ADVERTISEMENT

ಆತ್ಮದೊಳಗೆ ಹೊಂಬೆಳಕು ಪಸರಿಸಲಿ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:30 IST
Last Updated 18 ಮೇ 2012, 19:30 IST
ಆತ್ಮದೊಳಗೆ ಹೊಂಬೆಳಕು ಪಸರಿಸಲಿ
ಆತ್ಮದೊಳಗೆ ಹೊಂಬೆಳಕು ಪಸರಿಸಲಿ   

ಜೋರಾಗಿ ಮಳೆ ಬೀಳುತ್ತಿದ್ದರೆ ನೀವು ಕೊಡೆಯಿಂದ ರಕ್ಷಿಸಿಕೊಳ್ಳುತ್ತೀರಿ ತಾನೆ? ಹಾಗೆಯೇ ದೈವಿಕ ತತ್ವಗಳನ್ನು ಅಳವಡಿಸಿಕೊಂಡು ನಿಮ್ಮ ಬದುಕು ರಕ್ಷಿಸಿಕೊಳ್ಳಬಹುದು.

ನಿಮ್ಮ ಕುಟುಂಬ ಸದಸ್ಯರಲ್ಲಿ ಒರಟು ಅಥವಾ ಸಿಡುಕ ವ್ಯಕ್ತಿಯೊಬ್ಬರು ಇದ್ದಲ್ಲಿ ಆ ವ್ಯಕ್ತಿಗೆ ಧಾರಾಳವಾಗಿ ಏಕಾಂತ ಕಲ್ಪಿಸಿ. ಅವರು ಹೇಗೆ ಇರಲು ಬಯಸುತ್ತಾರೋ ಹಾಗೆ ಇರಲು ಬಿಡಿ. ಅಂತಹ ವ್ಯಕ್ತಿಗಳು ತಮ್ಮನ್ನು ಹೊಗಳುವವರ ಜತೆ ಖುಷಿಯಾಗಿ ಇರುತ್ತಾರೆ. ಉಳಿದವರೆಲ್ಲ ಅವರಲ್ಲಿ ತಪ್ಪಿತಸ್ಥ ಭಾವನೆ ಮೂಡಿಸುತ್ತಾರೆ ಹಾಗೂ ಬೆದರಿಕೆ ಒಡ್ಡುವವರಂತೆ ಕಾಣುತ್ತಾರೆ.
 
ತಮ್ಮ ಮೇಲರಿಮೆ ಸ್ಥಾಪಿಸಿಕೊಳ್ಳಲು ಅವರು ಸದಾ ಇತರರ ಬಗ್ಗೆ ಕೀಳಾಗಿ ಮಾತನಾಡುತ್ತಿರುತ್ತಾರೆ. ಎಲ್ಲರೂ ತಮಗೆ ಕೃತಜ್ಞರಾಗಿರಬೇಕು. ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೋಡಬೇಕು. ತಮ್ಮಂತೆ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಇತರರಿಗಾಗಿ ಕೊಂಚ ಹೊಂದಾಣಿಕೆ ಮಾಡಿಕೊಳ್ಳಲೂ ಸಿದ್ಧರಾಗುವುದಿಲ್ಲ.

ಇಂತಹ ಮನೋಭಾವ ಸಂಬಂಧಗಳನ್ನು ಹದಗೆಡಿಸುತ್ತದೆ. ಖಿನ್ನತೆಗೆ ದಾರಿ ಮಾಡಿಕೊಡುತ್ತದೆ. ರಕ್ತದೊತ್ತಡ ಹೆಚ್ಚಿಸುತ್ತದೆ. ಅಚ್ಚರಿಯ ಸಂಗತಿಯೆಂದರೆ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವ ಮೂಲಕ ಅಂತಹ ವ್ಯಕ್ತಿಗಳಿಗೆ ನೆರವಾಗಬಹುದು. ಅಂತಹ ವ್ಯಕ್ತಿಗಳ ಜತೆ ವ್ಯವಹರಿಸುವಾಗ ಸಿಟ್ಟಿಗೇಳದೆ, ನೋವಿಗೆ ತುತ್ತಾಗದೆ, ಖಿನ್ನತೆಗೆ ಜಾರದೆ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಬೇಕು. ಆ ವ್ಯಕ್ತಿಗಳ ಜತೆ ಮಾತನಾಡುವಾಗ ಅತ್ಯಂತ ಎಚ್ಚರದಿಂದ ಇರಬೇಕು.
 
