ADVERTISEMENT

ಅಂಗಾಂಗ ದಾನ: ಏಕೆ ಹಿಂಜರಿಕೆ?

ಆ.13 ಅಂಗಾಂಗ ದಾನ ದಿನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2016, 19:30 IST
Last Updated 12 ಆಗಸ್ಟ್ 2016, 19:30 IST
ಅಂಗಾಂಗ ದಾನ: ಏಕೆ ಹಿಂಜರಿಕೆ?
ಅಂಗಾಂಗ ದಾನ: ಏಕೆ ಹಿಂಜರಿಕೆ?   

ದೆಹಲಿ, ಮುಂಬೈ, ಬೆಂಗಳೂರು ಚೆನ್ನೈ ಸೇರಿದಂತೆ ದೇಶದ ಎಂಟು ರಾಜ್ಯದಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಶೇ.95 ಜನರಿಗೆ ಅಂಗಾಂಗದಾನದ ಬಗ್ಗೆ ಅರಿವಿದ್ದು, ಇವರಲ್ಲಿ ಶೇ. 70ರಷ್ಟು ಮಂದಿ ದಾನ ಮಾಡಲು ಆಸಕ್ತಿ ಹೊಂದಿದ್ದಾರೆ. ಆದರೆ  ಶೇ.5ರಷ್ಟು   ಮಾತ್ರವೇ ಒಪ್ಪಂದದ ಪತ್ರಕ್ಕೆ ಸಹಿಯನ್ನು ಹಾಕುತ್ತಾರೆ.

ಭಾರತದಲ್ಲಿ ಸುಮಾರು ಎರಡು ಲಕ್ಷ ಮಂದಿಗೆ ಕಿಡ್ನಿ, ಐವತ್ತು ಸಾವಿರ ಮಂದಿಗೆ ಯಕೃತ್‌ ಹಾಗೂ ಐವತ್ತು ಸಾವಿರ  ಹೃದಯದ ಬದಲಿ ಜೋಡಣೆಗೆ ಬೇಡಿಕೆ ಇದೆ.  ಆದರೆ ಇವರ ಪೈಕಿ ಕೇವಲ ಶೇ.5ರಷ್ಟು ರೋಗಿಗಳಿಗೆ ಬದಲಿ ಅಂಗಾಂಗ ಜೋಡಿಸುವುದು ಸಾಧ್ಯವಾಗಿದೆ. 

ಇದಕ್ಕೊಂದು ಜ್ವಲಂತ ನಿದರ್ಶನ ಮುಂಬಯಿಯ ಆಸ್ಪತ್ರೆಯೊಂದರಲ್ಲಿ ಸುಮಾರು ಮೂರು ಸಾವಿರ ಕಿಡ್ನಿ ವಿಫಲತೆಯ ರೋಗಿಗಳು ಕಿಡ್ನಿದಾನಕ್ಕೆ ಕಾಯುತ್ತಿದ್ದಾರೆ. ಇದರಲ್ಲಿ  ಶೇ.10 ರೋಗಿಗಳಿಗೆ ಮಾತ್ರವೇ ಕಿಡ್ನಿ ದೊರೆಯಲು ಸಾಧ್ಯವಾಗಿದೆ. ಉಳಿದ ಶೇ.90ರಷ್ಟು ರೋಗಿಗಳು ಜೀವ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಹಾಗಾದರೆ ಈ ಸಮಸ್ಯೆಗೆ ಕಾರಣಗಳೇನು?

ಎಡ್ವಾಲ್ಡೋ ಲೀಲ್ ಅವರ ಸಂಶೋಧನೆ ಹಾಗೂ ಕೆಲವು ಸಮೀಕ್ಷೆ ಪ್ರಕಾರ ಮೂಢನಂಬಿಕೆ, ಅರಿವಿನ ಕೊರತೆ, ಮೆದುಳು ಸಾವಿನ ಬಗೆಗಿನ ತಪ್ಪು ನಂಬಿಕೆಗಳು ಅಂಗದಾನದ ಹಿಂಜರಿಕೆಗೆ ಕಾರಣವಾಗಿದೆ.

