ADVERTISEMENT

ಗೊರಕೆ ಕಿರಿಕಿರಿಯೇ?

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 19:30 IST
Last Updated 26 ಆಗಸ್ಟ್ 2011, 19:30 IST
ಗೊರಕೆ ಕಿರಿಕಿರಿಯೇ?
ಗೊರಕೆ ಕಿರಿಕಿರಿಯೇ?   

ಬಾಯಿ ಮತ್ತು ಮೂಗಿನ ಹಿಂದೆ ಇರುವ ವಾಯು ನಾಳದಲ್ಲಿ ಗಾಳಿ ಸರಾಗವಾಗಿ ಹರಿಯಲು ಅಡ್ಡಿಯಾದಲ್ಲಿ ಗೊರಕೆ ಉಂಟಾಗುತ್ತದೆ.

ವಯಸ್ಸು ಹೆಚ್ಚಾದ ಹಾಗೆ ಗಂಟಲಲ್ಲಿನ ಮಾಂಸಖಂಡಗಳು ದೃಢತೆ ಕಳೆದುಕೊಂಡು ಸಡಿಲವಾಗುತ್ತವೆ. ಅವುಗಳ ಸ್ಪಂದನದಿಂದ ಗೊರಕೆಯಲ್ಲಿ ಶಬ್ದ ಉಂಟಾಗುತ್ತದೆ. ಮೂಗಿನಲ್ಲಿ ಭಾಗಶಃ ಅಥವಾ ಪೂರ್ಣ ಅಡ್ಡಿಯಾದಾಗ ಗೊರಕೆ ಅತಿರೇಕವಾಗುತ್ತದೆ.

ಶೇ 40 ರಿಂದ 50 ರಷ್ಟು ಆರೋಗ್ಯವಂತ ವಯಸ್ಕರು ಆಗಾಗ ಗೊರಕೆ ಹೊಡೆಯುತ್ತಾರೆ. ಕೇವಲ ಶೇ 25 ರಷ್ಟು ವಯಸ್ಕರಿಗೆ ಗೊರಕೆ ರೂಢಿಯಾಗಿರುತ್ತದೆ. ಗಂಡಸರು, ದೇಹಸ್ಥೂಲರು ಮತ್ತು ದೊಡ್ಡಹೊಟ್ಟೆ ಹಾಗೂ ಮೋಟುಕತ್ತು ಇರುವವರಿಗೆ ಮೇಲಿಂದ ಮೇಲೆ ಗೊರಕೆ ಬರುತ್ತಿರುತ್ತದೆ. ವಯಸ್ಸು ಹೆಚ್ಚಾದಂತೆ ಗೊರಕೆಯ ಹಾವಳಿ ಮತ್ತಷ್ಟು ಹೆಚ್ಚುತ್ತದೆ.

ಗೊರಕೆಯನ್ನು ನಿವಾರಿಸುವ ಹಲವಾರು ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿವೆಯಾದರೂ ಕೆಲವು ಮಾತ್ರ ಪರಿಣಾಮಕಾರಿಯಾಗಿವೆ.

ಗೊರಕೆ ಹೊಡೆಯುವ ವ್ಯಕ್ತಿಗಳ ಮೂಗು ಮತ್ತು ಗಂಟಲಿನಲ್ಲಿ ಕೆಲ ವೈಶಿಷ್ಟ್ಯಗಳಿರುತ್ತವೆ, ಅವೆಂದರೆ:
* ಗಂಟಲಿನ ಮಾಂಸಖಂಡಗಳು ದುರ್ಬಲವಾಗಿರುತ್ತವೆ.

* ನಾಲಿಗೆ ದೊಡ್ಡದಾಗಿರುತ್ತದೆ. ಮಬ್ಬುಂಟುಮಾಡುವ ಮದ್ಯ ಅಥವಾ ಔಷಧಿ ಸೇವಿಸಿದಾಗ ಇವು ನಾಲಿಗೆ ಮತ್ತು ಉಸಿರುನಾಳದ ಮೇಲೆ ಪ್ರಭಾವ ಬೀರಿ ಉಸಿರಾಟದ ಹಾದಿಯನ್ನು ಕಿರಿದುಗೊಳಿಸುತ್ತವೆ.

* ದೊಡ್ಡ ಟಾನ್ಸಿಲ್ಸ್ ಮತ್ತು ನ್ಯಾಸಗ್ರಂಥಿಗಳು ಇರುವ ಮಕ್ಕಳು ಪದೇ ಪದೇ ಗೊರಕೆ ಹೊಡೆಯುತ್ತಾರೆ. ಟಾನ್ಸಿಲ್ಸ್ ಉಸಿರಾಟದ ಹಾದಿಯನ್ನು ಇಕ್ಕಟ್ಟುಗೊಳಿಸುತ್ತದೆ.

