ಹೋಟೆಲ್, ರೆಸ್ಟೋರೆಂಟ್, ಅದರಲ್ಲೂ ಪ್ರಮುಖವಾಗಿ ಬಹುರಾಷ್ಟ್ರೀಯ ಫಾಸ್ಟ್‌ಫುಡ್‌ಗಳಿಗೆ ಹೋದಾಗ ಸ್ಟಾರ್ಟರ್ಸ್‌ನ ಹೆಸರಿನಲ್ಲಿ ಬಹುತೇಕರು ಸೇವಿಸುವುದು `ಫ್ರೆಂಚ್ ಫ್ರೈಸ್~ ಎನ್ನುವ, ಎಣ್ಣೆಯಲ್ಲಿ ಕರಿದ ಆಲೂಗೆಡ್ಡೆಯ ಚಿಪ್ಸ್‌ಗಳನ್ನೇ. ನಮ್ಮ ದೇಶದಲ್ಲಿ ಮಾತ್ರವಲ್ಲ, ಇತರ ದೇಶಗಳಲ್ಲೂ ಇದನ್ನು ಗಮನಿಸಬಹುದು.
ಎಣ್ಣೆಯಲ್ಲಿ ಹದವಾಗಿ ಕರಿದು ಉಪ್ಪು ಹಾಗೂ ಖಾರದಪುಡಿ ಚಿಮುಕಿಸಿ ಇದನ್ನು ಯಾರು ಬೇಕಾದರೂ ಸುಲಭವಾಗಿ ತಯಾರಿಸಬಹುದು. ಅಲ್ಲದೆ ಈ ಚಿಪ್ಸ್‌ಗಳ ರುಚಿ ಎಳೆ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರ ಬಾಯಲ್ಲೂ ನೀರೂರಿಸುವಂತಾದ್ದು.
ಆದರೆ ಹೀಗೆ ಕರಿದ ಆಲೂಗೆಡ್ಡೆಯ ಚಿಪ್ಸ್ ಅಥವಾ `ಫ್ರೆಂಚ್ ಫ್ರೈಸ್~ ಅನ್ನು ಸತತವಾಗಿ ತಿನ್ನುವುದರಿಂದ ಕ್ಯಾನ್ಸರ್‌ಗೆ ಆಹ್ವಾನ ನೀಡಿದಂತೆ ಎಂಬ ಭಯಾನಕ ಸಂಗತಿಯನ್ನು ವಿಜ್ಞಾನಿಗಳು ಗಮನಿಸಿದ್ದಾರೆ!
ಶರ್ಕರ ಪಿಷ್ಟಗಳು ಅಧಿಕವಾಗಿರುವ ಆಹಾರ ವಸ್ತುಗಳನ್ನು ಎಣ್ಣೆಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕರಿದಾಗ ಅಥವಾ ಬೆಂಕಿಯಲ್ಲಿ ಹುರಿದಾಗ ಅದರಿಂದ `ಅಕ್ರಿಲಮೈಡ್~ ಎಂಬ ರಾಸಾಯನಿಕ ವಸ್ತು ಉತ್ಪತ್ತಿಯಾಗುತ್ತದೆ. ಇದರ ಸೇವನೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದನ್ನು ಸ್ವೀಡನ್ನಿನ ಒಂದು ವೈಜ್ಞಾನಿಕ ತಂಡ ಇತ್ತೀಚಿನ ವರ್ಷಗಳಲ್ಲಿ ಆಕಸ್ಮಿಕವಾಗಿ ಗಮನಿಸಿದೆ.
ಅಮೆರಿಕದ `ಪರಿಸರ ರಕ್ಷಣಾ ಸಮಿತಿ~ (ಇಪಿಎ) ಪ್ರಕಾರ, ನಮ್ಮ ಆಹಾರದಲ್ಲಿ `ಅಕ್ರಿಲಮೈಡ್~ನ ಮಟ್ಟ 0.000777 ಗಿಂತಲೂ ಕಡಿಮೆ ಇರಬೇಕು. ಈ ಮಟ್ಟವನ್ನು ನಮಗೆ ಚಿರಪರಿಚಿತವಾಗಿರುವ ಇತರ ರಾಸಾಯನಿಕಗಳಿಗೆ ಹೋಲಿಸಿದಾಗ (ಬೆಂಝಿನ್ 0.12, ಕ್ಲೋರೊಫಾರ್ಮ್ 0.0*3, ಸೀಸ 0.013) ಅಕ್ರಿಲಮೈಡ್ ಗಂಭೀರವಾದದ್ದು. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಸುಮಾರು 225 ಗ್ರಾಂ ನೀರಿನಲ್ಲಿ 0.12 ಮೈಕ್ರೊಗ್ರಾಂ ಅಕ್ರಿಲಮೈಡ್ ಇದ್ದರೆ ಅದು ಅಪಾಯಕಾರಿಯಲ್ಲ.