ಕಣ್ಣನ್ನು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಕುರುಡಾಗಿ ಹುಟ್ಟುತ್ತಾರೆ. ಅಂಗಾಂಗ ದಾನಮಾಡಿದರೆ ಅಂಗವಿಕಲರಾಗಿ ಜನಿಸುತ್ತಾರೆ. ದೇಹರಚನೆ ದೇವರದ್ದು, ದೇಹದಿಂದ ಅಂಗವನ್ನು ತೆಗೆದರೆ ದೇಹವನ್ನು ವಿರೂಪಗೊಳಿಸಿದಂತಾಗುತ್ತದೆ. ಹಾಗಾಗಿ  ಅಂಗ ತೆಗೆದ ವ್ಯಕ್ತಿಗೆ ಮುಕ್ತಿ ಇಲ್ಲ ಎಂಬ ತಪ್ಪು ನಂಬಿಕೆಗಳಿವೆ.

ಮನುಷ್ಯನ ಮೆದುಳು ಸಾವಿನ ಹಂತದಲ್ಲಿದ್ದಾಗ ಹೃದಯ ಬಡಿತವಿರುತ್ತದೆ. ಇದನ್ನು ತಿಳಿದ ಕುಟುಂಬದವರು ರೋಗಿ  ಸತ್ತಿಲ್ಲ, ಪವಾಡ ಹಾಗೂ ದೇವರ ದಯೆಯಿಂದ ಬದುಕಿ ಉಳಿಯಬಹುದು. ಸತ್ತಿದ್ದಾನೆಂದು ಅಂಗಾಂಗ ತೆಗೆದು ಕೊಳ್ಳುವುದು ಹತ್ಯೆಗೆ ಸಮಾನ ಎಂಬ ತಪ್ಪು ತಿಳಿವಳಿಕೆ ಹೊಂದಿರುತ್ತಾರೆ.

ವ್ಯಕ್ತಿಯ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಹೇಳಿದರೂ ಕೆಲವರಿಗೆ ನಂಬಿಕೆ ಇರುವುದಿಲ್ಲ. ವೈದ್ಯರು ರೋಗಿಯನ್ನು ಬದುಕಿ ಉಳಿಸಲು ಪ್ರಯತ್ನಿಸುವುದಿಲ್ಲ ಎಂಬ ಭಯ ಹೊಂದಿರುತ್ತಾರೆ ಎನ್ನುತ್ತಾರೆ ಸಂಶೋಧಕ ನಿಜ್ ಕ್ಯಾಂಪ್, ಹೊಲ್ಲೆಸ್ಟೆಲ್ಲೆ.

ಜೀವವಿದ್ದಾಗ ಅಂಗದಾನ ಮಾಡಲು ಒಪ್ಪಿಗೆ ನೀಡಿದ ವ್ಯಕ್ತಿಯ ಮಾತನ್ನು ಆ ವ್ಯಕ್ತಿ ಸತ್ತ ನಂತರ ಕೆಲವು ಸಂಬಂಧಿಕರು ಪಾಲಿಸುವುದಿಲ್ಲ. ಹೀಗಾಗಿ ಅಂಗಾಂಗ ದಾನ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ.

ಹೆಚ್ಚುತ್ತಿರುವ ಸಕ್ಕರೆ ಕಾಯಿಲೆ, ಅಸಮರ್ಪಕ ಜೀವನಶೈಲಿ, ಕಿಡ್ನಿ, ಯಕೃತ್‌ ಮತ್ತು ಹೃದಯದ ವಿಫಲತೆಗಳಿಂದಾಗಿ ಅಂಗಾಂಗಳಿಗೆ ಬೇಡಿಕೆ ಅಧಿಕವಾಗುತ್ತಿದೆ. ದೇಹದಾನದ ಬಗ್ಗೆ ಆಸಕ್ತಿ ಇದ್ದರೂ, ಅರ್ಜಿ ಮತ್ತು ದಾಖಲಾತಿ ಎಲ್ಲಿ ದೊರೆಯುತ್ತದೆ. ಮರಣವಾದಾಗ ಯಾರನ್ನು ಸಂಪರ್ಕಿಸಬೇಕೆಂಬ ಮಾಹಿತಿಯ ಕೊರತೆ ಇದೆ.

ಪರಿಹಾರ: ಅಂಗಾಂಗ ದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಕೇವಲ ದೊಡ್ಡ ನಗರಗಳಿಗೆ ಮಾತ್ರವೇ ಸೀಮಿತವಾಗಿದೆ.
ಅನಕ್ಷರತೆ, ಮೂಢನಂಬಿಕೆ ಮತ್ತು ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಅಂಗಾಂಗದಾನದ ಕುರಿತು ಪ್ರತಿ ತಿಂಗಳು ಜನಜಾಗೃತಿ ಶಿಬಿರ ಮತ್ತು ದಾಖಲಾತಿ ಮಾಡುವುದು ಅವಶ್ಯ.

