ADVERTISEMENT

ಸವಿ ರುಚಿಯ ಸಿಹಿ ಭಕ್ಷ್ಯಗಳು

ರಾಜೇಶ್ವರಿ ವಿಶ್ವನಾಥ್
Published 28 ಅಕ್ಟೋಬರ್ 2022, 19:30 IST
Last Updated 28 ಅಕ್ಟೋಬರ್ 2022, 19:30 IST
ಕ್ಯಾರೆಟ್‌ ಖೀರ್
ಕ್ಯಾರೆಟ್‌ ಖೀರ್   

ಕ್ಯಾರೆಟ್‌ ಖೀರ್

ಬೇಕಾಗುವ ಸಾಮಗ್ರಿಗಳು: ಒಂದು ಚಮಚ ತುಪ್ಪ, ಅರ್ಧ ಗೋಡಂಬಿಯ ಹತ್ತು ಚೂರುಗಳು, 2 ಚಮಚ ಒಣದ್ರಾಕ್ಷಿ, ಒಂದೂವರೆ ಕಪ್‌ ತುರಿದ ಕ್ಯಾರೆಟ್‌, ನಾಲ್ಕು ಕಪ್‌ ಹಾಲು, ಕಾಲು ಚಮಚದಷ್ಟು ಕೇಸರಿ, ಕಾಲು ಚಮಚ ಸಕ್ಕರೆ, ಏಲಕ್ಕಿ ಪುಡಿ, ಎರಡು ಚಮಚ ಪಿಸ್ತಾ. ಒಂದು ಚಮಚ ಬೆಣ್ಣೆ, ಕಾಲು ಕಪ್‌ ಹಾಲು, ಅರ್ಧ ಕಪ್‌ ಹಾಲಿನ ಪುಡಿ.

ಮಾಡುವ ವಿಧಾನ: ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಗೋಡಂಬಿ‌, ಒಣದ್ರಾಕ್ಷಿ ಹಾಕಿ. ಗೋಡಂಬಿ ಕಂದುಬಣ್ಣಕ್ಕೆ ಬಾಡಿಸಿದ ನಂತರ ಅದನ್ನು ತೆಗೆದಿಡಿ. ತುರಿದ ಕ್ಯಾರೆಟ್‌ ಅನ್ನು ಚೆನ್ನಾಗಿ ಅದೇ ಕಡಾಯಿಯಲ್ಲಿ ಬಾಡಿಸಿ. ಕ್ಯಾರೆಟ್‌ ಸುವಾಸನೆ ಬಿಡುವ ವರೆಗೂ ಬಾಡಿಸಿ. ಬಣ್ಣ ಗಾಢವಾಗಿ ಬದಲಾದ ಮೇಲೆ ಹಾಲು, ಕೇಸರಿ ಮಿಶ್ರಣ ಮಾಡಿ ಮಧ್ಯಮ ಉರಿಯಲ್ಲಿ ಕುದಿಸಿ. ಹಾಲು ದಪ್ಪವಾಗುವವರೆಗೆ ಕುದಿಸಿ.

ADVERTISEMENT

ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಹಾಲು ಸೇರಿಸಿ. ಹಾಲು ಬೆಣ್ಣೆ ಚೆನ್ನಾಗಿ ಮಿಳಿತಗೊಂಡ ಮೇಲೆ ಹಾಲಿನ ಪುಡಿ ಸೇರಿಸಿ. ಈ ಮಿಶ್ರಣ ದಪ್ಪವಾದ ಮೇಲೆ ಪಾತ್ರೆಯಿಂದಬೇರ್ಪಡುತ್ತದೆ. ಈ ಮಿಶ್ರಣವನ್ನು ಕುದ್ದ ಹಾಲಿನ ಪಾತ್ರೆಗೆ ಹಾಕಿ, ಏಲಕ್ಕಿ ಪುಡಿ ಸೇರಿಸಿ. ಹುರಿದ ಗೋಡಂಬಿ, ಒಣದ್ರಾಕ್ಷಿ, ಕೇಸರಿ ಸೇರಿಸಿ. ಕೊನೆಗೆ ಪಿಸ್ತಾ ಹಾಕಿ. ಈಗ ಬಿಸಿ ಬಿಸಿ ಕ್ಯಾರೆಟ್ ಖೀರ್ ಸಿದ್ಧ.

ಬಾರಾ ಸಿಹಿ

ಬೇಕಾಗುವ ಸಾಮಗ್ರಿ: ಉದ್ದಿನಬೇಳೆ ಒಂದು ಕಪ್, ಸೋಂಪು ಬೀಜ 1 ಚಮಚ, ಬೆಲ್ಲದ ಪುಡಿ ಅರ್ಧ ಕಪ್, ತುಪ್ಪ ಕರಿಯಲು.

