ADVERTISEMENT

‘ಗ್ರಾಹಕರ ಬೇಡಿಕೆ ಈಡೇರಿಸುವುದೇ ಸವಾಲು’

ಶಶಿಕುಮಾರ್ ಸಿ.
Published 6 ಫೆಬ್ರುವರಿ 2019, 20:00 IST
Last Updated 6 ಫೆಬ್ರುವರಿ 2019, 20:00 IST
ಎಸ್‌ಎಲ್‌ವಿ ಕಾರ್ನರ್
ಎಸ್‌ಎಲ್‌ವಿ ಕಾರ್ನರ್   

ಅನಂತ ಪದ್ಮನಾಭ ಭಟ್ ನನ್ನ ತಂದೆ. ಕುಂದಾಪುರದವರಾದ ಅವರು ಶಿಕಾರಿಪುರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸ್ವಂತವಾಗಿ ಹೋಟೆಲ್ ಶುರುಮಾಡುವ ಆಸೆಯಿಂದ ಬೆಂಗಳೂರಿಗೆ ಬಂದವರು. ಹೀಗೆ ಬಂದ ಅವರು ಇಲ್ಲಿ 1974ರಲ್ಲಿ ಹೋಟೆಲ್ ಶುರು ಮಾಡಿದರು.

ಬಾಲ್ಯದಿಂದಲೇ ಅಪ್ಪನೊಂದಿಗೆ ಹೋಟೆಲ್‌ಗೆ ಹೋಗಿ ಬರುತ್ತಿದ್ದ ನಾನು ಉದ್ಯಮದ ವಾತಾವರಣಕ್ಕೆ ಒಗ್ಗಿಕೊಂಡಿದ್ದೆ.ನಾನು ಬಿ.ಕಾಂ ಪದವೀಧರ. ಮುಂದೆ ಓದುವ ಮನಸ್ಸು ಇರಲಿಲ್ಲ. ಕಾರಣ ಈ ಉದ್ಯಮ ನನ್ನನ್ನು ಸೆಳೆಯುತ್ತಿತ್ತು. ಇದೇ ಕಾರಣಕ್ಕೆ ಸುಮಾರು 20 ವರ್ಷಗಳ ಹಿಂದೆಯೇ ಈ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡೆ. ಒಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ಇಡೀ ಕುಟುಂಬವೇ ಈ ಉದ್ಯಮದಲ್ಲಿ ತೊಡಗಿಕೊಂಡಿದೆ.

ಹೋಟೆಲ್ ಉದ್ಯಮ ನಡೆಸುವುದು ತುಂಬಾ ಕಷ್ಟ ಎನ್ನುವ ಮಾತಿದೆ. ಅದು ನಿಜ. ಆದರೆ, ಇತರೆಲ್ಲ ಕ್ಷೇತ್ರಗಳಲ್ಲಿ ಕಷ್ಟವಿಲ್ಲ ಅಂತಲ್ಲ. ಬೇರೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಈ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚು ಕಷ್ಟವಿದೆ. ಆದರೆ, ನಾವು ಶ್ರದ್ಧೆ ಹಾಗೂ ಪ್ರಾಮಾಣಿಕವಾಗಿ ನೂರಕ್ಕೆ ನೂರರಷ್ಟು ಶ್ರಮಹಾಕಿದಾಗ ಕಷ್ಟ ಮರೆಯಾಗುತ್ತದೆ ಎಂಬುದನ್ನು ಕೆಲಸದ ಅನುಭವದಿಂದ ಕಂಡುಕೊಂಡಿದ್ದೇನೆ.

ADVERTISEMENT

20 ವರ್ಷಗಳ ಹಿಂದೆ ಹೋಲಿಕೆ ಮಾಡಿದರೆ ಈ ಉದ್ಯಮದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ತಂತ್ರಜ್ಞಾನದ ತುತ್ತತುದಿಯಲ್ಲಿ ಬಂದು ನಿಂತಿದ್ದೇವೆ.

ಈ ತಂತ್ರಜ್ಞಾನ ಹೋಟೆಲ್ ಉದ್ಯಮಕ್ಕೆ ಪೂರಕವಾಗಿ ಬೆಳೆದಿದೆ. ಅಡುಗೆ ಭಟ್ಟ ಮಾಡಬಲ್ಲ ಬಹುತೇಕ ಕೆಲಸವನ್ನು ಯಂತ್ರಗಳ ಮೂಲಕ ಮಾಡಬಹುದಾಗಿದೆ. ಈ ವ್ಯವಸ್ಥೆಯು ಹೋಟೆಲ್‌ಗಳಲ್ಲಿ ಕಾರ್ಮಿಕರ ಕೊರತೆಯನ್ನು ನೀಗಿಸಿದೆ. ಆದರೂ, ಕೆಲಸಗಾರರು ಕೈಯಿಂದ ಮಾಡುವ ಅಡುಗೆ ರುಚಿಯೇ ಬೇರೆ.