ಮಾನವ ಅಂಗ ಕಸಿ ಕಾಯಿದೆ 1994 ಪ್ರಕಾರ ಅಂಗಾಂಗ ಮಾರಾಟ ನಿಷೇಧಿಸಲಾಗಿದ್ದು, ಅಕ್ರಮ ಎಸಗಿದವರ ವಿರುದ್ಧ 5ರಿಂದ 10 ವರ್ಷ ಕಠಿಣ ಶಿಕ್ಷೆ ಮತ್ತು ಇಪ್ಪತ್ತು ಲಕ್ಷದಿಂದ ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗುವುದು. ದಾನ ಪಡೆಯುವ ಮತ್ತು ಕಸಿಯನ್ನು ಕರ್ನಾಟಕ ಸರ್ಕಾರದ ಜಡ್.ಸಿ.ಸಿ.ಕೆ. ಸಂಸ್ಥೆಯ ಮೂಲಕವೇ ಮಾಡಲಾಗುತ್ತಿದೆ. ಹೀಗಾಗಿ ಅಂಗಾಂಗ ಮಾರಾಟಕ್ಕೆ ಅವಕಾಶವಿಲ್ಲ.

ಕ್ಯಾನ್ಸರ್, ಎಚ್.ಐ.ವಿ ಕಾಯಿಲೆಯವರನ್ನು ಹೊರತುಪಡಿಸಿ, ವಯಸ್ಸು,ಲಿಂಗ, ಧರ್ಮದ ನಿರ್ಬಂಧವಿಲ್ಲದೆ ಯಾರು ಬೇಕಾದರೂ ದಾನಿಯಾಗಬಹುದು. ಜೀವಿಸಲು ಒಂದು ಕಿಡ್ನಿ ಸಾಕು ಮತ್ತು ವ್ಯಕ್ತಿ ಯಕೃತ್ತಿನ ಅಲ್ಪ ಭಾಗವನ್ನು ದಾನ ನೀಡಿದರೆ, ಈ ಭಾಗ ಮೂರು ವಾರದಲ್ಲಿ ಪುನರುತ್ಪತ್ತಿ ಆಗುತ್ತದೆ.  ಅಂಗಾಂಗ ದಾನ ಮಾಡಿದರೆ ದೇಹ ವಿರೂಪಗೊಳ್ಳುವುದಿಲ್ಲ. ಹೀಗಾಗಿ ದಾನದ ಬಳಿಕ ಶವಸಂಸ್ಕಾರದ ವಿಧಿವಿಧಾನಕ್ಕೆ ಯಾವ ಅಡ್ಡಿಯಾಗುವುದಿಲ್ಲ ಎಂಬ ಮನವರಿಗೆ ಮಾಡಬೇಕು.

ವೈದ್ಯರು, ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಅಂಗಾಂಗದಾನದ ಪ್ರಚಾರ ಆಂದೋಲನದಲ್ಲಿ ಭಾಗಿಯಾಗಿ ಮತ್ತು ಅಂಗದಾನ ಮಾಡಿ ಇತರರಿಗೆ ಮಾದರಿಯಾಗಬೇಕು.

ಅಂಗಾಂಗ ಕಸಿ ಮಾಡಿಸಿಕೊಂಡ ವ್ಯಕ್ತಿ ಸುಮಾರು 25 ವರ್ಷ ಜೀವಿಸಬಹುದು. ಹಾಗಾಗಿ ಪ್ರತಿಯೊಬ್ಬರು ಅಂಗ ದಾನ ಮಾಡುವುದರ ಜೊತೆಗೆ ಸಂಬಂಧಿಕರಿಗೂ ಈ ಕುರಿತು ಅರಿವು ಮೂಡಿಸಬೇಕು.

