ADVERTISEMENT

‘ಭಾಗ್ಯ ಟಿ.ವಿ’ ಯೂಟ್ಯೂಬ್ ಚಾನೆಲ್‌: ಮನೆಯಲ್ಲೇ ಹೋಟೆಲ್‌ ‌ರುಚಿಯ ಭಾಗ್ಯ

ಸುಮಾ ಬಿ.
Published 20 ಸೆಪ್ಟೆಂಬರ್ 2025, 1:15 IST
Last Updated 20 ಸೆಪ್ಟೆಂಬರ್ 2025, 1:15 IST
<div class="paragraphs"><p>‘ಭಾಗ್ಯ ಟಿ.ವಿ’ ಯೂಟ್ಯೂಬ್ ಚಾನೆಲ್‌</p></div>

‘ಭಾಗ್ಯ ಟಿ.ವಿ’ ಯೂಟ್ಯೂಬ್ ಚಾನೆಲ್‌

   

ಹೋಟೆಲ್‌ ಸ್ಟೈಲ್‌ ಬೋಂಡಾ ಸೂಪ್‌, ವೆಜ್‌ ಕುರ್ಮಾ, ಢಾಬಾ ಸ್ಟೈಲ್‌ ದಾಲ್‌ ಫ್ರೈ, ಮಶ್ರೂಮ್‌ ಗ್ರೇವಿ, ರೆಸ್ಟೊರೆಂಟ್‌ ಶೈಲಿಯ ಪನ್ನೀರ್‌ ಬಟರ್‌ ಮಸಾಲ, ಫಿಶ್‌ ಫ್ರೈ, ಬೇಕರಿ ಸ್ಟೈಲ್‌ ಮ್ಯಾಂಗೋ ಕೇಕ್‌, ಸ್ಯಾಂಡ್‌ವಿಚ್‌... ಕೇಳುತ್ತಿದ್ದಂತೆಯೇ ಬಾಯಲ್ಲಿ ನೀರೂರುತ್ತದೆ ಅಲ್ಲವೇ?

ಮನೆಯಲ್ಲಿ ಎಷ್ಟೇ ರುಚಿಕಟ್ಟಾಗಿ ಅಡುಗೆ ಮಾಡಿದರೂ ಹೋಟೆಲ್‌, ರೆಸ್ಟೊರೆಂಟ್‌ನ ಖಾದ್ಯಗಳ ಸ್ವಾದವೇ ಬೇರೆ. ಹಾಗಾಗಿ, ವಾರಾಂತ್ಯ ಬಂದರೆ ಸಾಕು ಹೋಟೆಲ್‌, ಬೇಕರಿಗಳತ್ತಲ್ಲೇ ಮನಸ್ಸು ಎಳೆಯುತ್ತದೆ. ಅಂಗಡಿಯಿಂದ ತಂದ ಗರಂ ಮಸಾಲ ಬೆರೆಸಿ, ಸಾಸ್‌ ಸುರಿದು, ಅದರ ಜೊತೆಗೆ ಇನ್ನೂ ಏನೇನೆಲ್ಲಾ ಸೇರಿಸಿ ಅಡುಗೆ ಸಿದ್ಧಪಡಿಸಿದರೂ ಹೋಟೆಲ್‌ನ ಆ ರುಚಿ ಹತ್ತದು ಎಂದು ಕೊರಗುವವರೇ ಹೆಚ್ಚು. ಇಂತಹ ಅನುಭವ ನಿಮಗೂ ಆಗಿದೆಯೇ? ಹಾಗಿದ್ದರೆ ಯೂಟ್ಯೂಬ್‌ನ ‘ಭಾಗ್ಯ ಟಿ.ವಿ’ ಚಾನೆಲ್‌ ನೋಡಿ.

