ADVERTISEMENT

ಚೆಟ್ಟೀಸ್ ದೋಸೆ ರುಚಿ...

ಪೃಥ್ವಿರಾಜ್ ಎಂ ಎಚ್
Published 26 ಡಿಸೆಂಬರ್ 2018, 19:45 IST
Last Updated 26 ಡಿಸೆಂಬರ್ 2018, 19:45 IST
ಉಪ್ಪಿನಕಾಯಿ ದೋಸೆ
ಉಪ್ಪಿನಕಾಯಿ ದೋಸೆ   

ಚೆಟ್ಟೀಸ್ ಕಾಫಿ ಎಂದ ಕೂಡಲೇ ಇಲ್ಲಿ ಸಿಗುವ ಕಾಫಿ ರುಚಿಯೇ ಗಮನ ಸೆಳೆಯುತ್ತದೆ. ಈ ರೆಸ್ಟೋರೆಂಟ್ ಕಾಫಿಯಷ್ಟೇ ಅಲ್ಲದೇ, ಹೊಸ ಪ್ರಯೋಗಗಳನ್ನು ಮಾಡುತ್ತಾ ಬಗೆ ಬಗೆಯ ದೋಸೆಗಳ ರುಚಿಯನ್ನು ಪರಿಚಯಿಸುತ್ತಿದೆ.

ದೋಸೆಯ ರುಚಿ ಹೆಚ್ಚಿಸುವ ಟೊಮೆಟೊ

ಟ್ಯೊಮೆಟೊಗಳನ್ನು ಚೂರು ಮಾಡಿ, ನೀರು ಆವಿಯಾಗುವಂತೆ ಎಣ್ಣೆಯಲ್ಲಿ ಕರೆದು, ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಸಾಲೆ ಪದಾರ್ಥಗಳನ್ನು ಬೆರೆಸಿ, ಮಸಾಲೆ ತಯಾರಿಸಿ ಅದಕ್ಕೆ ಒಗ್ಗರಣೆ ಹಾಕಿ ಗೊಜ್ಜು ಮಾಡಿ, ದೋಸೆ ಮೇಲೆ ಸವರಿ, ಚಟ್ನಿ ಮತ್ತು ರುಚಿಯಾದ ಸಾಂಬರ್‌ನೊಂದಿಗೆ ನೀಡುವ ಇಲ್ಲಿನ ಟ್ಯೊಮೆಟೊ ಚಟ್ನಿ ದೋಸೆಯ ರುಚಿ ವೀಶೇಷವಾಗಿದೆ. ಮಸಾಲೆ ದೋಸೆಗಳನ್ನು ತಿನ್ನಲು ಇಷ್ಟಪಡುವವರು ಭಿನ್ನ ರುಚಿ ಬೇಕೆಂದರೆ, ಇಲ್ಲಿ ಮಾತ್ರ ಸಿಗುವಂತಹ ಈ ದೋಸೆಯನ್ನು ಸವಿಯಬಹುದು.

ADVERTISEMENT

ಸ್ವಲ್ಪ ಪ್ರಮಾಣದ ಅಕ್ಕಿ ಹಿಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಅವಲಕ್ಕಿ ರುಬ್ಬಿ ತಯಾರಿಸುವ ಇಲ್ಲಿನ ವಿಶೇಷ ಅವಲಕ್ಕಿ ದೋಸೆಯನ್ನು ಚಟ್ನಿಯೊಂದಿಗೆ ಸವಿದರೆ ಮಧುರ ಎನಿಸದಿರದು. ಇದನ್ನು ಮಸಾಲೆ ಮತ್ತು ಈರುಳ್ಳಿ ಬೆರೆಸಿ ತಯಾರಿಸಿದ ವಿಶೇಷ ಈರುಳ್ಳಿ ಚಟ್ನಿಯೊಂದಿಗೆ ಸವಿಯಬಹುದು.

