ADVERTISEMENT

ಈರುಳ್ಳಿಕಾವಿನಿಂದ ರುಚಿಕರ ಅಡುಗೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 20:00 IST
Last Updated 16 ಜನವರಿ 2019, 20:00 IST
   

ಈರುಳ್ಳಿ ಗಿಡದ ಕಾಂಡ (ಈರುಳ್ಳಿಕಾವು) ಹಾಗೂ ಹೂವಿನಲ್ಲಿ ನಾರಿನಂಶ ಹೆಚ್ಚಿರುತ್ತದೆ. ಈರುಳ್ಳಿಕಾವು ಅಥವಾ ಹೂವನ್ನು ಈರುಳ್ಳಿಯಂತೆ ಹಲವು ಬಗೆಯಲ್ಲಿ ಬಳಸಬಹುದು. ಎಳೆಯ ದಂಟನ್ನು ರೊಟ್ಟಿಯೊಂದಿಗೇ ಹಾಗೆಯೇ ತಿನ್ನಬಹುದು. ಚಿತ್ರಾನ್ನ, ಸಾಸಿವೆಯಲ್ಲದೇ ಇನ್ನೂ ಹಲವು ಅಡುಗೆ ಬಗೆಯನ್ನು ಸೀತಾ ಎಸ್.ಎನ್. ಹರಿಹರ ವಿವರಿಸಿದ್ದಾರೆ.

ಸಲಾಡ್ (ಪಚಡಿ)

ಬೇಕಾಗುವ ಪದಾರ್ಥಗಳು: 1 ಕಪ್ ಹೆಚ್ಚಿದ ಎಳೆಯ ಈರುಳ್ಳಿ ಕಾವು, ಕ್ಯಾರೆಟ್ ತುರಿ, ಯಾವುದೇ ಮೊಳಕೆ ಬಂದ ಕಾಳುಗಳು, ಕಾಯಿತುರಿ 2 ಚಮಚ, 1 ಟೊಮಾಟೊ (ಬೇಕಿದ್ದಲ್ಲಿ), ಹೆಚ್ಚಿದ ಕೊತ್ತಂಬರಿ ಸೊಪ್ಪು, ನಿಂಬೆರಸ, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಎಣ್ಣೆ ಸಾಸಿವೆ ಇಂಗು, ಹಸಿಮೆಣಸಿನ ಪೇಸ್ಟ್.

ADVERTISEMENT

ಮಾಡುವ ವಿಧಾನ: ಪಾತ್ರೆಗೆ ಎಲ್ಲವನ್ನೂ ಹಾಕಿ ಚೆನ್ನಾಗಿ ಕಲಸಿ, ಬೇಕಿದ್ದಲ್ಲಿ ಒಗ್ಗರಣೆ ಹಾಕಿ ಸವಿಯಿರಿ. ತೂಕ ಇಳಿಸಲು ಬಹು ಒಳ್ಳೆಯ ರುಚಿಯಾದ ಸಲಾಡ್ ಇದು. ಬೆಳಗಿನ ಉಪಾಹಾರದ ಬದಲಿಗೆ ಇದನ್ನು ಸೇವಿಸಿದರೆ ಬೇಗ ಹಸಿವಾಗುವುದಿಲ್ಲ.

ಒಣಪಲ್ಯ

ಬೇಕಾಗುವ ಪದಾರ್ಥಗಳು: 1 ಕಪ್ ಹೆಚ್ಚಿದ ಎಳೆಯ ಈರುಳ್ಳಿ ಕಾವು, 2-3 ಚಮಚ ಎಣ್ಣೆ, 1 ಚಮಚ ಕಡ್ಲೆಹಿಟ್ಟು, ಉಪ್ಪು, ಕಾರದ ಪುಡಿ.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ ಕಾವು ಹಾಕಿ ಬಾಡಿಸಿ. ಕಡ್ಲೆಹಿಟ್ಟು ಹಾಕಿ 5 ನಿಮಿಷ ಹುರಿಯಿರಿ. ಉಪ್ಪು ಕಾರದ ಪುಡಿ ಹಾಕಿ ಮತ್ತಷ್ಟು ಹುರಿಯಿರಿ. ಒಲೆ ಆರಿಸಿ. ರುಚಿಯಾದ ಈ ಪಲ್ಯವನ್ನು ರೊಟ್ಟಿ, ಸಾರು– ಅನ್ನದೊಂದಿಗೆ ಸವಿಯಿರಿ.