ADVERTISEMENT

ಹೋಟೆಲ್‌ ಶೈಲಿಯ ಖಾದ್ಯ ತಯಾರಿಯ ಗುಟ್ಟನ್ನು ರಟ್ಟು ಮಾಡುತ್ತಾ ತಮ್ಮ ಅಡುಗೆ ‘ಅರಮನೆ’ಗೆ ಆಹ್ವಾನವೀಯುವ ಈ ಚಾನೆಲ್‌ನ ಒಡೆಯರಾದ ಭಾಗ್ಯಾ ಮತ್ತು ಗಿರೀಶ್‌ ದಂಪತಿ, ಈಗ ಬಹುತೇಕರ ‘ಅಡುಗೆ’ಮನೆಯ ಮಾತಾಗಿದ್ದಾರೆ. ಬಾಣಲೆಗೆ ಹಾಕಿದ್ದನ್ನು ಎಷ್ಟು ನಿಮಿಷ ಬೇಯಿಸಬೇಕು, ಯಾವ ಹದದಲ್ಲಿ ಹುರಿಯಬೇಕು, ಈರುಳ್ಳಿ ಹಾಕಿದ ಬಳಿಕ ಟೊಮೆಟೊವನ್ನು ಯಾವ ಸಮಯಕ್ಕೆ ಸೇರಿಸಬೇಕು, ಸೊಪ್ಪು ಎಷ್ಟು ಹೊತ್ತು ತಳಿಸಬೇಕು, ಯಾವ ತರಕಾರಿ ಎಷ್ಟು ಹೊತ್ತು ಬೇಯಿಸಬೇಕು... ಹೀಗೆ ಸಣ್ಣ ಸಣ್ಣ ಸಂಗತಿಗಳೂ ಅಡುಗೆ ತಯಾರಿಗೆ ಮುಖ್ಯವಾಗಿರುತ್ತವೆ. ಇವೆಲ್ಲವುಗಳ ನಾಡಿಮಿಡಿತ ಅರಿತಿರುವ ಭಾಗ್ಯಾ ಕೈಚಳಕದಲ್ಲಿ ಹದವಾದ ಪಾಕ ತಯಾರಾಗುತ್ತದೆ. ಅಡುಗೆಯ ಗಂಧ–ಗಾಳಿ ಗೊತ್ತಿರದವರು, ಹೊಸದಾಗಿ ಅಡುಗೆ ಮಾಡುವವರ ಕೈಯಲ್ಲೂ ಪರ್ಫೆಕ್ಟ್‌ ಪಾಕ ತಯಾರಾಗುವಂತೆ ಪಾಠ ಹೇಳಿಕೊಡುತ್ತಾರೆ ಗಿರೀಶ್. ಈ ಇಬ್ಬರ ಸಾಂಗತ್ಯದಲ್ಲಿ ಹೊರಹೊಮ್ಮುವ ರಸಪಾಕ ವೀಕ್ಷಕರ ಬಾಯಲ್ಲಿ ನೀರೂರಿಸುತ್ತದೆ.

ಬಹುತೇಕ ಅಡುಗೆ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಅಡುಗೆ ಮಾಡುವವರೇ ಪಾಠ ಹೇಳುವ ‘ಪಾತ್ರ’ವನ್ನೂ ನಿರ್ವಹಿಸುತ್ತಾರೆ. ಇಲ್ಲಿ ಹಾಗಲ್ಲ. ಭಾಗ್ಯಾ ಅವರ ಕೈಯಲ್ಲಿ ರಸಪಾಕ ತಯಾರಿ ನಡೆದರೆ, ಅದಕ್ಕೆ ತಕ್ಕಂತೆ ಗಿರೀಶ್‌ ಅವರ ಮಧುರ ಧ್ವನಿ ಜತೆಯಾಗುತ್ತದೆ. ಇವೆರಡರ ಮಿಳಿತದಿಂದ ಕರ್ಣಕ್ಕೂ ಹಿತ, ಜಿಹ್ವೆಗೂ ರುಚಿ ಹತ್ತಿಸುವ ದಂಪತಿ, ಈ ಚಾನೆಲ್‌ನಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.

2018ರಲ್ಲಿ ಅವರು ಚಾನೆಲ್‌ ಶುರುಮಾಡಿದರೂ, ಅದು ಮುನ್ನೆಲೆಗೆ ಬಂದದ್ದು ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ. ಎಲ್ಲೆಡೆಯೂ ಹೋಟೆಲ್‌, ಬೇಕರಿ, ರೆಸ್ಟೊರೆಂಟ್‌ಗಳು ಬಾಗಿಲು ಮುಚ್ಚಿದ್ದಾಗ ಎಲ್ಲರ ಚಿತ್ತ ಅಡುಗೆ ಮನೆಯತ್ತ ಹೊರಳಿತು. ಭಾಗ್ಯಾ ಅವರ ರುಚಿಕಟ್ಟಾದ ಅಡುಗೆ ಪಾಠ ಆಗ ಬಹುತೇಕರ ಅಡುಗೆ ಮನೆಯಲ್ಲಿ ಪ್ರಯೋಗಕ್ಕಿಳಿಯಿತು. ಹೋಟೆಲ್‌ ರುಚಿ ನಾಲಿಗೆಗೆ ಹತ್ತಿತು. ಇವರ ವೀಕ್ಷಕ ವಲಯವೂ ಹೆಚ್ಚಿತು. 13 ಲಕ್ಷಕ್ಕೂ ಹೆಚ್ಚು ವೀಕ್ಷಕವಲಯವನ್ನು ಹೊಂದಿರುವ ಇವರ ಚಾನೆಲ್‌ನ ರೆಸಿಪಿಗಳು ಈವರೆಗೆ 28 ಕೋಟಿ ವೀಕ್ಷಣೆ ಪಡೆದಿವೆ. ಅವರು ಹೋಟೆಲ್‌, ರೆಸ್ಟೊರೆಂಟ್‌ ಶೈಲಿಯ ಅಡುಗೆಗಳನ್ನು ಕಲಿತದ್ದು ಹೋಟೆಲ್‌ನಿಂದಲೇ...

