ADVERTISEMENT

ಇಬ್ಬರಿಗೂ ಒಂದೇ ಔಷಧಿ !

ಶಾರದಾ ಶಾಮಣ್ಣ
Published 25 ಜನವರಿ 2013, 19:59 IST
Last Updated 25 ಜನವರಿ 2013, 19:59 IST

ನನ್ನ ಸಹೋದರಿ ಪ್ರಸೂತಿ ಶಾಸ್ತ್ರ ತಜ್ಞೆ. ಅವಳು ತನ್ನ ಕ್ಲಿನಿಕ್‌ನಿಂದ ಬರುವಾಗ ಏನಾದರೊಂದು ಸ್ವಾರಸ್ಯಕರ ಘಟನೆಯನ್ನು ತಂದೇ ತರುತ್ತಾಳೆ. ಅವಳಿಗೆ ಬರೆಯಲು ಸಾಕಷ್ಟು ಸಮಯವಿರದೇ ಇರುವುದರಿಂದ ಅವಳ ಪರವಾಗಿ ಕೆಲವು ಘಟನೆಗಳನ್ನು ಇಲ್ಲಿ ವಿವರಿಸಿದ್ದೇನೆ. ಹಳ್ಳಿಗಳೇ ಅವಳ ಪ್ರಧಾನ ಕಾರ್ಯ ಕ್ಷೇತ್ರ. ಅಲ್ಲಿಯ ಮಹಿಳೆಯರೇ ಅವಳ ಕೇಂದ್ರ ಬಿಂದು. ಅನೇಕ ಸಲ ಅವರ ಮುಗ್ಧ ಭಾವನೆಗಳು ಹೇಗಿರುತ್ತವೆ ಎಂಬುದಕ್ಕೆ ಒಂದು ಉದಾಹರಣೆ.

ಒಮ್ಮೆ ಕ್ಲಿನಿಕ್‌ಗೆ ಅವಳ ಬಾಲ್ಯ ಸ್ನೇಹಿತೆ ತನ್ನ ನಾದಿನಿಯನ್ನು ಕರೆ ತಂದಿದ್ದಳು. ಇಬ್ಬರದೂ ತಪಾಸಣೆ ಮಾಡಿಯಾಯಿತು. ನಾದಿನಿ ಮನೆಗೆ ಹೋಗಿ ತನ್ನ ತಾಯಿಯ ಹತ್ತಿರ ಏನು ಹೇಳುತ್ತಿದ್ದಳಂತೆ ಗೊತ್ತೇ? `ಡಾಕ್ಟರ್ ನನ್ನ ಗೆಳತಿ, ನಾವು ಒಟ್ಟಿಗೆ ಓದುತ್ತಿದ್ದೆವು, ಹಾಗೆ ಹೀಗೆ ಅಂತೆಲ್ಲ ಅತ್ತಿಗೆ ಹೇಳಿಕೊಳ್ಳುತ್ತಿದ್ದರಲ್ಲವಾ. ಆದರೆ ಡಾಕ್ಟರ್ ನನ್ನನ್ನೇ ಹೆಚ್ಚು ಹೊತ್ತು ಪರೀಕ್ಷೆ ಮಾಡಿದರು. ಅತ್ತಿಗೆಯನ್ನು 10 ನಿಮಿಷ ಮಾತ್ರ ಪರೀಕ್ಷೆ ಮಾಡಿದ್ರು' ಎಂದು. ದೈಹಿಕ ಸಮಸ್ಯೆ ಹೆಚ್ಚು ಇದ್ದದ್ದು ತನಗೆ ಎಂಬ ಅರಿವೇ ಅವಳಿಗೆ ಇರಲಿಲ್ಲ. ಇದೂ ಒಂದು ಬಗೆಯ ಮುಗ್ಧತೆ ಅಲ್ಲವೇ?

ಹಳ್ಳಿಯವರಿಗೆ ಮುಗ್ಧತೆಯ ಜೊತೆಗೆ ಹಣ ಉಳಿಸುವ ಜಿಪುಣತನವೂ ಇರುತ್ತದೆ. ಇದಕ್ಕೊಂದು ಉದಾಹರಣೆ. ನನ್ನ ತಂಗಿಯ ಗಂಡ ಸಹ ಹಳ್ಳಿಯಲ್ಲಿ ವೈದ್ಯರು. ಅವರ ಕ್ಲಿನಿಕ್‌ಗೆ ಒಬ್ಬ ಬಂದು ಗಲಾಟೆ ಮಾಡತೊಡಗಿದ. ಕಾರಣ ಇಷ್ಟೇ. ಇದೇ ಡಾಕ್ಟರು ಬರೆದುಕೊಟ್ಟ ಔಷಧಿಯನ್ನು ತನ್ನ ಮಗನಿಗೆ ಕೊಟ್ಟರೂ ಭೇದಿ ನಿಂತಿಲ್ಲ. `ನೀವೇ ಬರೆದುಕೊಟ್ಟ ಔಷಧಿ' ಎಂದು ಪದೇ ಪದೇ ಹೇಳುತ್ತಿದ್ದ. ಡಾಕ್ಟರ್ ನಿಧಾನವಾಗಿ `ಹಾಗಾದರೆ ಗೌಡ್ರೇ ನಿಮ್ಮ ಮಗನನ್ನು ಆ ಔಷಧದ ಚೀಟಿಯ ಜೊತೆಯಲ್ಲಿ ಕರೆ ತನ್ನಿ. ನೋಡಿ ಔಷಧಿ ಬದಲಾಯಿಸಿ ಕೊಡುತ್ತೇನೆ' ಎಂದರು. ಒಲ್ಲದ ಮನಸ್ಸಿನಿಂದ ಹೋಗಿ ಆ ಚೀಟಿಯನ್ನೂ, ಮಗನನ್ನೂ ಆತ ಕರೆತಂದ. ತಾವು ಬರೆದು ಕೊಟ್ಟಿದ್ದು ಸರಿಯಾಗೇ ಇದ್ದರೂ ಹೀಗೇಕಾಯಿತು ಎಂದುಕೊಂಡರು ಡಾಕ್ಟರ್. ಹುಡುಗ ಭೇದಿ ದೆಸೆಯಿಂದ ತುಂಬಾ ಸುಸ್ತಾಗಿದ್ದ. ಬೇರೆ ಚೀಟಿ ಬರೆದು ಕೊಡೋಣ ಎಂದುಕೊಂಡು ಆ ಹುಡುಗನನ್ನು `ನಿನ್ನ ಹೆಸರೇನು? ಎಷ್ಟು ವಯಸ್ಸು? ಎಂದು ಕೇಳಿದರು. ಅದಕ್ಕೆ ಆ ಹುಡುಗ `ಗಣೇಶ, ನನ್ನ ವಯಸ್ಸು 9' ಎಂದ. ವೈದ್ಯರಿಗೆ ಅನುಮಾನ ಬಂದು ಹಳೆಯ ಚೀಟಿಯೊಡನೆ ತಾಳೆ ಹಾಕಿ ನೋಡಿದರು. ಅದರಲ್ಲಿ `ರಮೇಶ, ವಯಸ್ಸು 16' ಎಂದಿತ್ತು.