ಬೇಳೆಪಲ್ಯ

ಬೇಕಾಗುವ ಪದಾರ್ಥಗಳು: 1 ಕಪ್ ಹೆಚ್ಚಿದ ಎಳೆಯ ಈರುಳ್ಳಿ ಕಾವು, 1/2 ಕಪ್ ಬೆಂದ ತೊಗರಿ ಬೇಳೆ, 1/2 ಸಣ್ಣಗೆ ಹೆಚ್ಚಿದ ಟೊಮಾಟೊ, ರುಚಿಗೆ ಉಪ್ಪು, 1/2 ಕಪ್ ಕಾಯಿತುರಿ. ಒಗ್ಗರಣೆಗೆ ಎಣ್ಣೆ,ಸಾಸಿವೆ, 1 ಚಮಚ ಹೆಚ್ಚಿದ ಹಸಿಮೆಣಸು.

ಮಾಡುವ ವಿಧಾನ: ಒಗ್ಗರಣೆ ಮಾಡಿ. ಹೆಚ್ಚಿದ ಈರುಳ್ಳಿ ಕಾವು ಹಾಕಿ ಬಾಡಿಸಿ, ಟೊಮೆಟೊ ಹಾಕಿ ಬೇಯಿಸಿ. ಬೆಂದ ಬೇಳೆ, ಉಪ್ಪು, ಕಾಯಿತುರಿ. ಹಾಕಿ ಕೈಯಾಡಿಸಿ ಮತ್ತಷ್ಟು ಬೇಯಿಸಿ ಒಲೆ ಆರಿಸಿ. ರೊಟ್ಟಿ, ಅನ್ನದೊಂದಿಗೆ ಸವಿಯಿರಿ.

ಗೊಜ್ಜು

ಬೇಕಾಗುವ ಪದಾರ್ಥಗಳು: 1 ಕಪ್ ಹೆಚ್ಚಿದ ಈರುಳ್ಳಿ ಕಾವು, 1 ಚಮಚ ಎಳ್ಳು, 1/4 ಚಮಚ ಮೆಂತೆ, 1 ಚಮಚ ಹುರಿಗಡ್ಲೆ, 1/2 ಕಪ್ ಕಾಯಿತುರಿ, 4-5 ಒಣಮೆಣಸಿನ ಕಾಯಿ. ರುಚಿಗೆ ಹುಣಸೆ ಹಣ್ಣು ಉಪ್ಪು ಬೆಲ್ಲ, ಹೆಚ್ಚಿದ ಕೊತ್ತಂಬರಿ. ಒಗ್ಗರಣೆಗೆ ಎಣ್ಣೆ, ಸಾಸಿವೆ ಕರಿಬೇವು, ಇಂಗು.