ಗಿರೀಶ್‌ ಅವರ ತಾಯಿ ಪುಟ್ಟದೊಂದು ಹೋಟೆಲ್‌ ನಡೆಸುತ್ತಿದ್ದರು. ಭಾಗ್ಯಾ ಹಾಗೂ ಗಿರೀಶ್‌ ಅವರ ಸಹಾಯಕ್ಕೆಂದು ಅಲ್ಲಿಗೆ ಹೋಗುತ್ತಿದ್ದರು. ಆಗ ತಾನೇ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದ ದಂಪತಿ, ಹೋಟೆಲ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ತಯಾರಿಸುತ್ತಿದ್ದ ಅಡುಗೆಯನ್ನು ಮನೆಗೆ ಬಂದು ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಿ ಯೂಟ್ಯೂಬ್‌ ಅಂಗಳದಲ್ಲಿ ಹಂಚಿಕೊಳ್ಳತೊಡಗಿದರು. ಹೀಗೆ ಆ ರೆಸಿಪಿಗಳು ಬಹುತೇಕರ ಮೆಚ್ಚುಗೆಗೆ ಪಾತ್ರವಾಗತೊಡಗಿದವು.

ಒಂದು ಪದಾರ್ಥದ ರುಚಿ ನೋಡಿದರೆ ಸಾಕು, ಅದಕ್ಕೆ ಏನೇನು ಪದಾರ್ಥ, ಎಷ್ಟೆಷ್ಟು ಬಳಸಿದ್ದಾರೆ ಎಂದು ಅರಿಯುವ ಚಾಕಚಕ್ಯತೆ ಭಾಗ್ಯಾಗೆ ಇದೆ.

–ಗಿರೀಶ್‌

ಕೋಟ್‌... ಭಾಗ್ಯಾ

ಅಡುಗೆಯನ್ನು ಎಷ್ಟೇ ರುಚಿಕಟ್ಟಾಗಿ ಮಾಡಿದರೂ ನೋಡುಗರಿಗೆ, ಕೇಳುಗರಿಗೆ ಅದು ಹಿತವೆನಿಸಬೇಕು. ನಾನು ತಯಾರಿಸುವ ಅಡುಗೆಗೆ ಜೀವತುಂಬಿ ಧ್ವನಿ ನೀಡುತ್ತಾರೆ ಗಿರೀಶ್‌. ಅವರು ಬಳಸುವ ಭಾಷೆ, ಪದಬಳಕೆ ಎಂಥವರನ್ನೂ ಆಕರ್ಷಿಸುತ್ತದೆ. ಎರಡೂ ಕೈ ಸೇರಿದರೇನೇ ಚಪ್ಪಾಳೆ ಎಂಬ ಮಾತಿಗೆ ನಾವಿಬ್ಬರೂ ನಿದರ್ಶನ.

–ಭಾಗ್ಯಾ‌

Bhagya 2

ರಹಸ್ಯ ಬಯಲು

ಯಾವುದೇ ಖಾದ್ಯ ತಯಾರಿಸುವಾಗಲೂ ಒಂದೇ ಬಗೆಯ ಪದಾರ್ಥಗಳನ್ನು ವಿವಿಧ ವಿಧಾನಗಳಲ್ಲಿ ಬಳಸಿದರೆ ರುಚಿ ಬದಲಾಗುತ್ತಾ ಹೋಗುತ್ತದೆ. ಇದರ ಸೀಕ್ರೆಟ್‌ ಗೊತ್ತಿದ್ದರೆ ಎಂತಹ ರೆಸಿಪಿಯನ್ನೂ ಸುಲಭದಲ್ಲಿ ತಯಾರಿಸಬಹುದು. ಉದಾಹರಣೆಗೆ ಒಂದು ಬಾತ್‌ ಅಥವಾ ಸಾಂಬಾರ್‌ ತಯಾರಿಸಬೇಕೆಂದರೆ ಮಸಾಲೆಯನ್ನು ಹಸಿಯಾಗಿ ಬಳಸಿದರೆ ಒಂದು ಬಗೆಯ ರುಚಿ ಕೊಡುತ್ತದೆ ಅದನ್ನು ಹುರಿದು ಬಳಸಿದರೆ ಮತ್ತೊಂದು ರುಚಿ ಎಣ್ಣೆಯಲ್ಲಿ ಹುರಿದರೆ ಮಗದೊಂದು ರುಚಿ ಪೌಡರ್‌ ಮಾಡಿ ಬಳಸಿದರೆ ಇನ್ನೊಂದು ಬಗೆಯ ರುಚಿ ಬರುತ್ತದೆ. ಒಂದೇ ಬಗೆಯ ಪದಾರ್ಥಗಳನ್ನು ಬಳಸಿ ನಾಲ್ಕು ರುಚಿಯಲ್ಲಿ ಅಡುಗೆ ತಯಾರಿಸಬಹುದು. ಆ ಕೌಶಲ ಅರಿತರೆ ಅಡುಗೆ ಸುಲಭ. –ಭಾಗ್ಯಾ