ಗೌಡರನ್ನು ವಿಚಾರಿಸಿದ್ದಕ್ಕೆ ಅದೇನು ಮಹಾದೊಡ್ಡ ವಿಷಯ ಎನ್ನುವಂತೆ ನೋಡಿ `ನೀವೇ ಬರೆದು ಕೊಟ್ಟಿದ್ದು ಅಲ್ಲವ್ರಾ' ಎಂದು ಬಿಟ್ಟ. ಅದಕ್ಕೆ ಡಾಕ್ಟರ್ `ಹೌದಪ್ಪಾ ನಾನೇ ಬರೆದುಕೊಟ್ಟಿದ್ದು. ಅವನು ದೊಡ್ಡ ಹುಡುಗ, ಡೋಸೇಜು ಜಾಸ್ತಿ ಕೊಡುತ್ತೇವೆ, ಚಿಕ್ಕವರಿಗೆ ಸ್ವಲ್ಪ ಕಡಿಮೆ ಡೋಸು ಕೊಡುತ್ತೇವೆ. ಅಲ್ಲದೆ ಭೇದಿ ನಾನಾ ಕಾರಣಗಳಿಂದ ಉಂಟಾಗುತ್ತದೆ. ಎಲ್ಲದಕ್ಕೂ ಒಂದೇ ಔಷಧಿ ಆಗುವುದಿಲ್ಲ. ಒಬ್ಬೊಬ್ಬರ ದೇಹಸ್ಥಿತಿ ಒಂದೊಂದು ತರಾ ಇರುತ್ತದೆ. ಅದನ್ನೆಲ್ಲಾ ನಾವು ಗಮನಿಸಬೇಕು' ಎಂದರು ಸಹಜವಾಗಿ.

ಅದಕ್ಕೆ ಗೌಡರು ಹೇಳಿದ ಉತ್ತರ ಏನು ಗೊತ್ತೇ? `ಬಿಡಿ ಡಾಕ್ಟ್ರೇ ಇಬ್ಬರೂ ಅಣ್ಣ ತಮ್ಮದೀರು. ಒಂದೇ ತಾಯಿಯ ಹೊಟ್ಟೆಯಿಂದ ಬಂದೋರು. ಅದ್ಹೆಂಗೆ ದೇಹಸ್ಥಿತಿ ಬೇರೆ ಬೇರೆ ಆಗ್ತದೆ ನೀವೇ ಹೇಳಿ. ನೀವೇ ನನ್ನ ದೊಡ್ಡ ಮಗನಿಗೆ 6 ತಿಂಗಳ ಹಿಂದೆ ಭೇದಿ ಆದಾಗ ಗುಳಿಗೆ ಬರೆದುಕೊಟ್ಟಿದ್ರಿ. 8 ಗುಳಿಗೆ ತೆಗೆದುಕೊಳ್ಳಲು ಹೇಳಿದ್ರಿ. ನೋಡಿ ನಿಮ್ಮ ಕೈಗುಣ ಚೆನ್ನಾಗದೆ. ಎರಡು ಗುಳಿಗೆಗೇ ಗುಣವಾಯ್ತು. ಉಳಿದ ಗುಳಿಗೆ, ನಿಮ್ಮ ಚೀಟಿ ಎರಡನ್ನೂ ಹಾಗೇ ಜೋಪಾನವಾಗಿಟ್ಟಿದ್ದೆ. ಅದನ್ನೇ ಈಗ ಚಿಕ್ಕ ಮಗನಿಗೂ ಕೊಟ್ಟೆ' ಎಂದ. ಡಾಕ್ಟರ್ ಔಷಧಿಯ ಮೇಲಿದ್ದ ತಾರೀಖು ನೋಡಿದರು. ಅದರ ಎಕ್ಸ್‌ಪೈರಿ ದಿನ ಮುಗಿದು ಅದಾಗಲೇ ಎರಡು ತಿಂಗಳಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.