* ಅಧಿಕ ದೇಹ ತೂಕ, ಮೋಟು ಕುತ್ತಿಗೆ ಇರುವವರ ಗಂಟಲಿನಲ್ಲಿ ಹೆಚ್ಚು ಮಾಂಸಖಂಡ ಇರುತ್ತದೆ. ಇದು ಉಸಿರಾಟದ ಮಾರ್ಗವನ್ನು ಕಿರಿದು ಮಾಡುತ್ತದೆ.

* ದೊಡ್ಡದಾದವೆಂದು ದವಡೆ ಮತ್ತು ಉದ್ದನೆ ಕಿರುನಾಲಿಗೆ ಇದ್ದರೆ ಕಿರುನಾಲಿಗೆ (ಗಂಟಲಿನಲ್ಲಿ ಜೋತುಬಿದ್ದಿರುವ ಮೆದು ದವಡೆಯ ಭಾಗ) ನಿದ್ದೆಯಲ್ಲಿ ಶಬ್ದಕಂಪನ ಹೊರಡಿಸುವ ಕವಾಟವಾಗುತ್ತದೆ.

*ಮೂಗಿನ ಮದ್ಯದಲ್ಲಿರುವ ಮೂಳೆಯ ವಿಪಥನ ಕೂಡ ಮೂಗಿನಲ್ಲಿ ಅಡ್ಡಿಯಾಗಿ ಗೊರಕೆಗೆ ಮೂಲವಾಗುತ್ತದೆ.

ಗೊರಕೆ, ಕೇವಲ ವೈವಾಹಿಕ ಅಥವಾ ಸಾಮಾಜಿಕ ಸಮಸ್ಯೆಯಲ್ಲ ಎಂದು ಎಲ್ಲರೂ ತಿಳಿಯಬೇಕು. ಇದು ಮೂಲತಃ ವೈದ್ಯಕೀಯ ಸಮಸ್ಯೆ. ಏಕೆಂದರೆ ಗೊರಕೆ ಹಲವು ರೀತಿಯ ಹೃದಯ ಮತ್ತು ಎದೆ ಸಂಬಂಧಿ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.

ದೀರ್ಘಕಾಲದಿಂದ ಇರುವ ಗೊರಕೆಯಿಂದ ಕೆಲವರಲ್ಲಿ ಉಸಿರುಕಟ್ಟುವಿಕೆಯ ಉಪಟಳ ತಲೆದೋರುತ್ತಿರುತ್ತದೆ. ವ್ಯಕ್ತಿ ನಿದ್ರಿಸುವಾಗ ಕೆಲಕ್ಷಣ ಉಸಿರಾಟ ನಿಂತುಬಿಡುತ್ತದೆ (ನಿದ್ರಾ ಉಸಿರುಕಟ್ಟುವಿಕೆ).

ಇಂತಹ ಪ್ರಸಂಗಗಳು ರಕ್ತದಲ್ಲಿ ಆಮ್ಲಜನಕ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಹೃದಯ ಹೆಚ್ಚು ಶ್ರಮದಿಂದ ಮಿಡಿಯುತ್ತಾ ದೇಹದ ಕಾರ್ಯಗಳ ಮೇಲೆ ಬಗೆಬಗೆಯ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ.

ಆದ್ದರಿಂದ ಗೊರಕೆ ಹೊಡೆಯುವವರು ಏಳುವಾಗ ಆಯಾಸಗೊಂಡಿರುತ್ತಾರೆ. ಅವರಿಗೆ ದಿನದಲ್ಲಿ ತೂಕಡಿಕೆ ಇರುತ್ತದೆ., ಇದು ವಾಹನ ಚಾಲನೆಯಲ್ಲಿ ಅಪಾಯಕರ. ಕಾಲಾಂತರದಲ್ಲಿ ಏರು ರಕ್ತದೊತ್ತಡ, ಹೃದಯ ಹಿಗ್ಗುವುದು ಸಹ ಉಂಟಾಗಬಹುದು. ಅದೃಷ್ಟವಶಾತ್ ಇವೆಲ್ಲಾ ಬಹುತೇಕ ಪೂರ್ವಸ್ಥಿತಿಗೆ ಮರಳಿಸುವಂತಹವು.

ಯಾವುದೇ ಭಂಗಿಯಲ್ಲಿಯೂ ಅತಿ ಜೋರಾಗಿ ಗೊರಕೆ ಹೊಡೆಯುವವರು ವೈದ್ಯಕೀಯ ಸಲಹೆ ಪಡೆಯಬೇಕು.

