ADVERTISEMENT

ಅಜೀರ್ಣ ಹೊಟ್ಟೆ, ಅಯ್ಯೋ ಕೆಟ್ಟೆ

ಡಾ.ಪ್ರಸನ್ನ ಎಸ್.
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ನಾಲಿಗೆಯ ಸವಿ ಸುಖಕೆ ಚೀಲವನು ತುಂಬಿದರೆ
ಶೂಲೆಗಳು ಹಲವು ತೆರನಾಗಿ ರುಚಿಗಳು
ಕಾಲನೊಶನಕ್ಕು ಸರ್ವಜ್ಞ
ನಾಲಿಗೆಯ ಸುಖಕ್ಕಾಗಿ, ಅರ್ಥಾತ್ ಚಪಲಕ್ಕಾಗಿ ಹೊಟ್ಟೆ ಎಂಬ ಚೀಲವನ್ನು ತುಂಬಿದರೆ ಅಥವಾ ನಾಲಿಗೆಯು ಬಯಸಿದಂತೆ ಚೀಲದೊಳಗೆ ಅದುಮಿ ಅದುಮಿ ತುಂಬುವ ರೀತಿಯಲ್ಲಿ ಊಟ ಮಾಡಿದರೆ ಹಲವು ರೋಗಗಳು ಬಂದು, ರುಚಿಗಳೊಂದಿಗೆ ನಮ್ಮನ್ನೂ ಕಾಲನ ವಶಕ್ಕೆ ಸೇರಿಸುವುದು ಖಚಿತ ಎಂಬುದು ಸರ್ವಜ್ಞನ ಈ ವಚನದ ತಾತ್ಪರ್ಯ.

`ವಿಷ ಎಂದರೇನು?' ಎಂದು ಸ್ವಾಮಿ ವಿವೇಕಾನಂದರನ್ನು ಪ್ರಶ್ನಿಸಿದಾಗ `ನಮ್ಮ ಜೀವನಕ್ಕೆ ಹೆಚ್ಚಾದುದು ಎಲ್ಲವೂ ವಿಷ' ಎಂದು ಅವರು ತುಂಬಾ ಮಾರ್ಮಿಕವಾಗಿ ಉತ್ತರಿಸಿದ್ದರು. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದನ್ನು ನಮ್ಮ ಹಿರಿಯರಿಂದ ಅರಿತಿದ್ದರೂ ನಾವೆಲ್ಲರೂ ಹಬ್ಬಹರಿದಿನಗಳಂದು, ಮದುವೆ, ಔತಣಕೂಟ ಅಥವಾ ಪಾರ್ಟಿಗಳಲ್ಲಿ ಮನಸೋ ಇಚ್ಛೆ, ಕಂಠಪೂರ್ತಿ ಭೋಜನವನ್ನು ಸವಿಯುತ್ತೇವೆ. ಇಷ್ಟವಾದ ತಿನಿಸು ಅಥವಾ ರುಚಿಕಟ್ಟಾದ ಅಡುಗೆ­ಯನ್ನು ಯಾವುದೇ ದಾಕ್ಷಿಣ್ಯವಿಲ್ಲದೇ ಮೈಮರೆತು ನಮ್ಮ ಸಾಮರ್ಥ್ಯ ಮೀರಿ ತಿಂದು, ಮರುದಿನ ಪಶ್ಚಾತ್ತಾಪ ಪಡುವ ಪಾಡು ನಮ್ಮಲ್ಲಿ ಅನೇಕರದ್ದು.

ನಾಲಿಗೆಯ ಚಪಲಕ್ಕೆ ಮನಸೋತು ಭೂರೀ ಭೋಜನ/ ಬಾಡೂಟಗಳಿಂದ ನಮ್ಮ ಹೊಟ್ಟೆ ಕೆಟ್ಟು, ಪರಿಹಾರಕ್ಕಾಗಿ ವೈದ್ಯರೆಡೆಗೆ ದೌಡಾಯಿಸುತ್ತೇವೆ. ತಿನ್ನುವಾಗ ಇರದ ಪರಿಜ್ಞಾನ, ಹೊಟ್ಟೆ ಕೆಟ್ಟ ನಂತರ `ಮಾಡಿದ್ದುಣ್ಣೋ ಮಹರಾಯ' ಎಂಬಂತೆ ಆಗ ಪರಿತಪಿಸುತ್ತೇವೆ. ಈ ರೀತಿ ಹೊಟ್ಟೆ ಕೆಡಲು ಕಾರಣ  ಅಜೀರ್ಣ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ನಗ್ನ ಸತ್ಯ. ಈ ಅಜೀರ್ಣವೇ ಹೊಟ್ಟೆನೋವು, ಮಲಬದ್ಧತೆ, ಹೊಟ್ಟೆಯುಬ್ಬರ, ವಾಂತಿ, ಭೇದಿ, ಅಸಿಡಿಟಿ, ಮೂಲವ್ಯಾಧಿ, ಜ್ವರ ಇತ್ಯಾದಿ ಹತ್ತು ಹಲವು ರೋಗಗಳಿಗೆ ಮೊದಲ ಮೆಟ್ಟಿಲು ಎಂಬುದು ನಿಸ್ಸಂಶಯ. ಅಜೀರ್ಣದ ಬಗ್ಗೆ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವಿಸ್ತೃತವಾದ ವಿವರಣೆಗಳಿವೆ.