ಇನ್ನು ಇಲ್ಲಿ ಮಾತ್ರ ಸಿಗುವ ಉಪ್ಪಿನಕಾಯಿ ದೋಸೆಯಂತೂ ವಿಶೇಷವಾಗಿರುತ್ತದೆ. ಮೆಣಸಿನಕಾಯಿ ಇಂದ ತಯಾರಿಸಿದ ಉಪ್ಪಿನಕಾಯಿಯನ್ನು ದೋಸೆ ಮೇಲೆ ಸವರಿ ಚಟ್ನಿಯೊಂದಿಗೆ ಸವಿಯಲು ನೀಡುತ್ತಾರೆ. ಮೆಣಸಿನಕಾಯನ್ನು ನೀಳವಾಗಿ ಹೋಳು ಮಾಡಿ, ದೋಸೆ ಮೇಲೆ ಚೆಲ್ಲುವುದರಿಂದ ನೋಡುವುದಕ್ಕೂ ಆಕರ್ಷಕವಾಗಿ ಕಾಣಿಸುತ್ತದೆ. ಇದೇ ರೀತಿ ತರಕಾರಿಗಳ ರಸವನ್ನು ಸಂಪಣದೊಂದಿಗೆ ಬೆರೆಸಿ ತಯಾರಿಸುವ ತರಕಾರಿ ದೋಸೆ ಕೂಡ ವಿಶೇಷ ರುಚಿ ಎನಿಸುತ್ತದೆ. ದೋಸೆ ಮೇಲೆ ಮತ್ತೆ ತರಕಾರಿಗಳ ಎಳೆಗಳನ್ನು ಚೆಲ್ಲುವುದರಿಂದ ನೋಡುವುದಕ್ಕೂ ಆಕರ್ಷಕಾಗಿ ಕಾಣಿಸುತ್ತದೆ.

ಇವಷ್ಟೇ ಅಲ್ಲದೇ, ಬೆಳ್ಳುಳ್ಳಿ ಪುಡಿ ದೋಸೆ, ಮಾವಿನಕಾಯಿ ಪುಡಿ ದೋಸೆ, ಪುಡಿ ಮಾಸಾಲೆ, ಚಿಲ್ಲಿ ಚೀಸ್‌, ಚೀಸ್ ಮಸಾಲೆ, ಬೆಣ್ಣೆ ದೋಸೆಗಳೂ ಇಲ್ಲಿ ಸಿಗುತ್ತವೆ.

ಬಗೆ ಬಗೆಯ ತಿಂಡಿಗಳು

ಮುಂಜಾನೆ ಮತ್ತು ಸಂಜೆ ಹೊತ್ತು ವಿಶೇಷ ತಿಂಡಿಗಳನ್ನು ಇಷ್ಟಪಡುವವರು, ಇಲ್ಲಿ ಸಿಗುವ ಪಡ್ಡು, ತುಪ್ಪದ ಉಪ್ಪಿಟ್ಟು, ಶಾವಿಗೆ ಬಾತ್, ಚೌಚೌ ಬಾತ್, ಅಕ್ಕಿ ರೊಟ್ಟಿ, ಮಂಗಳೂರು ಬಜ್ಜಿ ತಿನ್ನಬಹುದು. ಸಿಹಿ ತಿನಿಸುಗಳನ್ನು ಇಷ್ಟಪಡುವವರು ಕೇಸರಿ, ತುಪ್ಪ, ಸಕ್ಕರೆ ಒಣಹಣ್ಣುಗಳನ್ನು ಹಾಕಿ ತಯಾರಿಸುವ ಕೇಸರಿ ಬಾತ್ ಸವಿಯಬಹುದು. ಇನ್ನು ಇಲ್ಲಿ ಮಾತ್ರ ಸಿಗುವಂತಹ ಅಂಜೂರ ಹಲ್ವಾ ರುಚಿಯಾಗಿರುತ್ತದೆ. ಇದನ್ನು ಬೆಲ್ಲ ಮತ್ತು ತುಪ್ಪದೊಂದಿಗೆ ತಯಾರಿಸುವುದರಿಂದ ವಿಶೇಷ ರುಚಿ ಎನಿಸುತ್ತದೆ.

ಸುಬ್ರಹ್ಮಣ್ಯ ನಾಗೇಂದ್ರ, ಶಬರೀಶ್‌ ಮತ್ತು ಜೋಸೆಫ್‌ ವಿವೇಕ್ ಸೇರಿ ಮೂರು ವರ್ಷದ ಹಿಂದೆ ಬಿಇಎಲ್‌ ರಸ್ತೆಯಲ್ಲಿ ಚೆಟ್ಟೀಸ್ ಕಾಫಿ ರೆಸ್ಟೊರೆಂಟ್ ಆರಂಭಿಸಿದರು. ಡಿಕೆನ್‌ ರಸ್ತೆಯಲ್ಲಿರುವ ಈ ಮಳಿಗೆ ಆರಂಭವಾಗಿ ಮೂರು ತಿಂಗಳಾಗಿದೆ.

