ಕಗ್ಗತ್ತಲೆಯಲ್ಲಿ ಒಂದು ವಿಚಿತ್ರ ಪ್ರಾಣಿಯ ಕಣ್ಣಿನ ಫಳಫಳ ಮಿಂಚು ಕಂಡರೆ ಯಾರಿಗಾದರೂ ಒಂದು ಕ್ಷಣ ಬೆನ್ನುಮೂಳೆಯ ಕೆಳಗೆ ನಡುಕ ಹುಟ್ಟಿಸಬಹುದು.
ಇದೇ ರೀತಿಯಲ್ಲಿ ಒಂದು ಮಗುವಿನ ಕಣ್ಣು ಬಿಳುಪಿನಿಂದ ಕೂಡಿದ್ದರೆ, ಕ್ಯಾನ್ಸರ್ ಆವರಿಸಿರುವ ಸಾಧ್ಯತೆಯೂ ಇರುವುದರಿಂದ ಎಚ್ಚರ ವಹಿಸುವುದು ಒಳಿತು. ಮಕ್ಕಳಲ್ಲಿ ಅಂತಹ ಕಣ್ಣಿದ್ದರೆ ಅದು ಕ್ಯಾನ್ಸರ್ ಕೂಡ ಆಗಿರಬಹುದು. ಆದ್ದರಿಂದ ನಿರ್ಲಕ್ಷ್ಯ ಬೇಡ.
`ರೆಟಿನೋಬ್ಲಾಸ್ಟೋಮಾ~ ಎಂದು ಕರೆಯಲಾಗುವ ಈ ಕ್ಯಾನ್ಸರ್ ಅದೃಷ್ಟವಶಾತ್ ಅಪರೂಪ. ಇದು ಜನಿಸಿದ 18,000 ಮಕ್ಕಳಲ್ಲಿ ಒಂದು ಮಗುವಿಗೆ ಸಂಭವಿಸಬಹುದು ಎಂದು ಹೇಳಲಾಗುತ್ತದೆ.
ಈ ಒಂದು ಕ್ಯಾನ್ಸರ್‌ಕಾರಕ ಗೆಡ್ಡೆ, ಕಣ್ಣಿನ ಹೊರಗೆ ಹರಡಿಕೊಳ್ಳಬಹುದು. ಮಗುವಿನ ಸಾವಿಗೂ ಕಾರಣವಾಗಬಹುದು. ಮತ್ತೊಂದೆಡೆ, ಆರಂಭಿಕ ಶೋಧನೆ ಮತ್ತು ಸಕಾಲಿಕ ಚಿಕಿತ್ಸೆಯಿಂದ ದೃಷ್ಟಿ ಪುನಃಸ್ಥಾಪಿಸಬಹುದು. ಮಗುವಿನ ಜೀವ ಉಳಿಸಬಹುದು.
ಆರಂಭಿಕ ಪತ್ತೆ
ಬಹುತೇಕ ರೋಗಿಗಳು ಮಕ್ಕಳಾದ ಕಾರಣ, ಕಣ್ಣಿನಲ್ಲಿ ನೋವು ಉಂಟಾಗುವ ತನಕ ಅಥವಾ ಕೆಂಪು ಬಣ್ಣ ಪ್ರಾರಂಭವಾಗುವ ಸಮಯದವರೆಗೂ ಗಮನಿಸಲು ತಪ್ಪುವ ಸಾಧ್ಯತೆ ಇರುತ್ತದೆ. ಆದಾಗ್ಯೂ, ಕೆಲವು ಲಕ್ಷಣಗಳನ್ನು ಪತ್ತೆಹಚ್ಚಬಹುದು. ಕಣ್ಣಿಗೆ ಬೆಳಕು ಬೀರಿದಾಗ ಬೆಳಕು ಪ್ರತಿಫಲಿಸುವಂತೆ ಕಾಣಬಹುದು.
ಈ ಲಕ್ಷಣವನ್ನು `ಕ್ಯಾಟ್ಸ್ ಐರಿಫ್ಲೆಕ್ಸ್~ ಅಥವಾ `ವೈಟ್ ರಿಫ್ಲೆಕ್ಸ್~ ಎಂದು ಕರೆಯಲಾಗುತ್ತದೆ. ಈ ಬಿಳಿ ಪ್ರತಿವರ್ತನ ಅಗತ್ಯವಾಗಿ ಕ್ಯಾನ್ಸರೇ ಆಗಿರಬೇಕೆಂದು ಇಲ್ಲ. ಗಮನಿಸಬೇಕಾದ ಅಂಶವೆಂದರೆ. ಕಣ್ಣಿನ ಪೊರೆಯ ಕ್ಯಾಟರ‌್ಯಾಕ್ಟ್ ಆಗಿರಬಹುದು. ಅಥವಾ ಇತರ ಜನ್ಮಜಾತ ಅಕ್ಷಿಪಟಲದ ರೋಗಗಳಿಂದ ಉಂಟಾಗಿರಬಹುದು. ರೋಗದ ಲಕ್ಷಣಗಳು ಕಂಡಾಗ, ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು. ಆರಂಭಿಕ ಪರೀಕ್ಷೆ ಮುಖ್ಯ.