ಸೂಕ್ತ ಚಿಕಿತ್ಸೆ
ಕಿವಿ, ಮೂಗು, ಗಂಟಲು ತಜ್ಞರು ಮೂಗು, ಬಾಯಿ, ಗಂಟಲು, ದವಡೆ, ಮತ್ತು ಕುತ್ತಿಗೆಯ ಪರೀಕ್ಷೆ ಮಾಡುತ್ತಾರೆ. ಪ್ರಯೋಗ ಶಾಲೆಯ ವಾತಾವರಣದಲ್ಲಿ ನಿದ್ದೆ ಬಗ್ಗೆ ಅಧ್ಯಯನ ಮಾಡುವುದರಿಂದ ಗೊರಕೆಯ ತೀವ್ರತೆ ಎಷ್ಟಿದೆ, ಇದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಬೀಳುವ ಪರಿಣಾಮಗಳೇನೆಂಬುದನ್ನು  ತಿಳಿಯಬಹುದು.

ಚಿಕಿತ್ಸೆ, ಕಾಯಿಲೆಯ ಕಾರಣದ ಪತ್ತೆಯನ್ನು ಅವಲಂಬಿಸಿರುತ್ತದೆ. ಪರೀಕ್ಷೆಯಿಂದ ಗಂಟಲು, ಮೂಗು, ಟಾನ್ಸಿಲ್ಸ್, ನ್ಯಾಸಗ್ರಂಥಿಗಳಿಂದ ಅಡ್ಡಿಯುಂಟಾಗಿರುವುದು ಗೊರಕೆಯ ಕಾರಣವೆಂದು ತಿಳಿದುಬರುತ್ತದೆ. ಆಗ ಕಿವಿ, ಮೂಗು ಗಂಟಲ ತಜ್ಞರು ನೀಡುವ ಬಗೆಬಗೆಯ ಚಿಕಿತ್ಸೆಗಳಿಂದ ಗೊರಕೆ ಗುಣವಾಗುತ್ತದೆ. ಕಾಯಿಲೆಯ ಕಾರಣದನ್ವಯ ಈ ಕೆಳಕಂಡ ಚಿಕಿತ್ಸಾ ವಿಧಾನಗಳನ್ನು ನೆರವೇರಿಸಲಾಗುತ್ತದೆ.

ಯುವಿಲೋ ಪ್ಯಲಡೊ ಫೆರಂಜಿಯೊ ಪ್ಲಾಸ್ಟಿ: (ಯು.ಪಿ.ಪಿ.ಪಿ. ಅಥವಾ ಯು.ಪಿ3 ಎನ್ನುತ್ತಾರೆ) ಈ ಶಸ್ತ್ರಚಿಕಿತ್ಸೆಯಲ್ಲಿ ದವಡೆ ಮತ್ತು ಕಿರುನಾಲಿಗೆ (ಗಂಟಲಿನ ಹಿಂದೆ ಜೋತಾಡುತ್ತಿರುವ ಮೃದು ಭಾಗ)ಯ ಸ್ವಲ್ಪ ಭಾಗವನ್ನು ಅಚ್ಚುಕಟ್ಟಾಗಿ ಕತ್ತರಿಸಿಹಾಕಲಾಗುತ್ತದೆ (ಚಿತ್ರ).

ಕಾಲಾನಂತರ ಗಾಯದ ಗುರುತು ಬಿರುಸುಗೊಳ್ಳುವುದರಿಂದ, ಅಂಗಾಂಶಗಳ ಕಂಪನ ಕಡಿಮೆಯಾಗಿ ಗೊರಕೆ ಕಡಿಮೆಯಾಗುತ್ತದೆ ಇಲ್ಲವೆ ಪೂರ್ಣ ನಿಲ್ಲುತ್ತದೆ.

ಟಾನ್ಸಿಲೆಕ್ಟಮಿ/ಅಡಿನಾಯಿಡೆಕ್ಟಮಿ: ಮಕ್ಕಳಲ್ಲಿ ಗಂಟಲನ್ನು ಟಾನ್ಸಿಲ್ಸ್ ಮತ್ತು ನ್ಯಾಸಗ್ರಂಥಿಗಳು ದೊಡ್ಡದಾಗಿ ಉಸಿರಾಟದ ಹಾದಿಗೆ ಅಡ್ಡಿಯಾಗಿದ್ದರೆ, ಈ ಶಸ್ತ್ರಚಿಕಿತ್ಸೆಯಿಂದ ಮಕ್ಕಳ ಆರೋಗ್ಯ ಸುಧಾರಿಸುತ್ತದೆ.