ನಗರ ಪ್ರದೇಶಗಳಲ್ಲಿ ಹೋಟೆಲ್‌ಗಳ ವಿಶಾಲವಾಗಿರುವುದು ಅಪರೂಪ. ಇರುವ ಜಾಗಕ್ಕೆ ಒಗ್ಗುವಂತಹ ಯಂತ್ರೋಪಕರಣಗಳನ್ನು ಬಳಸಬೇಕಾಗುತ್ತದೆ. ಇದು ಸವಾಲಿನ ಕೆಲಸವಾಗಿದೆ.

ಹೀಗಾಗಿ, ತಂತ್ರಜ್ಞಾನಕ್ಕೆ ನಾವು ತೆರೆದುಕೊಳ್ಳದಿದ್ದರೆ, ಈಗಿನ ಪರಿಸ್ಥಿತಿಯಲ್ಲಿ ಇಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಉದಾಹರಣೆಗೆ ಕಡಿಮೆ ಪ್ರಮಾಣದ ಆಹಾರ ಮಾರಾಟವಾಗುವ ಸ್ಥಳಗಳಲ್ಲಿ ಯಂತ್ರಗಳ ನೆರವು ಅವಶ್ಯಕವಿಲ್ಲ. ಆದರೆ, ಸಾವಿರಾರು ಮಂದಿಗೆ ಆಹಾರ ಪೂರೈಕೆ ಮಾಡುವಾಗ ಅವುಗಳ ಅವಶ್ಯಕತೆ ಹೆಚ್ಚು ಇದೆ.

ನನ್ನ ಪ್ರಕಾರ ಈ ಉದ್ಯಮದಲ್ಲಿ ಸವಾಲುಗಳು ನಾವು ನೋಡುವುದರ ಮೇಲೆ ನಿರ್ಧರಿತವಾಗಿರುತ್ತವೆ. ನನಗೆ ನನ್ನ ಹೋಟೆಲ್‌ಗಳಿಗೆ ಬರುವ ಗ್ರಾಹಕರನ್ನು ಆಹಾರದ ಮೂಲಕ ಸಂತೃಪ್ತಿಗೊಳಿಸುವುದೇ ಸವಾಲಿನ ಕೆಲಸ. ಬಹುತೇಕ ಸಮಯದಲ್ಲಿ ಗ್ರಾಹಕರ ಅಭಿಪ್ರಾಯವನ್ನು ತೆಗೆದುಕೊಂಡು ಅವರಿಗೆ ಇನ್ನೂ ಉತ್ತಮ ಸೇವೆಯನ್ನು ಯಾವ ರೀತಿ ಕೊಡಬಹುದು ಎಂಬುದರ ಬಗ್ಗೆಯೇ ನಾನು ಸದಾ ಚಿಂತಿಸುತ್ತಿರುತ್ತೇನೆ.

ಸ್ವಿಗ್ಗಿ, ಜೊಮೆಟೊ ರೀತಿಯ ಆನ್‌ಲೈನ್ ಆಧಾರಿತ ಆಹಾರ ಪೂರೈಕೆದಾರ ಸಂಸ್ಥೆಗಳಿಂದ ಹೋಟೆಲ್‌ಗಳಿಗೆ ಬರುವವರ ಪ್ರಮಾಣದಲ್ಲಿ ಹೆಚ್ಚೇನೂ ಬದಲಾವಣೆ ಆಗಿಲ್ಲ. ಶೇ 5ರಷ್ಟು ಮಂದಿ ಬದಲಾಗಿರಬಹುದು. ಆದರೆ, ಪ್ರದೇಶಗಳಿಗೆ ಅನುಗುಣವಾಗಿ ನಿರ್ಧರಿತವಾಗುತ್ತವೆ. ಅದರ ಹೊರತಾಗಿ ಆ ಸಂಸ್ಥೆಗಳಿಂದ ಹೋಟೆಲ್‌ಗಳಿಗೂ ಹೆಚ್ಚುವರಿ ವ್ಯಾಪಾರವಾಗುತ್ತದೆ.

ಇನ್ನೂ ಈ ಕ್ಷೇತ್ರದಲ್ಲಿ ಹೆಚ್ಚು ಸಮಸ್ಯೆ ಎಂಬುದು ಕೆಲಸಗಾರರ ವಿಷಯ. ಕೆಲಸಗಾರರು ಸಿಗುತ್ತಾರೆ. ಆದರೆ, ಉತ್ತಮ ಕೌಶಲವುಳ್ಳ ಕೆಲಸಗಾರರು ಸಿಗುವುದಿಲ್ಲ. ಇದರಿಂದ ಅವರನ್ನು ಕೆಲಸಕ್ಕೆ ಸೇರಿಸಿಕೊಂಡ ಹೊಸತರಲ್ಲಿ ಸ್ವಲ್ಪ ತೊಂದರೆಯಾಗುತ್ತದೆ.

ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.