ಮಾಡುವ ವಿಧಾನ: ಉದ್ದಿನಬೇಳೆಯನ್ನು ಎಂಟು ಗಂಟೆಗಳ ಕಾಲ ನೆನೆ ಹಾಕಿ. ಆ ನಂತರ ಗಟ್ಟಿಯಾಗಿ ರುಬ್ಬಿ ಕೊಳ್ಳಿ. ಸೋಂಪು ಬೀಜಗಳನ್ನು ಸಣ್ಣಗೆ ಅರೆದು ಮಿಶ್ರಮಾಡಿ. ಈಗ ಇದನ್ನು ಉಂಡೆ ಮಾಡಿ ಬಾರಾ ರೀತಿ, ಅಂದರೆ ವಡೆ ಮಾದರಿಯಲ್ಲಿ ತಟ್ಟಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಕಾಯಿಸಿ. ತಯಾರಿಸಿದ ಬಾರಾವನ್ನು ಬಾಣಲೆಯಲ್ಲಿ ಒಂದೊಂದೇ ಹಾಕಿ, ಕರಿಯಿರಿ.

ಇದಕ್ಕೂ ಮೊದಲು ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಗಟ್ಟಿ ಪಾಕ ಮಾಡಿಕೊಳ್ಳಿ. ಈಗ ಕರಿದ ಬಾರಾವನ್ನು ಅದ್ದಿ ತೆಗೆಯಿರಿ. ತಣ್ಣಗಾಗಲು ಬಿಡಿ. ಈಗ ಬಾರಾ ಸಿಹಿ ಸವಿಯಲು ಸಿದ್ಧ. ತಣ್ಣಗಾಗಿ, ಸ್ವಲ್ಪ ಗಟ್ಟಿಯಾದ ಮೇಲೆ ಈ ಬಾರಾ ಸಿಹಿ ಕಜ್ಜಾಯಕ್ಕಿಂತಲೂ ಹೆಚ್ಚು ರುಚಿಯಾಗಿಯೂ ಇರುತ್ತದೆ.

‘ಪಿನಾಕಾ' ಉಂಡೆ:

ಬೇಕಾಗುವ ಸಾಮಗ್ರಿಗಳು: ಕುಚ್ಚಲಕ್ಕಿ ಒಂದೂವರೆ ಕಪ್, ಕಾಯಿತುರಿ 1 ಕಪ್, ಬೆಲ್ಲ150 ಗ್ರಾಂ, ನೀರು ಸ್ವಲ್ಪ, ಏಲಕ್ಕಿ ಪುಡಿ ಚಿಕ್ಕ ಚಮಚದಷ್ಟು.

ಮಾಡುವ ವಿಧಾನ: ಅಕ್ಕಿಯನ್ನು ಬಾಣೆಲೆಯಲ್ಲಿ ಹುರಿಯಿರಿ. ಅದು ದೊಡ್ಡದಾಗಿ ಅರಳುತ್ತದೆ. ತಣ್ಣಗಾದ ಮೇಲೆ ಪುಡಿಮಾಡಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಒಲೆಯ ಮೇಲಿರಿಸಿ. ಬೆಲ್ಲಕರಗಿದಾಗ ಕಾಯಿತುರಿ ಹಾಕಿ. ಕೈ ಯಾಡಿಸಿ. ಸ್ವಲ್ಪ ಗಟ್ಟಿಯಾದ ಮೇಲೆ, ಕೆಳಗಿಳಿಸಿ. ತಣ್ಣಗಾದ ಮೇಲೆ ರುಬ್ಬಿ ಕೊಳ್ಳಿ. ಇದಕ್ಕೆ ಅಕ್ಕಿ ಹಿಟ್ಟು ಸೇರಿಸಿ. ಏಲಕ್ಕಿ ಪುಡಿ ಹಾಕಿ ಚನ್ನಾಗಿ ಕಲಸಿ. ನಿಂಬೆ ಗಾತ್ರ ಉಂಡೆ ಕಟ್ಟಿ, ಒಂದು ಗಂಟೆ ಕಾಲ ಒಣಗಲು ಬಿಡಿ. ಈಗ ಪಿನಾಕ ಉಂಡೆ ಸಿದ್ಧ. ತಯಾರಿಕೆ ಸರಳ ಹಾಗೂ ಸುಲಭ. ತಿನ್ನಲು ರುಚಿ. ಆರೋಗ್ಯಕ್ಕೂ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.