ADVERTISEMENT

ಅರಿಯೋಣ ಮರೆಗುಳಿತನ

ವಾರದ ವೈದ್ಯ ಡಾ. ಸುನೀಲ್‌ಕುಮಾರ್‌ ಪಾಟೀಲ್‌ ಮನೋವೈದ್ಯ

ಪ್ರಜಾವಾಣಿ ವಿಶೇಷ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ಆಲ್‌ಜೈಮರ್‌ ಎಂದರೇನು?
ನೆನಪಿನ ಶಕ್ತಿ ಕುಂದುವ ಕಾಯಿಲೆಯೇ ಆಲ್‌ಜೈಮರ್‌. ಮೆದುಳಿನಲ್ಲಿ ಉಂಟಾಗುವ ಕೆಲವು ರಾಸಾಯನಿಕ ಹಾಗೂ ರಚನಾತ್ಮಕ ಬದಲಾವಣೆ­ಗಳಿಂದ ನೆನಪಿನ ಶಕ್ತಿ ಕ್ಷೀಣವಾಗಿ, ಕ್ರಮೇಣ ನಶಿಸುವ ಪ್ರಕ್ರಿಯೆ ಇದು.

ಆಲ್‌ಜೈಮರ್‌ಗೆ ಕಾರಣಗಳು?
ಆನುವಂಶೀಯತೆ ಹಾಗೂ ಜೀವನಶೈಲಿಯಲ್ಲಿನ ತೀವ್ರ ಬದಲಾವಣೆ ಪ್ರಮುಖ ಕಾರಣ ಎನ್ನಬಹುದು. ಆಹಾರ ಪದ್ಧತಿ ಸರಿ ಇಲ್ಲದ, ದೈಹಿಕ ಚಟುವಟಿ­ಕೆಯಲ್ಲಿ ತೊಡಗದೆ ಸ್ಥೂಲಕಾಯರಾಗುವ, ದೇಹದಲ್ಲಿ ಅತಿ ಹೆಚ್ಚಾಗಿ ಕೊಬ್ಬಿನಂಶ ಶೇಖರಣೆ ಆಗಿರುವ, ಸಕ್ಕರೆ ಕಾಯಿಲೆ, ರಕ್ತ­ದೊತ್ತಡ ಅತಿ ಹೆಚ್ಚಾಗಿ ಇರುವವರಲ್ಲಿ ಈ ಕಾಯಿಲೆಯ ಸಂಭವ ಹೆಚ್ಚು.

ಲಕ್ಷಣಗಳನ್ನು ತಿಳಿಸಿ.
ನೆನಪಿನ ಶಕ್ತಿ ನಶಿಸತೊಡಗಿದಂತೆ ಕೋಪ, ಅನುಮಾನ, ದುಃಖ ಹಾಗೂ ಗಾಬರಿಯೂ ಹೆಚ್ಚಾಗುತ್ತದೆ. ಮನೋರೋಗಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ರೋಗಿಯ ದೇಹದಲ್ಲಿ ರಾಸಾಯನಿಕ ಶೇಖರಣೆ ಪ್ರಾರಂಭವಾಗಿ 2ರಿಂದ 3 ವರ್ಷಗಳ ನಂತರ ಕಾಣಿಸುತ್ತವೆ.

ADVERTISEMENT

ಹಂತಗಳು?
ಮೂರು ಹಂತಗಳಿವೆ.
ಮೊದಲನೇ ಹಂತ (ಲಘು): ಕಾಯಿಲೆ ಪ್ರಾರಂಭವಾಗುವುದಕ್ಕೆ 2ರಿಂದ 3 ವರ್ಷ ಬೇಕಾಗುತ್ತದೆ. ನಂತರವೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  
ಎರಡನೇ ಹಂತ (ಮಧ್ಯಮ): 3ರಿಂದ 5 ವರ್ಷಗಳವರೆಗೆ ಇರುತ್ತದೆ.
ಕೊನೆಯ ಹಂತ (ತೀವ್ರ): ಎರಡರಿಂದ ಮೂರು ವರ್ಷಗಳಲ್ಲಿ ತಲುಪುತ್ತದೆ. ಕಾಯಿಲೆ ಬಂದ 8--– 10 ವರ್ಷಗಳ ಒಳಗಾಗಿ ರೋಗಿ ಸಾವನ್ನಪ್ಪುತ್ತಾನೆ.