ಯಾರ ಕುರಿತಾದರೂ ಕೊಂಚವೇ ಅಸಮಾಧಾನ, ಯಾವುದೇ ಘಟನೆ, ಸನ್ನಿವೇಶದ ಕುರಿತು ಸ್ವಲ್ಪವೇ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ ಅವರ ಮೂಡ್ ಆಫ್ ಆಗುತ್ತದೆ. ನಿರುಪದ್ರವಿ ಹೇಳಿಕೆಯನ್ನೂ ತಪ್ಪಾಗಿ ಅರ್ಥೈಸಿಕೊಂಡು ಸಿಟ್ಟಿನ ದನಿಯಲ್ಲಿ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಇದಕ್ಕೆಲ್ಲ ನಾನೇ ಕಾರಣವೇ? ಎಂದು ದಿಕ್ಕೆಡುವಂತೆ ಪ್ರಶ್ನಿಸುತ್ತಾರೆ. ತಮ್ಮನ್ನು ತಾವೇ ಬಲಿಪಶುವಾಗಿಸಿಕೊಳ್ಳುತ್ತಾರೆ.

ಇದು ನಿರಾಶಾದಾಯಕ ಸ್ಥಿತಿ ಅಲ್ಲವೇ ಅಲ್ಲ...! ಜೋರಾಗಿ ಮಳೆ ಬೀಳುತ್ತಿದ್ದರೆ ನೀವು ಕೊಡೆಯಿಂದ ರಕ್ಷಿಸಿಕೊಳ್ಳುತ್ತೀರಿ. ಹಾಗೇ ದೈವಿಕ ತತ್ವಗಳನ್ನು ಅಳವಡಿಸಿಕೊಂಡು ಬದುಕು ರಕ್ಷಿಸಿಕೊಳ್ಳಬಹುದು. ಯಾವಾಗಲೂ ಸಂತಸದಿಂದ ಇರುವುದು, ಭಯ, ಕಾತರ, ಋಣಾತ್ಮಕ ಚಿಂತನೆ ಮಾಡದೇ ಇರುವುದರಿಂದ ಪರಿಪೂರ್ಣ ಆರೋಗ್ಯ ಕಾಯ್ದುಕೊಳ್ಳಬಹುದು ಎಂದು ಆಧ್ಯಾತ್ಮಿಕ ಗುರುಗಳು ಹೇಳುತ್ತಾರೆ.

ಈ ಸೂತ್ರಗಳನ್ನು ಅನುಸರಿಸಿ.
*   ಪ್ರತಿದಿನ ನಿಮಗೆ ಸಂತಸ ನೀಡುವ ಯಾವುದಾದರೂ ಚಟುವಟಿಕೆ ಮಾಡಿ. ನಿಮ್ಮ ಮನಸ್ಸು ಮತ್ತಷ್ಟು ಶಾಂತವಾಗುತ್ತದೆ. ಖುಷಿಯಿಂದ ಇರುತ್ತದೆ. ಆಗ, ಆ ಸಿಡುಕ ವ್ಯಕ್ತಿಯ ಟೀಕಾಸ್ತ್ರಗಳನ್ನು ನೀವು ಸಂಯಮದಿಂದ ಎದುರಿಸಬಹುದು.
 
ಅದು ಸಂಗೀತ ಕೇಳುವುದೇ ಇರಬಹುದು. ಕರಕುಶಲ ಚಟುವಟಿಕೆಯಾಗಿರಬಹುದು ಅಥವಾ ನಿಮ್ಮ ಕಾರನ್ನು ತೊಳೆಯುವುದೇ ಇರಬಹುದು. ನಿಮ್ಮ ಹೃದಯದೊಳಗೊಂದು ಸಂಗೀತ ಹುಟ್ಟುತ್ತದೆ. ನಿಮ್ಮ ರಸದೂತಗಳೆಲ್ಲ ಸಮತೋಲ ಸ್ಥಿತಿಯಲ್ಲಿ ಇರುತ್ತವೆ.

*  ನಿಮ್ಮ ಸಮಸ್ಯೆಗಳ ಕುರಿತು ಆದಷ್ಟು ಕಡಿಮೆ ಯೋಚಿಸಿ. ನೀವು ಎದುರಿಸಿದ ಕಷ್ಟ, ಕಳೆದುಕೊಂಡ ವಸ್ತು, ವ್ಯಕ್ತಿಗಳ ಬಗ್ಗೆ ಯೋಚಿಸಬೇಡಿ. ಬದಲಾಗಿ ನಿಮ್ಮ ಶಕ್ತಿಗಳ ಬಗ್ಗೆ ಯೋಚಿಸಿ. ನಿಮಗಾದ ಲಾಭಗಳು, ಪ್ರೀತಿಪಾತ್ರರು ನಿಮ್ಮ ಬಗ್ಗೆ ವ್ಯಕ್ತಪಡಿಸಿದ ಭಾವನೆ ಎಲ್ಲವನ್ನೂ ನೆನಪಿಸಿಕೊಳ್ಳಿ.

