ADVERTISEMENT

ಕಾಡದಿರಲಿ ರಕ್ತಹೀನತೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ರಕ್ತ ಹೀನತೆ ಎಂದರೆ ದೇಹದಲ್ಲಿ ಹರಿಯುವ ರಕ್ತದ ಕೊರತೆ, ಇದು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಬಾರದು. ರಕ್ತದಲ್ಲಿ ಕಬ್ಬಿಣದ ಕೊರತೆ ಉಂಟಾಗಬಾರದು. ಈ ಕೊರತೆಯುಂಟಾದರೆ ಆಗುವ ತೊಂದರೆ ಮತ್ತು ಪರಿಣಾಮಗಳೆರಡೂ ಅನೇಕ.

ನಾವು ದಿನಂಪ್ರತಿ ಸೇವಿಸುವ ಆಹಾರದಲ್ಲಿ ದೇಹಕ್ಕೆ ಅತ್ಯಾವಶ್ಯಕವಾಗಿ ಬೇಕಾಗುವ ಸತ್ವ, ಪೋಷಕಾಂಶ ಇರಬೇಕು.  ಜೊತೆಗೆ ಅಗತ್ಯ ಪ್ರಮಾಣದ ಖನಿಜಗಳು, ಅನ್ನಾಂಗಗಳು (ವಿಟಮಿನ್) ಇರಲೇಬೇಕು. ಅದರಲ್ಲೂ ಕಬ್ಬಿಣಾಂಶ ರಕ್ತದಲ್ಲಿ ಸರಿ ಪ್ರಮಾಣದಲ್ಲಿ ಇರಲೇಬೇಕು.
 
ರಕ್ತದ ಪ್ರತಿ ಕಣವು ಅಗತ್ಯ ಆಮ್ಲಜನಕವನ್ನು ಜೀವಕೋಶಗಳಿಗೆ ತಲುಪಿಸುವಲ್ಲಿ ಈ ಕಬ್ಬಿಣ ಸಹಕಾರಿಯಾಗಿರುತ್ತದೆ.  ಕೊರತೆ ಕಾಡಿದರೆ ಜೀವಕೋಶಗಳಿಗೆ ಆಮ್ಲಜನಕ ತಲುಪುವುದಿಲ್ಲ. ದೇಹ  ಮನಸ್ಸು ಸೊರಗಿ ಸುಸ್ತಾಗುತ್ತದೆ. ದೈಹಿಕ,  ಮಾನಸಿಕ ಬೆಳವಣಿಗೆ ಬಲವರ್ಧನೆಗೆ ತೊಂದರೆಯಾಗುತ್ತದೆ. 

ಕಬ್ಬಿಣದ ಕೊರತೆ
ರಕ್ತಹೀನತೆ ಎಂದರೆ ಹತ್ತು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದಾದ ಒಂದು ತೊಂದರೆ. ವಿಶ್ವದಾದ್ಯಂತ ರಕ್ತಹೀನತೆಗೆ ಕಬ್ಬಿಣದ ಕೊರತೆಯೇ ಮುಖ್ಯ ಕಾರಣ ಎಂಬುದು ತಿಳಿದು ಬಂದಿದೆ. ನಮ್ಮ ದೇಶದಲ್ಲೂ ಇದು ವ್ಯಾಪಕವಾಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ `ಅನೀಮಿಯ~ ಎನ್ನಲಾಗುತ್ತದೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಭಾರತೀಯ ಮಹಿಳೆಯರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಿದೆ.  ಶೇಕಡಾ 50-60ರಷ್ಟುಮಹಿಳೆಯರು ಈ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತ ಸಾಗಿರುವುದು ದುರದೃಷ್ಟಕರ.  ಹೆಚ್ಚಾಗುತ್ತಿರುವ ಆರೋಗ್ಯ ಸೇವೆ, ವೈದ್ಯಕೀಯ ಸೇವಾ ಲಭ್ಯತೆಯು ಕೂಡ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ.