ಆದರೆ ಸುಮಾರು 170 ಗ್ರಾಂ `ಫ್ರೆಂಚ್ ಫ್ರೈಸ್~ ಸೇವನೆಯಿಂದ ನಮ್ಮ ದೇಹ ಸುಮಾರು 60 ಮೈಕ್ರೊಗ್ರಾಂ ಅಕ್ರಿಲಮೈಡ್‌ನ್ನು ಪಡೆಯುತ್ತದೆ. ಇದು ನಿಗದಿತ ಪ್ರಮಾಣಕ್ಕಿಂತಲೂ ಸುಮಾರು 500 ಪಟ್ಟು ಅಧಿಕ! ಈ ಪ್ರಮಾಣದ `ಅಕ್ರಿಲಮೈಡ್~ನ ಸೇವನೆ ಕ್ಯಾನ್ಸರ್‌ಗೆ ಮೂಲ ಹಾಗೂ ಇನ್ನಿತರ ಅನಾರೋಗ್ಯಕ್ಕೂ ಕಾರಣವಾಗುತ್ತದೆ.
ಆದಿಮಾನವನ ಕಾಲದಿಂದಲೂ ಸಾವಿರಾರು ವರ್ಷಗಳಿಂದ ನಾವು (ಅವರು ಆಹಾರವನ್ನು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಿದ್ದರು) ಈ ಹಾನಿಕಾರಕ ರಾಸಾಯನಿಕವನ್ನು ನಮಗರಿವಿಲ್ಲದೇ ಸೇವಿಸುತ್ತಾ ಬಂದಿದ್ದೇವೆ. ವಿಜ್ಞಾನಿಗಳು ಗಮನಿಸಿದ ಸಮಾಧಾನಕರ ಅಂಶವೆಂದರೆ, ಇಂತಹ ಆಹಾರ ಪದಾರ್ಥಗಳನ್ನು ನೀರಿನಲ್ಲಿ ಬೇಯಿಸುವುದರಿಂದ ಅಕ್ರಿಲಮೈಡ್ ಉಂಟಾಗುವುದಿಲ್ಲ.
ಆದರೆ ಅದೇ ಮೈಕ್ರೊವೇವ್‌ಗಳಲ್ಲಿ ತಯಾರಿಸಿದಾಗ ಈ ರಾಸಾಯನಿಕ ಉತ್ಪತ್ತಿಯಾಗುತ್ತದೆ.
ಆಲೂಗೆಡ್ಡೆ ಹಾಗೂ ಶರ್ಕರ ಪಿಷ್ಟಗಳನ್ನು ಹೊಂದಿರುವ ಇತರೆ ವಸ್ತುಗಳನ್ನು ಎಣ್ಣೆಯಲ್ಲಿ ಕರಿದಾಗ ಅದರಲ್ಲಿನ ಪಿಷ್ಟ (starch) ಹಾಗೂ ಅಲರ್ಜಿನ್ ಎಂಬ ಅಮೈನೋ ಆಮ್ಲವು ಹೆಚ್ಚಿನ ಉಷ್ಣತೆಯಲ್ಲಿ (120 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ) ತುಸು ಕಂದು ಬಣ್ಣಕ್ಕೆ ತಿರುಗುವುದರಿಂದ, ಅದರಲ್ಲಿ ಅಕ್ರಿಲಮೈಡ್ ಉತ್ಪತ್ತಿಯಾಗುತ್ತದೆ. ಬ್ರೆಡ್ ಅನ್ನು ಕಂದುಬಣ್ಣಕ್ಕೆ ಹುರಿಯುವುದರಿಂದಲೂ ಇದು ಉಂಟಾಗಬಲ್ಲದು.
ಇತ್ತೀಚಿನ ದಿನಗಳಲ್ಲಿ ನಮ್ಮ ಸೂಪರ್ ಮಾರ್ಕೆಟ್‌ಗಳಲ್ಲಿ ದೊರಕುವ, ದುಬಾರಿ ಎನಿಸುವ, ಉದ್ದನೆ ಗೋಲಾಕೃತಿಯ ರಟ್ಟಿನ ಡಬ್ಬಿಗಳಲ್ಲಿ ಸಿಗುವ (ಅಮೆರಿಕ ಮೂಲದ) ಆಲೂಗೆಡ್ಡೆ ಚಿಪ್ಸ್‌ನಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಕ್ರಿಲಮೈಡ್ ಇರುವುದು ತಿಳಿದುಬಂದಿದೆ.
