ADVERTISEMENT

ಗೋಧಿಯ ಸ್ವಾದಭರಿತ ತಿನಿಸುಗಳು

ಶಾಲಿನಿ ನಾಯಕ್
Published 24 ಜೂನ್ 2019, 5:14 IST
Last Updated 24 ಜೂನ್ 2019, 5:14 IST
ಗೋಧಿಹಿಟ್ಟು ತಿನಿಸು
ಗೋಧಿಹಿಟ್ಟು ತಿನಿಸು   

ಧಾನ್ಯಗಳಲ್ಲಿ ಒಂದಾದ ಗೋಧಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ. ಕಬ್ಬಿಣಾಂಶ ಹೇರಳವಾಗಿರುವ ಗೋಧಿಯಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಇದನ್ನು ಮಧುಮೇಹಿಗಳು ಇಷ್ಟಪಟ್ಟು ತಿನ್ನುತ್ತಾರೆ. ತೂಕವಿಳಿಸಿಕೊಳ್ಳುವವರಿಗೆ ಅವರ ಸಮತೋಲಿತ ಆಹಾರದಲ್ಲಿ ಗೋಧಿಯ ಚಪಾತಿ, ಪುಲ್ಕಗಳು ಸ್ಥಾನ ಪಡೆದಿರುತ್ತವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ಗೋಧಿಯ ಕೆಲ ತಿನಿಸುಗಳ ಪರಿಚಯ ಇಲ್ಲಿದೆ.

ಗೋಧಿಹಿಟ್ಟಿನ ಲಾಡು

ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು - 1 ಲೋಟ, ಒಣಕೊಬ್ಬರಿ – 3/4 ಲೋಟ, ಬೆಲ್ಲ - 1 ಲೋಟ, ಏಲಕ್ಕಿಪುಡಿ – ಸ್ವಲ್ಪ, ತುಪ್ಪ – ಸ್ವಲ್ಪ.

ADVERTISEMENT

ತಯಾರಿಸುವ ವಿಧಾನ: ಗೋಧಿಹಿಟ್ಟನ್ನು ಬಾಣಲೆಗೆ ಹಾಕಿ ಸುವಾಸನೆ ಬರುವ ತನಕ ಕೆಂಪಗೆ ಹುರಿಯಬೇಕು. ಒಣಕೊಬ್ಬರಿ ಜೊತೆಗೆ ಸ್ವಲ್ಪ ಏಲಕ್ಕಿ ಬೆರೆಸಿ ಮಿಕ್ಸಿಯಲ್ಲಿ ಪುಡಿ ಮಾಡಬೇಕು. ಬಳಿಕ ಹುರಿದ ಹಿಟ್ಟು, ಕೊಬ್ಬರಿಪುಡಿ, ತುರಿದ ಬೆಲ್ಲ ಸೇರಿಸಿ ಕಾಯಿಸಿದ ತುಪ್ಪ ಹಾಕಿ ಉಂಡೆ ಕಟ್ಟುವುದು. ಘಮಘಮ ಪರಿಮಳದ ಲಡ್ಡುಗಳು ತಿನ್ನಲು ತುಂಬ ರುಚಿಯಾಗಿರುತ್ತವೆ.

ಮಾಲ್ದಿ

ಬೇಕಾಗುವ ಸಾಮಗ್ರಿಗಳು: ದಪ್ಪನೆಯ ಒಣಗಿದ ಚಪಾತಿಗಳು – 4-5, ತುರಿದ ಬೆಲ್ಲ – 3/4 ಲೋಟ, ಒಣಕೊಬ್ಬರಿ ಸಣ್ಣದು - 1 ಗಿಟಕು, ಗಸಗಸೆ – 4-5 ಚಮಚ, ಎಳ್ಳು - 1 ಚಮಚ, ಒಣಶುಂಠಿಪುಡಿ - 1 ಚಮಚ, ಏಲಕ್ಕಿ ಪುಡಿ ಸ್ವಲ್ಪ

ತಯಾರಿಸುವ ವಿಧಾನ: ಒಂದು ಲೋಟ ಗೋಧಿಹಿಟ್ಟಿಗೆ ನಾಲ್ಕು ಚಮಚ ರವೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಗಟ್ಟಿಯಾಗಿ ಹಿಟ್ಟು ನಾದಬೇಕು. ಎರಡು ಚಪಾತಿಯಷ್ಟು ಹಿಟ್ಟನ್ನು ತೆಗೆದುಕೊಂಡು ಒಂದು ದಪ್ಪನೆಯ ಚಪಾತಿ ಲಟ್ಟಿಸಿ ತವಾದ ಮೇಲೆ ಸ್ವಲ್ಪ ಹೊತ್ತು ನಿಧಾನಕ್ಕೆ ಬೇಯಿಸಬೇಕು. 4-5 ಚಪಾತಿ ತಯಾರಾದ ಮೇಲೆ ಅವನ್ನು ಉರಿ ಆರಿಸಿದ ಬಿಸಿ ತವಾದ ಮೇಲೆ ಸ್ವಲ್ಪ ಹೊತ್ತು ಬಿಡಬೇಕು. ನಂತರ ಆರಿದ ಮೇಲೆ ಅವನ್ನು ಮುರಿದು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ರವೆಯಂತೆ ಪುಡಿ ಮಾಡಬೇಕು. ಇದಕ್ಕೆ ಬೆಲ್ಲ, ಏಲಕ್ಕಿಪುಡಿ ಸೇರಿಸಿ ಪುನಃ ಒಂದೆರಡು ಸುತ್ತು ರುಬ್ಬಬೇಕು. ಮಿಕ್ಸಿಯಿಂದ ತೆಗೆದು ಹುರಿದು ಪುಡಿ ಮಾಡಿದ ಗಸಗಸೆ, ಹುರಿದ ಎಳ್ಳು, ಒಣಶುಂಠಿಯ ಪುಡಿ ಸೇರಿಸುವುದು. ಉತ್ತರ ಕರ್ನಾಟಕದ ಕಡೆ ಹಬ್ಬಕ್ಕೆ ಒಂದು ಸಿಹಿಯಾಗಿ ಇದನ್ನು ತಯಾರಿಸುತ್ತಾರೆ. ಇದನ್ನು ಹಾಗೆಯೇ ಸೇವಿಸಬಹುದು; ಇಲ್ಲವಾದರೆ ತುಪ್ಪ ಸೇರಿಸಿ ಸವಿದರೆ ರುಚಿಯಾಗಿರುತ್ತದೆ.