ಬಹಳಷ್ಟು ಮಹಿಳೆಯರಿಗೆ ಈ ಅನೀಮಿಯ ಇರುವುದೇ ಗೊತ್ತಿರುವುದಿಲ್ಲ. ಯಾವುದಾದರೂ ಕಾಯಿಲೆಯ ಪರೀಕ್ಷೆಗೆ ದಾಖಲಾಗಿರುವಾಗ ಮಾತ್ರವಷ್ಟೇ ತಿಳಿಯುತ್ತದೆ. ರಕ್ತದಾನ ಮಾಡಲು ಬರುವ ಶೇ 75% ಯುವತಿಯರಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಿರುವ ಕಾರಣದಿಂದ ತೆಗೆದುಕೊಳ್ಳಲು ಬರುತ್ತಿಲ್ಲ.

ದೈಹಿಕ ಲಕ್ಷಣಗಳು
ರಕ್ತಹೀನತೆಯಿಂದ ಆಗುವ ತೊಂದರೆಗಳು: 
* ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ, ಕಾಡುವ ಸುಸ್ತು, ಆಯಾಸ.
ಮಕ್ಕಳಲ್ಲಿ ಏಕಾಗ್ರತೆ ಕೊರತೆ, ಬೆಳವಣಿಗೆ ಕುಂಠಿತ, ಚಟುವಟಿಕೆ ಇಲ್ಲದಿರುವುದು, ಆಲಸ್ಯ, ಸೋಮಾರಿತನ.
ಸದಾ ಸಿಟ್ಟು, ಶೀಘ್ರ ಕೋಪ.
ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು.
ಕೆಲವೊಮ್ಮೆ ತೀವ್ರ ಉಸಿರಾಟ, ಹೆಚ್ಚಾದ ವೇಗ.
ಕ್ಷೀಣಿಸುವ ದೈಹಿಕ ಕಾರ್ಯಕ್ಷಮತೆ, ಗಮನ ಕೊರತೆ. ದೇಹದ ಅಂಗಾಂಗಳ ಕಾರ್ಯ ನಿರ್ವಹಣೆಯಲ್ಲಿ ಏರುಪೇರು.
* ಹಸಿವಾಗದಿರುವಿಕೆ, ದೇಹ ವ್ಯವಸ್ಥೆ ಕಾರ್ಯ ಕ್ಷೀಣ, ರೋಗ ನಿರೋಧಕ ಶಕ್ತಿ ಕುಂಠಿತ.
ಭ್ರೂಣದ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ.

ರಕ್ತಹೀನತೆ ಯಾರಲ್ಲಿ ಅಧಿಕ?
ಗರ್ಭಿಣಿಯರು, ಸಾಮಾನ್ಯ ಮಹಿಳೆಯರು, ಋತುಸ್ರಾವ ಹೆಚ್ಚಿರುವವರು.
ಹದಿಹರೆಯದ ಹೆಣ್ಣು ಮಕ್ಕಳು.
ಶೀಘ್ರ ಬೆಳವಣಿಗೆಯ ಮಕ್ಕಳು.
ಅತೀ ಒತ್ತಡದ, ಶ್ರಮದಾಯಕ ಕೆಲಸ ನಿರ್ವಹಿಸುವವರು.
ವಿಶ್ರಾಂತಿ ಇಲ್ಲದ ಕೆಲಸ, ದೀರ್ಘಕಾಲೀನ ರೋಗ, ರಕ್ತದ ಕಾಯಿಲೆ ಇರುವವರು.

ರಕ್ತಹೀನತೆ ಏಕೆ?
ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡದಿರುವುದು.
ದೀರ್ಘಕಾಲೀನ ರೋಗ ಪೀಡಿತರು, ಅತೀ ಮಾತ್ರೆ ಸೇವನೆ ಮಾಡುವವರು.
ರಕ್ತದ ಮೂಲಕ ಕಬ್ಬಿಣಾಂಶದ ನಷ್ಟ
ಕ್ಯಾನ್ಸರ್‌ಗೆ ಪಡೆಯುವ ಔಷಧಗಳಿಂದ.
ದೇಹದಲ್ಲಿ ರಕ್ತಕಣ ಉತ್ಪತ್ತಿ ಸರಿಯಾಗಿ ಆಗದಿರುವುದು ಉದಾ: ಮೂಳೆ ರೋಗ, ವಿಟಮಿನ್ ಕೊರತೆ.