ಆಗ ಚಿಂತೆ ಮಾಡಲು ಅಸಾಧ್ಯ ಎನಿಸುತ್ತದೆ. ನಿಮ್ಮ ಮನಸ್ಸು ಸಕಾರಾತ್ಮಕ ಮನೋಭಾವದಿಂದ ಬೀಗುತ್ತಿದ್ದಾಗ ಮಿದುಳಿನ `ಹಿಪ್ಪೊಕ್ಯಾಂಪಸ್~ ಕೋಶಗಳು ವಿಕಸಿಸುತ್ತವೆ. ಸುಂದರ ಸಂಗತಿಗಳನ್ನು ಸ್ಮೃತಿಪಟಲದ ಮುಂದೆ ತರುತ್ತವೆ.

*  ಪ್ರತಿ ಕೆಲಸವನ್ನೂ ಗುರುವೊಬ್ಬರು ಹೇಳಿಕೊಟ್ಟ ಧ್ಯಾನದಂತೆ  ನಿಧಾನವಾಗಿ ಮಾಡಿ. ತನ್ನ ಆಶ್ರಮದಲ್ಲಿ ಸ್ವತಃ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದ ಗುರುವೊಬ್ಬರು, ಕೆಲಸವನ್ನು ನಿಧಾನವಾಗಿ ಮಾಡಿದಾಗ, ಲಯಬದ್ಧವಾಗಿ ಮಾಡಿದಾಗ, ಧ್ಯಾನಕ್ಕೆ ಕುಳಿತುಕೊಳ್ಳುವ ಅಗತ್ಯವೇ ಇಲ್ಲ ಎಂದು ಶಿಷ್ಯರಿಗೆ ಹೇಳುತ್ತಿದ್ದರು.

*  ಭಯ, ಕಾತರ ಹಾಗೂ ನೇತ್ಯಾತ್ಮಕ ಆಲೋಚನೆಗಳು ಮನಸ್ಸು ಹಾಗೂ ದೇಹದಲ್ಲಿ ಸೆಡೆತ ಹಾಗೂ ಸಂಕೋಚನ ಉಂಟು ಮಾಡುತ್ತವೆ. ಆದರೆ, ಸಂತಸ ತುಂಬಿದ ಆಲೋಚನೆಗಳು ಆರೋಗ್ಯಕರ ಸ್ಥಿತಿ ನಿರ್ಮಿಸುತ್ತವೆ. ಭಯ, ಕಾತರ ಅಥವಾ ಋಣಾತ್ಮಕ ಯೋಚನೆ ಹುಟ್ಟಿದಾಗ ಮೂರನೇ ವ್ಯಕ್ತಿಯಂತೆ ಆ ಭಾವನೆಗಳನ್ನು ಉದಾಸೀನದಿಂದ ನೋಡಿ.

ಅವು ಹಾಗೆಯೇ ನಿಮ್ಮ ದೇಹದಿಂದ ಹೊರಹೋಗುತ್ತವೆ. ನಿಮ್ಮ ಮನಸ್ಸು ಹಾಗೂ ದೇಹ ಹೀಗೆ ಪರಿಶುದ್ಧವಾದಾಗ ಹೊಸ ಕಲ್ಪನೆ ನಿಮ್ಮಲ್ಲಿ ಹುಟ್ಟುತ್ತದೆ. ದೈವಿಕ ಸಂಜ್ಞೆಗಳು ನಿಮ್ಮಲ್ಲಿ ಸಿಹಿಯಾದ ಜೇನಿನಂತೆ ಹರಿಯುತ್ತವೆ.ಆಗ, ಅಂತಹ ಸಿಡುಕ ವ್ಯಕ್ತಿಯ ಜೊತೆಗಿನ ಸಂವಹನ ಸುಲಭವಾಗುತ್ತದೆ.