ಚಿಕಿತ್ಸೆ
ಯಾವುದೇ ಕ್ಯಾನ್ಸರ್‌ಗೆ ಸಾಮಾನ್ಯವಾಗಿ ಮೂರು ರೀತಿಯ ಚಿಕಿತ್ಸೆ ನೀಡಲಾಗುತ್ತದೆ:
- ಕ್ಯಾನ್ಸರ್ ಪೀಡಿತ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವುದು
- ವಿಕಿರಣ ಚಿಕಿತ್ಸೆ
-ನಿರ್ದಿಷ್ಟ ಕ್ಯಾನ್ಸರ್ ವಿರೋಧಿ ಔಷಧಗಳಿಂದ ಚಿಕಿತ್ಸೆ
ಇದು ರೆಟಿನೋಬ್ಲಾಸ್ಟೋಮಾಗೆ ಕೂಡ ಅನ್ವಯವಾಗುತ್ತದೆ. ಚಿಕಿತ್ಸೆ ಸಾಮಾನ್ಯವಾಗಿ ಕಣ್ಣಿನ ಗಾತ್ರ, ಸ್ಥಳ ಮತ್ತು ದೃಷ್ಟಿ ಪ್ರಮಾಣವನ್ನು ಅವಲಂಬಿಸಿರುತ್ತದೆ. ಎರಡೂ ಕಣ್ಣುಗಳಿಗೆ ರೋಗದ ಪರಿಣಾಮ ಇದ್ದರೆ, ದೊಡ್ಡ ಕ್ಯಾನ್ಸರ್ ಗೆಡ್ಡೆ ಇರುವ ಕಣ್ಣನ್ನು ತೆಗೆಯಲಾಗುವುದು. ಮತ್ತು ಮತ್ತೊಂದು ಕಣ್ಣು ಉಳಿಸಲು ಚಿಕಿತ್ಸೆ ಮೂಲಕ ಯತ್ನಿಸಲಾಗುವುದು.
ಅಪರೂಪದ ಸಂದರ್ಭಗಳಲ್ಲಿ, ಮಗುವಿನ ಜೀವ ಉಳಿಸಲು ಎರಡೂ ಕಣ್ಣುಗಳ ಗೆಡ್ಡೆ ತೆಗೆಯುವ ಶಸ್ತ್ರಚಿಕಿತ್ತ್ರೆ ಅನಿವಾರ್ಯವಾಗಬಹುದು. ಇದರಿಂದ ಪೋಷಕರು ಹಾಗೂ ಮಕ್ಕಳು ನಂತರದ ವರ್ಷಗಳಲ್ಲಿ ಮಾನಸಿಕ ಯಾತನೆ ಅನುಭವಿಸಬೇಕಾಗಬಹುದು.
ಇಂದು `ಇಂಟ್ರಾ ಆರ್ಟೀರಿಯಲ್ ಕಿಮೊಥೆರಪಿ ಮತ್ತು ಬ್ರಾಕಿಥೆರಪಿ~ ಎಂಬ ವಿಕಿರಣ ವಿಶೇಷ ಚಿಕಿತ್ಸೆಯ ಪ್ರಗತಿಯ ಫಲವಾಗಿಎರಡೂ ಕಣ್ಣುಗಳನ್ನು ತೆಗೆದುಹಾಕುವುದು ಈಗ ಕಡಿಮೆಯಾಗಿದೆ.
ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಬ್ರಾಕಿಥೆರಪಿ ಒದಗಿಸುವ ಕರ್ನಾಟಕದ ಏಕಮಾತ್ರ ಆಸ್ಪತ್ರೆಯಾಗಿದೆ. ಬ್ರಾಕಿಥೆರಪಿ ಅಡಿಯಲ್ಲಿ, ವಿಕಿರಣ ಚಿಕಿತ್ಸೆಯ ಮೂಲಕ ಕಣ್ಣುಗಳ ಒಳಗೆ ಮತ್ತು ಸುತ್ತ ಸಾಮಾನ್ಯ ಜೀವಕೋಶಗಳಿಗೆ ಕನಿಷ್ಠ ಅಡ್ಡ ಪರಿಣಾಮಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅದು ಚಿಕಿತ್ಸೆಯ ಕೆಟ್ಟ ಪರಿಣಾಮಗಳನ್ನು ದೂರ ಮಾಡುತ್ತದೆ ಹಾನಿಗೀಡಾದ ಕಣ್ಣನ್ನೇ ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವ ನಿದರ್ಶನ ಇಲ್ಲಿ ಕಡಿಮೆ.
ರೆಟಿನೊಬ್ಲಾಸ್ಟೋಮಾ ಒಂದು ವಾಸಿಮಾಡಬುಹುದಾದಂತಹ ಕ್ಯಾನ್ಸರ್ ಆಗಿದೆ. ಈ ರೋಗಪೀಡಿತ ಮಕ್ಕಳಲ್ಲಿಶೇ.90 ಕ್ಕಿಂತ ಹೆಚ್ಚಿನ ಮಕ್ಕಳು ಸೂಕ್ತ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.
(ಲೇಖಕರು ವಿಭಾಗ ಮುಖ್ಯಸ್ಥರು, ವಿಟ್ರೊರೆಟಿನಾ ಮತ್ತು ಕಣ್ಣಿನ ಗ್ರಂಥಿ ವಿಭಾಗ, ಶಂಕರ ಐ ಕೇರ್ ಇನ್‌ಸ್ಟಿಟ್ಯೂಷನ್ಸ್. 080-28542727/28542728 )
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.