ಮಾಡುವ ವಿಧಾನ: ಸ್ವಲ್ಪ ಎಣ್ಣೆ ಹಾಕಿ ಮೆಂತೆ, ಎಳ್ಳು, ಒಣಮೆಣಸಿನ ಕಾಯಿ ಹುರಿದುಕೊಳ್ಳಿ. ತಣಿದ ನಂತರ ಹುರಿಗಡಲೆ, ಕಾಯಿತುರಿ ಹಾಕಿ ರುಬ್ಬಿ. ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ, ಅದಕ್ಕೆ ಹೆಚ್ಚಿದ ಈರುಳ್ಳಿ ಕಾವು ಹಾಕಿ ಬಾಡಿಸಿ, ರುಬ್ಬಿದ ಮಿಶ್ರಣ, ಉಪ್ಪು ಬೆಲ್ಲ ಹಾಕಿ ಕುದಿಸಿ. ಹೆಚ್ಚಿದ ಕೊತ್ತಂಬರಿ ಉದುರಿಸಿ ಒಲೆ ಆರಿಸಿ. ಅನ್ನ, ಚಪಾತಿ, ಮುದ್ದೆ, ರೊಟ್ಟಿಯೊಂದಿಗೆ ಸವಿಯಿರಿ.

ಪಕೋಡ

ಬೇಕಾಗುವ ಪದಾರ್ಥಗಳು: 1/2 ಕಪ್ ಹೆಚ್ಚಿದ ಈರುಳ್ಳಿ ಕಾವು, 1/4 ಕಪ್ ಹೆಚ್ಚಿದ ಈರುಳ್ಳಿ, 1 ಕಪ್ ಕಡ್ಲೆ ಹಿಟ್ಟು, 1 ಚಮಚ ಚಿರೋಟಿ ರವೆ, ಉಪ್ಪು ಕಾರದಪುಡಿ ಹೆಚ್ಚಿದ ಕರಿಬೇವು ಕೊತ್ತಂಬರಿ ರುಚಿಗೆ ತಕ್ಕಷ್ಟು. ಇಂಗು 1/2 ಚ. ಜೀರಿಗೆ, 1/2 ಚ. ದನಿಯಾ, 1/4 ಓಂ ಕಾಳು ಸೇರಿಸಿ ಮಾಡಿದ ಪುಡಿ. 1/2 ಚಮಚ ಅಡುಗೆ ಸೋಡಾ. ಕರಿಯಲು ಎಣ್ಣೆ

ಮಾಡುವ ವಿಧಾನ: ಎಲ್ಲಾ ಪದಾರ್ಥಗಳನ್ನು ಹಾಕಿ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ಕಲಸಿ. ಕಲಸಿದ ಹಿಟ್ಟನ್ನು ಕಾದ ಎಣ್ಣೆಗೆ ಸ್ವಲ್ಪ ಸ್ವಲ್ಪವೇ ಹಾಕಿ ಹದವಾಗಿ ಪಕೋಡ ಕರಿಯಿರಿ.

ಅಕ್ಕಿರೊಟ್ಟಿ (ತಾಳಿಪಟ್ಟು)

ಬೇಕಾಗುವ ಪದಾರ್ಥಗಳು: 1 ಕಪ್ ಹೆಚ್ಚಿದ ಈರುಳ್ಳಿ ಕಾವು, ಒಂದೂವರೆ ಕಪ್ ಅಕ್ಕಿ ಹಿಟ್ಟು, 1/2 ಕಪ್ ಕಾಯಿತುರಿ 1 ಚಮಚ ಜೀರಿಗೆ, ಉಪ್ಪು, ಹೆಚ್ಚಿದ ಕರಿಬೇವು, ಕೊತ್ತಂಬರಿ, ಎಣ್ಣೆ

ಮಾಡುವ ವಿಧಾನ: ಎಣ್ಣೆಯನ್ನು ಹೊರತು ಪಡಿಸಿ ಎಲ್ಲವನ್ನೂ ನೀರು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಬಾಣಲೆ ಅಥವಾ ತವಾದಲ್ಲಿ 1 ಚಮಚ ಎಣ್ಣೆ ಹಾಕಿ ಬೇಕಾದ ಅಳತೆಗೆ ನೀರು ಹಾಕಿ ತೆಳ್ಳಗೆ ತಟ್ಟಿ ಗರಿಗರಿಯಾಗಿ ಬೇಯಿಸಿ. ಯಾವುದೇ ಚಟ್ನಿಯೊಂದಿಗೆ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.