‘ರುಚಿಯಾದ ಮತ್ತು ಶುಚಿಯಾದ ಆಹಾರವನ್ನು ಒದಗಿಸುವುದೇ ನಮ್ಮ ಗುರಿ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಪದಾರ್ಥಗಳನ್ನೇ ಅಡುಗೆಗೆ ಬಳಸುತ್ತಿದ್ದೇವೆ. ನಂದಿನಿ ತುಪ್ಪ, ಅಮೂಲ್ ಬೆಣ್ಣೆ, ಸನ್‌ಪ‍್ಯೂರ್ ಎಣ್ಣೆ ಮಾತ್ರ ಬಳಸುತ್ತೇವೆ. ಅನ್ನಕ್ಕೆ ಯಾವುದೇ ಕಾರಣಕ್ಕೂ ಸೋಡಾ, ಬೆರೆಸುವುದಿಲ್ಲ. ಯಾವ ತಿನಿಸಿಗೂ ರಾಸಾಯನಿಕಗಳನ್ನು ಬಳಸುವುದಿಲ್ಲ’ ಎನ್ನುತ್ತಾರೆ ಮಾಲೀಕರಾದ ಶಬರೀಶ್‌.

‘ನಮ್ಮ ರೆಸ್ಟೊರೆಂಟ್‌ನಲ್ಲಿ ಆಹಾರ ಸವಿದರೆ ಮನೆಯಲ್ಲಿ ಊಟ ಮಾಡಿದ ಅನುಭವ ಗ್ರಾಹಕರಿಗೆ ದೊರೆಯಬೇಕು ಎಂಬುದು ನಮ್ಮ ಆಸೆ. ಹೀಗಾಗಿಯೇ ಆಹಾರ ತಯಾರಿಯಲ್ಲಿ ಹೆಚ್ಚು ಕಾಳಜಿ ವಹಿಸುತ್ತೇವೆ. ಕುಳಿತು ಊಟ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ. ಅಡುಗೆಗೆ ಬಳಸುವ ಸಾಂಬಾರು ಪದಾರ್ಥಗಳನ್ನು ಮನೆಯಲ್ಲೇ ತಯಾರಿಸುವವರಿಂದ ಪಡೆಯುತ್ತಿದ್ದೇವೆ, ಹೀಗಾಗಿ ರುಚಿ ವಿಶೇಷ ಎನಿಸುತ್ತದೆ ಎಂದು ಅವರು ಹೇಳುತ್ತಾರೆ.

ತಿಂಡಿಗಳಷ್ಟೇ ಅಲ್ಲದೇ, ದಕ್ಷಿಣ ಭಾರತ ಶೈಲಿಯ ಊಟವೂ ಇಲ್ಲಿ ಸಿಗುತ್ತದೆ. ಆಂಧ್ರ ಶೈಲಿಯ ಪಪ್ಪುಗಳು, ಗೋಂಗೂರ ರೈಸ್‌ ಕೂಡ ಸಿಗುತ್ತದೆ. ಜತೆಗೆ ಆಲೂ ಪರಾಠ, ಪನೀರ್ ಪರಾಠ, ರೋಟಿ ಕರಿ ಲಭ್ಯವಿದೆ. ಬ್ಲ್ಯಾಕ್ ಕಾಫಿ, ವೆನಿಲ್ಲಾ ಫಿಲ್ಟರ್ ಕಾಫಿ, ಕ್ಯಾರಾಮೆಲ್ ಫಿಲ್ಟರ್ ಕಾಫಿ, ಚೊಕೊ ಫಿಲ್ಟರ್ ಕಾಫಿ, ಹಾಟ್‌ ಚಾಕೊಲೆಟ್‌ನಂತಹ ಬಿಸಿ ಪಾನೀಯಗಳೂ ದೊರೆಯುತ್ತವೆ. ಸ್ವಿಗ್ಗಿ ಮತ್ತು ಜೊಮೆಟೊಗಳ ಮೂಲಕ ಮನೆಗೆ ತರಿಸಿಕೊಳ್ಳುವ ಸೌಲಭ್ಯವೂ ಇದೆ.

**

ಸಮಯ: ಬೆಳಿಗ್ಗೆ 7ರಿಂದ ರಾತ್ರಿ 9

ವಿಶೇಷ: ಬಗೆ ಬಗೆ ದೋಸೆಗಳ

ಸ್ಥಳ: ಡಿಕೆನ್‌ಸನ್ ರಸ್ತೆ

ಸಂಪರ್ಕ: 7022919191

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.