ADVERTISEMENT

ಆಹಾ ಅಡುಗೆ: ಪವಿತ್ರ ರಂಜಾನ್‌ ಮಾಸಕ್ಕೆ ವಿಶೇಷ ಖಾದ್ಯಗಳ ರೆಸಿಪಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 19:30 IST
Last Updated 22 ಮಾರ್ಚ್ 2024, 19:30 IST
<div class="paragraphs"><p>ರಾಗಿ ಮಣ್ಣಿ,&nbsp;ಚಿಕನ್ ಕಟ್ಲೆಟ್‌,&nbsp;ಎಗ್ ಪಫ್ಸ್‌</p></div>

ರಾಗಿ ಮಣ್ಣಿ, ಚಿಕನ್ ಕಟ್ಲೆಟ್‌, ಎಗ್ ಪಫ್ಸ್‌

   

ಪವಿತ್ರ ಮಾಸ ರಂಜಾನ್‌ನಲ್ಲಿ ಬ್ಯಾರಿ ಸಮುದಾಯದ ತಿಂಡಿತಿನಿಸುಗಳ ರೆಸಿಪಿಯನ್ನು ಪರಿಚಯಿಸಿದ್ದಾರೆ ಆಯಿಷಾ ಇಂದಬೆಟ್ಟು

ರಾಗಿ ಮಣ್ಣಿ

ADVERTISEMENT

ಬೇಕಾಗುವ ಸಾಮಗ್ರಿಗಳು: ರಾಗಿ, ತೆಂಗಿನಕಾಯಿ, ಏಲಕ್ಕಿ, ಬೆಲ್ಲ.

ಮಾಡುವ ವಿಧಾನ: ರಾಗಿ ಹಾಗೂ ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿಕೊಂಡು, ಜರಡಿಯಲ್ಲಿ ಸೋಸಿಕೊಳ್ಳಬೇಕು. ರುಬ್ಬಿಕೊಂಡ ಹಾಲಿಗೆ ಬೆಲ್ಲ, ಏಲಕ್ಕಿ ಸೇರಿಸಿ ಗಟ್ಟಿಯಾಗುವುವರೆಗೂ ಕೈಯಾಡಿಸಬೇಕು. ಅದನ್ನು ಬಟ್ಟಲಿಗೆ ಸೇರಿಸಿ, ಒಣ ಹಣ್ಣುಗಳಿಂದ ಅಲಂಕರಿಸಬೇಕು. ಪ್ಲೇಟ್‌ಗೆ ಹಾಕಿ ಅರ್ಧ ಗಂಟೆ ಆರಲು ಬಿಟ್ಟು, ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು ಮಾಡಿ ಸವಿಯಬಹುದು. ಫ್ರಿಜ್‌ನಲ್ಲಿಟ್ಟರೆ ಮೂರು ದಿನಗಳವರೆಗೆ ಬಳಸಬಹುದು.

ಚಿಕನ್ ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು: ಅಲೂಗಡ್ಡೆ, ಚಿಕನ್, ಈರುಳ್ಳಿ, ಟೊಮೆಟೊ, ಗರಂ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಕನ್ ಮಸಾಲ, ಉಪ್ಪು, ಹಳದಿ, ಮೊಟ್ಟೆ, ಬ್ರೆಡ್ ಕ್ರಮ್ಸ್.

ಮಾಡುವ ವಿಧಾನ: ಬಣ್ಣ ಬದಲಾಗುವವರೆಗೆ ಎಣ್ಣೆಯಲ್ಲಿ ಈರುಳ್ಳಿಯನ್ನು ಕರಿದು ಬಳಿಕ ಅದಕ್ಕೆ ಟೊಮೆಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಳದಿಯನ್ನು ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಚಿಮುಕಿಸಿ ಮಸಾಲೆ ತಯಾರಿಸಬೇಕು. ಮೊದಲೇ ಪ್ರತ್ಯೇಕವಾಗಿ ಬೇಯಿಸಿಕೊಂಡಿರುವ ಚಿಕನ್ ಹಾಗೂ ಆಲೂಗಡ್ಡೆಯನ್ನು ಸಣ್ಣದಾಗಿ ಹಿಚುಕಿ ಈ ಮಸಾಲೆಗೆ ಬೆರೆಸಬೇಕು. ಇದನ್ನು ಕಟ್ಲೆಟ್ ಆಕಾರದಲ್ಲಿ ಕಟ್ಟಬೇಕು.