(ಇದರಲ್ಲಿ ನಿಜಕ್ಕೂ ಆಲೂಗೆಡ್ಡೆ ಪ್ರಮಾಣ ಅತ್ಯಲ್ಪವಿದ್ದು, ಗೋಧಿ, ಜೋಳದ ಹಿಟ್ಟಿನಿಂದ ತಯಾರಿಸಿ ಚಿಪ್ಸ್‌ನಂತೆ ಗೋಲಾಕೃತಿಯಲ್ಲಿ ಕತ್ತರಿಸಿ ಹೆಚ್ಚಿನ ಉಷ್ಣತೆಯಲ್ಲಿ, ಅತಿ ಕಡಿಮೆ ಎಣ್ಣೆಯಲ್ಲಿ ಸುಟ್ಟು ತಯಾರಿಸುತ್ತಾರೆ) ಹೀಗಾಗಿ ಅಮೆರಿಕನ್ನರು ಸಹ ನಿಧಾನವಾಗಿ ಇದರಿಂದ ದೂರವಾಗುತ್ತಿರುವ ಸಂಗತಿ ನಮ್ಮಲ್ಲಿ ಬಹುತೇಕರಿಗೆ ಇನ್ನೂ ಗೊತ್ತಿಲ್ಲದಿರುವುದು ದುರದೃಷ್ಟವೇ ಸರಿ. ಆಹಾರ ಭದ್ರತೆಗೆ ಸಂಬಂಧಿಸಿದ ಇಲಾಖೆಗಳು ಬಹಳಷ್ಟು ವಿಷಯಗಳಲ್ಲಿ ನಿದ್ರಾವಸ್ಥೆಯಲ್ಲಿಯೇ ಇರುವುದರಿಂದ ಜನಸಾಮಾನ್ಯರಾದ ನಾವೇ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದುದು ಅತ್ಯಗತ್ಯ.
ಆಹಾರ ತಯಾರಿಕಾ ವಿಧಾನದಲ್ಲಿ ಅಲ್ಪ ಬದಲಾವಣೆ ಮಾಡಿಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಲಾಭವಾಗುವುದಾದರೆ ಇಂದಿನಿಂದಲೇ ಅಂತಹ ಕ್ರಮವನ್ನು ನಾವು ಅನುಸರಿಸಬಾರದೇಕೆ?
ಬಿಡದವರಿಗಾಗಿ...
`ಫ್ರೆಂಚ್ ಫ್ರೈಸ್~ ಅಥವಾ ಆಲೂಗೆಡ್ಡೆ ಚಿಪ್ಸ್‌ಗಳ ರುಚಿಗೆ ಮಾರುಹೋದವರು ಎಷ್ಟೇ ಹಾನಿಕಾರಕ ರಾಸಾಯನಿಕ ಹೊಂದಿದ್ದರೂ ಅದನ್ನು ತಿನ್ನುವುದನ್ನು ಅಷ್ಟು ಸುಲಭದಲ್ಲಿ ಬಿಡಲಾರರು. ಅಂತಹವರಿಗೆ ತುಸು ಸಮಾಧಾನ ತರುವ ಸಂಗತಿಯೊಂದು ಇಲ್ಲಿದೆ:
ಇಂಗ್ಲೆಂಡಿನ ಡಾ. ರಾಚೆಲ್ ಬರ್ಚ್ ಎಂಬ ಆಹಾರ ತಜ್ಞರ ವಿವರಣೆಯಂತೆ, ಆಲೂಗೆಡ್ಡೆಯನ್ನು ಕತ್ತರಿಸಿದ ಬಳಿಕ ನೀರಿನಲ್ಲಿ ತೊಳೆದು, ಅರ್ಧ ಗಂಟೆ ನೆನೆಸಿಡಬೇಕು. ಬಳಿಕ ಎರಡು ಗಂಟೆ ಗಾಳಿಗೆ ಒಣಹಾಕಿದ ನಂತರ ಚಿಪ್ಸ್ ತಯಾರಿಸುವುದರಿಂದ ಅಕ್ರಿಲಮೈಡ್ ಉತ್ಪಾದನೆ ಶೇ 50ರಷ್ಟು ಕಡಿಮೆ ಆಗುತ್ತದೆ.
ಗಮನಿಸಿ
*ಆಲೂಗೆಡ್ಡೆ ಚಿಪ್ಸ್‌ನ ಇನ್ನೊಂದು ರೂಪವೇ ಫ್ರೆಂಚ್ ಫ್ರೈಸ್
*ಶರ್ಕರ ಪಿಷ್ಟಯುಕ್ತ ಪದಾರ್ಥ ಕರಿದಾಗ, ಹುರಿದಾಗ `ಅಕ್ರಿಲಮೈಡ್~ ರಾಸಾಯನಿಕ ಉತ್ಪತ್ತಿ
*ಹೆಚ್ಚಿನ ಅಕ್ರಿಲಮೈಡ್ ಸೇವನೆ ಕ್ಯಾನ್ಸರ್‌ಗೆ ದಾರಿ
*ಬೇಯಿಸಿದ ಆಲೂಗೆಡ್ಡೆಯಲ್ಲಿ ಅಕ್ರಿಲಮೈಡ್ ಉತ್ಪತ್ತಿಯಾಗದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.