*  ಶಿಲುಬೆ ಏರಿದ್ದ ಜೀಸಸ್ ತನಗೆ ಹಿಂಸೆ ನೀಡಿದವರ ಕುರಿತು ಏನು ಹೇಳಿದ್ದ ಎಂದು ನೆನಪಿಸಿಕೊಳ್ಳಿ. `ತಂದೆಯೇ ಅವರನ್ನು ಕ್ಷಮಿಸು, ಅವರು ಏನು ಮಾಡುತ್ತಿದ್ದಾರೆ ಎಂಬುದೇ ಅವರಿಗೆ ತಿಳಿದಿಲ್ಲ.~ ನಿಮ್ಮ ಆ ಕುಟುಂಬ ಸದಸ್ಯರ ಕುರಿತು ಇದೇ ಭಾವನೆ ಇರಲಿ. ಆ ವ್ಯಕ್ತಿ ಬೆದರಿದ್ದಾರೆ. ಆ ಸಿಡುಕ ಚಹರೆಯ ಹಿಂದೆ ಅಭದ್ರತಾ ಭಾವ ಅಡಗಿಸಿಟ್ಟುಕೊಂಡಿದ್ದಾರೆ. ಇಲ್ಲೊಂದು ಸುಂದರ ಪಾಠವಿದೆ. ದೇವರು ಅವರನ್ನು ಕ್ಷಮಿಸುತ್ತಾನೆ ಎಂದಾದಲ್ಲಿ ನೀವು ಸಹ ಅವರನ್ನು ಕ್ಷಮಿಸಬಹುದು.

*  ನಿಧಾನವಾಗಿ ಆ ವ್ಯಕ್ತಿಯ ಗಮನವನ್ನು ಅರ್ಥಪೂರ್ಣ ಸಕಾರಾತ್ಮಕ ಸಂಗತಿಗಳೆಡೆ ಸೆಳೆಯಿರಿ. ಮೂಡ್ ಹಾಳು ಮಾಡುವ ಸಂಗತಿಗಳ ಬಗ್ಗೆ ಚರ್ಚಿಸಬೇಡಿ. ಆಧ್ಯಾತ್ಮಿಕ ಪುಸ್ತಕಗಳನ್ನು ಓದಿ.

*  ಯಾವುದೇ ಸನ್ನಿವೇಶ ಅವರ ಮನಸ್ಥಿತಿಯನ್ನು ಹೇಗೆ ಏರುಪೇರು ಮಾಡುತ್ತದೆ ಎಂಬುದರ ಕುರಿತು ಬೆಳಕು ಚೆಲ್ಲಿ. ಸನ್ನಿವೇಶ ಅರ್ಥ ಮಾಡಿಕೊಂಡಾಗ ಅವರ ಆ ಸಿಟ್ಟು ತಣ್ಣಗಾಗಬಹುದು.

*  ಮನೆಯಲ್ಲಿ ಗದ್ದಲ ಕಡಿಮೆ ಮಾಡಿ. ಟಿವಿಯ ವಾಲ್ಯೂಮ್ ಕಡಿಮೆ ಇರಲಿ. ಹಿಂಸಾತ್ಮಕ ಕಾರ್ಯಕ್ರಮಗಳ ಬದಲು ಹಾಸ್ಯ ಕಾರ್ಯಕ್ರಮ ವೀಕ್ಷಿಸಿ.

*  ಅವರ ಮುಂದೆ ವಿನೀತರಾಗಿ ನಿಮ್ಮನ್ನು ನೀವು ಕೆಳಗಿಳಿಸಿಕೊಳ್ಳಬೇಡಿ. ನಿಮ್ಮ ಸೌಜನ್ಯ ಅಥವಾ ನೇರ ನುಡಿಯನ್ನು ಅವರು ನೇತ್ಯಾತ್ಮಕವಾಗಿ ಸ್ವೀಕರಿಸುತ್ತಾರೆ. ಸಿಡುಕಿನ, ಸಂಕುಚಿತ ಹೇಳಿಕೆ ನೀಡುತ್ತಾರೆ.

*  ಕೊನೆಯದಾಗಿ ಅವರು ಹೇಗೆ ಇರಲಿ, ಅವರೆಡೆ ಪ್ರೀತಿ ಹರಿಸಿ. ಆ ಕಹಿ ಭಾವನೆ ಹೋಗಲಾಡಿಸಲು ಅವರೆಡೆ ಪ್ರೀತಿಯ ಕಿರಣಗಳನ್ನು ತೂರಿ. ಇದರಿಂದ ನಿಮಗೂ ಲಾಭವಾಗುತ್ತದೆ. ನಿಮ್ಮ ಮನಸ್ಸು, ದೇಹದಿಂದ ಋಣಾತ್ಮಕ ಶಕ್ತಿಗಳು ಹೊರಹೋಗುತ್ತವೆ. ಬೈಬಲ್‌ನಲ್ಲಿ ಹೇಳಿದಂತೆ `ನಿಮ್ಮ ಕಣ್ಣು ಪರಿಶುದ್ಧವಾಗಿದ್ದಾಗ, ನಿಮ್ಮ ಆತ್ಮದೊಳಗೂ ಹೊಂಬೆಳಕು ಪಸರಿಸುತ್ತದೆ.~ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.