ಪರಿಣಾಮಗಳು?
ಕಾಯಿಲೆ ಪ್ರಾರಂಭವಾಗುವ 2 ಅಥವಾ 3 ವರ್ಷ ಮೊದಲೇ  ಮೆದುಳಿ­ನಲ್ಲಿನ ನರಗಳ ನಡುವೆ ರಾಸಾಯನಿಕಗಳ (ಅಮೈಲೈಡ್‌ ಡೆಪೋಸಿಷನ್‌) ಶೇಖರಣೆ ಪ್ರಾರಂಭವಾಗುತ್ತದೆ. ಇದರ ಪರಿಣಾಮವಾಗಿ ನಿತ್ಯದ ಕೆಲಸಗಳೂ ಮರೆಯುತ್ತವೆ. ನಂತರ ನರಗಳಿಗೆ ಹಾನಿಯಾಗಿ ಅವುಗಳ ನಡುವಿನ ಸಂಪರ್ಕ ಕಡಿತಗೊಳ್ಳುತ್ತದೆ. ಆಗ ರೋಗಿಯಲ್ಲಿ ಕೋಪ, ಅಸಮಾಧಾನ ಹೆಚ್ಚಾಗುತ್ತದೆ. ಹಳೆಯ ಕಲಿಕೆ, ಸ್ವಂತದ ಆರೈಕೆ, ತಾರ್ಕಿಕ ಶಕ್ತಿ, ಹೊಸ ಕಲಿಕೆ, ಯೋಚನೆ ಮಾಡುವ ಶಕ್ತಿ ತೀರಾ ಕಡಿಮೆಯಾಗುತ್ತದೆ.

ಕೊನೆಯ ಹಂತದಲ್ಲಿ, ರೋಗಿಯ ಮೆದುಳಿನ ಗಾತ್ರ ಸಹ ಕಡಿಮೆಯಾ­ಗುತ್ತಾ ಹೋಗುತ್ತದೆ. ಆಗ ರೋಗಿ ಸಂಪೂರ್ಣವಾಗಿ ಎಲ್ಲ­ವನ್ನೂ ಮರೆತು ನವಜಾತ ಶಿಶುವಿನಂತೆ ಶಾಂತವಾಗುತ್ತಾರೆ. ಕೆಲವೊಮ್ಮೆ ಮಾತು ಸಹ ನಿಂತು ಹೋಗುತ್ತದೆ. ನಂತರ ಸಾವಿಗೆ ಶರಣಾಗುತ್ತಾರೆ.    

ಈ ಸಮಯದಲ್ಲಿ ಬರುವ ಇತರ ಕಾಯಿಲೆಗಳು?
ನ್ಯುಮೋನಿಯಾ, ಸೆಪ್ಟಿಸೇಮಿಯಾ, ಚರ್ಮ ರೋಗ, ಉಸಿರಾಟದ ತೊಂದರೆ ಸೇರಿದಂತೆ ಹಲವಾರು ಸೋಂಕುಗಳು ತಗುಲಬಹುದು.

ಯಾರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?
60 ವರ್ಷ ಮೇಲ್ಪಟ್ಟ ಶೇಕಡಾ 5ರಷ್ಟು ಜನರಿಗೆ ಬರಬಹುದು. 80 ವರ್ಷ ಮೇಲಿನವರಲ್ಲಿ ಸಂಭವ ಮತ್ತಷ್ಟು ಅಧಿಕ. 60ಕ್ಕಿಂತ  ಕಡಿಮೆ ವಯೋಮಾನದವರಲ್ಲಿ ಕಾಣಿಸಿಕೊಳ್ಳುವುದು ಅತಿ ವಿರಳ.

ಚಿಕಿತ್ಸೆ ಇದೆಯೇ?
ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆ ಸದ್ಯಕ್ಕೆ ಇಲ್ಲ. ಆದರೆ  ಮೊದಲ ಹಂತದಲ್ಲೇ ವೈದ್ಯರ ಗಮನಕ್ಕೆ ತಂದರೆ ಬೇಗನೇ ಹರ­ಡು­ವುದನ್ನು ನಿಯಂತ್ರಿಸಬಹುದು. ರೋಗಿಗಳಿಗೆ ತಮ್ಮ ಆರೈಕೆ ಹಾಗೂ ಊಟದ ಬಗ್ಗೆಯೂ ಗಮನ ಇರುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ಅವರಿಗೆ ಬರಬಹುದಾದ ಇತರ ಕಾಯಿಲೆಗಳನ್ನೂ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕಾಗುತ್ತದೆ. ಇದರಿಂದ ಅವರು ಮತ್ತಷ್ಟು ನರಳುವುದನ್ನು ತಪ್ಪಿಸಬಹುದು. ಅಲ್ಲದೆ ಸ್ವಚ್ಛತೆ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. 

ಕೆಲಸ ಮಾಡಿದ ಕಚೇರಿ, ಓಡಾಡಿದ ರಸ್ತೆಗಳು, ಸ್ನೇಹಿತರು, ಹಳೆಯ ಭಾವಚಿತ್ರಗಳು... ಹೀಗೆ ಮರೆಯುವ ಎಲ್ಲ ವಿಷಯಗಳನ್ನೂ ಪದೇ ಪದೇ ಅವರ ಮುಂದೆ ತರುವ ಪ್ರಯತ್ನ ಮಾಡಬೇಕು. ಇದರಿಂದ ರೋಗಿಯ ನೆನಪುಗಳನ್ನು ಕೆಲ ಕಾಲ ಹಸಿರಾಗಿಡಲು ಸಹಾಯವಾಗುತ್ತದೆ.