ಸ್ವಲ್ಪ ಪ್ರಮಾಣದ ಅಥವಾ ಆಗಾಗ್ಗೆ ಮಾತ್ರ ಗೊರಕೆ ಇರುವ ವಯಸ್ಕರುಗಳು  ಕೆಳಗಿನ ಸ್ವಯಂ-ಚಿಕಿತ್ಸಾ ಪದ್ಧತಿಗಳನ್ನು ಪ್ರಯತ್ನಿಸಬಹುದು.

* ವ್ಯಾಯಾಮ ಮತ್ತು ಆರೋಗ್ಯಯುಕ್ತ ಊಟದ ಜೀವನಶೈಲಿಯಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು.

* ಪ್ರಶಾಂತಗೊಳಿಸುವ, ನಿದ್ರೆ ತರುವ ಮತ್ತು ಅಲರ್ಜಿನಿವಾರಕ ಮಾತ್ರೆ ಔಷಧಿಗಳನ್ನು ಮಲಗುವ ಮುನ್ನಾ ಸೇವಿಸದಿರುವುದು.

* ನಿದ್ರೆಗಿಂತಾ ಹಿಂದಿನ ನಾಲ್ಕು ಗಂಟೆಯಲ್ಲಿ ಮದ್ಯಪಾನ ಮಾಡದಿರುವುದು.

* ಬೆನ್ನಿನ ಮೇಲೆ ಮಲಗುವುದಕ್ಕಿಂತಾ ಒಂದು ಪಕ್ಕಕ್ಕೆ ಮಲಗುವುದು.

* ಹಾಸಿಗೆಯಲ್ಲಿ ತಲೆ ಇರುವ ಜಾಗವನ್ನು ಸುಮಾರು ನಾಲ್ಕು ಇಂಚು ಎತ್ತರಿಸಿಕೊಳ್ಳುವುದು.
 

ಗೊರಕೆಯ ಅಳತೆ
ನೀವೇ ಮಾಡಿನೋಡಿ....

ಮನೆಯಲ್ಲೆ ಮಾಡಿಕೊಳ್ಳುವ ಪರೀಕ್ಷೆಗಳು ಗೊರಕೆ ಇರುವವರಲ್ಲಿ ಮತ್ತು ಹಗಲು ವೇಳೆ ಬಹಳ ತೂಕಡಿಸುವವರಲ್ಲಿ, ಗೊರಕೆಯ ತೀವ್ರತೆಯನ್ನು ನಿಖರವಾಗಿ ತಿಳಿಸುತ್ತವೆ.

ADVERTISEMENT

 ನಿದ್ರೆಯ ಅಳತೆ
ಯಪ್‌ವರ್ತ್ ನಿದ್ರೆಯ ಮಾನದಂಡವು ಹಗಲಿನಲ್ಲಿ ನಿದ್ದೆಯ ಶ್ರೇಣಿಯನ್ನು ಅಳೆಯುತ್ತದೆ.

ಸ್ವಯಂ ಪರೀಕ್ಷೆ ಪ್ರಶ್ನೆ                               ಅಂಕಗಳು
ಕಾರು ಓಡಿಸುವಾಗ                                 -
(ವಿರಾಮವಿಲ್ಲದೆ ಸತತವಾಗಿ)
ಕಾರು/ಬಸ್ಸಿನಲ್ಲಿ ಪ್ರಯಾಣಿಕರಾಗಿ ಕೂತಾಗ        -
ಕೂತು ಓದುತ್ತಿರುವಾಗ                             -
ಊಟ ಮಾಡಿ ಕೂತಿರುವಾಗ                       -
ಟಿ.ವಿ. ನೋಡುತ್ತಿರುವಾಗ                           --
ಸಮಾಲೋಚನೆಯಲ್ಲಿರುವಾಗ                       --
ಇತರರೊಂದಿಗೆ ಮಾತನಾಡುತ್ತಿರುವಾಗ            --

ಅಂಕಗಳು: 0-ತೂಕಡಿಸುವುದೇ ಇಲ್ಲ 1- ಸ್ವಲ್ಪ ತೂಕಡಿಕೆ 2-ಮಧ್ಯಮ ತೂಕಡಿಕೆ 3-ಬಹಳ ಹೆಚ್ಚು ತೂಕಡಿಕೆ
ನಿಮ್ಮ ಒಟ್ಟಾರೆ ಅಂಕಗಳು 10ಕ್ಕಿಂತಾ ಹೆಚ್ಚಾಗಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ನಿಮ್ಮ ಗೊರಕೆ ಮತ್ತು ನಿದ್ರಾ ತೊಂದರೆಗೆ ಚಿಕಿತ್ಸೆ ಪಡೆಯಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.