ಪನ್ನೀರ್‌ ತವಾ ಫ್ರೈ

ಮೀನಿನಲ್ಲಿ ತವಾ ಫ್ರೈ ಕೇಳಿದ್ದೇವೆ. ಇದೇನು ಪನ್ನೀರ್‌ ತವಾ ಫ್ರೈ? ಮಾಂಸಾಹಾರಿಗಳಿಗೆ ತವಾ ಫ್ರೈ ಎಂದೊಡನೆ ಬಾಯಲ್ಲಿ ನೀರೂರುವುದುಂಟು ಸಸ್ಯಾಹಾರಿಗಳೂ ಪನ್ನೀರ್‌ನಲ್ಲಿ ತವಾ ಫ್ರೈ ಮಾಡಿ ಸವಿದು ಜಿಹ್ವಾ ಚಾಪಲ್ಯ ತಣಿಸಿಕೊಳ್ಳಬಹುದು ಎನ್ನುತ್ತಾರೆ ಭಾಗ್ಯಾ ಮತ್ತು ಗಿರೀಶ್‌.

ಏನೇನು ಬೇಕು?

ಪನ್ನೀರ್‌ ಮ್ಯಾರಿನೇಟ್‌ ಮಾಡಿಕೊಳ್ಳಲು– ಖಾರದಪುಡಿ ಕಾರ್ನ್‌ಫ್ಲೋರ್‌ ಗರಂ ಮಸಾಲ ದನಿಯಾ ಪುಡಿ ತಲಾ ಒಂದು ಚಮಚ ಅರ್ಧ ಚಮಚ ಜೀರಿಗೆ ಪುಡಿ ಸ್ವಲ್ಪ ಅರಿಶಿನ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಶುಂಠಿ– ಬೆಳ್ಳುಳ್ಳಿ ಪೇಸ್ಟ್‌ ಮತ್ತು ಮೊಸರು ತಲಾ ಒಂದು ಚಮಚ 3 ಚಮಚ ಟೊಮೆಟೊ ಕೆಚಪ್‌ ಸ್ವಲ್ಪ ದೊಡ್ಡದಾಗಿ ಕತ್ತರಿಸಿಕೊಂಡ 250 ಗ್ರಾಂ ಪನ್ನೀರ್‌ ತುಂಡು. ಹೀಗೆ ಮಾಡಿ: ಮೇಲೆ ಹೇಳಿರುವ ಎಲ್ಲ ಮಸಾಲೆಯನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಪೇಸ್ಟ್‌ ಮಾಡಿಕೊಳ್ಳಬೇಕು. ಅದನ್ನು ಪನ್ನೀರ್‌ ತುಂಡುಗಳಿಗೆ ಸವರಿ 15ರಿಂದ 20 ನಿಮಿಷದವರೆಗೂ ಮ್ಯಾರಿನೇಟ್‌ ಆಗಲು ಬಿಡಬೇಕು. ತವಾವನ್ನು ಬಿಸಿ ಮಾಡಲು ಇಟ್ಟು ಒಂದೂವರೆ ಚಮಚ ತುಪ್ಪ ಹಾಕಿ ಅದು ಕರಗಿದ ಬಳಿಕ ಮ್ಯಾರಿನೇಟ್‌ ಆದ ಪನ್ನೀರ್‌ ಅನ್ನು ತವಾದಲ್ಲಿ ಇಟ್ಟು ಎರಡೂ ಬದಿಯನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ಈಗ ರುಚಿಯಾದ ಪನ್ನೀರ್‌ ತವಾ ಫ್ರೈ ಸವಿಯಲು ಸಿದ್ಧ. ಜೊತೆಗೆ ಮ್ಯಾರಿನೇಟ್‌ ಆದ ಪನ್ನೀರನ್ನು ಫ್ರಿಜ್‌ನಲ್ಲಿ ಇಟ್ಟು ಬೇಕೆಂದಾಗ ತವಾದಲ್ಲಿ ಫ್ರೈ ಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.