ಮನೆಯವರ ಪಾತ್ರ?
ಎಲ್ಲಕ್ಕಿಂತ ಮುಖ್ಯವಾಗಿ ಬೇಕಿರುವುದು ಮನೆಯವರ, ಬಂಧುಗಳ, ಸ್ನೇಹಿತರ ನೈತಿಕ ಬೆಂಬಲ, ಭಾವನಾತ್ಮಕ ಒತ್ತಾಸೆ. ಅವರು ತೋರುವ ಪ್ರೀತಿ– ವಿಶ್ವಾಸವೇ ರೋಗಿಯ ಪಾಲಿನ ಸಂಜೀವಿನಿ. ಸಕಾಲದಲ್ಲಿ ಔಷಧಿ ಕೊಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಮನೆಯವರು ಅಂದು­ಕೊಳ್ಳುವ ಕಾಯಿಲೆ ಇದಲ್ಲ. ಮರೆವು ಹೆಚ್ಚಾಗುತ್ತಿದ್ದಂತೆ ರೋಗಿ­ಯಲ್ಲಿ ಕೋಪ, ಗಾಬರಿ ಹೆಚ್ಚಾಗಿ ಸಿಕ್ಕ ಸಿಕ್ಕವರ ಜೊತೆ ಜಗಳವಾಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಆಗ ಆರೈಕೆ ಮಾಡುವವರು ತಾಳ್ಮೆ­ಯಿಂದ ಅವರ ಕೋಪವನ್ನು ಶಮನ ಮಾಡಬೇಕು. ಕೊನೆಯ ಹಂತದ­ಲ್ಲಂತೂ ಯಾರಾದರೊಬ್ಬರು ಸದಾ ರೋಗಿಯೊಂದಿಗೆ ಇರಬೇಕಾಗುತ್ತದೆ. 

ರೋಗಿಯಿಂದ ಅನಾಹುತ ಸಂಭವಿಸದಂತೆ ತಡೆಯುವುದು ಹೇಗೆ?
ರೋಗಿಯನ್ನು ಒಂಟಿಯಾಗಿ ಸಂಚರಿಸಲು ಬಿಡಬಾರದು. ಇಲ್ಲವಾ­ದಲ್ಲಿ ಅವರ ಹಾಗೂ ಮನೆಯವರ ವಿವರ, ದೂರವಾಣಿ ಸಂಖ್ಯೆಯ ಕಾರ್ಡ್‌ ಜೇಬಿನಲ್ಲಿ ಇರಿಸಬೇಕು. ಮನೆಯಲ್ಲೂ ರೋಗಿಯ ಜೊತೆ ಯಾರಾ­ದರೂ ಇರಲೇ­ಬೇಕು. ರೋಗಿ ಅಡುಗೆ ಮನೆಯಲ್ಲಿ ಗ್ಯಾಸ್ ಹೊತ್ತಿಸಿ ಮರೆತರೆ,  ನೀರು ಕಾಯಿ­ಸುವ ಹೀಟರ್‌ ಹಾಕಿ ಹಾಗೇ ಬಿಟ್ಟರೆ ದೊಡ್ಡ ದುರಂ­ತವೇ ಘಟಿಸ­ಬಹುದು. ಇದರಿಂದ ಸುತ್ತಲಿನ­ವರಿಗೂ ತೊಂದರೆ ತಪ್ಪಿದ್ದಲ್ಲ.

ಆಹಾರ ಪಥ್ಯ?
ವಿಶೇಷ ಪಥ್ಯಗಳೇನೂ ಇಲ್ಲ.   ರೋಗ ನಿರೋಧಕ ಶಕ್ತಿ ಇರುವಂತೆ ಪ್ರೊಟೀನ್‌ ಹಾಗೂ ಶಕ್ತಿ ವೃದ್ಧಿಸುವ ಪೌಷ್ಟಿಕ ಆಹಾರವನ್ನು ನೀಡಬೇಕು.

ರೋಗದಿಂದ ದೂರವಿರಲು ದಾರಿ?
ಉತ್ತಮ ಜೀವನ ಶೈಲಿ, ನಿತ್ಯ ದೈಹಿಕ ವ್ಯಾಯಾಮ, ಸದಾ ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿ ಚಟುವಟಿಕೆಯಿಂದ ಇರುವವ­ರಿಂದ ಈ ಕಾಯಿಲೆ ದೂರ ಇರುತ್ತದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.