ಗೋಧಿಕಡಿ ಪಾಯಸ

ಬೇಕಾಗುವ ಸಾಮಗ್ರಿಗಳು: ಗೋಧಿನುಚ್ಚು - 1 ಲೋಟ, ಬೆಲ್ಲ – 3/4 ಲೋಟ, ಕಾಯಿತುರಿ – 1/2 ಲೋಟ, ಗಸಗಸೆ – 3-4 ಚಮಚ, ಏಲಕ್ಕಿ ಸ್ವಲ್ಪ.

ತಯಾರಿಸುವ ವಿಧಾನ: ಗೋಧಿನುಚ್ಚಿಗೆ ಮೂರು ಪಾಲು ನೀರು ಹಾಕಿ ಕುಕ್ಕರಿನಲ್ಲಿ ಮೂರು ವಿಷಲ್ ಕೂಗಿಸಿ ಬೇಯಿಸಬೇಕು. ಕಾಯಿತುರಿ, ಏಲಕ್ಕಿ ಮತ್ತು ಹುರಿದ ಗಸಗಸೆ ಮಿಕ್ಸಿಯಲ್ಲಿ ನಯವಾಗಿ ರುಬ್ಬಿ ಬೆಂದ ನುಚ್ಚಿಗೆ ಸೇರಿಸಬೇಕು. ಬೆಲ್ಲ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ಒಲೆಯಿಂದ ಇಳಿಸುವ ಮೊದಲು ಸೌಟಿನಲ್ಲಿ ಎರಡು ಚಮಚ ತುಪ್ಪ ಹಾಕಿ ಸ್ವಲ್ಪ ಒಣದ್ರಾಕ್ಷಿ, ಗೋಡಂಬಿಗಳನ್ನು ಹುರಿದು ಪಾಯಸಕ್ಕೆ ಸೇರಿಸುವುದು. ಒಳ್ಳೆಯ ಸುವಾಸನೆಯಿಂದ ಕೂಡಿದ ಇದು ತಿನ್ನಲು ತುಂಬ ರುಚಿಯಾಗಿರುತ್ತದೆ.

ಮಸಾಲೆ ಚಪಾತಿ

ಬೇಕಾಗುವ ಸಾಮಗ್ರಿಗಳು: ಗರಿಗರಿ ಚಪಾತಿ - 4, ನೀರುಳ್ಳಿ - 2, ಟೊಮೆಟೊ - 2, ಕೊತ್ತಂಬರಿಸೊಪ್ಪು ಸ್ವಲ್ಪ, ಖಾರಪುಡಿ - 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಲಿಂಬೆರಸ.

ತಯಾರಿಸುವ ವಿಧಾನ: ಗೋಧಿಹಿಟ್ಟಿನಿಂದ ತೆಳ್ಳನೆಯ ಚಪಾತಿ ಲಟ್ಟಿಸಿ ತವಾದ ಮೇಲೆ ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು. ಚಪಾತಿ ಗಟ್ಟಿಯಾಗಬೇಕು. ನಾಲ್ಕೈದು ಚಪಾತಿ ಮಾಡಿದ ಮೇಲೆ ಅದನ್ನು ಬಿಸಿ ತವಾದ ಮೇಲೆ ಹಾಗೆಯೇ ಬಿಡಬೇಕು. ಅವು ಗರಿಗರಿಯಾಗುತ್ತವೆ. ನೀರುಳ್ಳಿ, ಟೊಮೆಟೊ, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿ ಉಪ್ಪು, ಖಾರಪುಡಿ, ಲಿಂಬೆರಸ ಬೆರೆಸಿ ಚಪಾತಿಯ ಮೇಲೆ ಎಲ್ಲ ಕಡೆ ಸರಿಯಾಗಿ ಹರಡಬೇಕು. ಅವನ್ನು ತಕ್ಷಣ ಮುರಿದು ತಿನ್ನಬೇಕು. ಹುಳಿ, ಖಾರ ಇರುವ ಇದು ಸಂಜೆ ಹೊತ್ತು ತಿನ್ನಲು ಚೆನ್ನಾಗಿರುತ್ತದೆ. ಮನೆಯಲ್ಲಿ ತಿಂದು ಉಳಿದ ಚಪಾತಿಗಳನ್ನು ಕೂಡ ಬಿಸಿಲಲ್ಲಿ ಒಣಗಿಸಿ ಈ ರೀತಿಯಲ್ಲಿ ಉಪಯೋಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.