ಬಳಿಕ ಇನ್ನೊಂದು ಬೌಲ್‌ನಲ್ಲಿ ಎರಡು ಮೊಟ್ಟೆಯನ್ನು ಒಡೆದು ಹಾಕಿ, ಅದಕ್ಕೆ ಉಪ್ಪು ಹಾಗೂ ಹಳದಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಕಟ್ಟಿದ ಮಸಾಲೆಯನ್ನು ಮೊಟ್ಟೆ ಮಿಶ್ರಣದಲ್ಲಿ ಅದ್ದಿ, ಬ್ರೆಡ್‌ ಕ್ರಮ್ಸ್‌ನಲ್ಲಿ ಆಡಿಸಿ ಎಣ್ಣೆಯಲ್ಲಿ ಕರಿದರೆ ರುಚಿರುಚಿಯಾದ ಚಿಕನ್ ಕಟ್ಲೆಟ್ ಸಿದ್ಧಗೊಳ್ಳುತ್ತದೆ. 

ಎಗ್ ಪಫ್ಸ್‌

ಬೇಕಾಗುವ ಸಾಮಗ್ರಿಗಳು: ಈರುಳ್ಳಿ, ಕ್ಯಾರೆಟ್, ಅಲೂಗಡ್ಡೆ, ಕ್ಯಾಬೆಜ್, ಕಾಯಿಮೆಣಸು, ಹಳದಿ, ಚಿಕನ್, ಚಿಕನ್ ಮಸಾಲ, ಗರಂ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಬೇವು, ಮೈದಾ, ಮೊಟ್ಟೆ, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಬಣ್ಣ ಬದಲಾಗುವವರೆಗೆ ಈರುಳ್ಳಿಯನ್ನು ಎಣ್ಣೆಯಲ್ಲಿ ಕರಿಯಬೇಕು. ಬಳಿಕ ಕರಿಬೇವು, ಕ್ಯಾರೆಟ್, ಕ್ಯಾಬೆಜ್, ಆಲೂಗಡ್ಡೆ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಹಳದಿ, ಗರಂ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹದವಾಗಿ ಬೇಯಿಸಿಕೊಳ್ಳಬೇಕು.

ಉಪ್ಪು, ಹಳದಿ ಹಾಕಿ ಬೇಯಿಸಿದ ಚಿಕನ್‌ ಅನ್ನು ಚಾಪ್‌ ಮಾಡಿ ಅದನ್ನು ಈ ಮಸಾಲೆಗೆ ಬೆರೆಸಬೇಕು. ಸಮೋಸದ ಎರಡು ಅಚ್ಚನ್ನು ಮೈದಾದಿಂದ ತಯಾರಿಸಿದ ಅಂಟು ಮೂಲಕ ಪಾಕೆಟ್‌ ಮಾದರಿಯಲ್ಲಿ  ಆಕಾರ ನೀಡಬೇಕು. ಅದಕ್ಕೆ ಮಸಾಲೆ ತುಂಬಿಸಬೇಕು. ಮೊದಲೇ ಬೇಯಿಸಿದ ಅರ್ಧ ಮೊಟ್ಟೆಯನ್ನು ಇಡಬೇಕು. ಎರಡು ಬದಿಗಳನ್ನು ಅಂಟು ಮೂಲಕ ಮುಚ್ಚಬೇಕು. ಇನ್ನೆರಡು ಬದಿಗಳನ್ನು ಚಿತ್ರದಲ್ಲಿ ಕಾಣಿಸುವ ಹಾಗೆ ಗೆರೆ ಎಳೆದು ತುಂಡರಿಸಬೇಕು. ಅದರ ಮೇಲೆಗೆ ಮೈದಾ ಅಂಟನ್ನು ಸವರಿ ಜೋಡಿಸಬೇಕು. ಎಣ್ಣೆಯಲ್ಲಿ ಕರಿದರೆ ಎಗ್ ವಿತ್ ಚಿಕನ್ ಪಫ್ಸ್‌ ರೆಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.