ಅಜೀರ್ಣಕ್ಕೆ ಮೂಲ ಕಾರಣ ಅಗ್ನಿಯ ಕೊರತೆ­ಯಿಂದ ಆಗುವ ಜೀರ್ಣಾಂಗದ ಕಾರ್ಯದಲ್ಲಿನ ಏರುಪೇರು. ಆಹಾರ-, ಪಾನೀಯಗಳನ್ನು ಜೀರ್ಣ ಮಾಡುವ ಅಗ್ನಿಗೆ `ಜಠರಾಗ್ನಿ' ಎನ್ನುತ್ತಾರೆ. ಆಯುರ್ವೇದದಲ್ಲಿ ನಾಲ್ಕು ವಿಧಗಳ ಅಗ್ನಿಗಳನ್ನು ವಿವರಿಸಲಾಗಿದೆ. ಅವುಗಳೆಂದರೆ:

1. ವಿಷಮಾಗ್ನಿ: ಒಮ್ಮೆ ಆಹಾರ ಜೀರ್ಣವಾದರೆ, ಮತ್ತೊಮ್ಮೆ ಜೀರ್ಣವಾಗದೇ ಇರುವುದು.

2. ತೀಕ್ಷ್ಣಾಗ್ನಿ: ಯಾವುದೇ ಆಹಾರವನ್ನು ಎಷ್ಟೇ ಪ್ರಮಾಣದಲ್ಲಿ ಸೇವಿಸಿದರೂ ಜೀರ್ಣವಾಗುವುದು.

3. ಮಂದಾಗ್ನಿ: ತಿಂದ ಆಹಾರವನ್ನು ಪೂರ್ಣವಾಗಿ ಜೀರ್ಣಿಸದ ಅಥವಾ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದ ಆಹಾರ ಕೂಡ ಜೀರ್ಣವಾಗದೇ ಇರುವುದು.

4. ಸಮಾಗ್ನಿ: ಸರಿಯಾದ ಪ್ರಮಾಣದಲ್ಲಿ ಸೇವಿಸಿದ ಆಹಾರ ಸರಿಯಾದ ಸಮಯಕ್ಕೆ ಜೀರ್ಣವಾಗುವುದು. ಅಂದರೆ, ಒಮ್ಮೆ ಆಹಾರ ಸೇವಿಸಿದ ನಂತರ 4ರಿಂದ 6 ತಾಸು ಕಳೆದ ಮೇಲೆ ಚುರುಕಾದ ಹಸಿವನ್ನು ಉಂಟು ಮಾಡಿ ದೇಹದ ಆರೋಗ್ಯವನ್ನು ಕಾಪಾಡುವುದು.

ಈ ಎಲ್ಲ ಅಗ್ನಿಗಳಲ್ಲಿ ಸಮಾಗ್ನಿ ಶ್ರೇಷ್ಠವಾದುದು.

ಕಾರಣ
ಜಠರಾಗ್ನಿ ಆಹಾರ ಪದಾರ್ಥಗಳನ್ನು ಸರಿಯಾಗಿ ಪಚನ ಮಾಡದೇ ಅಜೀರ್ಣ ಉಂಟಾಗಲು ಹಲವಾರು ಕಾರಣಗಳಿವೆ. ಅತಿಯಾಸೆಯಿಂದ ಆಹಾರವನ್ನು ಲೆಕ್ಕವಿಲ್ಲದಷ್ಟು ಮಿತಿಮೀರಿ ತಿನ್ನುವುದು ಅಥವಾ ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಊಟ ಮಾಡುವುದು, ಪದೇಪದೇ ಆಹಾರ ಸೇವಿಸುವುದು, ಅಂದರೆ ಒಮ್ಮೆ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವ ಮೊದಲೇ ಮತ್ತೊಮ್ಮೆ ತಿನ್ನುವುದು, ಅಗಿಯದೇ ನುಂಗುವುದು, ಆಹಾರ ಸೇವನೆಯ ಮೊದಲೇ ಅತಿಯಾಗಿ ನೀರು ಕುಡಿಯುವುದು, ವಿಷಮ ಆಹಾರ, ಭಯ, ಸಿಟ್ಟು, ಶೋಕ, ಚಿಂತೆ ಮುಂತಾದ ಮಾನಸಿಕ ಉದ್ವೇಗಗಳು, ನಿದ್ರೆಯಲ್ಲಿ ವೈಪರೀತ್ಯಗಳು (ಹಗಲಲ್ಲಿ ಮಲಗಿ ರಾತ್ರಿ ಎಚ್ಚರ ಇರುವುದು), ಅತಿಯಾದ ಜಡಾಹಾರ ಸೇವನೆ ಇತ್ಯಾದಿ ಅಜೀರ್ಣಕ್ಕೆ ಕಾರಣವಾಗುತ್ತವೆ.
ರೋಗಪೀಡಿತರು, ಖಿನ್ನತೆಗೆ ಒಳಗಾದವರು ತಮ್ಮ ದೇಹಕ್ಕೆ ಒಗ್ಗುವ ಲಘು ಆಹಾರವನ್ನು ಸರಿಯಾದ ಸಮಯದಲ್ಲಿ ಸೇವಿಸಿದರೂ ಅಜೀರ್ಣ ಆಗಬಹುದು.