ಹಲವು ವರ್ಷಗಳಿಂದ ಅಂಗಾಂಗದಾನದ ಕುರಿತು ಪ್ರಚಾರ ನಡೆಯುತ್ತಿದ್ದರೂ, ದಾನ ಮಾಡುತ್ತಿರುವವರ ಸಂಖ್ಯೆ ಇಂದಿಗೂ ವೃದ್ಧಿಸಿಲ್ಲ. ಅಂಗದಾನಕ್ಕೆ ಧರ್ಮ ಅಡ್ಡಿಯಾಗಬಾರದು. ಅಂಗಾಂಗಳಿಲ್ಲದೆ ಸಂಸ್ಕಾರ ನಡೆಸಿದರೆ ಮೋಕ್ಷ ದೊರಕುವುದಿಲ್ಲ ಎಂಬ ಮಾತು ಇದೆ.

ಇದು ಸುಳ್ಳು. ಸಾವಿನ ನಂತರವೂ ದಾನಿ ಒಬ್ಬರ ಕಣ್ಣಾಗಿ, ಕಿಡ್ನಿಯಾಗಿ, ಹೃದಯವಾಗಿ ಜೀವಂತವಾಗಿರುತ್ತಾನೆ. ವ್ಯಾಪಕ ಪ್ರಚಾರ, ಮೂಢನಂಬಿಕೆ ನಿವಾರಣೆಯಿಂದ ಅಂಗದಾನ ಮಾಡಲು ಜನರನ್ನು ಪ್ರೇರೇಪಿಸಬಹುದು.

ಯಾವ ಅಂಗಾಂಗ, ಯಾವಾಗ ನೀಡಬಹುದು?
*ಬದುಕಿರುವಾಗ:
ರಕ್ತ, ಎಲುಬಿನ ಪೊಳ್ಳು ಭಾಗದ ಪದಾರ್ಥ(ಬೋನ್ ಮ್ಯಾರೊ), ಕಿಡ್ನಿ, ಚರ್ಮ, ಯಕೃತ್‌, ಪುಪ್ಪುಸ, ಮೇದೋಜೀರಕಗ್ರಂಥಿ)

*ಮೆದುಳು ಸಾವಿನಲ್ಲಿದ್ದಾಗ ಮೆದುಳು ನಿಷ್ಕ್ರಿಯವಾಗಿರುತ್ತದೆ, ಆದರೆ ಹೃದಯದ ಬಡಿತವಿದ್ದು, ಇತರೆ ಅಂಗಾಂಗ ಜೀವಂತವಾಗಿರುತ್ತವೆ: ಕಣ್ಣು, ಕಿಡ್ನಿ, ಯಕೃತ್‌, ಪುಪ್ಪುಸ, ಮೇದೋಜೀರಕಗ್ರಂಥಿ, ಸಣ್ಣಕರುಳು, ಧ್ವನಿಪೆಟ್ಟಿಗೆ, ಗರ್ಭಕೋಶ, ಅಂಡಾಶಯ, ಮಧ್ಯಕಿವಿ, ಮೃದು ಮೂಳೆ, ನರ, ರಕ್ತನಾಳ, ಕೈ ಮತ್ತು ಕಾಲಿನ ಬೆರಳು.

*ಮರಣದ ನಂತರ: ಕಣ್ಣು, ಹೃದಯದ ಕವಾಟು, ಚರ್ಮ, ಮೂಳೆ, ರಕ್ತನಾಳ. 

ನೀವು ದಾನಿಯಾಗಬೇಕೆ?
ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿರುವ ಜೋಲನ್‌ ಕೋ–ಆರ್ಡಿನೇಷನ್‌ ಕಮಿಟಿ ಫಾರ್‌ ಟ್ರಾನ್ಸ್‌ಪ್ಲಾಂಟೇಷನ್‌ ಆಫ್‌ ಕರ್ನಾಟಕ (ಜೆಡ್‌ಸಿಸಿಕೆ). ಇದು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದೆ.  ವೆಬ್‌: www.zcck.in

ದೂರವಾಣಿ: 080–26995716,9845006768. ಆನ್‌ಲೈನ್‌ ಮೂಲಕ ಅರ್ಜಿ  ಸಲ್ಲಿಸಿದರೆ, ಡೋನರ್‌ ಕಾರ್ಡ್‌ ಮನೆಗೆ ಬರುತ್ತದೆ.
ಸಂಪರ್ಕ: 9448579390
ಡಾ. ಎಂ.ಡಿ. ಸೂರ್ಯಕಾಂತ
(ಲೇಖಕರು: ಮಕ್ಕಳ ತಜ್ಞರು)

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.