೂ ಶಕ್ತಿ ಹೆಚ್ಚುವಂತೆ ಮಾಡುತ್ತದೆ.

ಕ್ಯಾಮೊಮೊಯಿಲ್ ಟೀ

ಕ್ಯಾಮೊಮೊಯಿಲ್ ಟೀ ಕುಡಿಯುವುದರಿಂದ ಒತ್ತಡ ನಿವಾರಣೆ ಸಾಧ್ಯ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಉತ್ತಮ ನಿದ್ದೆಗೆ ಸಹಕಾರಿ. ಇದರಲ್ಲಿ ಹಲವು ರೀತಿಯ ಆರೋಗ್ಯ ಸಹಾಯಕ ಗುಣಗಳಿವೆ.

ಪುದಿನಾ ಟೀ

ಪುದಿನಾ ಟೀ ಭಾವನಾತ್ಮಕವಾಗಿ ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಪುದಿನಾ ಟೀ ನಮ್ಮ ಇಂದ್ರೀಯಗಳಲ್ಲಿ ಚೈತನ್ಯ ಮೂಡುವಂತೆ ಮಾಡುತ್ತದೆ. ಇದರಲ್ಲಿನ ತಂಪು ಹಾಗೂ ರಿಫ್ರೆಶಿಂಗ್‌ ಲಕ್ಷಣಗಳು ನಮ್ಮ ಭಾವನಾತ್ಮಕ ಸ್ಥಿತಿಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಬ್ಲ್ಯಾಕ್ ಟೀ

ದೇಹಕ್ಕೆ ಶಕ್ತಿ ಬೇಕು ಎನ್ನಿಸಿದಾಗ ಬ್ಲ್ಯಾಕ್ ಟೀ ಕುಡಿಯಬೇಕು. ಮನಸ್ಸಿನಲ್ಲಿ ಸಕಾರಾತ್ಮಕ ಅಂಶ ಹೆಚ್ಚಲು ಕೂಡ ಬ್ಲ್ಯಾಕ್ ಟೀ ಸಹಕಾರಿ. ಇದರ ಸೇವನೆಯಿಂದ ಒತ್ತಡದ ಹಾರ್ಮೋನ್‌ಗಳು ಸಹಜ ಸ್ಥಿತಿಗೆ ಮರಳುತ್ತವೆ. ಒತ್ತಡ ಹೆಚ್ಚಿಸುವ ಹಾಮೋರ್ನ್‌ಗಳು ಸಹಜ ಸ್ಥಿತಿಗೆ ಬಂದಾಗ ಮನಸ್ಸು ಹಗುರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.