ವಿಧಗಳು
ಕಫ, ಪಿತ್ತ, ವಾತ ಪ್ರಕೋಪಗಳಿಂದ ಕ್ರಮವಾಗಿ ಆಮಾ ಜೀರ್ಣ, ವಿದಗ್ಧಾ ಜೀರ್ಣ, ವಿಷ್ಟಬ್ಧಾ ಜೀರ್ಣ, ರಸಶೇಷಾ ಜೀರ್ಣ ಮತ್ತು ದಿನಪಾಕಿ ಅಜೀರ್ಣಗಳೆಂಬ ಐದು ಬಗೆಯ ಅಜೀರ್ಣಗಳನ್ನು ವಿವರಿಸಲಾಗಿದೆ.

ಕಫ ದೋಷದ ಹೆಚ್ಚಳದಿಂದ, ಜಠರದಲ್ಲಿರುವ ಆಮ್ಲರಸ ಮತ್ತು ಕ್ಷಾರೀಯ ಸ್ರಾವ ದುರ್ಬಲ ಆಗುತ್ತವೆ. ಆಗ ತಿಂದ ಆಹಾರ ಪಚನವಾಗದೆ ಕಫ ದೋಷದೊಂದಿಗೆ ಮಿಶ್ರಣಗೊಳ್ಳುತ್ತದೆ. ಇದರಿಂದ ಆಮ ಅಪಕ್ವ ರೂಪದಲ್ಲೇ ಉಳಿದು ಮಲದಲ್ಲಿ ಅಥವಾ ವಾಂತಿಯ ಮೂಲಕ ದೇಹದಿಂದ ಹೊರಹೊರಟರೆ ಅದು ಆಮಾ ಜೀರ್ಣ.

ಪಿತ್ತದೋಷ, ಆಮ್ಲರಸದ ಅಧಿಕ ಸ್ರಾವ ಮತ್ತು ಕ್ಷಾರೀಯ ಸ್ರಾವ ಕಡಿಮೆ ಇರುವ ಆಹಾರ ಪೂರ್ಣ ಜೀರ್ಣವಾಗದೇ ನಾಲಿಗೆಯ ರುಚಿ ಕೆಟ್ಟು ಹುಳಿತೇಗು ಬರುತ್ತಿದ್ದರೆ ಅದು ವಿದಗ್ಧಾ ಜೀರ್ಣ.

ವಾಯುವಿನ ವೃದ್ಧಿಯಿಂದಾಗಿ ಜಠರದ ಎಲ್ಲ ಸ್ರಾವಗಳೂ ಕಡಿಮೆಯಾಗಿ ಅನ್ನ ತಡವಾಗಿ ಜೀರ್ಣವಾಗುತ್ತದೆ. ಆಗ ಹೊಟ್ಟೆ ಉಬ್ಬಿ ಉಸಿರಾಡಲು ಕಷ್ಟವಾದರೆ ಅದು ವಿಷ್ಟಬ್ಧಾ ಜೀರ್ಣ.

ಆಹಾರವು ಜೀರ್ಣವಾಗಿ ರಸವಾಗುವಾಗ, ಆಹಾರದ ಕೆಲವು ಭಾಗಗಳು ಜೀರ್ಣವಾಗದೇ ಉಳಿಯುತ್ತವೆ. ಆಗ ಶುದ್ಧವಾದ ತೇಗು ಇದ್ದರೂ ಅನ್ನ ರುಚಿಸದೇ ಆಲಸ್ಯ ಅಥವಾ ಜಡತ್ವದಿಂದ ಕೂಡಿದ್ದರೆ ಅದು ರಸಶೇಷಾ ಜೀರ್ಣ.

ಸ್ವಸ್ಥ ಸ್ಥಿತಿಯಲ್ಲಿ ಆಹಾರವು ಸಂಪೂರ್ಣ ಜೀರ್ಣವಾಗಲು 24 ಗಂಟೆ ಬೇಕಾಗುತ್ತದೆ. ಕೆಲವೊಮ್ಮೆ ಅಧಿಕ ಭೋಜನ ಮಾಡಿದಾಗ ಅಥವಾ ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದಾಗ ಆಹಾರ ಜೀರ್ಣವಾಗಲು 24 ಗಂಟೆಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ದಿನಪಾಕಿ ಅಜೀರ್ಣ ಎನ್ನುತ್ತಾರೆ.
                       (ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.