ರಕ್ತಹೀನತೆ ತಡೆ ಹೇಗೆ?
ನಷ್ಟಕ್ಕೆ ಪರ್ಯಾಯವಾಗಿ ಕಬ್ಬಿಣದ ಮರುಪೂರೈಕೆ.
ಸತ್ವಯುತ ಆಹಾರ ಸೇವನೆ, ಕಬ್ಬಿಣಾಂಶದ ಲಭ್ಯತೆ ಹೆಚ್ಚಿಸುವುದು.
ಗರ್ಭಿಣಿಯರು ಹೆಚ್ಚುವರಿ ಫೋಲಿಕ್ ಆಮ್ಲದ  ಮಾತ್ರೆ ಸೇವಿಸುವುದು.  
ರಕ್ತನಷ್ಟಕ್ಕೆ ಪರಿಹಾರ ಪಡೆಯಬೇಕು. ಸಸ್ಯಜನ್ಯ ಕಬ್ಬಿಣಕ್ಕಿಂತ ಮಾಂಸಜನ್ಯ ಹೆಚ್ಚಾಗಿ ಹೀರಲ್ಪಡುತ್ತದೆ. ಇದರ ಸೇವನೆಯು ಇರಲಿ.

ಲಕ್ಷಣ ಗುರುತಿಸಿ
ಬಿಳುಪಾಗುವ ಮುಖ, ಬಿಳಿಚಿಕೊಂಡ ಮುಖ, ಬಿಳುಪಾದ ಉಗುರಿನ ಮೇಲ್ಭಾಗ, ಕಣ್ಣಿನ ಕೆಳ-ಒಳ ಭಾಗ (ಕೆಳ ರೆಪ್ಪೆಯ ಒಳ ಭಾಗ) ಬಿಳಿಯಾಗಿರುವುದು ರಕ್ತಹೀನತೆಯ ಲಕ್ಷಣ.

ಆಹಾರ ಕ್ರಮ
ಕಬ್ಬಿಣಾಂಶ ಹೆಚ್ಚಾಗಿರುವ ಒಣ ಹಣ್ಣು , ಕರಿಎಳ್ಳು, ಜೇನು, ಬಾಳೆ, ಹಾಲು, ದ್ವಿದಳ ಧಾನ್ಯ, ಕಡು ಹಸಿರು ತರಕಾರಿ, ಸೊಪ್ಪು, ನುಗ್ಗೆ ಸೊಪ್ಪು, ಕಾರ್ನ್‌ಫ್ಲೇಕ್ಸ್.

ಹೀಗೆ ಮಾಡಿರಿ: ಪ್ರತಿದಿನ ಬೆಳಿಗ್ಗೆ ಉಪಾಹಾರ ತಪ್ಪಿಸಬೇಡಿ. ಲಕ್ಷಣ ಗೋಚರಿಸಿದ ತಕ್ಷಣ ಹಿಮೋಗ್ಲೋಬಿನ್ ಅಂಶ ಪರೀಕ್ಷಿಸಿಕೊಳ್ಳಿ. ಗಂಡಸರಲ್ಲಿ14-16 ಗ್ರಾಂ/ಪ್ರತಿ ಡೆಸಿಲೀಟರ್, ಹೆಂಗಸರಲ್ಲಿ12-16 ಗ್ರಾಂ/ಡೆಸಿಲೀಟರ್ ಇರಬೇಕು.  ಕಮ್ಮಿ ಇದ್ದರೆ ವೈದ್ಯರನ್ನು ಕಾಣಿ.
ಊಟ   ತಿಂಡಿಯ ಮೊದಲು - ನಂತರ 1/2 ಗಂಟೆ ಕಾಫಿ   ಟೀ ಸೇವಿಸದಿರಿ, ಕಬ್ಬಿಣದ ಹೀರುವಿಕೆಗೆ ತೊಂದರೆಯಾಗುತ್ತದೆ. ವೈದ್ಯರನ್ನು ಆಗಾಗ ಕಂಡು ಹಿಮೊಗ್ಲೋಬಿನ್ ಅಂಶ ಕಡಿಮೆಯಾಗದಂತೆ ಸಲಹೆ - ಸೂಚನೆ ಪಡೆಯಿರಿ.

(ಮೊ: 9342466936)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT